ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದೇ ಪದೇ ಜಾತಿನಿಂದನೆ- ಪರಿಶಿಷ್ಟರು ಗರಂ

Last Updated 1 ಅಕ್ಟೋಬರ್ 2012, 6:15 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಪದೇ ಪದೇ ಜಾತಿನಿಂದನೆ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಪರಿಶಿಷ್ಟ ಮುಖಂಡರು ಗರಂ ಆಗಿದ್ದಾರೆ. ಜಾತಿನಿಂದನೆಗೆ  ಕಡಿವಾಣ ಹಾಕಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಪರಿಶಿಷ್ಟರ ಅಹವಾಲು ಆಲಿಸುವ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.

`ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಪುರಭವನದಲ್ಲಿ ಕೆಲ ತಿಂಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಪರಿಶಿಷ್ಟರನ್ನು ನಿಂದಿಸುವ ರೂಪಕವನ್ನು ಪ್ರದರ್ಶಿಸಲಾಗಿದೆ. ಈ ಬಗ್ಗೆ ದೂರು ನೀಡಿ 3 ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನೂತನ ಪೊಲೀಸ್ ಆಯುಕ್ತರಾದರೂ ನಮಗೆ ನ್ಯಾಯ ಕೊಡಿಸಬೇಕು. ಪುರುಷ ಪ್ರಕಾಶಂ ಪುಸ್ತಕದಲ್ಲಿ ದಲಿತರ ಬಗ್ಗೆ ಅವಾಚ್ಯ ಪದ ಬಳಸಲಾಗಿದೆ. ಪುಸ್ತಕದ ಲೇಖಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು~ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮುಖಂಡ ಎಸ್.ಪಿ.ಆನಂದ ಆಗ್ರಹಿಸಿದರು.

ದನಿಗೂಡಿಸಿದ ದ.ಸಂ.ಸ (ಭೀಮವಾದ) ಮುಖಂಡ ಪಿ.ಕೇಶವ ಅವರು, `ಸಂಸ್ಕೃತಿ ಹೆಸರಿನಲ್ಲಿ ದಲಿತರನ್ನು ಅವಮಾನಗೊಳಿಸುವುದು ಮುಂದುವರಿಯುತ್ತಲೇ ಇದೆ. ನೀವು ಕ್ರಮ ಕೈಗೊಳ್ಳುವ ಬಗ್ಗೆ ಪೊಳ್ಳು ಭರವಸೆ ನೀಡುವುದು ಬೇಡ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಈ ಬಗ್ಗೆ ಕ್ಷಮೆ ಯಾಚಿಸಬೇಕು~ ಎಂದು ಒತ್ತಾಯಿಸಿದರು.

`ಮುಂದಿನ ಸಭೆಗೆ ಅಕಾಡೆಮಿ ಅಧ್ಯಕ್ಷರನ್ನೂ ಕರೆಸುತ್ತವೆ. ಸಭೆಯಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ~ ಎಂದು ಪೊಲೀಸ್ ಆಯುಕ್ತ ಮನೀಶ್ ಖರ್ಬಿಕರ್ ತಿಳಿಸಿದರು.

`ದಲಿತ ದೌರ್ಜನ್ಯವನ್ನು ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪಣಂಬೂರು ಉಪವಿಭಾಗ ವ್ಯಾಪ್ತಿಯಲ್ಲಿ ದಾಖಲಾದ ಬಹುತೇಕ ದೌರ್ಜನ್ಯ ಪ್ರಕರಣಗಳಲ್ಲಿ ಬಿ-ವರದಿ ಸಲ್ಲಿಸಲಾಗಿದೆ~ ಎಂದು ಆನಂದ್ ಆರೋಪಿಸಿದರು.
`ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ಎಎಸ್‌ಪಿ ದರ್ಜೆಯ ಅಧಿಕಾರಿಯೇ ನಡೆಸುತ್ತರೆ.

ಬಿ-ವರದಿ ಸಲ್ಲಿಸುವ ಮುನ್ನ ಡಿಸಿಪಿ ದರ್ಜೆಯ ಅಧಿಕಾರಿಗಳೂ ಪರಿಶೀಲಿಸುತ್ತಾರೆ. ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಡಿಸಿಪಿ ಮುತ್ತೂರಾಯ ಹೇಳಿದರು.

`ಪಣಂಬೂರು ಉಪವಿಭಾಗದಲ್ಲಿ ಮೂರು ವರ್ಷಗಳಲ್ಲಿ ದಾಖಲಾದ ದೌರ್ಜನ್ಯ ಪ್ರಕರಣಗಳ ವರದಿ ತರಿಸಿ, ಬಿ ವರದಿ ಸಲ್ಲಿಕೆಯಾದ ಪ್ರಕರಣಗಳನ್ನು ಪರಿಶೀಲಿಸುತ್ತೇನೆ~ ಎಂದು ಆಯುಕ್ತರು ಭರವಸೆ ನೀಡಿದರು.
`ಪಾಲಿಕೆಯ ಶೇ 22.75 ನಿಧಿಯ ಕಾಮಗಾರಿಗಳು ಪರಿಶಿಷ್ಟರ ಬದಲು ಅನ್ಯರ ಉಪಯೋಗಕ್ಕಾಗಿ ಬಳಕೆ ಆಗುತ್ತಿದೆ. ಇದನ್ನು ತಡೆಯಲು ನಾಗರಿಕ ಹಕ್ಕು ನಿರ್ದೇಶನಾಲಯದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು~ ಎಂದು ಪಾಲಿಕೆ ಸದಸ್ಯೆ ಅಪ್ಪಿ ಆಗ್ರಹಿಸಿದರು. ಗೋದಾಮಿನಿಂದ ಪದೇ ಪದೇ ಸಿಲಿಂಡರ್ ಕಳವಾದ ಬಗ್ಗೆ ದೂರು ನೀಡಿದರು, ಕಳ್ಳರ ಬಗ್ಗೆ ಸುಳಿವು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸುಕುಮಾರ್ ಪಿ. ದೂರಿದರು.

ಮಾತಿನ ಚಕಮಕಿ: `ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ದಲಿತರೊಬ್ಬರ ಅಕ್ರಮ ಮನೆ ತೆರವುಗೊಳಿಸಿದ ಬಗ್ಗೆ ಪುರಸಭಾ ಸದಸ್ಯ ಕೊರಗಪ್ಪ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
 ಈ ಪ್ರಕರಣ ಪೊಲೀಸ್ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ~ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ವಾಗ್ವಾದದ ನಡುವೆ ಗುರುಪುರ ದಸಂಸ ಸಂಚಾಲಕ ಚಂದಪ್ಪ, ಪೊಲೀಸ್ ಅಧಿಕಾರಿಯೊಬ್ಬರನ್ನು `ರೌಡಿ ಇನ್‌ಸ್ಪೆಕ್ಟರ್~ ಎಂದು ಹಿಯಾಳಿಸಿದರು. ಇದರಿಂದ ಸಿಟ್ಟಿಗೆದ್ದ ಡಿಸಿಪಿ ಮುತ್ತೂರಾಯ ಈ ರೀತಿ ಪದ ಬಳಸುವ ಮುನ್ನ ಎಚ್ಚರ ವಹಿಸುವಂತೆ ಸೂಚಿಸಿದರು. 

ನಿಗೂಢ ಸಾವು: ಚುರುಕಿನ ತನಿಖೆಗೆ ಆಗ್ರಹ
ದಲಿತರು ನಿಗೂಢ ರೀತಿಯಲ್ಲಿ ಸಾವಿಗೀಡಾದ ಪ್ರಕರಣಗಳ ತನಿಖೆ ವಿಳಂಬವಾಗುತ್ತಿರುವ ಬಗ್ಗೆ ಸಿಪಿಐಎಂ ದಲಿತ ಹಕ್ಕುಗಳ ಸಮಿತಿ ಕಾರ್ಯದರ್ಶಿ ಲಿಂಗಪ್ಪ ನಂತೂರು ಗಮನ ಸೆಳೆದರು.

`ಎನ್.ಆರ್.ಪುರದ ಭೂಮಾಲೀಕ ಲೈನಲ್ ಮಸ್ಕರೇನ್ಹಸ್ ಅವರ ಮಂಗಳೂರಿನ ಬಂಗಲೆಯಲ್ಲಿ ಕೆಲಸಕ್ಕಿದ್ದ ಬೆಳ್ತಂಗಡಿ ಶಿರ್ಲಾಲು ಗ್ರಾಮದ ಶೋಭಾ (23) ಮಾರ್ಚ್ 7ರಂದು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಮಸ್ಕರೇನ್ಹಸ್ ಕುಟುಂಬ ಆಕೆಯ ಮನೆಯವರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಆಕೆಯನ್ನು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾಗಿ ತಿಳಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಆ ಬಗ್ಗೆ ದಾಖಲೆಯೇ ಇಲ್ಲ. ಕದ್ರಿ ಠಾಣೆಯಲ್ಲಿ ಈ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಯುವತಿಯ ಮನೆಯವರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ಮಸ್ಕರೇನ್ಹಸ್ ಈಗ ನಿರಾಕರಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಬಾರದ ಕಾರಣ ನ್ಯಾಯಾಲಯದಲ್ಲಿ ಹೋರಾಟವೂ ಸಾಧ್ಯವಾಗುತ್ತಿಲ್ಲ.~ ಎಂದು ಅವರು ದೂರಿದರು.

`ನಗರದ ಐಡಿಯಲ್ ಚಿಕನ್ ಸೆಂಟರ್‌ನಲ್ಲಿ ಕೆಲಸಕ್ಕಿದ್ದ ಸಕಲೇಶಪುರದ ಸಂಕೇತ್ (16) ಕೂಡಾ ನಿಗೂಢವಾಗಿ ಮೃತಪಟ್ಟಿದ್ದಾನೆ. ಈ ಬಗ್ಗೆಯೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿಲ್ಲ~ ಎಂದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT