ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ ಪರಾರಿ: ಮನೆ ಮುಂದೆ ಧರಣಿ

Last Updated 21 ಡಿಸೆಂಬರ್ 2012, 9:45 IST
ಅಕ್ಷರ ಗಾತ್ರ
ಮಾಲೂರು: `ಪ್ರೀತಿಸಿ ಮದುವೆಯಾಗಿ ಎರಡು ತಿಂಗಳು ಸಂಸಾರ ನಡೆಸಿ, ನಂತರ ಜಾತಿ ನೆಪವೊಡ್ಡಿ ನನ್ನ ಪತಿ ಪರಾರಿಯಾಗಿದ್ದಾರೆ. ಅವರನ್ನು ಹುಡುಕಿಕೊಡಿ' ಎಂದು ಒತ್ತಾಯಿಸಿ ಆಶಾ ಎಂಬಾಕೆ ತಾಲ್ಲೂಕಿನ ಅರಣಿಘಟ್ಟ ಗ್ರಾಮದಲ್ಲಿರುವ ತನ್ನ ಪತಿ ಮನೆ ಎದುರು 3 ದಿನದಿಂದ ಧರಣಿ ನಡೆಸುತ್ತಿದ್ದಾರೆ.

ತಾಲ್ಲೂಕಿನ ನಾರಿಗಾನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಎನ್.ಆರ್.ಆಶಾ ಹಾಗೂ ಅರಣಿಘಟ್ಟ ಗ್ರಾಮದ ಭೋವಿ ಜನಾಂಗಕ್ಕೆ ಸೇರಿದ ನಾಗೇಶ್ ಪರಸ್ಪರ ಪ್ರೀತಿಸಿ, ದೊಡ್ಡಶಿವಾರ ಗ್ರಾಮದ ಶಿವನ ದೇವಸ್ಥಾನದಲ್ಲಿ ಸೆಪ್ಟೆಂಬರ್ 28ರಂದು ಮದುವೆಯಾಗಿದ್ದರು. ಈ ವಿವಾಹಕ್ಕೆ ನಾಗೇಶನ ಸ್ನೇಹಿತರು ಸಾಕ್ಷಿಯಾಗಿದ್ದರು.

`ಆ ನಂತರ ಹೊಸಕೋಟೆಯಲ್ಲಿ ವಾಸ್ತವ್ಯ ಹೂಡಿ, ಸಂಸಾರ ಆರಂಭಿಸಿದೆವು. ಅ.5ರಂದು ನಾಗೇಶ್ ಅವರ ಅಣ್ಣ ರಮೇಶ್, ಮಾವ ಭರತ್ ಮನೆಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಕಾಲುಂಗುರ, ತಾಳಿಯನ್ನು ಕಿತ್ತು, ಪ್ರಾಣ ಬೆದರಿಕೆ ಹಾಕಿದರು. ನಂತರ ನಮ್ಮಿಬ್ಬರನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿ, ಮಾಲೂರು ಪಟ್ಟಣದ ಕಾಲೇಜು ಆವರಣದ ಬಳಿ ನನ್ನನ್ನು ಇಳಿಸಿ ಹೊರಟು ಹೋದರು. ತಂದೆ-ತಾಯಿ ಮನೆಗೆ ಹೋಗಲಾರದೆ, ಪತಿ ಆಸರೆ ಇಲ್ಲದೆ ಬೀದಿ ಪಾಲಾಗಿದ್ದೇನೆ. ಪತಿಯನ್ನು ಹುಡುಕಿ ಕೊಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ' ಎಂದು ಆಶಾ ತಿಳಿಸಿದರು.

ಪೊಲೀಸರ ಮಧ್ಯಸ್ಥಿಕೆಯಲ್ಲಿ ಮದುವೆ ನೋಂದಣಿ ಮಾಡಿದ್ದೇವೆ. ಅರಣಿಘಟ್ಟ ಗ್ರಾಮದಲ್ಲಿರುವ ಪತಿಯ ಕುಟುಂಬದವರ ಬಳಿ ನನ್ನನ್ನು ಮನೆಗೆ ಸೇರಿಸಿಕೊಳ್ಳುವಂತೆ ಕೇಳಿಕೊಂಡೆ. ಆದರೆ ಅವರು ನಿರಾಕರಿಸಿದರು. ಈಗ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಮನೆಯೊಳಗೆ ಸೇರಿಸಿಕೊಳ್ಳುವ ತನಕ ಧರಣಿ ಮುಂದುವರಿಸುತ್ತೇನೆ ಎಂದು ಆಶಾ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT