ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿಪಾಟಲುಗಳ ನಡುವೆ ಗರಿಮೆ!

ಪ್ರಬಂಧ
Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆಗಿದ್ದಿಷ್ಟೆ. ಪಕ್ಕದ ಮನೆಯಾಕೆ ತನ್ನ ಮನೆ ಅಂಗಳದಲ್ಲಿ ಬಿದ್ದಿದ್ದ ಕಸವನ್ನು ಗುಡಿಸಿ ತಂದು ಇವರ ಮನೆ ಕಾಂಪೌಂಡಿಗೆ ಹಾಕಿದಳು. ತಗೋ, ಇಷ್ಟು ವಿಷಯಕ್ಕೆ ಆ ಇಬ್ಬರೂ ಹೆಂಗಸರು ಪರಸ್ಪರ ಜುಟ್ಟು ಕಿತ್ತುಕೊಂಡು ಅಂಗಳದಲ್ಲೆಲ್ಲಾ ಉರುಳಾಡಿ ಭದ್ರಕಾಳಿಯರಂತೆ ಕುಸ್ತಿ ಮಾಡಿ ರಂಪ ಮಾಡಿಕೊಂಡಿದ್ದರು. ವಿಷಯ ಇಲ್ಲಿಗೇ ನಿಂತಿತಾ...? ಊಹೂಂ, ಆಯಾ ಹೆಂಗಸರ ಗಂಡಂದಿರು ಮನೆಗೆ ಬಂದ ನಂತರ ವಿಷಯ ಕೇಳಿ ತಿಳಿದು ರಸ್ತೆಗೆ ಬಂದು ಬಡಿಗೆ ಹಿಡಿದುಕೊಂಡು ಹೊಡೆದಾಡಿ ತಲೆ ಒಡೆದುಕೊಂಡು ಸರ್ಕಾರಿ ಆಸ್ಪತ್ರೆಗೆ ಸೇರಿ ವಿಶ್ರಾಂತಿ ಪಡೆಯುತ್ತಿದ್ದರು.

ಠಾಣೆಗೆ ಆಸ್ಪತ್ರೆಯಿಂದ ಮಾಹಿತಿ ಬಂದ ಮೇರೆಗೆ ಹೋದೆ. ‘ಏನ್ರಯ್ಯಾ, ಬರಿ ಕಸದ ವಿಷಯಕ್ಕೆ ಈ ಪರಿ ಬಡಿದಾಡಿಕೊಂಡಿದ್ದೀರಲ್ಲ? ಸುಮ್ನೆ ಬಿಟ್ಟಿದ್ದರೂ ಆ ಕಸ ಗಾಳಿಗೆ ಹಾರಿಹೋಗುತ್ತಿತ್ತು. ಇಲ್ದಿದ್ರೆ ಸೈಲೆಂಟಾಗಿ ಅದೇ ಕಸಾನ ಅವರ ಮನೆ ಅಂಗಳಕ್ಕೆ ವಾಪಸು ಒಗೆದು ಬಂದಿದ್ರೆ ಆಗ್ತಿತ್ತು. ಹಿಂಗೆ ರಕ್ತ ಸುರಿಯೋ ಹಂಗೆ ಗುದ್ದಾಡಿಕೊಂಡಿದ್ದೀರಲ್ಲ. ನೀವೇನು ಮನುಷ್ಯರೋ ಹೆಂಗೆ?’ ಅಂದೆ.

‘ಅದೆಲ್ಲಾ ಇರ್‍ಲೀ..... ಮೊದಲು ನೀವು ಕಂಪ್ಲೇಂಟು ಬರ್‍ಕಳಿ ಸಾರ್... ಅದೆಷ್ಟಾರ ಖರ್ಚಾಗ್ಲೀ, ಹೈಕೋರ್ಟು ಮೆಟ್ಲು ಹತ್ತಿದ್ರೂ ಪರ್‍ವಾಗಿಲ್ಲ.... ಈ ಸಾರಿ ಅವ್ನಿಗೆ ಬುದ್ಧಿ ಕಲಿಸ್ದೇ ಬಿಡಲ್ಲ...’ ಅಂದ ಒಬ್ಬ. ಇನ್ನೊಬ್ಬನೇನು ಕಮ್ಮಿ? ಅವನೂ ಯುದ್ಧಕ್ಕೆ ತಯಾರಾಗಿಯೇ ನಿಂತಿದ್ದ. ‘ಸಾರಿ ಬ್ರದರ್, ಉಪದೇಶ ಮಾಡ್‌ಬಾರ್‍ದು ಅಂತ ಎಷ್ಟೇ ಅಂದ್ಕೊಂಡ್ರೂ ಬಾಯಿಂದ ಬುದ್ಧಿ ಮಾತು ಹಂಗೇ ಉದುರ್‍ತವೆ... ಸರಿ, ನಿಮ್ಮ ತಾಕತ್ತು, ನಿಮ್ಮ ದುಡ್ಡು’ ಅನ್ನುತ್ತಾ ಪೆನ್ನು ಪೇಪರು ಎತ್ತಿಕೊಂಡೆ.

ಸ್ಟೇಷನ್ನಿಗೆ ಬರುವ ನೂರು ಕಂಪ್ಲೇಂಟುಗಳಲ್ಲಿ ಐವತ್ತು ಇಂಥವೇ. ಕೆಲವೊಮ್ಮೆ ತೀರಾ ಸಿಲ್ಲಿ ಅನ್ನಿಸುವ ಫೋನ್ ಕರೆಗಳು ಬರುವುದುಂಟು. ‘ನಮ್ಮ ಮನೆ ಗೇಟಿನ ಮುಂದೇನೆ ಯಾರೋ ಕಾರು ನಿಲ್ಲಿಸಿ ಹೋಗ್ಬಿಟ್ಟಿದ್ದಾರೆ. ಸ್ವಲ್ಪ ಬಂದು ನೋಡೀಪ್ಪಾ...’ ಅನ್ನುತ್ತಾರೆ. ‘ಮನೆ ಮುಂದೆ ಕಾರು ನಿಲ್ಲಿಸೋವಾಗ್ಲೇ ನೋಡ್ಕೋಬಹುದಿತ್ತಲ್ಲ ಮೇಡಂ? ತಂದು ನಿಲ್ಲಿಸಿಯಾದ ಮೇಲೆ ನಮ್ಮನ್ನ ಫೋನು ಮಾಡಿ ಕರೆದ್ರೆ ನಾವೆಲ್ಲಿ ಹುಡುಕಿಕೊಂಡು ಹೋಗಾಣ ಕಾರು ಓನರ್‍ನ?’ ಅಂತ ಕೇಳಿದರೆ ‘ನಿಮ್ಮ ಕೈಲಿ ಆಗಲ್ಲಾಂದ್ರೆ ಹೇಳ್ರಿ... ಕಮೀಷ್ನರ್‍ರಿಗೆ ಮಾತಾಡ್ತೀವಿ...’ ಅಂತ ಹೆದರಿಸುತ್ತಾರೆ.

ಮರು ಮಾತನಾಡದೆ ಸ್ಥಳಕ್ಕೆ ಹೋಗಿ ಆ ಕಾರಿನವರು ಕುಡಿದು ತಿಂದು ಬರುವವರೆಗೂ ಕಾಯುತ್ತಾ ನಿಂತು ಬಂದ ಮೇಲೆ ಅವನ ಕಾರಿಗೆ ‘ರಾಂಗ್ ಪಾರ್ಕಿಂಗ್’ ಕೇಸು ಹಾಕಿ ವಾಪಸು ಬರಬೇಕು. ಹೋಗ್ಲಿ, ದಂಡ ಕಟ್ಟುವವನಾದರೂ ಸುಮ್ಮನೆ ಕಟ್ಟುತ್ತಾನಾ? ‘ಇಲ್ಲಿ ಬೋರ್ಡು ಎಲ್ಲಿ ಹಾಕಿದ್ದೀರಾ ತೋರುಸ್ರೀ... ಯಾವ ಗಲ್ಲಿಗೆ ಹೋದ್ರೂ ನಿಮ್ ಕಾಟ ತಪ್ಪೋದಿಲ್ವಲ್ಲಾ? ನಮ್ಮ ಕಾರು ನಾವು ನಿಲ್ಲಿಸೋದಿಕ್ಕೆ ನಿಮ್ಮ ಪರ್ಮಿಷನ್ನು ತಗೋಬೇಕಾ?’ ಅಂತ ನೂರೆಂಟು ಕ್ವಶ್ಚನ್ನಗಳನ್ನು ಕೇಳುತ್ತಾನೆ. ‘ಸ್ವಾಮಿ, ನಾವಾಗಿ ನಿಮ್ಮನ್ನು ಹುಡುಕಿಕೊಂಡು ಬಂದಿಲ್ಲ. ನಮಗೂ ಮಾಡಕ್ಕೆ ಬೇರೆ ಬೇರೆ ಕೆಲಸಗಳಿರ್‍ತವೆ. ನಿಮ್ಮ ಮನೆ ಬಾಗಿಲ ಮುಂದೆ ಯಾರಾದ್ರೂ ಹಿಂಗೆ ಗಾಡಿ ನಿಲ್ಲಿಸಿ ಹೋದ್ರೆ ನೀವೇನು ಮಾಡ್ತೀರಾ ಹೇಳಿ?’ ಅಂತ ಮರು ಪ್ರಶ್ನೆ ಹಾಕಿ ಅವನನ್ನು ಕನ್ವಿನ್ಸು ಮಾಡಬೇಕು, ಅಲ್ಲಿಗೆ ಒಂದು ಪ್ರಹಸನ ಮುಗಿದಂತೆ.

ಅವತ್ತೂ ಹಾಗೆಯೇ ಆಯಿತು. ರಾತ್ರಿ ಗಸ್ತಿನ ಕರ್ತವ್ಯ ಇದ್ದುದರಿಂದ ರಾತ್ರಿ ಹನ್ನೆರಡು ಗಂಟೆಯವರೆಗೂ ಏರಿಯಾದಲ್ಲಿ ಒಂದು ರೌಂಡು ಹಾಕಿ ಆಗಷ್ಟೇ ಸ್ಟೇಷನ್ನಿಗೆ ಬಂದು ಕೊಂಚ ಸುಧಾರಿಸಿಕೊಳ್ಳುತ್ತಿದ್ದೆ. ಫೋನು ರಿಂಗಣಿಸಿ ಎತ್ತಿ ಕಿವಿಗಿಟ್ಟುಕೊಂಡರೆ ಮಾಮೂಲಿಯಾದ ಅದೇ ವಯಸ್ಸಾದ ಹೆಣ್ದನಿ. ‘ಮನೆ ಸುತ್ತಲೆಲ್ಲಾ ಯಾಕೋ ಸಿಕ್ಕಾಪಟ್ಟೆ ನಾಯಿಗಳು ಬೊಗಳ್ತಾ ಇವೆ... ಗಾಬರಿಯಾಗ್ತಿದೆ... ಬಂದು ಸ್ವಲ್ಪ ನೋಡೀಪ್ಪಾ...’

ಏನೂ ಮಾಡುವಂತಿರಲಿಲ್ಲ. ಯಾವ ಸಣ್ಣ ಕರೆಯನ್ನೂ ನಿರ್ಲಕ್ಷಿಸಕೂಡದು ಎಂದು ಮೇಲಧಿಕಾರಿಗಳು ಆರ್ಡರು ಮಾಡಿಯಾಗಿತ್ತು. ಆದರೂ ಹೇಳಿದೆ. ‘ಮೇಡಂ... ಗಾಬರಿ ಬೀಳೋ ಅವಶ್ಯಕತೆಯಿಲ್ಲ. ನಾಯಿಗಳು ಬೊಗಳುವುದಕ್ಕೆ ಹಿಂಡುಹಿಂಡಾಗಿ ತಿರುಗುವುದಕ್ಕೆ ಬೇರೆ ಬೇರೆ ಕಾರಣಗಳು ಇರ್‍ತವೆ. ಅದೂ ಈ ಆಷಾಢ ಮಾಸದಲ್ಲಿ... ತ್ಚು, ತ್ಚು, ಬಿಟ್ಹಾಕಿ. ನಿಮ್ಮಂತಹವರೊಂದಿಗೆ ಡೀಟೈಲಾಗಿ ಮಾತಾಡೋ ವಿಷಯ ಅಲ್ಲಾ ಅದು. ಸರಿ, ಈಗೇನು ಮಾಡಾಣ? ಅಲ್ಲಿಗೆ ಬಂದು ನಾಯಿಗಳನ್ನೆಲ್ಲಾ ಅಟ್ಟಾಡಿಸಿ ಓಡಿಸಿ ನೀವು ನೆಮ್ಮದಿಯಾಗಿ ನಿದ್ದೆ ಮಾಡುವಂತೆ ಮಾಡಬೇಕು- ಅಷ್ಟೇ ತಾನೆ?’ ಅಂದೆ. ರಾತ್ರಿ ಪಾಳಿಯ ದಫೇದಾರ ನನ್ನ ಸಂಭಾಷಣೆ ಕೇಳುತ್ತಿದ್ದವನು ನಗುತ್ತಾ ‘ಯಾರು ಸಾರ್... ಆ ಮಹಾತಾಯಿಯ ಫೋನಾ...’ ಅಂದ. ಹೌದೆನ್ನುವಂತೆ ತಲೆಯಾಡಿಸಿ ಎದ್ದು ಹೊರಟೆ.

ಕೆಲಸಕ್ಕೆ ಸೇರಿದ ಹೊಸತರಲ್ಲಿ ಬರೀ ಇಂಥವೇ ಫೋನ್ ಕರೆಗಳನ್ನು ಸ್ವೀಕರಿಸಿ ಬೇಸತ್ತು ಇದೇನಪ್ಪಾ ಹಿಂಗೂ ಇರ್‍ತದಾ ಅಂತ ಅಚ್ಚರಿಪಟ್ಟಿದ್ದೆ. ಗೃಹಿಣಿಯೊಬ್ಬಳು ಪ್ರತಿದಿನವೂ ಠಾಣೆಗೆ ಫೋನಾಯಿಸಿ ‘ಸಾರ್, ನನ್ನ ಗಂಡ ಈ ನಡುವೆ ಮನೆಗೆ ಬರೋದು ತುಂಬಾ ತಡವಾಗ್ತಿದೆ. ಬಂದ್ರೂ ಮಾತಿಲ್ಲ. ಕತೆಯಿಲ್ಲಾ.... ಅಟ್‌ಲೀಸ್ಟು ಮಕ್ಕಳನ್ನೂ ಮುದ್ದಿಸೋದಿಲ್ಲ... ಬಂದ ತಕ್ಷಣ ಸೀದಾ ರೂಮಿಗೆ ಹೋಗಿ ಹೊದ್ದುಕೊಂಡು ಮಲಗಿಬಿಡ್ತಾನೆ. ಕಾರಣ ಕೇಳಕ್ಕೆ ಹೋದ್ರೆ ಕುರುಕ್ಷೇತ್ರ ಶುರುವಾಗ್ತದೆ.

ಯಾವುದೋ ಹೊಸಾ ಸಂಬಂಧ ತಗುಲಿಕೊಂಡಿರೋ ಅನುಮಾನ ನನಗೆ. ದಯವಿಟ್ಟು ಅವನನ್ನು ಸ್ಟೇಷನ್ನಿಗೆ ಕರೆಸಿ ಎನ್‌ಕ್ವಯರಿ ಮಾಡಿ ನನಗೆ ನ್ಯಾಯ ಕೊಡಿಸಬೇಕು...’ ಅಂತ ಪೀಡಿಸುತ್ತಿದ್ದಳು. ‘ನೋಡಮ್ಮಾ, ಗಂಡ ಹೆಂಡಿರ ನಡುವಿನ ಸಣ್ಣಪುಟ್ಟ ವಿಚಾರಗಳೆಲ್ಲ ಠಾಣೆ ಮೆಟ್ಟಿಲೇರಿದ್ರೆ ಚೆನ್ನಾಗಿರಲ್ಲ... ಇದೆಲ್ಲಾ ನೀವಿಬ್ಬರೇ ಕೂತು ಬಗೆಹರಿಸಿಕೊಳ್ಳೋ ವಿಚಾರ. ಮೊದ್ಲು ಗಂಡನಿಗೆ ಹೇಳಿ ಎರಡು ದಿನ ರಜಾ ಹಾಕ್ಸಿ. ಮಕ್ಳು ಮರೀನಾ ಅಜ್ಜಿ ತಾತನ ಹತ್ತಿರ ಬಿಟ್ಟು ಎಲ್ಲಾದರೂ ಟೂರು ಹೊಡೆದು ಬನ್ನಿ. ಎಲ್ಲಾ ಸರಿಯಾಗ್ತದೆ... ನಾವು ಬಂದು ಮಧ್ಯೆ ಕೈಯಾಡಿಸಿದ್ರೆ ನಿಮ್ಮೊಳಗಿನ ವಿಶ್ವಾಸ ಎಲ್ಲಿ ಉಳಿತದೆ? ಜೀವನ ಪೂರ್ತಿ ಸಂಸಾರ ಮಾಡೋರು ನೀವಿಬ್ಬರೇ ಹೊರತು ಪೊಲೀಸ್ನೋರಲ್ಲ’ ಅಂತ ತಿಳಿಹೇಳಿದ್ದೆ. ನನ್ನ ಉತ್ತರದಿಂದ ಆಕೆಗೆ ಸಮಾಧಾನವಾಗುತ್ತಿರಲಿಲ್ಲ.

ಇದು ಒಂದು ಕಡೆಯಾದರೆ ಸರ್ವೀಸುಗಳಿಂದ ನಿವೃತ್ತರಾಗಿ ಪ್ರತಿಷ್ಠಿತ ಬಡಾವಣೆಗಳಲ್ಲಿ ನೆಮ್ಮದಿ ಜೀವನ ನಡೆಸುತ್ತಿದ್ದ ಕೆಲ ಹಿರಿತಲೆಗಳು ಏರಿಯಾದ ಸಣ್ಣ ಪುಟ್ಟ ಸಮಸ್ಯೆಗಳನ್ನು ದೊಡ್ಡದಾಗಿ ಬಿಂಬಿಸುತ್ತಾ ನಮ್ಮ ಮೇಲಧಿಕಾರಿಗಳ ಗಮನ ಸೆಳೆದು ಆದಷ್ಟೂ ನಮ್ಮ ನೆಮ್ಮದಿ ಕೆಡಿಸಲು ಯತ್ನಿಸುತ್ತಿದ್ದರು. ತೀರಾ ಮನೆ ಮುಂದೆ ಹೆಗ್ಗಣ ಸತ್ತು ಬಿದ್ದರೂ ಕಂಟ್ರೋಲು ರೂಮಿಗೆ ಫೋನು ಮಾಡಿ ಬಂದು ತೆಗೆಸುವಂತೆ ಹೇಳುತ್ತಿದ್ದರು.

‘ಏನ್ಸಾರ್... ಇದು ಕಥೆ? ಮನೆಗೊಂದು ದಿನ ನೀರು ಬರಲಿಲ್ಲಾ ಅಂದ್ರೂ ಫೋನು ಮಾಡ್ತಾರೆ. ನಿವೃತ್ತಿ ವೇತನ ಸಿಗಲಿಲ್ಲಾ ಅಂದ್ರೂ ಫೋನು ಮಾಡ್ತಾರೆ. ಎಲ್ಲಾದಕ್ಕೂ ನಾವೇ ಉತ್ತರಿಸಬೇಕು. ಬೇರೆ ಬೇರೆ ಇಲಾಖೆಗಳೂ ಇದ್ದಾವೆ ಅನ್ನೋದನ್ನು ಜನ ಮರೆತಿದ್ದಾರಾ ಹೇಗೆ?’ ಅಂತ ಡಿ.ಎಸ್.ಪಿ. ಸಾಹೇಬರನ್ನೇ ಒಮ್ಮೆ ಕೇಳೀದೆ. ‘ನೋಡಪ್ಪಾ ಯಂಗ್ ಮ್ಯಾನ್, ನೀನಿನ್ನೂ ಹೊಸಬ. ಅದ್ಕೇ ಈ ರೀತಿ ಕೇಳ್ತಾ ಇದ್ದೀಯಾ? ಜನರಿಗೆ ಏನೇ ತೊಂದರೆ ಆದ್ರೂ ಮೊದಲಿಗೆ ನೆನಪಿಗೆ ಬರೋದು ಒಂದೇ ಇಲಾಖೆ ಕಣಯ್ಯಾ... ಅದೂ ಪೊಲೀಸ್ ಇಲಾಖೆ! ಅದು ಅವರು ನಮ್ಮ ಮೇಲಿಟ್ಟಿರೋ ವಿಶ್ವಾಸಾನ ತೋರ್‍ಸುತ್ತೆ. ಯಾವುದೇ ಸಮಸ್ಯೇನ ಪೊಲೀಸಿನವರ ಮುಂದೆ ಹೇಳಿಕೊಂಡರೆ ಬಗೆಹರಿಯುತ್ತೆ ಅನ್ನೋ ನಂಬಿಕೆ ಅವರದು.

ಜನಗಳಿಗೆ ಇನ್ನೂ ನಮ್ಮ ಮೇಲೆ ಆ ಪರಿ ವಿಶ್ವಾಸ ಉಳಿದುಕೊಂಡಿದೆಯಲ್ಲಾ ಅದಕ್ಕೆ ಖುಷಿ ಪಡಬೇಕು... ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ನಮ್ಮದೇ. ನಿಮ್ಮ ಕಂಪ್ಲೇಂಟು ನಮಗೆ ಸಂಬಂಧಿಸಿದ್ದಲ್ಲ, ಇಂತಲ್ಲಿಗೆ ಹೋಗಿ ದೂರು ಕೊಡಿ ಅಂತ ನೇರವಾಗಿ ಹೇಳಿ ಕಳ್ಸಿಬಿಡೋದು ದೊಡ್ಡ ಮಾತಲ್ಲ. ಕಂಪ್ಲೇಂಟನ್ನ ಸಮಾಧಾನವಾಗಿ ಕೇಳಿ ಸಂಬಂಧಪಟ್ಟ ಇಲಾಖೆಗೆ ನಾವೇ ಒಂದು ಫೋನು ಮಾಡಿ ಅಟೆಂಡ್ ಮಾಡೋದಿಕ್ಕೆ ಹೇಳಿದ್ರೆ ಅದರ ತೂಕಾನೇ ಬೇರೆ... ಒಂದು ಸಾರಿ ಟ್ರೈ ಮಾಡಿ ನೋಡು, ಖರ್ಚಾಗೋದು ಒಂದು ಫೋನ್ ಕಾಲು ಅಷ್ಟೆ. ಆದ್ರೆ ಅದ್ರಿಂದ ಸಿಗೋ ಜನರ ಪ್ರತಿಕ್ರಿಯೆ, ಅಭಿಮಾನ ಇದ್ಯಲ್ಲಾ... ಅದಕ್ಕೆ ಬೆಲೆ ಕಟ್ಟಲು ಅಸಾಧ್ಯ’ ಅಂದಿದ್ದರು.

ಬರಿಯ ಮಾತಿನಲ್ಲಿ ದೂರು ಕೊಡುವವರದು ಒಂದು ತೂಕವಾದರೆ ಲಿಖಿತ ರೂಪದಲ್ಲಿ ಅರ್ಜಿ ಕೊಡುವವರದೇ ಒಂದು ತೂಕ. ಮಾತಿನವರನ್ನು ಹೇಗಾದರೂ ಸಮಾಧಾನ ಮಾಡಿ ಕಳಿಸಬಹುದು. ಲಿಖಿತವಾಗಿ ಬರುವ ಅರ್ಜಿಗಳು ಠಾಣೆಯ ದಾಖಲಾತಿಗಳಲ್ಲಿ ಎಂಟ್ರಿ ಆಗುವ ಕಾರಣ ಅವುಗಳನ್ನು ನಿರ್ಲಕ್ಷಿಸುವಂತಿಲ್ಲ.

ಅರ್ಜಿ ನಂಬರು, ಅವು ಸ್ವೀಕಾರವಾದ ದಿನಾಂಕ ಮತ್ತು ಪ್ರತಿಯಾಗಿ ನಾವು ತೆಗೆದುಕೊಂಡ ಕ್ರಮ ಎಲ್ಲವನ್ನು ವಿವರವಾಗಿ ದಾಖಲಿಸಿದ ನಂತರವಷ್ಟೇ ಅದನ್ನು ಮುಕ್ತಾಯ ಮಾಡಲಾಗುತ್ತದೆ. ಇಲ್ಲದೆ ಹೋದರೆ ಠಾಣಾ ನಿರೀಕ್ಷಣೆಗೆ ಬರುವ ಹಿರಿಯ ಅಧಿಕಾರಿಗಳು ‘ಅರ್ಜಿಗಳನ್ನು ಬೇಗ ಬೇಗ ಮುಗಿಸ್ಲಿಕ್ಕೆ ಏನ್ರೀ ನಿಮಗೆ ರೋಗ... ತಿಂಗಳಾನುಗಟ್ಟಲೆ ಇಟ್ಕೊಂಡು ಕೂತಿರ್‍ತೀರಲ್ಲ... ಯೇನ್ ನಿದ್ದೆ ಮಾಡ್ತಾ ಇರ್‍ತೀರೇನ್ರೀ?’ ಎಂದು ನಿವಾಳಿಸುವ ಭಯಕ್ಕಾದರೂ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುತ್ತಿರುತ್ತೇವೆ.

ಆದರೆ ನಿಜವಾದ ತಲೆನೋವು ತರೋದು ಪರ್ಮನೆಂಟ್ ಅರ್ಜಿದಾರರು. ಪತ್ರಿಕೆಗಳಿಗೆ ಕಥೆ ಬರೆದು ಕಳಿಸಿದಂತೆ ಇವರಿಗೆ ಆಗಾಗ ಠಾಣೆಗಳಿಗೆ ಅರ್ಜಿ ಬರೆಯುವ ಖಯಾಲಿ. ಅದನ್ನೂ ಒಂದು ಹವ್ಯಾಸ ಅಂದುಕೊಂಡಿದ್ದಾರೇನೋ ಪುಣ್ಯಾತ್ಮರು! ಯಾವಾಗಿನಂತೆ ಇಲ್ಲೂ ವಯೋವೃದ್ಧ ಮಹಾಶಯರೇ ಮೇಲುಗೈ. ಹಲವಾರು ಸಂದರ್ಭಗಳಲ್ಲಿ ಕೇವಲ ಹೊತ್ತು ಕಳೆಯಲೆಂದೇ ಬರೆದಿದ್ದಾರೇನೋ ಅನ್ನುವ ಅನುಮಾನ ಕಾಡುತ್ತದೆ. ಸ್ಥಳಕ್ಕೆ ಹೋದರೆ ಅಲ್ಲಿ ಸಮಸ್ಯೆಯೇ ಕಾಣುವುದಿಲ್ಲ. ಇನ್ನು ಕೆಲವು ಬಾರಿ ಇಲ್ಲದೆ ಇರುವ ಸಮಸ್ಯೆಯೊಂದನ್ನು ಇವರೇ ಹುಟ್ಟುಹಾಕಿದ ಉದಾಹರಣೆಗಳಿವೆ. ನಮ್ಮ ರಾಜಶೇಖರ ಮೂರ್ತಿಯವರು ಅಂತಹವರಲ್ಲೊಬ್ಬರು.

ಸಮಸ್ಯೆಯೇನೆಂದರೆ ಅವರ ಮನೆಗೆ ಹೊಂದಿಕೊಂಡಂತೆ ಒಂದು ಶಾಲೆಯಿದೆ. ‘ಮಧ್ಯಾಹ್ನದ ವೇಳೆ ಶಾಲೆ ಬಿಟ್ಟಾಗ ಶಾಲಾ ವಾಹನಗಳು ತಮ್ಮ ಮನೆಯ ಮುಂದೆ ಸಾಲುಗಟ್ಟಿ ನಿಲ್ಲುತ್ತವೆ. ಅವುಗಳ ಚಾಲಕರು ಮುಂದಾಗಿಯೇ ಬಂದು ಮನೆ ಎದುರು ಹಾಗೂ ರಸ್ತೆ ಅಂಚಿನಲ್ಲಿ ಪಟ್ಟಾಂಗ ಹೊಡೆಯುತ್ತಾ ನಿಂತಿರುತ್ತಾರೆ. ಅಲ್ಲದೆ ಒಮ್ಮೆಲೇ ಶಾಲೆ ಬಿಟ್ಟು ಮಕ್ಕಳೆಲ್ಲಾ ಕೂಗುತ್ತಾ ಗದ್ದಲ ಮಾಡಿ ವಾಹನವೇರಿ ಹೋಗುವ ಅರ್ಧಗಂಟೆಯ ಅವಧಿ ಕಳೆಯಲು ತನಗೆ ತುಂಬಾ ಕಠಿಣವಾಗಿದ್ದು ಮೊದಲೇ ರಕ್ತದೊತ್ತಡ ಮತ್ತು ಸಿಹಿಮೂತ್ರ ರೋಗಿಯಾದ ನನಗೆ ಇವುಗಳೆಲ್ಲದರ ಮುಕ್ತಿ ಕೊಡಿಸಿ...’ ಇದು ಅವರ ಅರ್ಜಿಯ ಸಾರಾಂಶ.

ಪರಪರನೆ ಒಮ್ಮೆ ತಲೆ ಕೆರೆದುಕೊಂಡೆ. ನಾನಾದರೂ ಇಲ್ಲಿ ಮಾಡುವುದೇನಿದೆ? ಸ್ಕೂಲು ಮುಚ್ಚಿಸಲಾದೀತಾ? ಮಕ್ಕಳನ್ನು ಹೆದರಿಸಿ ಓಡಿಸಬೇಕಾ? ಅಥವಾ ಶಾಲಾ ವಾಹನಗಳನ್ನು ಹಿಡಿದು ತಂದು ಕೇಸು ಹಾಕಬೇಕಾ? ಹೋಗಿ ಒಮ್ಮೆ ಅರ್ಜಿದಾರರ ಪಾದಗಳನ್ನು ಕೈಯಾರ ತೊಳೆದು ಅರ್ಘ್ಯವನ್ನು ಸ್ವೀಕರಿಸಿ ಬಂದು ಬಿಡೋಣ ಅನ್ನಿಸಿತು.

ಇರಲಿ ಅಂತಂದುಕೊಂಡು ಸ್ಥಳಕ್ಕೆ ಹೋಗಿ ವಿಚಾರ ಮಾಡಿದರೆ ‘ಯಾರು ಸ್ವಾಮಿ? ಆವಯ್ಯನ ವಿಚಾರನಾ? ಅಯ್ಯೋ ತೆಗೀರಿ, ಅರ್ಧ ಜೀವನಾನಾ ಕೋರ್ಟಲ್ಲೇ ಕಳೆದವ್ನೆ ಆ ಮಾರಾಯ, ಸ್ಕೂಲು ವ್ಯಾನುಗಳು ಬರ್‍ತವೆ. ಮಕ್ಳನ್ನ ಹತ್ತಿಸ್ಕೊಂಡು ಹೋಗ್ತವೆ. ಇದರಲ್ಲಿ ಸಮಸ್ಯೆ ಏನು ಬಂತು? ನಾವೂ ಇಲ್ಲಿನ ನಿವಾಸಿಗಳು. ಅಷ್ಟನ್ನೂ ಸಹಿಸ್ಕೊಳ್ಳಕ್ಕಾಗಲ್ಲಾ ಅಂದ್ರೆ ಕಾಡಿಗೆ ಹೋಗಿ ಮನೆ ಕಟ್ಕೊಂಡಿರೋಕೆ ಹೇಳಿ ಅವ್ರಿಗೆ... ಯಾವ ಸಮಸ್ಯೆನೂ ಇಲ್ಲಾಂತ ಬರೆದುಕೊಡ್ತೀವಿ... ನಮ್ಮ ಹೇಳಿಕೆ ತಗೊಂಡು ಹೋಗಿ ಸುಮ್ನೆ ಅರ್ಜಿ ಕ್ಲೋಸು ಮಾಡಿ. ನೀವು ತಲೆಕೆಡಿಸ್ಕಬೇಡಿ’ ಅಂತ ಸ್ಥಳೀಯರೆಲ್ಲರೂ ಒತ್ತಾಯಿಸಿದ ಮೇಲೆ ವಾಪಸು ಬಂದು ಷರಾ ಬರೆದು ಪ್ರಕರಣಕ್ಕೆ ಮುಕ್ತಾಯ ಹಾಡಿದೆ.

ಎಲ್ಲಕ್ಕಿಂತ ಕುತೂಹಲದ ಪ್ರಕರಣ ಚಾಂದಿನೀಬಾಯಿಯದ್ದು. ‘ಸಂಜೆಯಾದರೆ ಸಾಕು. ನಮ್ಮ ಮನೆ ಬೀದೀಲೆ ಠಳಾಯಿಸುತ್ತಾ ಇರ್‍ತಾನೆ... ನೋಡೋದಿಕ್ಕೆ ಇನ್ನೂ ಹುಡುಗನ ತರಾ ಕಾಣ್ತಾನೆ... ಹೆಚ್ಚು ಹೊತ್ತು ಮನೆ ಮುಂದೇನೇ ನಿಂತಿರ್‍ತಾನೆ... ಗಂಟೆಗಟ್ಟಲೇ ಮೊಬೈಲ್‌ನಲ್ಲಿ ಅದ್ಯಾರೊಂದಿಗೆ ಮಾತಾಡ್ತಾನೋ? ನನಗಂತೂ ಗಾಬರಿಯಾಗ್ತಾ ಇದೆ. ಇದು ಒಂದು ದಿನದ ಕಥೆಯಲ್ಲ ಸಾರ್, ಈಗ್ಲೇ ಒಂದು ತಿಂಗಳಿನಿಂದ ನಡೀತಾ ಇದೆ’ ಅಂತ ಅವರು ಅದೊಮ್ಮೆ ಗಸ್ತು ಸಮಯದಲ್ಲಿ ತಿಳಿಸಿದಾಗ ಯಾವುದಕ್ಕೂ ಒಮ್ಮೆ ಪರೀಕ್ಷೆ ಮಾಡಿಬಿಡಬೇಕು ಅಂದುಕೊಂಡೆ.

ಸಂಜೆಯ ಸಮಯದಲ್ಲಿ ನಮ್ಮ ಕ್ರೈಂ ಸಿಬ್ಬಂದಿಯನ್ನು ಆ ಕಡೆ ಮಾಹಿತಿ ಕಲೆ ಹಾಕಲು ತಿಳಿಸಿದಾಗ ಸತ್ಯಾಂಶವಿರುವುದು ತಿಳಿದು ಬಂತು. ನಂತರ ನಾನೇ ಒಂದೆರಡು ಬಾರಿ ಹೊಂಚುಹಾಕಿ ಕಳ್ಳನಂತೆ ಆ ರಸ್ತೆಯಲ್ಲಿ ಓಡಾಡಿ ಬಂದೆ. ಪ್ರಕರಣದಲ್ಲಿ ಮಾಹಿತಿ ಸಂಗ್ರಹಿಸುತ್ತಾ ಹೋದಂತೆ ಕುತೂಹಲಕಾರಿ ಅಂಶಗಳು ದೊರೆಯುತ್ತಾ ಹೋದವು. ಕೊನೆಗೊಂದು ದಿನ ಚಾಂದಿನಿಬಾಯಿಯವರಿಗೆ ಫೋನು ಮಾಡಿ- ‘ನೋಡಿ ಬಾಯೀ... ಸಂಜೆ ನಿಮ್ಮ ಮನೆಯವರನ್ನೆಲ್ಲಾ ಕರ್‍ಕೊಂಡು ಸ್ಟೇಷನ್ನಿಗೆ ಬಂದು ಬಿಡಿ. ನೀವು ಆ ದಿನ ಹೇಳಿದ ದೂರನ್ನು ಇವತ್ತು ಬಗೆಹರಿಸಿಬಿಡೋಣ’ ಅಂದೆ. ಆಕೆ ಆತಂಕದಿಂದ ‘ಮನೆಯವರೆಲ್ಲಾ ಏಕೆ... ವಿಷಯ ಏನ್ ಹೇಳಿ ಸಾರ್’ ಅಂದರು. ‘ಟೆನ್ಷನ್ ಮಾಡ್ಕಳದು ಬ್ಯಾಡ. ಮೊದ್ಲು ನೀವು ಬನ್ನಿ... ಆಮೇಲೆ ಹೇಳ್ತೀನಿ’ ಅಂದೆ.

ಸಂಜೆ ಬಂದು ಎದುರು ಕುಳಿತ ಅಮ್ಮ ಮಗಳತ್ತ ಒಮ್ಮೆ ದೃಷ್ಟಿ ಹಾಯಿಸಿದೆ. ಅಷ್ಟು ದೊಡ್ಡ ಮನೆಯಲ್ಲಿದ್ದುದು ಅವರಿಬ್ಬರೇ. ಇದು ನನಗೆ ಮೊದಲೇ ಗೊತ್ತಿತ್ತು. ಮಗಳು ಬೆಣ್ಣೆಯಲ್ಲಿ ಅದ್ದಿ ತೆಗೆದಂತಿದ್ದಳು. ಅಷ್ಟು ಬಿಳುಪು. ಯಾವುದಾದರೂ ಫೇಸ್‌ಕ್ರೀಮ್ ಜಾಹೀರಾತಿಗೆ ತೋರಿಸಬಹುದಾದ ಮುಖ, ಸಹಜವಾಗಿಯೇ ಎಲ್ಲರನ್ನೂ ಆಕರ್ಷಿಸುವ ಗೆಲುಗೆಲುವಾದ ಕಾಲೇಜು ಹುಡುಗಿ. ಮೊದಲ ಬಾರಿಗೆ ಠಾಣೆಗೆ ಬಂದದ್ದಕ್ಕೋ ಏನೋ ಅವಳ ಕಣ್ಣುಗಳು ಚಿಗರೆ ಕಣ್ಣುಗಳಂತೆ ಸರಸರನೆ ಅತ್ತಿಂದಿತ್ತ ಕುತೂಹಲದಿಂದ ಹರಿದಾಡುತ್ತಿದ್ದವು. ಹಾಗೆ ಓಡಾಡುತ್ತಿದ್ದ ಕಣ್ಣುಗಳು ನನ್ನ ಮೇಲೆ ಹರಿದಾಗಲಷ್ಟೇ ಆಕೆಗೆ ನಾನು ಅವಳನ್ನೇ ಗಮನಿಸುತ್ತಿದ್ದುದು ಗೊತ್ತಾದದ್ದು. ಹುಡುಗಿ ತುಂಟತನದಿಂದ ನನ್ನ ಕಣ್ಣುಗಳನ್ನೇ ಕ್ಷಣಕಾಲ ದಿಟ್ಟಿಸಿದಳು. ನಾನು ಅವಳ ಕಣ್ಣುಗಳೊಳಗೆ ಇಳಿಯಲು ಯತ್ನಿಸಿದೆ. ಥಟ್ಟನೆ ದೃಷ್ಟಿ ತಪ್ಪಿಸಿದಳು.

‘ನಿನ್ನ ಹೆಸರೇನಮ್ಮಾ?’ ಅಮ್ಮನ ಜೊತೆ ಮಾತಿಗಾರಂಭಿಸಬಹುದೆಂದು ಊಹಿಸಿದ್ದ ಹುಡುಗಿ ತನಗೆ ಕೇಳಿದ ಪ್ರಶ್ನೆಯಿಂದ ಗೊಂದಲಕ್ಕೊಳಗಾಯಿತು. ಕ್ಷಣದಲ್ಲೇ ಸಾವರಿಸಿಕೊಂಡು ‘ಸೈನಾ’ ಅಂದಿತು. ‘ಮಗಳು ತುಂಬಾ ಚೂಟಿಯಂತೆ ಕಾಣಿಸ್ತಾಳೆ, ಹೌದಾ?’ ಅವರಮ್ಮನನ್ನು ಮಾತಿಗೆಳೆದೆ. ‘ನಿಜ ಸಾರ್. ಓದಿನಲ್ಲಿ ತರಗತಿಗೆ ಇವಳೇ ಫಸ್ಟು. ಇವಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗ್ಬಾರ್‍ದು ಅಂತ್ಲೇ ನಾನು ನಮ್ಮ ಯಜಮಾನ್ರೂ ತೀರ್ಮಾನ ತಗೊಂಡು ಈ ಬೆಂಗ್ಳೂರಲ್ಲಿ ಮನೆ ಮಾಡಿಕೊಂಡಿರೋದು. ಅವರು ಮನೆಗೆ ಬರೋದೇ ಐದಾರು ತಿಂಗಳಿಗೊಮ್ಮೆ’ ಎಂದು ಆಕೆ ತಮ್ಮ ಕುಟುಂಬದ ವಿವರಗಳನ್ನೆಲ್ಲಾ ನೀಡತೊಡಗಿದರು. ಕೇಳುವಷ್ಟು ಕೇಳಿದೆ.
‘ಆಯ್ತು ಬಿಡಿ. ನಿಮ್ಮ ಮಗಳು ನಿಮ್ಮನ್ನು ತುಂಬಾ ಹಚ್ಚಿಕೊಂಡಿದ್ದಾಳಾ ಹೇಗೆ? ಅಂದ್ರೆ ತಾನು ಹೇಳ್ಕೋಬಹುದು ಅನ್ನೋದೆಲ್ಲಾ ಓಪನ್ ಆಗಿ ನಿಮ್ಜತೆ ಹೇಳ್ತಾಳಾ...?’

‘ಹೌದು ಸಾರ್. ತುಂಬಾ ಮುದ್ದಿನಿಂದ ಬೆಳೆಸಿದ್ದೇವೆ. ಏನ್ ಕೇಳಿದ್ರೂ ಇಲ್ಲಾ ಅಂದಿಲ್ಲ. ಅವಳೂ ಅಷ್ಟೆ. ಏನೂ ಮುಚ್ಚುಮರೆ ಅನ್ನೋದು ಇಲ್ಲ’- ಚಾಂದಿನಿಬಾಯಿ ಹೆಮ್ಮೆಯಿಂದ ಹೇಳಿದ್ದಕ್ಕೆ ಹುಡುಗಿ ಹೌದೆನ್ನುವಂತೆ ತಲೆಯಾಡಿಸಿತು.

‘ಎಲ್ಲ ಸರಿ, ಆದರೆ ನಿಮ್ಮ ಮಗಳು ನಿಮ್ಮ ಹತ್ರ ಹೇಳದೇ ಇರೋ ಕೆಲವು ವಿಷಯಗಳಿವೆ. ಅದನ್ನ ನನ್ನ ಬಾಯಿಂದಲೇ ಕೇಳ್ತೀರಾ... ಅಥವಾ ನಿಮ್ಮ ಮಗಳನ್ನೇ ಕೇಳ್ತೀರಾ?’. ಚಾಂದಿನಿಬಾಯಿಗೆ ನಾನು ಹೇಳಿದ್ದು ಒಮ್ಮೆಗೇ ಅರ್ಥವಾಗಲಿಲ್ಲ. ಪಕ್ಕದಲ್ಲಿ ಕುಳಿತ ಹುಡುಗಿಯ ಮುಖದಲ್ಲಿ ನಗು ಮಾಯವಾಗಿ ಮೊದಲ ಬಾರಿಗೆ ಭಯ ಇಣುಕಿತು. ಬೆದರಿದ ಕಣ್ಣುಗಳಿಂದ ಮುಂದೇನು ಹೇಳಬಹುದೆಂದು ನನ್ನನ್ನೇ ದಿಟ್ಟಿಸುತ್ತಿದ್ದಳು.

ಹುಡುಗಿಯನ್ನು ನಮ್ಮ ಮಹಿಳಾ ಸಿಬ್ಬಂದಿಯೊಡನೆ ಹೊರಗೆ ಅಡ್ಡಾಡಿಕೊಂಡು ಬರಲು ಕಳಿಸಿದೆ. ಚಾಂದಿನೀಬಾಯಿಯವರನ್ನು ಕೂಡಿಸಿಕೊಂಡು- ‘ನೋಡ್ರಿ ಬಾಯೀ... ನಿಮ್ಮ ಹೀರೋಯಿನ್ ಮಗಳಿಗೊಬ್ಬ ಹೀರೋ ಇದ್ದಾನೆ. ನಿಮ್ಮ ಮನೆ ಬೀದಿಯಲ್ಲಿ ದಿನಾ ಠಳಾಯಿಸುವವನು ಅವನೇ. ಗಂಟೆಗಟ್ಟಲೇ ಫೋನಿನಲ್ಲಿ ಮಾತಾಡ್ತಾ ಇರ್‍ತಾನೆ ಅಂದ್ರಲ್ಲ... ಬೇರೆ ಯಾರ ಜೊತೆಗೂ ಅಲ್ಲ. ನಿಮ್ಮ ಮುದ್ದಿನ ಮಗಳ ಜೊತೆಗೇ! ನೀವು ಮನೆ ಹೊರಗೆ ನಿಂತು ಅಕ್ಕಪಕ್ಕದವರೊಡನೆ ಮಾತಾಡೋ ಟೈಮಲ್ಲಿ ಆಕೆ ಮೇಲೆ ಬಾಲ್ಕನೀಲಿ ನಿಂತು ಅವನ ಜೊತೆ ಸಂಭಾಷಣೇಲಿ ತೊಡಗಿರ್‍ತಾಳೆ. ವಿಷಯ ಇಷ್ಟೇ. ಸುಮ್ಮನೇ ಅತ್ತು ಕರೆದು ರಂಪಾಟ ಮಾಡಿ ವಿಷಯ ದೊಡ್ಡದು ಮಾಡ್ಬೇಡಿ. ನಯವಾಗಿ ಹೇಳಿ ನಿಮ್ಮ ದಾರಿಗೆ ತನ್ನಿ. ಮಗಳು ಜಾಣೆ, ತಿದ್ದಿಕೊಳ್ತಾಳೆ’ ಅಂದು ಕಳುಹಿಸಿಕೊಟ್ಟೆ.

ಈ ವೃತ್ತಿಯಲ್ಲಿರೋ ಸ್ವಾರಸ್ಯವೇ ಅದು. ಏನಪ್ಪಾ ಜನ ಹೀಗೆಲ್ಲಾ ಇರ್‍ತಾರಾ ಅನ್ನಿಸಿ ರೇಜಿಗೆ ಹುಟ್ಟಿಸುತ್ತಲೇ ಇನ್ನು ಕೆಲವರ ಮನೆ ಮನಗಳಲ್ಲಿ ನೆಮ್ಮದಿ ಮೂಡಿಸೋ ಅವಕಾಶವನ್ನೂ ನೀಡಿ ನಮ್ಮಲ್ಲಿ ಒಂದು ಬಗೆಯ ಸಾರ್ಥಕ ಭಾವನೆ ಹುಟ್ಟುಹಾಕುತ್ತಿರುತ್ತದೆ. ಹಿರಿಮೆ ಅನುಭವಿಸಲು ಅಷ್ಟು ಸಾಕಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT