ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತನ ಕುಟುಂಬದ ಹತ್ಯೆ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಧ್ಯಪ್ರದೇಶದ ಪತ್ರಕರ್ತ ಚಂದ್ರಿಕಾ ರಾಯ್ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಘಟನೆ ಅತ್ಯಂತ ಬರ್ಬರ ಕೃತ್ಯ. ಅನ್ಯಾಯ, ಅಕ್ರಮಗಳ ವಿರುದ್ಧ ಧ್ವನಿ ಎತ್ತುವ ಪತ್ರಕರ್ತರನ್ನು ಬೆದರಿಸುವ ಪ್ರಕರಣಗಳು ದೇಶದ ಉದ್ದಗಲದಲ್ಲಿ ನಿತ್ಯವೂ ನಡೆಯುತ್ತವೆ.

ಆದರೆ, ಅವರನ್ನು ಕೊಲೆ ಮಾಡುವಂತಹ ಘಟನೆಗಳು ವಿರಳ. ಈ ಪ್ರಕರಣದಲ್ಲಿ ಚಂದ್ರಿಕಾ ರಾಯ್ ಅವರಲ್ಲದೆ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳನ್ನೂ ಹಂತಕರು ಕೊಂದು ಹಾಕಿದ್ದಾರೆ. ಇಂತಹ ಘಟನೆಗಳನ್ನು ಸಿನಿಮಾಗಳಲ್ಲಿ ನೋಡಬಹುದಿತ್ತು.
 
ಅಕ್ರಮಗಳನ್ನು ಬಯಲಿಗೆಳೆಯುವ ಪತ್ರಕರ್ತನನ್ನು ಮಾತ್ರವಲ್ಲ, ಅವನ ಕುಟುಂಬದ ಸದಸ್ಯರನ್ನೆಲ್ಲ ಕೊಂದು ಹಾಕುವ ಮೂಲಕ ಇತರ ಪತ್ರಕರ್ತರಿಗೆ ಎಚ್ಚರಿಕೆ ನೀಡುವ ದುರುದ್ದೇಶ ಈ ಘಟನೆಯ ಹಿಂದಿದೆ.

ಅದೇನೇ ಇರಲಿ, ಈ ಕೃತ್ಯವನ್ನು ಪ್ರತಿಯೊಬ್ಬರೂ ಖಂಡಿಸಬೇಕು. ರಾಯ್ ಕುಟುಂಬದ ಕೊಲೆಯ ಹಿಂದೆ ಮಧ್ಯಪ್ರದೇಶದ ಕಲ್ಲಿದ್ದಲು ಮಾಫಿಯಾ ಕೈವಾಡ ಇದೆ ಎಂಬ ದೂರುಗಳಿವೆ.

ರಾಯ್ ಅವರು ಗಣಿ ಅಕ್ರಮಗಳ ವಿರುದ್ಧ ಧೈರ್ಯವಾಗಿ ಬರೆಯುತ್ತಿದ್ದರು. ಅದರಿಂದಾಗಿ ಕೆಲವರ ವಿರೋಧ ಕಟ್ಟಿಕೊಂಡಿದ್ದರು. ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವ ಮೊದಲ ಹಂತದಲ್ಲೇ ಮಧ್ಯಪ್ರದೇಶ ಪೊಲೀಸರು ಎಡವಿದ್ದಾರೆ;

ರಾಯ್ ಹಾಗೂ ಅವರ ಕುಟುಂಬದ ಹತ್ಯೆಗೆ ಸರ್ಕಾರಿ ಅಧಿಕಾರಿಯೊಬ್ಬರ ಮಗನ ಅಪಹರಣದ ಘಟನೆಯ ಜತೆಗೆ ತಳಕು ಹಾಕುವ ಮೂಲಕ ತನಿಖೆಯ ಜಾಡು ತಪ್ಪಿಸಲು ಹೊರಟಿದ್ದಾರೆ ಎಂದು ರಾಯ್ ಸೋದರ ಆರೋಪಿಸಿದ್ದಾರೆ.
 
ಅನ್ಯಾಯಕ್ಕೆ ಒಳಗಾದ ಕುಟುಂಬಗಳು ಪೊಲೀಸರಿಂದ ನ್ಯಾಯ ಸಿಗಬಹುದು ಎಂಬ ಭರವಸೆ ಇಟ್ಟುಕೊಂಡಿರುತ್ತಾರೆ. ರಾಯ್ ಹತ್ಯೆ ಬಗ್ಗೆ  ಸುಳಿವು ನೀಡುವವರಿಗೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಅವರ ಸೋದರ ಘೋಷಿಸಿದ್ದಾರೆ.
 
ಈ ಬೆಳವಣಿಗೆ ಮಧ್ಯಪ್ರದೇಶ ಪೊಲೀಸರ ಕಾರ್ಯವೈಖರಿಯನ್ನು ಸಂಶಯದಿಂದ ನೋಡುವಂತೆ ಮಾಡಿದೆ.

ಮಧ್ಯಪ್ರದೇಶ ಕಲ್ಲಿದ್ದಲು ಗಣಿ ಅಕ್ರಮಗಳಿಗೆ ಹೆಸರುವಾಸಿ. ಅಕ್ರಮಗಳ ವಿರುದ್ಧ ಧ್ವನಿ ಎತ್ತುವವರನ್ನು ವ್ಯವಸ್ಥಿತವಾಗಿ ದಮನ ಮಾಡುವ ಪ್ರಯತ್ನ ಕಳೆದ ಒಂದೆರಡು ದಶಕಗಳಿಂದ ಅಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ.

ಎಲ್ಲೆಡೆ ಇರುವಂತೆ ಅಲ್ಲಿಯೂ ಅಕ್ರಮ ಗಣಿಗಾರಿಕೆಗೆ ರಾಜಕಾರಣಿಗಳು, ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳ ಕುಮ್ಮಕ್ಕಿದೆ. ದೇಶದ  ಸಂಪತ್ತನ್ನು ಕೆಲವೇ ವ್ಯಕ್ತಿಗಳು ಕೊಳ್ಳೆ ಹೊಡೆಯುವುದನ್ನು ಸಹಿಸದ ಧೈರ್ಯಶಾಲಿ ಪತ್ರಕರ್ತರು ಜೀವದ ಹಂಗು ತೊರೆದು ಅದನ್ನು ಜನರ ಹಾಗೂ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಲೇ ಇದ್ದಾರೆ.

ವಾಸ್ತವವಾಗಿ ಇಂಥವರಿಗೆ ಸರ್ಕಾರ ವಿಶೇಷ ರಕ್ಷಣೆ ನೀಡಬೇಕು. ಆದರೆ ರಕ್ಷಣೆ ಕೊಡಬೇಕಾದವರೇ ಅಕ್ರಮಗಳಿಗೆ ಕುಮ್ಮಕ್ಕು ಕೊಡುತ್ತಿರುವುದರಿಂದ ಚಂದ್ರಿಕಾ ರಾಯ್ ಕುಟುಂಬ ಜೀವ ಕಳೆದುಕೊಳ್ಳಬೇಕಾಯಿತು.
 
ಈ ಪ್ರಕರಣವನ್ನು ಸರ್ಕಾರ ಒಂದು ಸಾಮಾನ್ಯ ಕೊಲೆ ಎಂದು ಭಾವಿಸದೆ ಪ್ರಾಮಾಣಿಕ ತನಿಖೆ ನಡೆಸಿ ಹಂತಕರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಪತ್ರಕರ್ತರ ಹತ್ಯೆಗಳಿಗೆ ಕೊನೆಯೇ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT