ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಪೂರ್ಣ ವ್ಯಕ್ತಿತ್ವಕ್ಕೆ ಹೊರಗಡೆಯೂ ದುಡಿಯಬೇಕು...

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಇಂದಿನ ಆಧುನಿಕ, ಬದಲಾದ ಯುಗದಲ್ಲಿ ಮಹಿಳೆಯರದು ದ್ವಿಮುಖ ಪಾತ್ರ, ಸಾಧಿಸಬೇಕು ಎಂಬ ಉತ್ಸಾಹ ಇದ್ದಾಗ ಆಕೆಗೆ ಸಹಜವಾಗಿಯೇ  ಬಂದಿರುವ `ಮಲ್ಟಿ ಟಾಸ್ಕಿಂಗ್~ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗುವಂತೆ ಬೆಳೆಸಿಕೊಳ್ಳಬೇಕು. ಇಂಥ ಗುಣ ಎಲ್ಲರಲ್ಲಿಯೂ ಇರುತ್ತದೆ. ಇದರಿಂದಲೇ, ಸಣ್ಣ ವ್ಯಾಪಾರದಲ್ಲಿ ತೊಡಗಿರುವ ಮಹಿಳೆ ಮಗುವಿಗೆ ಹಾಲು ಕುಡಿಸುವ ಜೊತೆಗೆ, ವ್ಯಾಪಾರ ಮಾಡುತ್ತಲೇ, ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುವುದು ಸಾಧ್ಯವಾಗಲಿದೆ. ಉದ್ಯಮ, ಉದ್ಯೋಗ ಯಾವುದೇ ಇರಲಿ. ಉಭಯ ಹೊಣೆಗಾರಿಕೆ ನಿಭಾಯಿಸುವಾಗ ಸಮತೋಲನವನ್ನು ಅವಳೇ ಮಾಡಬೇಕು. ಅಫ್‌ಕೋರ್ಸ್, ಇದಕ್ಕಾಗಿ ಆಕೆಯ ಪತಿ, ಮಕ್ಕಳು, ಕುಟುಂಬದ ಹಿರಿಯರ ಸಹಕಾರವೂ ಅಗತ್ಯವಾಗಿ ಬೇಕಾಗುತ್ತದೆ.

ಸಮಯ ಹೊಂದಿಸಿಕೊಳ್ಳುವ ಕ್ರಮ ಉದ್ಯೋಗದಲ್ಲಿ ಇರುವ ಮಹಿಳೆಗಿಂತಲೂ ಉದ್ಯಮದಲ್ಲಿ ಇರುವ ಮಹಿಳೆಗೆ ಸುಲಭ ಎಂಬುದು ನನ್ನ ಅನಿಸಿಕೆ. ಉದ್ಯೋಗದಲ್ಲಿ ಆಕೆ ಇನ್ನೊಬ್ಬರಿಗೆ ಉತ್ತರಿಸಬೇಕಾಗುತ್ತದೆ. ಉದ್ಯಮದಲ್ಲಿ ಕೆಲಸದ ಪ್ರಾಮುಖ್ಯತೆಯನ್ನು ಆಧರಿಸಿ ಆಕೆಯೇ ಸಮಯ ಹೊಂದಾಣಿಕೆ ಮಾಡಿಕೊಳ್ಳಬಹುದು. ನನ್ನ ವಿಷಯದಲ್ಲಿ ಕುಟುಂಬದ ಕೆಲಸ ಮುಖ್ಯವಾಗಿದ್ದರೆ, ಅದನ್ನು ಮುಗಿಸಿ ರಾತ್ರಿ ತುಸು ಸಮಯವಾದರೂ ಕಚೇರಿ ಕೆಲಸವನ್ನು ಮನೆಯಲ್ಲಿಯೇ ಮಾಡಿಕೊಳ್ಳಲು ಆದ್ಯತೆ ನೀಡುತ್ತೇನೆ. ಈ ವಿಷಯದಲ್ಲಿ ಮುಖ್ಯವಾಗಿ ಗಂಡ, ಮಕ್ಕಳು, ಕುಟುಂಬದಲ್ಲಿ ಇರುವ ಹಿರಿಯ ಸಹಕಾರ ಅವಶ್ಯ. ಇಲ್ಲದಿದ್ದಲ್ಲಿ ಯಾವುದೇ ಮಹಿಳೆಗೆ ದ್ವಿಮುಖ ಪಾತ್ರ ಕಷ್ಟವಾಗಲಿದೆ. ಮಹಿಳೆ ಹೊರಗಡೆ ಕೆಲಸ ಮಾಡುವಾಗ ಕುಟುಂಬವಾಗಿ ಅವಳಿಂದ ಏನು ನಿರೀಕ್ಷೆ ಮಾಡಬೇಕು. ಅವಳಿಂದ ಏನು ಡಿಮ್ಯಾಂಡ್ ಮಾಡಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಗಷ್ಟೇ ಮಹಿಳೆ ಉದ್ಯಮಿ ಅಥವಾ ಉದ್ಯೋಗಿಯಾಗಿ ಸಾಧಿಸುವುದು ಸಾಧ್ಯ?

ಬೋಧನಾ ವೃತ್ತಿ ಬಿಟ್ಟಾಗ....

ಚಿಕ್ಕಂದಿನಿಂದ ಅಪ್ಪ ಕಲಿಸಿದ ಸಮಯ ಹೊಂದಾಣಿಕೆ ನನಗೆ ನೆರವಾಗಿದೆ. ಕ್ರೀಡಾಪಟುವೂ ಆಗಿದ್ದ ಅಪ್ಪ ಓದು, ವ್ಯಾಯಾಮ, ಆಟ ಎಲ್ಲದಕ್ಕೂ ವೇಳಾಪಟ್ಟಿ ಹಾಕಿ ಅದನ್ನೇ ಪಾಲಿಸುವಂತೆ ಅಪ್ಪ ಹೇಳಿಕೊಡುತ್ತಿದ್ದರು. ಅದೂ ನನಗೆ ತುಂಬ ನೆರವಾಗಿದೆ. ಮಕ್ಕಳು ಬೆಳೆದಂತೆ ಸಹಜವಾಗಿ ನಮ್ಮ ಅಗತ್ಯ ಅವರಿಗೆ ಹೆಚ್ಚು ಇರುವ ಕಾರಣ ಷೆಡ್ಯೂಲ್ ಕೂಡಾ ಬದಲಾಗಲಿದೆ. ಈ ಸಮಯವನ್ನು ಉದ್ಯೋಗ,ಉದ್ಯಮಕ್ಕೆ ಪೂರಕವಾಗಿ ಹೊಂದಿಸಿಕೊಳ್ಳಬೇಕು. ನನ್ನ ವೇಳಾಪಟ್ಟಿಯಲ್ಲಿ ಕೆಲವೊಮ್ಮೆ ಮಕ್ಕಳಿಗೆ ಬೇಸರವಾದರೂ, ಅವರಿಗೆ ಪರಿಸ್ಥಿತಿ ವಿವರಿಸಿ ಸಮಾಧಾನ ಮಾಡುತ್ತೇನೆ. ನಮ್ಮ ಕೆಲಸ ಒತ್ತಡ, ಜೀವನ ಕ್ರಮ ನೋಡಿ ಮಕ್ಕಳ ಮನೋಭಾವವೂ ಪೂರಕವಾಗಿದೆ ಎಂದೇ ನನ್ನ ಅನಿಸಿಕೆ. ಆದರೆ, ಹಿಂದೆ ಲಾ ಕಾಲೇಜಿನಲ್ಲಿ ಬೋಧನಾ ವೃತ್ತಿಯಲ್ಲಿದ್ದಾಗ ಇದು ಕಷ್ಟವಾಗಿತ್ತು. ಕಾಲೇಜಿಗೆ ಹೋಗುವಾಗ ಸಮಯಹೊಂದಾಣಿಕೆ ಮಾಡಿಕೊಳ್ಳುವಲ್ಲಿ  ಕಷ್ಟವಾಗುತ್ತಿದ್ದು ವಿಳಂಬವಾಗುತ್ತಿತ್ತು. ಇದಕ್ಕಾಗಿ ಕೆಲವೊಮ್ಮೆ ಪತಿಯಿಂದಲೂ ಬೈಸಿಕೊಂಡಿದ್ದೇನೆ. ಬಹುಶಃ ಬೋಧನಾ ವೃತ್ತಿ ಬಿಟ್ಟಾಗ ಅತ್ತಿದ್ದರೂ, ಮಕ್ಕಳ ಜೊತೆಗೆ ಕಳೆಯಬಹುದು ಎಂದು ಸಮಾಧಾನ ಮಾಡಿಕೊಂಡಿದ್ದೆ.

ವಾರಾಂತ್ಯ ರಜೆ ಎನ್ನುವುದಿಲ್ಲ...

ವೀಕೆಂಡ್ (ವಾರಾಂತ್ಯ) ಎನ್ನುವ ಪರಿಕಲ್ಪನೆ ನಮ್ಮ ಬದುಕಲ್ಲಿಲ್ಲ.  ಕೆಲಸ ಮಾಡುವುದರಲ್ಲಿಯೇ ಖುಷಿ. ವೀಕೆಂಡ್ ಹೆಸರಲ್ಲಿ ಎಲ್ಲೋ ಕಾಲ ಕಳೆಯುವ ಬದಲು, ಅದೇ ಸಮಯವನ್ನು ಸಂಸ್ಥೆಗಾಗಿ, ಕುಟುಂಬಕ್ಕಾಗಿ ವ್ಯಯಿಸುತ್ತೇವೆ. ನನ್ನ ಪ್ರಕಾರ, ಒಬ್ಬ ಮಹಿಳೆ  ಉದ್ಯಮ ಅಥವಾ ಕುಟುಂಬವನ್ನು ಬೇರೆ ಬೇರೆಯಾಗಿ ನೋಡುವುದಿಲ್ಲ. ಎರಡೂ ಒಂದೇ ಆಗಿರುತ್ತದೆ. ಉದ್ಯಮ, ಅಥವಾ ಉದ್ಯೋಗ ಮಹಿಳೆಯ ಪಾಲಿಗೆ ಜೀವನದ ಒಂದು ಭಾಗವೇ ಆಗಿರುತ್ತದೆ.

ಮದುವೆ ಮತ್ತಿತರ ಕೌಟುಂಬಿಕ ಕಾರ್ಯಕ್ರಮಗಳಿಗೆ ಹೋಗದೇ ಇರಲು ಆಗುವುದಿಲ್ಲ. ಅಂಥ ಸಂದರ್ಭದಲ್ಲಿ ಹೆಚ್ಚು ಹೊತ್ತುಇರುವುದಿಲ್ಲ. ಕೆಲಸದ ಮೇಲಿನ ಪ್ರೀತಿ ಇದಕ್ಕೆ ಕಾರಣ. ಕುಟುಂಬ, ಸಂಬಂಧಿಕರಿಗೂ ನಮ್ಮ ಕೆಲಸದ ಒತ್ತಡದ ಅರಿವು ಇರುವುದರಿಂದ ಅವರು ಅರ್ಥ ಮಾಡಿಕೊಂಡಿದ್ದಾರೆ.

ಚಿಕ್ಕಂದಿನಿಂದ ವ್ಯಾಯಾಮ, ಯೋಗ ಮಾಡುತ್ತಿದ್ದೆ.  ಈಗ ಸ್ವಲ್ಪ ಮಟ್ಟಿಗೆ ಅಧ್ಯಾತ್ಮದತ್ತ ಒಲವಿದೆ. ಮಹಿಳೆಗೆ ಕೆಲಸದ ಒತ್ತಡ ತಡೆದುಕೊಳ್ಳಲು ಆಧ್ಮಾತ್ಮಿಕ ಬಲವು ನೆರವಾಗಲಿದೆ. ಉದ್ಯಮಿ, ಉದ್ಯೋಗಿಯಾಗಿ ಮಹಿಳೆ ಯಶಸ್ವಿಯಾಗಲು ತಾಳ್ಮೆ, ಸಹನೆಯನ್ನು ಅವಳೇ ಬೆಳೆಸಿಕೊಳ್ಳಬೇಕು. `ಇಗೋ~ (ಅಹಂ) ಕಡಿಮೆ ಮಾಡಿಕೊಳ್ಳಬೇಕು. ನೈಸರ್ಗಿಕದತ್ತವಾಗಿ ಇದು ಮಹಿಳೆಗೆ ಬಂದಿರುವ ವರದಾನವು ಹೌದು. ಆಗಷ್ಟೇ ಹೊರಗಡೆಯ ಒತ್ತಡದ ಜೊತೆಗೆ ಸಂಸಾರವನ್ನು ಸರಿಯಾಗಿ ತೂಗಿಸಬಹುದು.

ಮಕ್ಕಳು ಒಳ್ಳೆಯವರಾಗಬೇಕಾದರೆ, ಪೋಷಕರು ಒಳ್ಳೆಯವರಾಗಿ ಇರಬೇಕಂತೆ. ಕೌಟುಂಬಿಕವಾಗಿ ಪರಸ್ಪರ ಅರ್ಥಮಾಡಿಕೊಳ್ಳಲು, ವಿಶ್ವಾಸ ಗಟ್ಟಿಯಾಗಲು ಇದು ಕಾರಣ. ಓದುವುದು, ಕುಟುಂಬ ಸದಸ್ಯರೊಂದಿಗೆ ಒಟ್ಟಿಗೆ ವಿಷಯಗಳನ್ನು ಚರ್ಚಿಸುವುದು ನನ್ನ ಅಭ್ಯಾಸ. ಬೇರೆಯವರು ಸಾಧನೆ ಮಾಡಿದಾಗ ಗುರುತಿಸಿ, ಚರ್ಚಿಸುವುದು, ಉತ್ಸಾಹ ತುಂಬುವುದು ನನ್ನ ಗುಣ. ಇದು, ಮಾನಸಿಕ ತೃಪ್ತಿಯನ್ನು ನೀಡಲಿದೆ.

ನಮ್ಮ ಸಂಸ್ಥೆ ಮಂಡ್ಯಜಿಲ್ಲೆಗೆ ಮೊದಲಿಗೆ ಕಂಪ್ಯೂಟರ್ ಪರಿಚಯಿಸಿತು. ಅದೇ ರೀತಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸುವ ದೂರದೃಷ್ಟಿಯೊಂದಿಗೆ ನಗರದಲ್ಲಿ ಪಾಲಿಟೆಕ್ನಿಕ್ ಆರಂಭಿಸಬೇಕು ಎಂಬ ಚಿಂತನೆ ಇತ್ತು. ಅದು 80-90ರ ದಶಕ ಇರಬಹುದು. ಆದರೆ, ಆಗ ಕೈಗೂಡಲಿಲ್ಲ. ಅದು ಸ್ವಲ್ಪಮಟ್ಟಿಗೆ ಬೇಸರವಿದೆ.

ಯಶಸ್ವಿ ಮಹಿಳೆಗೆ ಇರಬೇಕಾದ ಸಾಧನೆಯ ಮಂತ್ರ ಎಂದರೆ ನನ್ನ ಅನುಭವದಲ್ಲಿ ಸ್ವತಂತ್ರ ಮನೋಭಾವ, ವೈಚಾರಿಕ ಜಾಗೃತಿ ಜೊತೆಗೆ ಆಧ್ಮಾತ್ಮಿಕ ಬಲ. ಇದು, ಮಹಿಳೆ ತನ್ನ ವ್ಯಕ್ತಿತ್ವದ ಜೊತೆಗೆ ಉದ್ಯಮಿ ಅಥವಾ ಉದ್ಯೋಗಿಯಾಗಿ ಯಶಸ್ವಿಯಾಗಲು ಸಹಕಾರಿ ಆಗುತ್ತದೆ. ಮಹಿಳೆ ಪರಿಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳಲು ಆಕೆ ಹೊರಗಡೆಯೂ ದುಡಿಯಬೇಕು. ಕುಟುಂಬದ ಹೊರಗೆ ದುಡಿಯುವುದರಲ್ಲಿಯೇ ಆಕೆಯ ಪ್ರಗತಿಯೂ ಆಗಿದೆ. ಇದಕ್ಕಾಗಿ ಕುಟುಂಬದ ಸಹಕಾರ ಅಗತ್ಯ. ಕುಟುಂಬದ ಸದಸ್ಯರ ಮನೊಭಾವವೂ ಇದಕ್ಕೆ ಪೂರಕವಾಗಿ ಬದಲಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT