ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಕದೆಡೆಗೆ ನಡಿಗೆ ಸಾಧ್ಯವೇ?

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್ ಒಲಿಂಪಿಕ್ಸ್‌ನ ಪುರುಷರ ವಿಭಾಗದ ನಡಿಗೆ ಸ್ಪರ್ಧೆಯಲ್ಲಿ ವಿಶ್ವದ ಘಟಾನುಘಟಿಗಳಿಗೆ ಪೈಪೋಟಿ ನೀಡಲು ಭಾರತದ ನಾಲ್ಕು ಅಥ್ಲೀಟ್‌ಗಳು ಇರುವರು. ದೇಶ ಹೆಮ್ಮೆ ಪಡುವಂತಹ ಸಂಗತಿ ಇದು. ಆದರೆ `ನಡಿಗೆ~ ಎಂಬ ಹೆಸರಿನ ಕಾರಣದಿಂದಲೋ ಏನೋ, ಈ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವ ಅಥ್ಲೀಟ್‌ಗಳಿಗೆ `ಸ್ಟಾರ್~ ಪಟ್ಟ ಲಭಿಸಿಲ್ಲ.

ಶೂಟರ್, ಬಾಕ್ಸರ್‌ಗಳು ಒಳಗೊಂಡಂತೆ ಇತರ ವಿಭಾಗಗಳಲ್ಲಿ ದೇಶವನ್ನು ಪ್ರತಿನಿಧಿಸುವವರು ಸಾಕಷ್ಟು ಸುದ್ದಿ ಮಾಡುತ್ತಲೇ ಲಂಡನ್‌ಗೆ ಪ್ರಯಾಣಿಸಿದ್ದಾರೆ. ನಡಿಗೆ ಸ್ಪರ್ಧಿಗಳಿಗೆ ಅಂತಹ ಪ್ರಚಾರ ಲಭಿಸಿಲ್ಲ. ಆದರೆ ಈ ನಾಲ್ಕು ಅಥ್ಲೀಟ್‌ಗಳು ಲಂಡನ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಪ್ರಚಾರ ಗಿಟ್ಟಿಸುವ ಭರವಸೆ ಹೊಂದಿದ್ದಾರೆ.

20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಬಲ್ಜಿಂದರ್ ಸಿಂಗ್, ಗುರ್ಮೀತ್ ಸಿಂಗ್ ಮತ್ತು ಕೆ.ಟಿ. ಇರ್ಫಾನ್ ಹಾಗೂ 50 ಕಿ.ಮೀ. ನಡಿಗೆಯಲ್ಲಿ ಬಸಂತ್ ಬಹಾದೂರ್ ರಾಣಾ ಭಾರತವನ್ನು ಪ್ರತಿನಿಧಿಸಲಿರುವರು. 50 ಕಿ.ಮೀ ವಿಭಾಗದಲ್ಲಿ ಭಾರತದ ಅಥ್ಲೀಟ್ ಒಬ್ಬರು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದು ಇದೇ ಮೊದಲು.

`ಇಬ್ಬರು ಸ್ಪರ್ಧಿಗಳು `ಎ~ ಸ್ಟ್ಯಾಂಡರ್ಡ್ ಅರ್ಹತೆ ಗಿಟ್ಟಿಸಿದ್ದಾರೆ. ಇದರಿಂದ ಪದಕದ ಭರವಸೆ ಇಡಬಹುದು. ಆದರೆ ಅದು ನಿರೀಕ್ಷಿಸಿದಷ್ಟು ಸುಲಭವಲ್ಲ. ತನ್ನ ಪ್ರದರ್ಶನ ಮಟ್ಟವನ್ನು ಅಲ್ಪ ಸುಧಾರಿಸಿಕೊಂಡರೆ ಗುರ್ಮೀತ್ ಅಗ್ರ ಮೂವರಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ~ ಎಂಬುದು ಕೋಚ್ ರಾಮಕೃಷ್ಣ ಗಾಂಧಿ ಅವರ ಹೇಳಿಕೆ.

ಈ ನಾಲ್ಕೂ ಅಥ್ಲೀಟ್‌ಗಳು ಬೆಂಗಳೂರಿನ ಎಸ್‌ಎಐ ಕೇಂದ್ರದಲ್ಲಿ ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ತರಬೇತಿ ನಡೆಸಿದ್ದು, ಒಲಿಂಪಿಕ್ಸ್‌ನಲ್ಲಿ ಎದುರಾಗಲಿರುವ ಸವಾಲನ್ನು ಮೆಟ್ಟಿನಿಲ್ಲಲು ಸಜ್ಜಾಗಿದ್ದಾರೆ.

50 ಕಿ.ಮೀ. ನಡಿಗೆ ಸ್ಪರ್ಧಿ ಬಸಂತ್ ಬಹಾದೂರ್ ರಾಣಾ ನೇಪಾಳ ಮೂಲದವರು. ಈಗ ಭಾರತದ ಪೌರತ್ವ ಪಡೆದಿದ್ದಾರೆ. ಮಾತ್ರವಲ್ಲ ಪಾಸ್‌ಪೋರ್ಟ್‌ನಲ್ಲಿ ಕರ್ನಾಟಕದ ವಿಳಾಸ ಹೊಂದಿದ್ದಾರೆ. ಆದರೆ ಅವರ ಬಗ್ಗೆ ಹೆಚ್ಚಿವನರಿಗೆ ತಿಳಿದಿಲ್ಲ. ಈ ವಿಷಯವನ್ನು ಬಸಂತ್ ಅವರೇ ಬಹಿರಂಗಪಡಿಸಿದ್ದಾರೆ.

`50 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮೊಟ್ಟಮೊದಲ ಅಥ್ಲೀಟ್ ನಾನು. ಇದೊಂದು ಅಸಾಮಾನ್ಯ ಸಾಧನೆ ಎಂದರೆ ತಪ್ಪಾಗಲಾರದು. ಆದರೆ ನನ್ನ ಸಾಧನೆಯನ್ನು ಯಾರೂ ಗುರುತಿಸಿಲ್ಲ~ ಎನ್ನುವರು.

`ಕ್ರೀಡಾ ಇಲಾಖೆ ಅಧಿಕಾರಿಗಳು ಒಳಗೊಂಡಂತೆ ಇಲ್ಲಿನ ಹೆಚ್ಚಿನವರಿಗೆ ನನ್ನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನನ್ನ ಸಾಧನೆಯನ್ನು ಗುರುತಿಸದೇ ಇರುವುದು ನಿರಾಸೆ ಉಂಟುಮಾಡಿದೆ~ ಎಂದು ಮನದ ನೋವನ್ನು ಬಹಿರಂಗಪಡಿಸಿದರು.

`ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡುವುದು ನನ್ನ ಗುರಿ. 50 ಕಿ.ಮೀ. ಸ್ಪರ್ಧೆ ಕಠಿಣ ಸವಾಲಿನಿಂದ ಕೂಡಿರುತ್ತದೆ. ಕೊನೆಯವರೆಗೂ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಫಿಟ್‌ನೆಸ್ ಜೊತೆಗೆ ನಿರಂತರ ಅಭ್ಯಾಸ ಅಗತ್ಯ. ಪ್ರತಿ ತಿಂಗಳು 800 ರಿಂದ 1,100 ಕಿ.ಮೀ. ನಡೆಯುತ್ತೇನೆ~ ಎಂದು ರಾಣಾ ನುಡಿದಿದ್ದಾರೆ.

ಮದ್ರಾಸ್ ರೆಜಿಮೆಂಟ್ ಸೆಂಟರ್‌ನಲ್ಲಿ ಸಿಪಾಯಿ ಆಗಿರುವ ಇರ್ಫಾನ್ ಕೇರಳದ ಮಲಪ್ಪುರ ಜಿಲ್ಲೆಯವರು. ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದೇ ಬಲುದೊಡ್ಡ ಗೌರವ ಎಂಬುದು ಅವರ ಹೇಳಿಕೆ. `ಪದಕದ ನಿರೀಕ್ಷೆ ಇಟ್ಟುಕೊಂಡಿಲ್ಲ. ಆದರೆ ವೈಯಕ್ತಿಕ ಶ್ರೇಷ್ಠ ಸಮಯ ಕಂಡುಕೊಳ್ಳವುದು ನನ್ನ ಗುರಿ. ಅದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ~ ಎಂದಿದ್ದಾರೆ.

`ಒಲಿಂಪಿಕ್ಸ್‌ಗೆ ಸೂಕ್ತ ರೀತಿಯಲ್ಲಿ ತರಬೇತಿ ನಡೆದಿದೆ. ಇದರಿಂದ ಪ್ರದರ್ಶನಮಟ್ಟದಲ್ಲಿ ಸುಧಾರಣೆ ಕಾಣಬಹುದು~ ಎಂದು ಹೇಳಿದ್ದಾರೆ. ರಷ್ಯಾದಲ್ಲಿ ನಡೆದ ವಿಶ್ವ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್‌ನಲ್ಲಿ 1 ಗಂಟೆ 22 ನಿಮಿಷ 09 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅವರು ಲಂಡನ್‌ಗೆ ಅರ್ಹತೆ ಪಡೆದಿದ್ದರು.

ಮೊಹಾಲಿಯ ಬಲ್ಜಿಂದರ್ ಸಿಂಗ್ ಅವರ ವೈಯಕ್ತಿಕ ಶ್ರೇಷ್ಠ ಸಮಯ 1:22.01 ಸೆ. ಆಗಿದೆ. ಏಷ್ಯನ್ ಚಾಂಪಿಯನ್‌ಷಿಪ್‌ಗೆ ಭಾರತ ತಂಡದ ಆಯ್ಕೆಗೆ ಪಟಿಯಾಲದಲ್ಲಿ ನಡೆದ `ಟ್ರಯಲ್ಸ್~ ಸಂದರ್ಭ ಈ ಸಾಧನೆ ಮೂಡಿಬಂದಿತ್ತು. ಜಪಾನ್‌ನ ನೋಮಿ ನಗರದಲ್ಲಿ ನಡೆದ ಏಷ್ಯನ್ ನಡಿಗೆ ಚಾಂಪಿಯನ್‌ಷಿಪ್‌ನಲ್ಲಿ 1 ಗಂಟೆ 22 ನಿಮಿಷ 12 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಆರನೇ ಸ್ಥಾನ ಪಡೆದಿದ್ದರು.

`ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಚಾರ. ಶ್ರೇಷ್ಠ ಸಾಧನೆ ತೋರುವುದು ಮಾತ್ರ ನನ್ನ ಮುಂದಿರುವ ಗುರಿ. ಅದಕ್ಕಾಗಿ ಕಠಿಣ ತಯಾರಿ ನಡೆದಿದೆ. ಒಂದು ವಾರದಲ್ಲಿ 70-80 ಕಿ.ಮೀ. ಕ್ರಮಿಸುವೆನು~ ಎಂದು ಪಂಜಾಬ್ ಪೊಲೀಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಬಲ್ಜಿಂದರ್ ನುಡಿದಿದ್ದಾರೆ.

ಗುರ್ಮೀತ್ ಸಿಂಗ್ ಅವರು ಡಬ್ಲಿನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಗ್ರ್ಯಾನ್ ಪ್ರಿ ಸ್ಪರ್ಧೆಯಲ್ಲಿ 1:22.05 ಸೆಕೆಂಡ್‌ಗಳಲ್ಲಿ ಗುರಿತಲುಪಿ `ಎ~ ಸ್ಟ್ಯಾಂಡರ್ಡ್ ಅರ್ಹತೆ ಗಿಟ್ಟಿಸಿದ್ದರು. ಇದರಿಂದ ಅವರ ಮೇಲೆ ಹೆಚ್ಚಿನ ಭರವಸೆ ಇಡಲಾಗಿದೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಅಥ್ಲೀಟ್‌ಗಳ ತರಬೇತಿಗಾಗಿ ಕ್ರೀಡಾ ಇಲಾಖೆ ದೊಡ್ಡ ಮೊತ್ತವನ್ನು ಮೀಸಲಿರಿಸಿದೆ.

ಆದರೆ ಈ ನಡಿಗೆ ಸ್ಪರ್ಧಿಗಳಿಗೆ ಸರ್ಕಾರದಿಂದ ಸೂಕ್ತ ನೆರವು ಲಭಿಸಿಲ್ಲ ಎಂಬ ಆರೋಪವೂ ಇದೆ. ಬೆಂಗಳೂರಿನ ಎಸ್‌ಎಐಗೆ ಆಗಮಿಸುವ ಮುನ್ನ ಇರ್ಫಾನ್ ಪಟಿಯಾಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ಐದು ತಿಂಗಳು ಅಭ್ಯಾಸ ನಡೆಸಿದ್ದರು.

ಈ ಅವಧಿಯಲ್ಲಿ ವೆಚ್ಚವಾದ ಸುಮಾರು 70,000 ರೂ. ಮೊತ್ತವನ್ನು ತಮ್ಮ ಜೇಬಿನಿಂದಲೇ ನೀಡಬೇಕಾಗಿ ಬಂದಿತ್ತು. ಅದೇ ರೀತಿ ಬಸಂತ್ ಮತ್ತು ಇರ್ಫಾನ್ ಉತ್ತಮ ಶೂಗಳನ್ನು ಖರೀದಿಸಲು ಹಲವು ಸಲ ತಮ್ಮ ಕೈಯಿಂದಲೇ ಹಣ ಖರ್ಚು ಮಾಡಿದ್ದಾರೆ.

ಆದರೆ ಈ ರೀತಿಯ ಕೊರತೆಗಳನ್ನು ಹೇಳುತ್ತಾ ಸುಮ್ಮನೆ ಕೂರಲು ಈ ಸ್ಪರ್ಧಿಗಳು ಸಿದ್ಧವಿಲ್ಲ. ಜಗತ್ತಿನ ಅತಿದೊಡ್ಡ ಕ್ರೀಡಾಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿದ ಸಂತಸದಲ್ಲಿ ತಮ್ಮ ಕಹಿಯನ್ನು ಮರೆತಿದ್ದಾರೆ.
 
ಎಲ್ಲರ ಗಮನ ಇದೀಗ ಲಂಡನ್‌ನತ್ತ ಕೇಂದ್ರೀಕೃತವಾಗಿದೆ. ಒಲಿಂಪಿಕ್ಸ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಭಾರತಕ್ಕೆ ಮರಳಿದರೆ ಸೂಕ್ತ ಸೌಲಭ್ಯ, ಮಾನ್ಯತೆ ದೊರೆಯಬಹುದೆಂಬ ವಿಶ್ವಾಸದಲ್ಲಿ ಇದ್ದಾರೆ. ಈ ನಾಲ್ಕು ಸ್ಪರ್ಧಿಗಳಲ್ಲಿ ಪದಕದೆಡೆಗೆ ನಡೆಯುವರು ಯಾರು ಎಂಬುದನ್ನು ನೋಡಬೇಕು. 
                             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT