ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿಯಿಂದ ಉಸಿರುಗಟ್ಟಿಸಿ ನಟಿ ಹೇಮಶ್ರೀ ಕೊಲೆ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕಿರುತೆರೆ ನಟಿ ಹೇಮಶ್ರೀಯನ್ನು ಆಕೆಯ ಪತಿ ಸುರೇಂದ್ರ ಬಾಬು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ, ಮರಣೋತ್ತರ ಪರೀಕ್ಷೆ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಜ್ಞರ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ~ ಎಂದು ಪೊಲೀಸರು ಹೇಳಿದ್ದಾರೆ.

`ಕಾರ್ಯಕ್ರಮವೊಂದರ ಚಿತ್ರೀಕರಣಕ್ಕಾಗಿ ಹೈದರಾಬಾದ್‌ಗೆ ಹೋಗುವುದಾಗಿ ಹೇಮಶ್ರೀ ಪೋಷಕರಿಗೆ ಹೇಳಿದ್ದರು. ಈ ವಿಷಯ ತಿಳಿದ ಸುರೇಂದ್ರ, ಪತ್ನಿಯನ್ನು ತಾನೇ ಡ್ರಾಪ್ ಮಾಡಿ ಬರುವುದಾಗಿ ಹೇಮಶ್ರೀ ಜತೆ ಸೋಮವಾರ ಸಂಜೆ ಕಾರಿನಲ್ಲಿ ತೆರಳಿದ್ದರು. ದಂಪತಿ, ರಾತ್ರಿ ಎಂಟು ಗಂಟೆ ಸುಮಾರಿಗೆ ಅನಂತಪುರ ತಲುಪಿದರು.

ಈ ವೇಳೆ ಮಾರ್ಗ ಬದಲಿಸುವಂತೆ ಚಾಲಕ ಸತೀಶ್‌ಗೆ ಹೇಳಿದ ಸುರೇಂದ್ರ, ಅನಂತಪುರದಿಂದ 17 ಕಿ.ಮೀ. ದೂರದಲ್ಲಿರುವ ಸ್ನೇಹಿತ ಮುರಳಿ ಎಂಬಾತನ ಫಾರ್ಮ್ ಹೌಸ್‌ಗೆ ಪತ್ನಿಯನ್ನು ಕರೆದುಕೊಂಡು ಹೋಗಿದ್ದ~ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

`ತನ್ನ ಸಂಚಿನಂತೆ ಸುರೇಂದ್ರ, ಫಾರ್ಮ್‌ಹೌಸ್‌ನಲ್ಲಿ ಒಂದು ಕೊಠಡಿಯನ್ನು ಬಾಡಿಗೆ ಪಡೆದಿದ್ದ. ಈ ಸಂದರ್ಭದಲ್ಲಿ ಹೇಮಶ್ರೀ, ತನಗೆ ಪ್ರತ್ಯೇಕ ಕೊಠಡಿ ಕೊಡುವಂತೆ ಫಾರ್ಮ್‌ಹೌಸ್‌ನ ಸಿಬ್ಬಂದಿ ಜತೆಗೆ ಜಗಳವಾಡಿದ್ದರು.ಆದರೆ, ಆ ಪ್ರಯತ್ನ ಮುರಿದು ಬಿದ್ದ ಕಾರಣ ದಂಪತಿ ಒಂದೇ ಕೊಠಡಿಗೆ ಹೋಗಿದ್ದರು.

`ರಾತ್ರಿ ಹತ್ತು ಗಂಟೆ ಸುಮಾರಿಗೆ ಆರಂಭವಾದ ದಂಪತಿ ನಡುವಿನ ಜಗಳ, ರಾತ್ರಿಯಿಡೀ ಮುಂದುವರಿಯಿತು. ಮಂಗಳವಾರ ನಸುಕಿನಲ್ಲಿ ಮಹಿಳೆ ಜೋರಾಗಿ ಕೂಗಿಕೊಂಡರು~ ಎಂದು ಫಾರ್ಮ್ ಹೌಸ್ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಗಳ ನಡೆದ ಸಂದರ್ಭದಲ್ಲಿ ಆರೋಪಿ, ಕ್ಲೋರೊಫಾರ್ಮ್ ಬಳಸಿ ಪತ್ನಿಯ ಉಸಿರುಗಟ್ಟಿಸಿದ್ದ. ಈ ವಿಷಯ ತಿಳಿದು ಭಯಭೀತನಾದ ಕಾರು ಚಾಲಕ ಸತೀಶ್ ಅಲ್ಲಿಂದ ಪರಾರಿಯಾಗಿದ್ದ. ಹೀಗಾಗಿ ಸುರೇಂದ್ರನೇ ಕಾರು ಚಾಲನೆ ಮಾಡಿಕೊಂಡು ಸಂಜೆ ನಾಲ್ಕು ಗಂಟೆ ಸುಮಾರಿಗೆ ಪತ್ನಿಯನ್ನು ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕರೆತಂದಿದ್ದ. ಆದರೆ, ಮಾರ್ಗ ಮಧ್ಯೆ ಹೇಮಶ್ರೀ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

`ಹೇಮಶ್ರೀ ಸಾವಿನ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆರೋಪಿಯ ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಶುಕ್ರವಾರ ಬಹಿರಂಗಪಡಿಸುತ್ತೇವೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ. 

ಅನಂತಪುರಕ್ಕೆ ಪೊಲೀಸ್ ತಂಡ: `ಆರೋಪಿ ಹೆಚ್ಚಿನ ಪ್ರಮಾಣದಲ್ಲಿ ಕ್ಲೋರೊಫಾರ್ಮ್ ಬಳಸಿ ಹೇಮಶ್ರೀಯನ್ನು ಉಸಿರುಗಟ್ಟಿಸಿದ್ದಾನೆ. ಇದರಿಂದ ಮೆದುಳಿಗೆ ಆಮ್ಲಜನಕ ಪೂರೈಕೆಯಾಗದೆ ಹೇಮಶ್ರೀ ಸಾವನ್ನಪ್ಪಿದ್ದಾರೆ.

ಈಗಾಗಲೇ ಅನಂತಪುರಕ್ಕೆ ಒಂದು ತಂಡವನ್ನು ಕಳುಹಿಸಲಾಗಿದೆ. ಪೊಲೀಸರು, ಫಾರ್ಮ್‌ಹೌಸ್ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಫಾರ್ಮ್‌ಹೌಸ್‌ನ ಮಾಲೀಕ ಮುರಳಿ ಪರಾರಿಯಾಗಿದ್ದು, ಆತನ ಪತ್ತೆ ಕಾರ್ಯ ನಡೆಯುತ್ತಿದೆ. ಕಾರು ಚಾಲಕ ಸತೀಶ್‌ನ ಹುಡುಕಾಟವೂ ನಡೆಯುತ್ತಿದೆ~ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ದೈಹಿಕ ಸಂಪರ್ಕ ನಡೆದಿರಲಿಲ್ಲ: `ಇಷ್ಟವಿಲ್ಲದಿದ್ದರೂ ಪೋಷಕರ ಒತ್ತಾಯಕ್ಕೆ ಸುರೇಂದ್ರ ಬಾಬುನನ್ನು ಮದುವೆಯಾಗಿದ್ದ ಹೇಮಶ್ರೀಗೆ ಆತನೊಂದಿಗೆ ಜೀವನ ನಡೆಸಲು ಇಷ್ಟವಿರಲಿಲ್ಲ. ಆದ್ದರಿಂದ ಆಕೆ ಹೆಚ್ಚಿನ ಸಮಯವನ್ನು ಚಿತ್ರೀಕರಣದಲ್ಲೇ ಕಳೆಯುತ್ತಿದ್ದಳು.

ಮದುವೆಯಾಗಿ ವರ್ಷ ಕಳೆದರೂ ದಂಪತಿ ನಡುವೆ ದೈಹಿಕ ಸಂಪರ್ಕವಿರಲಿಲ್ಲ. ಈ ವಿಷಯವಾಗಿ ದಂಪತಿ ನಡುವೆ ಸದಾ ಜಗಳವಾಗುತ್ತಿತ್ತು. ಹೇಮಶ್ರೀಯನ್ನು ಒಲಿಸಿಕೊಳ್ಳುವ ಉದ್ದೇಶದಿಂದ ಸುರೇಂದ್ರ, ಹೇಮಶ್ರೀಯನ್ನು ಅನಂತಪುರಕ್ಕೆ ಕರೆದುಕೊಂಡು ಹೋಗಿರುವ ಸಾಧ್ಯತೆ ಇದೆ~ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT