ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿಯ ಪತ್ತೆಗಾಗಿ ಪತ್ನಿ ಪರದಾಟ

Last Updated 16 ಫೆಬ್ರುವರಿ 2012, 6:00 IST
ಅಕ್ಷರ ಗಾತ್ರ

ಬೆಳ್ತಂಗಡಿ: ವಿವಾಹಿತನೊಬ್ಬನಿಂದ ವಂಚನೆಗೊಳಗಾಗಿ ಆತನ ಪತ್ತೆಗೆ ಹಗಲು ರಾತ್ರಿ ಹುಡುಕಾಡುತ್ತಿರುವ ನರ್ಸ್ ಒಬ್ಬಳ ಕರುಣಾಜನಕ ಕಥೆಯಿದು.

ಎತ್ತಣ ಕಾಟುಕುಕ್ಕೆ? ಎತ್ತಣ ಉಜಿರೆ? ಕಾಸರಗೋಡಿನ ಕಾಟುಕುಕ್ಕೆ ನಿವಾಸಿ 34 ವರ್ಷದ ಶಿವರಾಮ ಪ್ರಸಾದ್ ಮತ್ತು ಉಜಿರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ   ನರ್ಸ್ ಆಗಿರುವ 32 ವರ್ಷ ವಯಸ್ಸಿನ ಪ್ರೇಮಾ ಮಧ್ಯೆ ಮೊಬೈಲ್ ಮೂಲಕ ಆರಂಭವಾದ ಸಂಭಾಷಣೆ, ಸಂವಹನ ಸರಸ ಸಲ್ಲಾಪದೊಂದಿಗೆ ಪ್ರೇಮಾಯಣಕ್ಕೆ ನಾಂದಿಯಾಯಿತು. ದಿನ ಕಳೆದಂತೆ ಅವರು ಹೆಚ್ಚು ಆತ್ಮೀಯರಾಗಿ ಸಂಬಂಧ ಬಲವಾಗಿ ಸುಖ - ದುಖಗಳನ್ನು ಹಂಚಿಕೊಂಡರು. ಒಂದು ದಿನ ಇಬ್ಬರೂ ಸೇರಿ ದೇವರ ಹೆಸರಿನಲ್ಲಿ ಸತಿ-ಪತಿಯಾಗಿ ಪ್ರಮಾಣ ಮಾಡಿದರು.

ಪ್ರೇಮಾಳೊಂದಿಗೆ ಪ್ರೀತಿ - ಪ್ರೇಮದ ಕಪಟ ನಾಟಕವಾಡಿ ಆಕೆಯ ತನು - ಮನ - ಧನ ದುರುಪಯೋಗ ಪಡಿಸಿಕೊಂಡ ಶಿವರಾಮ ಇದೀಗ ನಾಪತ್ತೆಯಾಗಿದ್ದಾನೆ. ದೂರವಾಣಿ ಸಂಪರ್ಕಕ್ಕೂ ಸಿಕ್ಕಿಲ್ಲ. ಆತನ ಪತ್ತೆಗೆ ಪತ್ನಿ ಮಾಡಿದ ಪ್ರಯತ್ನವೆಲ್ಲಾ ವಿಫಲವಾಗಿದೆ. ಕಾಟುಕುಕ್ಕೆಗೆ ಹಲವು ಬಾರಿ ದಂಡಯಾತ್ರೆ ಮಾಡಿ ಸೋತು ಸುಣ್ಣವಾದ ಆಕೆ ಬೆಳ್ತಂಗಡಿ ಠಾಣೆಗೂ ಲಿಖಿತ ದೂರು ನೀಡಿ ಆತನ ಪತ್ತೆಗೆ ಮನವಿ ಮಾಡಿದ್ದಾರೆ. ರಾಜ್ಯ ಮಹಿಳಾ ಆಯೋಗಕ್ಕೂ ಅಹವಾಲು ಸಲ್ಲಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಮೂಲತಃ ಸುಳ್ಯ ನಿವಾಸಿಯಾದ ಪ್ರೇಮಾ ಮಂಗಳೂರಿನಲ್ಲಿ ನರ್ಸಿಂಗ್ ತರಬೇತಿ ಮುಗಿಸಿದ ಬಳಿಕ ಉಜಿರೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾದಿಯಾಗಿ 2004ರಲ್ಲಿ ನೇಮಕಗೊಂಡರು.

ಆಸ್ಪತ್ರೆ ಬಳಿ ಇರುವ ವಸತಿಗೃಹದಲ್ಲಿ ವಾಸ್ತವ್ಯ ಇದ್ದರು. ಉಜಿರೆಯಲ್ಲಿ ಖಾಸಗಿ ಔಷಧಿ ಅಂಗಡಿಯಲ್ಲಿ ಕೆಲಸದಲ್ಲಿದ್ದ ಶಿವರಾಮ ಆಗಾಗ ಆಸ್ಪತ್ರೆಗೆ ಬರುತ್ತಿದ್ದ. ಪ್ರೇಮಾ ಮತ್ತು ಆತನೊಂದಿಗೆ ಸ್ನೇಹ ಬೆಳೆದು ಮೊಬೈಲ್ ಸಂಭಾಷಣೆ ಮೂಲಕ ಆತ್ಮೀಯತೆ ಹಾಗೂ ಸಖ್ಯ ಬಲಗೊಂಡಿತು. ಆಕೆಯನ್ನು ಮದುವೆಯಾಗಲು ಒತ್ತಾಯಿಸಿದ.

ಪ್ರೇಮಗಾಗಿ ದುಂಬಾಲು ಬಿದ್ದ. ಒಂದು ದಿನ ಆಕೆಯ ವಸತಿ ಗೃಹದಲ್ಲಿ ದೇವರ ಫೋಟೋ ಎದುರು ಆಕೆಗೆ ಜನಿವಾರವನ್ನೇ ಮಾಂಗಲ್ಯವಾಗಿ ಹಾಕಿ ಹಣೆಗೆ ಕುಂಕುಮವಿಟ್ಟು ಪತ್ನಿಯಾಗಿ ಸ್ವೀಕರಿಸಿದ. ತಾನು ಎಂದೂ ಮೋಸ ಮಾಡುವುದಿಲ್ಲ ಎಂದು ಧರ್ಮಸ್ಥಳ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ. ಆಗ ಆಕೆಗೂ ಭರವಸೆ ಮೂಡಿ ಮುಂದೆ ಸುಮಾರು ಒಂದೂವರೆ ವರ್ಷ ಕಾಲ ಸತಿ-ಪತಿಯಾಗಿ ಜೀವನ ಮಾಡಿದರು.  ಆಕೆಯ ಪೂರ್ಣ ವಿಶ್ವಾಸಕ್ಕೆ ಪಾತ್ರನಾದ ಪತಿ ಆಕೆಯ ತನು, ಮನ, ಧನ ಎಲ್ಲವನ್ನೂ ದುರುಪಯೋಗ ಪಡಿಸಿದ. ಆಕೆ ಬ್ಯಾಂಕಿನಿಂದ ಸಾಲ ಮಾಡಿ ಒಂದು ದ್ವಿಚಕ್ರ ವಾಹನವನ್ನೂ ಪತಿಗಾಗಿ ಖರೀದಿಸಿದಳು. ಆದರೆ ಒಂದು ದಿನ ಪತಿ ನಾಪತ್ತೆಯಾದ.

ಈ ನಡುವೆ ಚಾರ್ಮಾಡಿ ಬಳಿಯ ಬೈಲಂಗಡಿ ನಿವಾಸಿ ಸುಪ್ರಿಯಾ ಎಂಬಾಕೆ ಪ್ರೇಮಾರಿಗೆ ದೂರವಾಣಿ ಕರೆ ಮಾಡಿ `ತಾನು ಶಿವರಾಮ ಪ್ರಸಾದರನ್ನು ಮೊದಲೇ ವಿವಾಹವಾಗಿದ್ದು ಐದು ವರ್ಷ ಪ್ರಾಯದ ಮಗನಿದ್ದಾನೆ~ ಎಂಬ ಖಚಿತ ಮಾಹಿತಿ ನೀಡಿದರು. ಇದರಿಂದಾಗಿ ಪ್ರೇಮಾ ಮತ್ತಷ್ಟು ಗೊಂದಲಕ್ಕೀಡಾಗಿ ಚಿಂತಿತರಾದರು.

ಬೆಳ್ತಂಗಡಿ ಠಾಣೆಗೆ 2010 ರ ಜುಲೈ 11 ರಂದು ನಾಪತ್ತೆಯ ಲಿಖಿತ ದೂರು ನೀಡಲಾಯಿತು. ಸ್ವತಃ ಪ್ರೇಮಾ ಕೂಡ ಕಾಟುಕುಕ್ಕೆಗೆ ಹೋಗಿ ವಿಚಾರಿಸಿದಾಗ ಪತಿಯ ಮಾಹಿತಿ ಸಿಗಲಿಲ್ಲ. ಇದೀಗ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು ಅವರ ಸಲಹೆಯಂತೆ ಕಳೆದ ಶನಿವಾರ ಬೆಳ್ತಂಗಡಿ ಠಾಣೆಗೆ ಪ್ರೇಮಾ ಮತ್ತೆ ದೂರು ನೀಡಿದ್ದಾರೆ.

ಮಹಿಳಾ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಪ್ರೇಮಾ ರಾಮಮೂರ್ತಿ ಹಾಗೂ ಸದಸ್ಯರಾದ ಕಲಾವತಿ, ಮಾಲಾ ಮತ್ತು ಉಷಾ ಶಿವರಾಮ್ ಉಜಿರೆಗೆ ಬಂದು  ಮಾಹಿತಿ ಸಂಗ್ರಹಿಸಿದ್ದಾರೆ. ಬೆಳ್ತಂಗಡಿ ಠಾಣೆಗೆ ಹೋಗಿ ತನಿಖೆಗೆ ಒತ್ತಾಯಿಸಿದ್ದಾರೆ. ಸೋಮವಾರ ಪ್ರೇಮಾ ಕೂಡ ಠಾಣೆಗೆ ಹೋಗಿದ್ದು ಎಸ್.ಐ ಯೋಗೀಶ್ ಕುಮಾರ್ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.

ದೃಢ ಸಂಕಲ್ಪ: ಆತ ಎಲ್ಲೇ ಹೋದರೂ, ಏನೇ ಆದರೂ ಶಿವರಾಮ ಪ್ರಸಾದರೇ ತನ್ನ ಪತಿ ಎಂದು ನಂಬಿದ ಪ್ರೇಮಾ ತನ್ನ ಎಲ್ಲಾ ದಾಖಲೆಗಳಲ್ಲಿಯೂ ಪತಿಯಾಗಿ ಆತನ ಹೆಸರನ್ನು ದಾಖಲಿಸಿದ್ದಾರೆ. ಬುಧವಾರ ಧರ್ಮಸ್ಥಳಕ್ಕೆ ಹೋಗಿ ದೇವರಿಗೆ ವಿಶೇಷ ಸೇವೆ ಮಾಡಿ ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT