ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿ, ಪಂಗಡ ಅನುದಾನ ಬಳಕೆಗೆ ಕರೆ

Last Updated 20 ಮಾರ್ಚ್ 2011, 7:30 IST
ಅಕ್ಷರ ಗಾತ್ರ

ಚಳ್ಳಕೆರೆ: ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಸರ್ಕಾರ ನಿಗದಿ ಮಾಡಿರುವ ಶೇ. 22.75ರ ಅನುದಾನದ ಅಡಿಯಲ್ಲಿ ವೃತ್ತಿನಿರತರಿಗೆ ನೀಡುವ ಸಾಧನ ಸಲಕರಣೆಗಳನ್ನು ಪಡೆದ ಅರ್ಹ ಫಲಾನುಭವಿಗಳು ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪಿ. ರಾಮಪ್ಪ ಹೇಳಿದರು.ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಧನ ಸಲಕರಣೆ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ 1ನೇ ತರಗತಿಯಿಂದ 10ನೇ ತರಗತಿ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಿದರು.ಇದಕ್ಕೂ ಮುಂಚೆ ಪುರಸಭೆ ಸದಸ್ಯ ಎಂ. ಶಿವಮೂರ್ತಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಬರುವ ಅನುದಾನ ಸಮರ್ಪಕ ರೀತಿಯಲ್ಲಿ ಫಲಾನುಭವಿಗಳಿಗೆ ವಿತರಣೆ ಆಗುತ್ತಿಲ್ಲ ಎಂದು ಆರೋಪಿಸಿದರು.

2007-08ರಲ್ಲಿ ಶೇ 22.75ರ ಅನುದಾನದ ಅಡಿಯಲ್ಲಿ ಪೌರ ಕಾರ್ಮಿಕರಿಗೆ ವಿತರಿಸಲಾಗುವ ಸೊಳ್ಳೆ ಪರದೆ ಹಾಗೂ ಬಟ್ಟೆಗಳು ಇಂದಿಗೂ ವಿತರಣೆ ಆಗಿಲ್ಲ.  ವಿದ್ಯಾರ್ಥಿಗಳಿಗೆ ನೀಡುವ ನೋಟ್‌ಬುಕ್‌ಗಳನ್ನು ಶಾಲಾ ಅವಧಿ ಮುಗಿಯುವ ಹಂತದಲ್ಲಿ ವಿತರಣೆ ಮಾಡಿದರೆ ಪ್ರಯೋಜನ ಇಲ್ಲ. ಬದಲಾಗಿ, ಜೂನ್-ಜುಲೈ ತಿಂಗಳಲ್ಲಿ ವಿತರಿಸಬೇಕು.  ಪರಿಶಿಷ್ಟ ಜಾತಿ ಹಾಗೂ ಪಂಗಡದ ಅನುದಾನವನ್ನು ಇಲ್ಲಿನ ಅಧಿಕಾರಿಗಳು ಸಮರ್ಪಕವಾಗಿ ವಿತರಣೆ ಮಾಡಲು ಮುಂದೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಮಧ್ಯೆ ಪ್ರವೇಶಿಸಿ, ಇಷ್ಟು ದಿನ ಅಧಿಕಾರದಲ್ಲಿದ್ದ ಕಾಂಗ್ರೆಸ್‌ನವರು ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಇದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಾ ಸಮಾರಂಭದಲ್ಲಿ ಕೆಲಕಾಲ ಗೊಂದಲದ ವಾತಾವರಣಕ್ಕೆ ಕಾರಣರಾದರು.ಇದರಿಂದ ಬೇಸತ್ತ ಸದಸ್ಯ ಶಿವಮೂರ್ತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳನ್ನು ಮಾಹಿತಿ ಕೇಳಲೂ ಬಿಜೆಪಿ ಸದಸ್ಯರು ಬಿಡುತ್ತಿಲ್ಲ ಎಂದು ಸಮಾರಂಭದಿಂದ ಹೊರನಡೆದರು.
ಇವರ ಜತೆಗೆ ಶಿವಮ್ಮ, ಗಾಡಿ ತಿಪ್ಪೇಸ್ವಾಮಿ, ಮುಜೀಬುಲ್ಲಾ ಸಹ ಹೊರನಡೆದರು.

ಪರಿಶಿಷ್ಟ ಜಾತಿ ಹಾಗೂ ಪಂಗಡದ ಅರ್ಹ ಫಲಾನುಭವಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಸಮಾರಂಭದಲ್ಲಿ ಈ ರೀತಿ ಸದಸ್ಯರ ವರ್ತನೆಯನ್ನು ನೋಡಿ ಬೇಸರಿಸಿದರು. ನಂತರ, ಫಲಾನುಭವಿಗಳಿಗೆ ಮುಖ್ಯಾಧಿಕಾರಿ ರಾಮಪ್ಪ ಸಾಧನ ಸಲಕರಣೆ ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿದರು. ಕಾರ್ಯಕ್ರಮದಲ್ಲಿ ಬಿಇಒ ಪಿ. ರಾಮಯ್ಯ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಅಧ್ಯಕ್ಷೆ ಪಿ. ಶಂಷಾದ್, ವ್ಯವಸ್ಥಾಪಕ ಜಯಣ್ಣ ಇತರರು ಹಾಜರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT