ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕೆಗಳ ಸಾಮಾಜಿಕ ಜವಾಬ್ದಾರಿ ಸ್ತುತ್ಯರ್ಹ

Last Updated 25 ಫೆಬ್ರುವರಿ 2012, 9:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಬರೀ ಪತ್ರಿಕೆಗಳನ್ನು ಮಾರಾಟ ಮಾಡುವ ಬದಲು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೌನ್ಸೆಲಿಂಗ್ ನಡೆಸುವ ಪರಂಪರೆಯನ್ನು ಹೊಂದಿರುವ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕಾ ಬಳಗದ ಕಾರ್ಯ ಸ್ತುತ್ಯರ್ಹವಾದುದು~ ಎಂದು ಕೆಎಲ್‌ಇ ಶಿಕ್ಷಣ ಸೊಸೈಟಿಯ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ ಶ್ಲಾಘಿಸಿದರು.

ಪತ್ರಿಕಾ ಬಳಗವು ಇಲ್ಲಿಯ ಕೆಎಲ್‌ಇ ಸಂಸ್ಥೆಯ ಶ್ರೀಮತಿ ಚನ್ನಬಸಮ್ಮ ಈಶ್ವರಪ್ಪ ಮುನವಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ, ಎಸ್ಸೆಸ್ಸೆಲ್ಸಿ ನಂತರ ಮುಂದೇನು? ಕುರಿತ ಕೌನ್ಸೆಲಿಂಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, `ಈ ಪತ್ರಿಕಾ ಬಳಗದ ಕಾರ್ಯಗಳನ್ನು ಮೊದಲಿನಿಂದಲೂ ನಾನು ಗಮನಿಸುತ್ತಿದ್ದೇನೆ. ಇವುಗಳು ಬರೀ ಪತ್ರಿಕಾ ವ್ಯವಹಾರವನ್ನು ನೋಡದೇ ವಿದ್ಯಾರ್ಥಿಗಳಿಗಾಗಿ ಕರಿಯರ್ ಕೌನ್ಸೆಲಿಂಗ್‌ನಂಥ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿವೆ~ ಎಂದರು.

`ಇಂದು ಪೋಷಕರ ಮನೋಭಾವ ಬದಲಾಗಿದ್ದು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು ಎಂದು ಬಯಸುತ್ತಾರೆ. ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದು, ಅದನ್ನು ಸೂಕ್ತವಾಗಿ ಉಪಯೋಗಿಸುವುದನ್ನು ತಿಳಿಸಿಕೊಡಬೇಕು~ ಎಂದು ನುಡಿದರು.

ಉದ್ಯಮಿ ಸಚಿನ್ ಷಾ ಮಾತನಾಡಿ, `ಎಸ್ಸೆಸ್ಸೆಲ್ಸಿ ಮುಗಿದ ನಂತರ ಯಾವ ಕೋರ್ಸ್ ಮಾಡಬೇಕು ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಇರುವುದು ಸಹಜವೇ. ಆದರೆ ಅತಿ ಹೆಚ್ಚು ಅಂಕ ಗಳಿಸಿದರೆ ವಿಜ್ಞಾನ, ಅದಕ್ಕಿಂತ ಕಡಿಮೆ ಪಡೆದರೆ ವಾಣಿಜ್ಯ, ಅತೀ ಕಡಿಮೆ ಅಂಕ ಬಂದರೆ ಕಲಾ ವಿಭಾಗ ಆರಿಸಿಕೊಳ್ಳುವ ಮನೋಭಾವವನ್ನು ಬಿಡಬೇಕು. ನಾವು ಯಾವುದೇ ಕೋರ್ಸ್ ಆಯ್ದುಕೊಂಡರೂ ಆಸಕ್ತಿಯಿಂದ, ಸಂತಸದಿಂದ ಓದಬೇಕು. ಎಲ್ಲಕ್ಕಿಂತ ಮೊದಲು ನಮ್ಮ ಅಹಂ ಅನ್ನು ಬಿಡಬೇಕು. ಅಹಂನಿಂದ ಮನುಷ್ಯ ಹಾಳಾಗುತ್ತಾನೆ~ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.

ಸ್ವಾಗತ ಭಾಷಣ ಮಾಡಿದ ಪತ್ರಿಕೆಗಳ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಬಿ.ಎ.ರವಿ, `ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಾ ಬಂದಿರುವ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಬಳಗವು ಹೊರತರುತ್ತಿರುವ ಶಿಕ್ಷಣ ಪುರವಣಿಗಳಲ್ಲಿ ತಜ್ಞ ಲೇಖಕರಿಂದ ಶಿಕ್ಷಣ ಸಂಬಂಧಿ ಲೇಖನಗಳನ್ನು ಬರೆಸುತ್ತಿದೆ. 65 ಸಾವಿರ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಪತ್ರಿಕೆಗಳನ್ನು ಪೂರೈಸುತ್ತಿದೆ. ಸಿಇಟಿ ಕೌನ್ಸೆಲಿಂಗ್ ಅನ್ನೂ ಸಂಘಟಿಸುತ್ತಿದೆ~ ಎಂದರು.

ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಡಿ.ಆರ್.ಕುಲಕರ್ಣಿ, `ಪ್ರಜಾವಾಣಿ~ ಉಪ ಸುದ್ದಿ ಸಂಪಾದಕ ಹಾಗೂ ಬ್ಯೂರೊ ಮುಖ್ಯಸ್ಥ ಎಂ.ನಾಗರಾಜ, `ಸಿಗ್ಮಾ ಇಂಡಿಯಾ ಫೌಂಡೇಷನ್~ ನಿರ್ದೇಶಕ ಅಮೀನ್ ಇ ಮುದಸ್ಸರ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT