ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷೆ ಹೆಂಗಿತ್ತೇ ಕರಿಸಿದ್ದಿ ?

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಶರದೃತುವಿನ ಸೊಬಗನ್ನು ಇಮ್ಮಡಿಗೊಳಿಸಲೇನೋ ಎಂಬಂತೆ ಪ್ರತಿವರ್ಷ ಮೇಳೈಸುವ ಬೆಂಗಳೂರಿನ ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ಬಸವನಗುಡಿ ಮತ್ತೆ ಮೈ ಹರವಿಕೊಂಡಿದೆ. ಕಾರ್ತಿಕ ಮಾಸದ ಕೊನೆಯಲ್ಲಿ ಜರುಗುವ ಈ ಪರಿಷೆಯಲ್ಲಿ ಬಗೆಬಗೆಯ ಕಡಲೆಕಾಯಿ ಖರೀದಿಸಿ ಮೆಲ್ಲುವುದೇ ಒಂದು ಹಿಗ್ಗು. ವಾಸ್ತವದಲ್ಲಿ ಈ ಕಡಲೆಕಾಯಿ ಪರಿಷೆ ಎಂದರೆ ಇಲ್ಲಿನ ಬಸವಣ್ಣ ದೇವರ ಜಾತ್ರೆ.

ಬಹು ಹಿಂದೆ ಸುಂಕೇನಹಳ್ಳಿ, ಗವಿಪುರ, ಹೊಸಕೆರೆಹಳ್ಳಿ, ನಾಗಸಂದ್ರ ಮತ್ತು ಮಾವಳ್ಳಿ... ಹೀಗೆ ಹಳ್ಳಿಗಳನ್ನೆಲ್ಲಾ ನುಂಗಿ ನೊಣೆದು ಬೃಹನ್‌ ಬೆಂಗಳೂರು ಆಗಿ ಪರಿವರ್ತನೆ ಆಗಿರುವ ಬೆಂಗಳೂರಿನ ಸುತ್ತಮುತ್ತಲ ಹಳ್ಳಿಗಳಲ್ಲಿ ರೈತರು ಶೇಂಗಾ ಮತ್ತು ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಈ ಬೆಳೆಯನ್ನು ಎತ್ತೊಂದು ರಾತ್ರಿ ವೇಳೆ ಹೊಲಕ್ಕೆ ನುಗ್ಗಿ ತಿಂದು ಹಾಕುತ್ತಿತ್ತಂತೆ. ಒಂದು ದಿನ ಇದನ್ನು ಪತ್ತೆ ಹಚ್ಚಿದ ರೈತರು ಇದನ್ನು ಓಡಿಸಿಕೊಂಡು ಬಂದರಂತೆ. ಅದು ಹೆದರಿ ಗುಹೆಯೊಳಗೆ ಸೇರಿಕೊಂಡಿತಂತೆ. ಆಗ ರೈತರು, ‘ಅಪ್ಪಾ ಬಸವಾ ನೀನು ಇಲ್ಲೇ ಕುಳಿತಿರು. ನಾವೇ ನಿನ್ನ ಬಳಿ ಕಡಲೆಕಾಯಿ ತಂದು ಸುರುವುತ್ತೇವೆ. ನಿನಗೆ ಬೇಕಾದಷ್ಟು ತಿನ್ನುವಿಯಂತೆ’ ಎಂದು ಒಡಂಬಡಿಕೆ ಮಾಡಿಕೊಂಡರಂತೆ! ಹೀಗಾಗಿ ಬಸವ ಅಲ್ಲೇ ಐಕ್ಯನಾದ !! ಅಂದಿನಿಂದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಕಡಲೆಕಾಯಿಯನ್ನು ಮೊದಲಿಗೆ ಈ ಬಸವನಿಗೆ ಅರ್ಪಿಸಿ ನಂತರ ತಮ್ಮ ಮಾರಾಟ ಆರಂಭ ಮಾಡುವ ಪದ್ಧತಿ ಬೆಳೆಸಿಕೊಂಡರಂತೆ...!!! ಹೀಗೆ ಸಣ್ಣದೊಂದು ಆಸಕ್ತಿದಾಯಕವಾದ ಕತೆಯನ್ನು ಒಡಲಲ್ಲಿ ಇಟ್ಟುಕೊಂಡಿರುವ ಈ ಪರಿಷೆ ಕಾರ್ತಿಕ ಮಾಸದ ಕೊನೆಯ ದಿನಗಳ ಸಂಭ್ರಮಕ್ಕೆ ಸಲಸಲವೂ ಸಜ್ಜಾಗುತ್ತದೆ. ಏನಿಲ್ಲವೆಂದರೂ ಈ ಪರಿಷೆಗೆ 600 ವರ್ಷಗಳ ಇತಿಹಾಸವಿದೆ ಎನ್ನಲಾಗುತ್ತದೆ.

ಮಾರುಕಟ್ಟೆ ಮೇಲೆ ಪ್ರಭಾವ ಬೀರಲು ಇಂದು ಆಹಾರ ಮೇಳ ಮತ್ತು ಕೈಗಾರಿಕಾ ಮೇಳಗಳು ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿರುವ ದಿನಗಳಲ್ಲಿ ದೇಸೀಯ ಮತ್ತು ಶ್ರದ್ಧೆಯ ಭಾವನೆಗಳಲ್ಲಿ ಜಾತ್ರೆಯ ಕಂಪನ್ನು ತುಂಬಿಕೊಂಡ ಈ ಕಡಲೆಕಾಯಿ ಪರಿಷೆ ಜನರಿಗೆ ಒಂಥರಾ ಮಜಾ ಕೊಡುತ್ತದೆ.

ರಾಮಕೃಷ್ಣಾಶ್ರಮದ ರಾಮಕೃಷ್ಣ ಚೌಕದ ಹೆಬ್ಬಾಗಿಲಿನಿಂದ ರಸ್ತೆಯ ಇಕ್ಕೆಲಗಳಲ್ಲೂ ಸುಮಾರು ಒಂದು ಕಿ.ಮೀ.ಗೂ ಹೆಚ್ಚು ಉದ್ದ ಪರಿಷೆಯ ಸಿಂಗಾರ ತೊನೆದಾಡುತ್ತದೆ. ನಾನಾ ನಮೂನಿಯ ಶೇಂಗಾಕಾಯಿ ಹರವಿಕೊಂಡ ಮಾರಾಟಗಾರರಿಗೆ ಮೂರ್ನಾಲ್ಕು ದಿನಗಳ ಕಾಲ ಪುರುಸೊತ್ತು ಎಂಬುದೇ ಕಡಿಮೆ. ಹೇಳಿಕೇಳಿ ಇದು ಪರಿಷೆ ಅಲ್ಲವೇ ? ಹಾಗಾಗಿ ಇಲ್ಲಿ ಕಡಲೆಕಾಯಿ ವ್ಯಾಪಾರಿಗಳಿಗಿಂತಲೂ ಜಾತ್ರೆಯ ವೈಭವವನ್ನು ಹೆಚ್ಚಿಸುವ ಅಂದಗಾರರೇ ಜಾಸ್ತಿ.

ನಾಲ್ಕಡಿ ಅಗಲದ ಫುಟ್‌ಪಾತ್‌ ಮೇಲೆ ಗೋಣಿತಟ್ಟು ಅಥವಾ ಪ್ಲಾಸ್ಟಿಕ್‌ ಚೀಲಗಳನ್ನು ಹರವಿ ಅದಕ್ಕೊಂದು ದಿವಿನಾದ ದಿಂಡುಕಟ್ಟಿ, ಮುಂದುಗಡೆ ಒಂಚೂರು ಎತ್ತರವಾಗುವಂತೆ ಚೀಲದ ಕೆಳಗೆ ಸಣ್ಣಸಣ್ಣ ಕಲ್ಲುಗಳನ್ನು ಪೇರಿಸಿ ಅದರ ಮೇಲೆ ಶೇಂಗಾಕಾಯಿ ರಾಶಿ ಸುರುವಿದರೆ ಆ ಅಂದವೇ ಬೇರೆ. ಭಿನ್ನ ಭಿನ್ನ ಜಾತಿಯ ಹಸಿ ಮತ್ತು ಹುರಿದ ಶೇಂಗಾಕಾಯಿ ಲೀಟರ್‌ ಒಂದಕ್ಕೆ ರೂ 20 ರಿಂದ 35ರವರೆಗೂ ಮಾರಾಟವಾಗುತ್ತವೆ. ಕೆ.ಜಿ. ಲೆಕ್ಕದಲ್ಲಿ ಆದರೆ ರೂ50ರಿಂದ 55ರವರೆಗೆ ದೊರೆಯುತ್ತವೆ. ರಸ್ತೆಯ ಇಕ್ಕೆಲದ ಮರದ ಬುಡಗಳಲ್ಲಿ ಸಾಲುಗಟ್ಟಿ ಕುಳಿತ ಶೇಂಗಾ ಮಾರುವವರಿಗೆ ಎರಡು ಮೂರು ದಿನ ಇಲ್ಲೇ ಊಟ, ನಿದ್ದೆ. ‘ರಾತ್ರಿ ಎರಡು ಗಂಟೆಗೆ ಕೃಷ್ಣಗಿರಿಯ ಆದಪ್ಪಾಡಿಯಿಂದ ಇಲ್ಲಿಗೆ ಬಂದಿದ್ದೇನೆ. ಇನ್ನೂ ಮೂರು ದಿನ ಇಲ್ಲೇ ವ್ಯಾಪಾರ’ ಎನ್ನುವ ತಮಿಳಿಗ ಕೃಷ್ಣ ‘ಹೇಳಿಕೊಳ್ಳುವ ಉಳಿತಾಯ ಆಗದಿದ್ದರೂ ಸರಿ. ಪರಿಷೆಯ ಮಜಾ ಚೆನ್ನಾಗಿರುತ್ತದೆ’ ಎಂದು ನಗು ಸೂಸುತ್ತಾರೆ.

ಕೆಲ ವರ್ಷಗಳಿಂದೀಚೆಗೆ ಈ ಪರಿಷೆ ಮಿನಿ ಇಂಡಿಯಾದ ಪರಿಚಯವನ್ನೂ ಮಾಡಿಕೊಡುತ್ತಿದೆ. ಕೊಲ್ಕಾತ್ತಾದ ನ್ಯೂ ಕಾಟನ್‌ ಮಾರ್ಕೆಟ್‌ನ ಮಹಿಳೆ ಆಫ್ರಿ ಕೂಡಾ ಸೆಣಬಿನ ಕಸೂತಿಯ ಬ್ಯಾಗುಗಳನ್ನು ಮಾರುವುದು, ರಾಜಸ್ತಾನದ ಜಾಲೋರ್‌ ಜಿಲ್ಲೆಯ ಮಹಿಂದರ್‌ ಜೆಲ್ಲಿ ಬೌಲ್‌ಗಳನ್ನು ಇಟ್ಟುಕೊಳ್ಳುವುದು, ಆಲ್ವಾರ್‌ ಜಿಲ್ಲೆಯ ರಾಮುನಂಥವರು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಲ್ಲಿ ಫೆಂಗಶೂಯಿ, ಸರಸ್ವತಿ, ಗಣಪನ ಮೂರ್ತಿ ಹಾಗೂ ಟೆರ್ರಾಕೋಟಾಗಳ ಆಕೃತಿಗಳನ್ನು ಬಿಕರಿ ಮಾಡುವಷ್ಟರ ಮಟ್ಟಿಗೆ ಇದು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ. ಗೊಂಬೆ, ಬಳೆಗಾರರು, ಮುಖವಾಡ, ರಬ್ಬರ್‌ ದಾರ ಕಟ್ಟಿದ ಚೆಂಡು, ಕೊಳಲು, ಬಲೂನು, ಚೋಟಾ ಭೀಮ್‌ನ ಪೋಸ್ಟರ್‌ ಮಾರುವ ಹುಡುಗರೂ... ಹೀಗೆ ಹತ್ತಾರು ಬಗೆಯ ಮಕ್ಕಳ ಆಟಿಕೆಗಳನ್ನು ಮಾರುವವರೂ ಸೇರಿದಂತೆ ದೊಡ್ಡಬಳ್ಳಾಪುರದಿಂದ ಬಂದ ರಾಜಣ್ಣನಂತಹ ಮುದ್ದೆಕೋಲು, ಕವೆಕೋಲು ಮಾರುವಂತಹ ತರೇವಾರಿ ಆಕರ್ಷಣೆಗಳಿಗೂ ನೀವು ಇಲ್ಲಿ ಸಾಕ್ಷಿಯಾಗುತ್ತೀರಿ.

ಮೂರ್ನಾಲ್ಕು ತಾಸು ಬಿಡುವು ಮಾಡಿಕೊಂಡು ಪರಿಷೆಗೊಂಚೂರು ಮೈ ಸೋಕಿಸಿದರೆ ಮೆಟ್ರೊಪಾಲಿಟನ್‌ ಸಿಟಿಯ ಮಜಾಕ್ಕೆ ಖಂಡಿತಾ ಕೊರತೆಯಿಲ್ಲ. ನಿಧಾನವಾಗಿ ಹೆಜ್ಜೆ ಹಾಕುತ್ತಾ ಆಚೀಚೆ ಕಣ್ಣು ಹಾಯಿಸುತ್ತಾ ಹೋದರೆ ಕಡಲೆಕಾಯಿ ರಾಶಿಗಳ ಜೊತೆ ಜೊತೆಗೇ ಬಾಯಿ ಚಪ್ಪರಿಸುವ ಐಟಮ್‌ಗಳೂ ನಿಮ್ಮನ್ನು ಕಿಚಾಯಿಸದೆ ಬಿಡುವುದಿಲ್ಲ.

ಬೆಣ್ಣೆ ಗುಲ್ಕನ್‌, ಬೇಯಿಸಿದ ಕಡಲೆ, ಅಮೆರಿಕನ್‌ ಸ್ವೀಟ್‌ ಕಾರ್ನ್‌ನಿಂದ ಹಿಡಿದು, ಆಗತಾನೆ ಕಿತ್ತುತಂದ ದೋರುಗಾಯಿ ಹುಣಸೆ, ನುಣುಪಾದ ಬೆಟ್ಟದ ನೆಲ್ಲಿಕಾಯಿಗಳು ನಿಮ್ಮ ಬಾಯಲ್ಲಿ ನೀರೂರಿಸುತ್ತವೆ. ಪುರಂದರ ದಾಸರ ಪುಸ್ತಕಗಳಿಂದ ಹಿಡಿದು ‘ಇಳಿ ವಯಸ್ಸಿನಲ್ಲಿ ನವ ಚೈತನ್ಯ ಪಡೆಯುವುದೇ? ಹೇಗೆ ಎಂಬ ಹೆಸರಿನ ಪುಸ್ತಕಗಳೂ ನಿಮ್ಮ ಕಣ್ಸೆಳೆಯುತ್ತವೆ. ಸುತ್ತಾಡಿ ಬೇಜಾರಾದರೆ ಕುಳಿತು ಉಣ್ಣಲು ಕಾಮತ್ ಹೋಟೆಲ್‌, ನಿಂತು ಉಣ್ಣವುದಾದರೆ ಮಲ್ನಾಡ್‌ ಸ್ಪೆಷಲ್‌ನಂತಹ ಟೆಂಟ್‌ ಹೋಟೆಲ್‌ಗಳು, ಬೆಂಡು ಬತ್ತಾಸು, ಕಾರ, ಕಳ್ಳೆಪುರಿಗಳೂ ಉಂಟು. ನಿಸರ್ಗದ ಬಾಧೆ ಹೆಚ್ಚಿದರೆ ಪಕ್ಕದಲ್ಲೇ ಸುಲಭ ಶೌಚಾಲಯವೂ...
ವಾಹ್‌ ಏನುಂಟು ಏನಿಲ್ಲ ? ಬಿಡುವು ಮಾಡಿಕೊಂಡು ನೀವು ಹತ್ತು ಹೆಜ್ಜೆಯನ್ನೂ ಹೀಗೆ ಬಸವನಗುಡಿಯತ್ತ ಬೆಳೆಸಿ...


ವಾಹನ ಸಂಚಾರ ನಿಷೇಧಿಸಬೇಕು
‘ನಾವೆಲ್ಲಾ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. ಆದರೆ ಈಗ ನಾಲ್ಕೈದು ವರ್ಷದಿಂದ ಈ ಪರಿಷೆಗೆ ಬರುವುದನ್ನು ರೂಢಿ ಮಾಡಿಕೊಂಡಿದ್ದೇವೆ. ಏನೋ ಒಂಥರಾ ಮಜಾ ಇರುತ್ತೆ. ಆದರೆ ಈ ಟ್ರಾಫಿಕ್‌ ಕಾಟ ಮಾತ್ರ ಬೇಜಾರು ತರಿಸುತ್ತೆ. ಎರಡು ದಿನಗಳ ಕಾಲ ಈ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿ ಕೇವಲ ಪಾದಚಾರಿಗಳಿಗೇ ಅವಕಾಶ ಮಾಡಿಕೊಟ್ಟರೆ ಪರಿಷೆಯ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ’.

–ಸ್ಮಿತಾ, ರೇಡಿಯೋ ಜಾಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT