ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರಲ್ಲಿ ಆತ್ಮಾವಲೋಕನ ಅಗತ್ಯ

Last Updated 21 ಜನವರಿ 2011, 10:20 IST
ಅಕ್ಷರ ಗಾತ್ರ

ಬೆಳಗಾವಿ: ‘ಪತ್ರಕರ್ತರು ನಿಷ್ಠೆ ಹಾಗೂ ಪ್ರಾಮಾಣಿಕತೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಮಹಾರಾಷ್ಟ್ರದ ಹಿರಿಯ ಸಾಹಿತಿ ಹೇಮಂತ ದೇಸಾಯಿ  ತಿಳಿಸಿದರು.
ನಗರದ ಮರಾಠಾ ಬ್ಯಾಂಕ್ ಸಭಾಗೃಹದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನಾಥ್ ಪೈ ಉಪನ್ಯಾಸ ಕಾರ್ಯಕ್ರಮದಲ್ಲಿ ಗ.ಗೋ. ರಾಜಾಧ್ಯಕ್ಷ ಹಾಗೂ ಎಸ್.ಆರ್. ಜೋಗ ಪತ್ರಕರ್ತ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ‘ಪತ್ರಕರ್ತರು ತಮ್ಮನ್ನು ಕೇಳುವವರೇ ಇಲ್ಲ ಎಂದು ಕೊಳ್ಳುತ್ತ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಜವಾಬ್ದಾರಿ ಮರೆಯುತ್ತಿದ್ದಾರೆ. ಹೀಗಾಗಿ ಪತ್ರಕರ್ತರು ತಾವು ಯಾವ ಹಾದಿಯಲ್ಲಿ ನಡೆಯುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕಿದೆ’ ಎಂದು ತಿಳಿಸಿದರು.

‘ಮುಂಬಯಿಯಂತಹ ನಗರಗಳಲ್ಲಿರುವ ಪತ್ರಕರ್ತರು ಕೋಟ್ಯಂತರ ರೂಪಾಯಿ ಬೆಲೆಬಾಳುವ ನಾಲ್ಕೈದು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಆಸರೆಗೆ ಒಂದು ಮನೆ ಇದ್ದರೆ ಸಾಕು ಎಂಬ ಭಾವನೆ ಅವರಿಲ್ಲ. ಮುಖ್ಯಮಂತ್ರಿ ಕೋಟಾದಲ್ಲಿ ನಾಲ್ಕೈದು ಫ್ಲಾಟ್‌ಗಳನ್ನು ಪಡೆದುಕೊಂಡು ಕರ್ತವ್ಯ ಮರೆಯುತ್ತಿದ್ದಾರೆ. ರಾಜಕಾರಣಿಗಳ ಚಮಚಾಗಿರಿ ಮಾಡುತ್ತಿದ್ದಾರೆ. ಪತ್ರಿಕೋದ್ಯಮಕ್ಕೆ ಈ ಹಿಂದೆ ಬದ್ಧತೆ ಹಾಗೂ ಸಾಮಾಜಿಕ ಕಾಳಜಿ ಇತ್ತು. ಅದನ್ನು ಪುನರ್ ಸ್ಥಾಪಿಸುವ ಕಾರ್ಯ ಆಗಬೇಕು’ ಎಂದರು.

‘ಭ್ರಷ್ಟಾಚಾರಕ್ಕೆ ಬಹುದೊಡ್ಡ ಪರಂಪರೆಯಿದೆ. ಬ್ರಿಟಿಷ್ ಕಾಲದಿಂದಲೂ ಬೆಳೆದು ಬಂದಿರುವ ಭ್ರಷ್ಟಾಚಾರದಲ್ಲಿ ರಾಜಕೀಯ ಪಕ್ಷಗಳ ಹಿರಿಯ ಮುಖಂಡರೂ ಅದರಲ್ಲಿ ಶಾಮೀಲಾಗಿದ್ದಾರೆ. ಯಾವ ರಾಜಕೀಯ ಪಕ್ಷವೂ ಅದರಿಂದ ಹೊರತಾಗಿಲ್ಲ’ ಎಂದು ಅವರು ತಿಳಿಸಿದರು.‘ಸ್ವಾತಂತ್ರ್ಯಾನಂತರ 2008ರ ವರೆಗೆ ರಾಜಕಾರಣಿಗಳು 640 ಬಿಲಿಯನ್ ಡಾಲರ್ ಹಣವನ್ನು ಭ್ರಷ್ಟಾಚಾರದಿಂದ ಗಳಿಸಿದ್ದು, ಅದರಲ್ಲಿ ಶೇ 70ರಷ್ಟು ಹಣ ವಿದೇಶಿ ಬ್ಯಾಂಕ್‌ಗಳಲ್ಲಿದೆ. ಅದನ್ನು ಹೊರಗೆ ತರುವ ಕಾರ್ಯ ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು.

‘ಭ್ರಷ್ಟಾಚಾರ ನಿರ್ಮೂಲನೆ ಚಳವಳಿಯಾಗಿ ಮಾರ್ಪಡಬೇಕು. ಇದರ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತಬೇಕು. ತಾನು ಯಾರಿಗೂ ಲಂಚ ಕೊಡುವುದಿಲ್ಲ. ಲಂಚ ಪಡೆಯುತ್ತಿರುವುದು ಕಂಡು ಬಂದರೆ ಅದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ’ ಎಂಬ ನಿರ್ಧಾರವನ್ನು ಪ್ರತಿಯೊಬ್ಬ ನಾಗರಿಕರು ಮಾಡಬೇಕಿದೆ ಎಂದರು.

ಪ್ರದಾನ: ಸಮಾರಂಭದಲ್ಲಿ ಗ.ಗೋ. ರಾಜಾಧ್ಯಕ್ಷ ಪತ್ರಕರ್ತ ಪ್ರಶಸ್ತಿಯನ್ನು ಕನ್ನಡ ವಿಭಾಗದಲ್ಲಿ ಸಂಯುಕ್ತ ಕರ್ನಾಟಕ ವರದಿಗಾರ ಡಿ.ವಿ. ಕಮ್ಮಾರ, ಮರಾಠಿ ವಿಭಾಗದಲ್ಲಿ ಕರವೀರ ಕಾಶಿ ಸಂಪಾದಕ ಸುನೀಲಕುಮಾರ ದೇಸಾಯಿ ಹಾಗೂ ಪ್ರಾ. ಎಸ್.ಆರ್. ಜೋಗ ಮಹಿಳಾ ಪ್ರತಕರ್ತೆ ಪ್ರಶಸ್ತಿಯನ್ನು ವಿಜಯ ಕರ್ನಾಟಕದ ಹುಬ್ಬಳಿಯ ವೀಣಾ ಕುಂಬಾರ ಮತ್ತು ಮರಾಠಿ ವಿಭಾಗದಲ್ಲಿ ಸಕಾಳ ಪತ್ರಿಕೆಯ ಕೊಲ್ಲಾಪುರದ ಪ್ರತಿನಿಧಿ ರೇಖಾ ಕುಂಬಾರ ಅವರಿಗೆ ಪ್ರದಾನ ಮಾಡಲಾಯಿತು.

ನಂದಿನಿ ಅತ್ಮಸಿದ್ಧಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಾರ್ವಜನಿಕ ವಾಚಾನಾಲಯದ ಅಧ್ಯಕ್ಷ ಕೆ.ಬಿ. ಹನ್ನೂರಕರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ನೇತಾಜಿ ಜಾಧವ ಕಾರ್ಯಕ್ರಮ ನಿರ್ವಹಿಸಿದರು. ಅನಂತ ಜಂಗಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT