ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಯಲ್ಲಿ ಹೆಚ್ಚು, ಸಂದರ್ಶನದಲ್ಲಿ ಕಡಿಮೆ ಅಂಕ!

Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೂ ಸಂದರ್ಶನದಲ್ಲಿ ಅತ್ಯಂತ ಕಡಿಮೆ ಅಂಕ ಬರುತ್ತದೆ. ಲಿಖಿತ ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಅಂಕ ಪಡೆದರೂ ಸಂದರ್ಶನದಲ್ಲಿ ಅತಿ ಹೆಚ್ಚು ಅಂಕ ಬರುತ್ತದೆ. ಇದು ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ನಡೆಯುವ ಜಾದು.

ಕೆಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ಸಾವಿರಕ್ಕಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಕೇವಲ 50 ಅಂಕ ನೀಡಲಾಗಿದೆ. ಸಾವಿರಕ್ಕಿಂತ ಕಡಿಮೆ ಅಂಕ ಪಡೆದ ಅಭ್ಯರ್ಥಿಗಳಿಗೆ ಬರೋಬ್ಬರಿ 150 ಅಂಕ ನೀಡಲಾಗಿದೆ. ಸಾವಿರಕ್ಕಿಂತ ಕಡಿಮೆ ಅಂಕ ಪಡೆದು, ಸಂದರ್ಶನದಲ್ಲಿ 150 ಅಂಕ ಪಡೆದವರು ಸುಮಾರು 168 ಮಂದಿ ಇದ್ದಾರೆ.

ಕೆಪಿಎಸ್‌ಸಿಯಲ್ಲಿ ಪೂರ್ವಭಾವಿ ಪರೀಕ್ಷೆಯಿಂದಲೇ ಎಲ್ಲ `ಪ್ಯಾಕೇಜ್' ಇರುತ್ತದೆ. ತಮಗೆ ಬೇಕಾದವರಿಗೆ ಹೆಚ್ಚಿನ ಅಂಕ ಕೊಡಿಸಲು ಕಸರತ್ತು ನಡೆದಿರುತ್ತದೆ ಎಂದ ಮೇಲೆ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬರುವುದು ಹೇಗೆ? ಅವರಿಗೆ ಸಂದರ್ಶನದಲ್ಲಿ ಕಡಿಮೆ ಅಂಕ ನೀಡುವ ಕಷ್ಟ ಯಾಕೆ? ಎಂದು ಪ್ರಶ್ನೆ ಮಾಡಿದರೆ ಕೆಪಿಎಸ್‌ಸಿ ಮೂಲಗಳು ಅಚ್ಚರಿಯ ಉತ್ತರವನ್ನೇ ನೀಡುತ್ತವೆ.

ಕೆಪಿಎಸ್‌ಸಿಯಲ್ಲಿ ಪ್ಯಾಕೇಜ್ ಇರುವುದು ನಿಜ. ಆದರೆ, ಮುಖ್ಯ ಪರೀಕ್ಷೆಯ ಎಲ್ಲ ಮೌಲ್ಯಮಾಪಕರೊಂದಿಗೆ ವ್ಯವಹಾರ ನಡೆಸುವುದು ಕಷ್ಟ. ಅದಕ್ಕೆ ಪ್ರಾಮಾಣಿಕವಾಗಿ ಓದಿ ಕಷ್ಟಪಟ್ಟು ಬರೆದವರು ಹೆಚ್ಚಿನ ಅಂಕ ಗಳಿಸುವ ಅವಕಾಶ ಇರುತ್ತದೆ.

ಕೆಪಿಎಸ್‌ಸಿ ಮುಖ್ಯ ಪರೀಕ್ಷೆಗೆ 30 ಐಚ್ಛಿಕ ವಿಷಯಗಳಿವೆ. ಅದರಲ್ಲಿ ಒಂದೋ ಎರಡೊ ವಿಷಯ ತಜ್ಞರು ಮಾತ್ರ ಆಯೋಗದಲ್ಲಿರುವವರ ಹತೋಟಿಯಲ್ಲಿರುತ್ತಾರೆ. ಅವರು ಹೇಳಿದಂತೆ ಅಂಕಗಳನ್ನು ನೀಡುತ್ತಾರೆ. ಇನ್ನು ಕೆಲವರು ಉತ್ತರ ಪತ್ರಿಕೆಯನ್ನು ನೋಡಿ ಸರಿಯಾಗಿಯೇ ಮೌಲ್ಯಮಾಪನ ಮಾಡುತ್ತಾರೆ.

ಆಗ ತಮ್ಮ ಜೊತೆ `ವ್ಯವಹಾರ' ಕುದುರಿಸಿಕೊಂಡ ಅಭ್ಯರ್ಥಿಗಳಿಗೆ ಕಡಿಮೆ ಅಂಕ ಬರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಂದರ್ಶನದಲ್ಲಿ ಹೆಚ್ಚಿನ ಅಂಕ ನೀಡಲಾಗುತ್ತದೆ ಎಂಬ ಉತ್ತರವನ್ನು ಕೆಪಿಎಸ್‌ಸಿ ಮೂಲಗಳು ಹೇಳುತ್ತವೆ.

ಲಿಖಿತ ಪರೀಕ್ಷೆಯಲ್ಲಿ ಅಂಕಗಳ ವ್ಯತ್ಯಾಸ ಮಾಡಿದರೆ ಕೆಲವೊಮ್ಮೆ ಗೊತ್ತಾಗುತ್ತದೆ. ಆದರೆ ಸಂದರ್ಶನದಲ್ಲಿ ಅಂಕ ನೀಡುವುದು ಕೆಪಿಎಸ್‌ಸಿ ಸದಸ್ಯರ ಹಕ್ಕು. ಅವರು ಎಷ್ಟು ಅಂಕ ನೀಡಿದರೂ ಅದನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಲಿಖಿತ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದವರು ಸಂದರ್ಶನದಲ್ಲಿ ಉತ್ತಮವಾಗಿ ಉತ್ತರ ಹೇಳಬೇಕು ಎಂದೇನೂ ಇಲ್ಲವಲ್ಲ.

ಹಾಗಾಗಿ ಸಂದರ್ಶನದಲ್ಲಿ ಹೆಚ್ಚಿನ ಅಂಕ ನೀಡಿ ತಮಗೆ ಬೇಕಾದವರ ಒಟ್ಟು ಅಂಕ ಹೆಚ್ಚಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಈ ಮೂಲಗಳು ತಿಳಿಸುತ್ತವೆ. ಹೈಕೋರ್ಟ್ ಆದೇಶದ ಪ್ರಕಾರ ಸಂದರ್ಶನಕ್ಕೆ ಹಾಜರಾದ ಯಾವುದೇ ಅಭ್ಯರ್ಥಿಗೆ 200ಕ್ಕೆ 50ಕ್ಕಿಂತ ಕಡಿಮೆ ಅಂಕ ನೀಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಬಹಳಷ್ಟು ಅಭ್ಯರ್ಥಿಗಳಿಗೆ 50 ಅಂಕ ಮಾತ್ರ ನೀಡಲಾಗಿದೆ. ಗರಿಷ್ಠ 150 ನೀಡಲಾಗಿದೆ.

ಆಯೋಗವು ಪರೀಕ್ಷೆ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಸದಸ್ಯರನ್ನು ಅಭ್ಯರ್ಥಿಗಳು ಭೇಟಿ ಮಾಡುವುದು ಕಡಿಮೆ. ಮುಖ್ಯ ಪರೀಕ್ಷೆ ನಡೆದು ಫಲಿತಾಂಶ ಬಂದ ನಂತರ ಸಂದರ್ಶನದ ತಯಾರಿ ನಡೆಯುತ್ತಿರುವಾಗಲೇ ಹೆಚ್ಚು ಮಂದಿ ಸದಸ್ಯರನ್ನು ಭೇಟಿ ಮಾಡುತ್ತಾರೆ. ಇದರಿಂದಾಗಿ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿ ಎಷ್ಟೇ ಅಂಕ ಪಡೆದಿದ್ದರೂ ಸಂದರ್ಶನದಲ್ಲಿಯೇ ಹೆಚ್ಚು ಅಂಕಗಳನ್ನು ನೀಡಿ ಅವರನ್ನು ಮೇಲೆತ್ತಬೇಕಾಗುತ್ತದೆ.

ಲಿಖಿತ ಪರೀಕ್ಷೆಯ ಫಲಿತಾಂಶ ಬಂದ ತಕ್ಷಣವೇ ತಮಗೆ ಬೇಕಾದ ಅಭ್ಯರ್ಥಿಗಳು ಎಷ್ಟು ಅಂಕ ಪಡೆದಿದ್ದಾರೆ ಹಾಗೂ ಸಂದರ್ಶನದಲ್ಲಿ ಅವರಿಗೆ ಎಷ್ಟು ಅಂಕ ನೀಡಿದರೆ ಅವರಿಗೆ ಯಾವ ಉದ್ಯೋಗ ಸಿಗುತ್ತದೆ ಎಂಬ ಲೆಕ್ಕಾಚಾರ `ಕೆಪಿಎಸ್‌ಸಿ'ಯಲ್ಲಿಯೇ ನಡೆಯುತ್ತದೆ.

ಹೀಗೆ ಲೆಕ್ಕಾಚಾರ ಪಕ್ಕಾ ಆದಮೇಲೆ ಸಂದರ್ಶನ ನಡೆಯುತ್ತದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಅದಕ್ಕಾಗಿಯೇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ ಅಭ್ಯರ್ಥಿಗಳು ಕೆಪಿಎಸ್‌ಸಿ ಸದಸ್ಯರನ್ನು ಹುಡುಕಿಕೊಂಡು ಹೋಗುವುದು ಹಾಗೂ ಕೆಲವು ಏಜೆಂಟರು ಕೆಲಸ ಕೊಡಿಸುವುದಾಗಿ ಅಭ್ಯರ್ಥಿಗಳನ್ನು ನಂಬಿಸುವುದು ಈಗ ಸಂಪ್ರದಾಯವೇ ಆಗಿದೆ ಎಂದು ಕೆಪಿಎಸ್‌ಸಿ ಸಿಬ್ಬಂದಿಯೇ ತಿಳಿಸುತ್ತಾರೆ.

ಈ ಬಾರಿ ಸಂದರ್ಶನಕ್ಕೆ ಆಯ್ಕೆಯಾದ ಶೇ 75ರಷ್ಟು ಅಭ್ಯರ್ಥಿಗಳು ಭೂಗೋಳ ಮತ್ತು ಮಾನವಶಾಸ್ತ್ರ ವಿಷಯಗಳನ್ನು ಐಚ್ಛಿಕವಾಗಿ ಪಡೆದವರೇ ಆಗಿದ್ದಾರೆ ಎಂಬುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT