ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಪಡೆದವರಲ್ಲಿ ಪಶ್ಚಾತ್ತಾಪ

Last Updated 7 ಜನವರಿ 2012, 4:30 IST
ಅಕ್ಷರ ಗಾತ್ರ

ವಿಶೇಷ ವರದಿ
ಬಳ್ಳಾರಿ:
ನಿಯೋಜಿತ `ಬಳ್ಳಾರಿ ವಿಮಾನ ನಿಲ್ದಾಣ~ ಸ್ಥಾಪನೆಗಾಗಿ ತಾಲ್ಲೂಕಿನ ಸಿರಿವಾರ ಮತ್ತು ಚಾಗನೂರು ಗ್ರಾಮಗಳ 78 ರೈತರ 250 ಎಕರೆ ಜಮೀನು ಸ್ವಾಧೀನಕ್ಕೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದು ಮಾಡಿ ಬುಧವಾರ ಹೈಕೋರ್ಟ್ ನೀಡಿರುವ ತೀರ್ಪು ಕೃಷಿ ಭೂಮಿ ಉಳಿಸಿಕೊಳ್ಳಬೇಕೆಂಬ ಕೆಲವು ರೈತರ ಹೋರಾಟಕ್ಕೆ ಆನೆ ಬಲ ನೀಡಿದೆ. ಆದರೆ ಪರಿಹಾರ ಪಡೆದು ಜಮೀನು ಕಳೆದುಕೊಂಡ ರೈತರು ಪಶ್ಚಾತ್ತಾಪ ಪಡುವಂತಾಗಿದೆ.

ಫಲವತ್ತಾದ ನೀರಾವರಿ ಜಮೀನಿನಲ್ಲಿ ವಾರ್ಷಿಕ ಎರಡು ಬೆಳೆ ಬೆಳೆಯಲು ಅವಕಾಶವಿದ್ದು, ಕೃಷಿಗೆ ಮೀಸಲಿರುವ ಜಮೀನಿನಲ್ಲಿ ಅನ್ಯ ಯೋಜನೆ ಆರಂಭಿಸುವುದು ಬೇಡ ಎಂದು ತಿಳಿಸಿ, ಆಕ್ಷೇಪಣೆ ಸಲ್ಲಿಸಿದ್ದ ಈ ರೈತರ ಜಮೀನು ತೀರ್ಪು ಹೊರಬಿದ್ದ ಕ್ಷಣದಿಂದ ಅವರ ವಶಕ್ಕೇ ಬಂದಿದ್ದು, ಒಟ್ಟು 950 ಎಕರೆ ಪೈಕಿ 250 ಎಕರೆ ಜಮೀನು ನಿಯೋಜಿತ ವಿಮಾನ ನಿಲ್ದಾಣ ಸ್ಥಾಪನೆಯ ಜಾಗದ ವಿವಿಧೆಡೆ ಇರುವುದರಿಂದ ವಿಮಾನನಿಲ್ದಾಣ ಸ್ಥಾಪನೆ ಯಕ್ಷಪ್ರಶ್ನೆಯಾಗಿದೆ.

ರಾಜ್ಯದ ಇತಿಹಾಸದಲ್ಲೇ (ಬೆಂಗಳೂರು ಸುತ್ತಮುತ್ತ ಹೊರತುಪಡಿಸಿ) ಭೂಸ್ವಾಧೀನಕ್ಕಾಗಿ ರೈತರಿಗೆ ಅತಿ ಹೆಚ್ಚು ಪರಿಹಾರ (ಪ್ರತಿ ಎಕರೆಗೆ ರೂ 12ರಿಂದ 16 ಲಕ್ಷ) ನೀಡಿ ವಿಮಾನ ನಿಲ್ದಾಣ ಸ್ಥಾಪನೆಗೆ ಸರ್ಕಾರ ಮುಂದಾಗಿತ್ತು.

`ಅಧಿಸೂಚನೆಯನ್ನು ರದ್ದುಪಡಿಸಿ, ಹೊಸದಾಗಿ ಮತ್ತೊಮ್ಮೆ ಆಕ್ಷೇಪಣೆಗೆ ಅವಕಾಶ ನೀಡಿ ವಿಚಾರಣೆ ನಡೆಸಿ~ ಎಂದು  ವಿಶೇಷ ಭೂಸ್ವಾಧೀನ ಅಧಿಕಾರಿಯವರಿಗೆ ಹೈಕೋರ್ಟ್ ಸೂಚಿಸಿದ್ದು, ಒಂದೊಮ್ಮೆ ಸರ್ಕಾರ ಇನ್ನಷ್ಟು ಹೆಚ್ಚು ಪರಿಹಾರ ನೀಡುವ ಆಮಿಷ ಒಡ್ಡಿದರೂ ಅದಕ್ಕೆ ಜಗ್ಗದೆ, ಕೃಷಿ ಜಮೀನನ್ನು  ಉಳಿಸಿಕೊಳ್ಳುವ ತಮ್ಮ ಹೋರಾಟ ಮುಂದುವರಿಸುವುದಾಗಿ ವಕೀಲ ಹಾಗೂ ಚಾಗನೂರಿನ ರೈತ ಮಲ್ಲಿಕಾರ್ಜುನ ರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.

ಚಾಗನೂರು ಮತ್ತು ಸಿರಿವಾರ ಗ್ರಾಮಗಳ 100ಕ್ಕೂ ಅಧಿಕ ರೈತರ 700 ಎಕರೆ ಜಮೀನು ಸರ್ಕಾರದ ವಶದಲ್ಲಿದ್ದು, ಇದಕ್ಕೆ ಬದಲಾಗಿ ರೂ 16 ಲಕ್ಷದವರೆಗೆ ಪರಿಹಾರ ಪಡೆದಿರುವ ಕೆಲವು ರೈತರು ಹಣವನ್ನು ಮನಬಂದಂತೆ ಬಳಸಿ ಪಶ್ಚಾತ್ತಾಪ ಪಡುತ್ತಿದ್ದಾರೆ. ರೈತರ ಹೋರಾಟಕ್ಕೆ ಮಣಿಯದೆ ಅಧಿಕ ಪರಿಹಾರ ನೀಡಿರುವ ಸರ್ಕಾರ ಕೃಷಿಯನ್ನೇ ಮರೆತು ಏಕಪಕ್ಷೀಯ ನಿರ್ಧಾರ ಕೈಗೊಂಡಿತ್ತು ಎಂದೂ ಅವರು ಟೀಕಿಸಿದರು.

ಸ್ವಾಧೀನ ಪಡಿಸಿಕೊಂಡಿರುವ ಜಮೀನನ್ನು ಸರ್ಕಾರ ಇನ್ನಷ್ಟೇ ತನ್ನ ವಶಕ್ಕೆ ತೆಗೆದುಕೊಳ್ಳ ಬೇಕಿದೆ. ಸದ್ಯ ಆಯಾ ಮೂಲ ರೈತರೇ ಸಾಗುವಳಿ ಮಾಡುತ್ತಿದ್ದಾರೆ. ಫಲವತ್ತಾದ ನೀರಾವರಿ ಜಮೀನು ತಲೆತಲಾಂತರದಿಂದ ಅನೇಕ ಕುಟುಂಬ ಗಳಿಗೆ ಆಸರೆಯಾಗಿತ್ತು. ಆದರೆ, `ಇಲ್ಲಿ ನೀರಾವರಿಯೇ ಇಲ್ಲ~ ಎಂದು ತಿಳಿಸುವ ಮೂಲಕ ಸರ್ಕಾರ ಭೂಮಿಯನ್ನು ವಶಪಡಿಸಿಕೊಂಡು ಬಲವಂತದ ಭೂಸ್ವಾಧೀನಕ್ಕೆ ಮುಂದಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಕೃಷಿ ಭೂಮಿಯಲ್ಲಿ ಕೃಷಿಯೇ ನಡೆಯಬೇಕು. ರೈತರಿಂದ ವಶಪಡಿಸಿಕೊಂಡಿರುವ ಜಮೀನನ್ನು ಬಡಜನತೆಗೆ ಸಾಗುವಳಿಗೆ ನೀಡಬೇಕು ಎಂಬ ಬೇಡಿಕೆಯೊಂದಿಗೆ ಹೋರಾಟ ಮುಂದುವರಿಸುವ ಚಿಂತನೆ ನಡೆದಿದೆ ಎಂದು ರೈತರ ಪರ ಹೈಕೋರ್ಟ್‌ನಲ್ಲಿ ಸ್ವತಃ ವಾದ ಮಂಡಿಸಿದ್ದ ರೆಡ್ಡಿ ಹೇಳಿದ್ದಾರೆ.

ತಡೆಯಾಜ್ಞೆ ಇದ್ದುದರಿಂದ ಈ ಭೂಮಿಯಲ್ಲಿ ಕಾಮಗಾರಿ ಆರಂಭವಾಗಿಲ್ಲ. ಕಾಮಗಾರಿ ಆರಂಭಿ ಸುವಂತೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಬಡಜನತೆಗೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT