ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲ್ಟಿ ಹೊಡೆಯದ ನೈಂಟಿ

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಾತುಮಾತಿಗೂ ಕಾಮಿಡಿ ಕಿಲಾಡಿಯ ರೀತಿಯ ಅದೇ ನಗು. ಮಾತಿನ ತುಂಬೆಲ್ಲಾ ಉಲ್ಲಾಸ. ಕಣ್ಣಲ್ಲಿ ಯಶಸ್ಸಿನ ಹೊಳಪು- `ನೈಂಟಿ~ ಚಿತ್ರದ ಸಂತೋಷ ಕೂಟದಲ್ಲಿ ನಟ ಸಾಧುಕೋಕಿಲ ಗೆದ್ದ ಹುಮ್ಮಸ್ಸಿನಲ್ಲಿ ತೇಲುತ್ತ್ದ್ದಿದಾಗ ಕಂಡದ್ದು ಹೀಗೆ.  ತಾವು ಹೇಳಿದ್ದನ್ನೇ ತೆರೆಮೇಲೆ ಮೂಡಿಸಿರುವುದಾಗಿ ಹೇಳುತ್ತಾ ಅವರು ಬೀಗಿದರು.

`ಬಿಡುಗಡೆಯಾದ ದಿನದಿಂದ ಆಗಿರುವ ಕಲೆಕ್ಷನ್ ಸಮಾಧಾನ ತಂದಿದೆ. ಬೆಂಗಳೂರಿನ ಸಂತೋಷ್ ಥಿಯೇಟರ್‌ನಲ್ಲಿ ಹೌಸ್‌ಫುಲ್ ಬೋರ್ಡ್ ಹಾಕಲಾಗಿದೆ. ಕುಡಿತ ವಿರೋಧಿಸಿ ದೊಡ್ಡದಾಗಿ ಪ್ರತಿಭಟನೆ ಮಾಡುವುದಕ್ಕಿಂತ ಸಣ್ಣ ಕಾಳಜಿ ಹುಟ್ಟಿಸುವಾಸೆಯಿಂದ ಮಾಡಿದ ಸಿನಿಮಾ ಇದು. ಚಿತ್ರದ ಅಂತ್ಯ ವಾಸ್ತವಕ್ಕೆ ಹತ್ತಿರವಾಗಿದೆ. ದೊಡ್ಡ ಸ್ಟಾರ್‌ಗಳನ್ನು ಇಟ್ಟುಕೊಂಡು ನೀವು ಮಾಡಿದ್ದ ಚಿತ್ರ ಟುಸ್ ಆಗಿತ್ತು. ಇದರಿಂದಲೇ ತಿಳಿಯುತ್ತದೆ; ಒಳ್ಳೆ ಕತೆ ಇದ್ರೆ ಜನ ನೋಡೇ ನೋಡ್ತಾರೆ ಎಂದು ನನ್ನ ಪತ್ನಿ ಹೇಳಿದಳು. ಅದು ನಿಜವಾಗಿದೆ.

ಪ್ರಶಂಸೆಗಳ ಮಹಾಪೂರವೇ ಬರುತ್ತಿದೆ. ಮೊದಲ ದಿನದ ಶೋಗೆ  ತುಂಬಾ ಜನ ಕುಡಿದುಕೊಂಡು ಬಂದಿದ್ದರು. ಆದರೆ ಸಿನಿಮಾ ಮುಗಿದು ಹೊರಗೆ ಬರುವಾಗ ಕುಡಿತ ಬಿಡುವುದಾಗಿ ಹೇಳಿ ಹೋದರು. ಕೆಲವರು ಅಳುತ್ತಾ ಹೋದರು. ಅಷ್ಟು ಸಾಕು, ನನ್ನ ಸಿನಿಮಾ ಸಾರ್ಥಕವಾಯಿತು. ಸಿನಿಮಾಗೆ ಒಟ್ಟು 1.20 ಕೋಟಿ ಬಜೆಟ್ ಆಗಿತ್ತು. ಸದ್ಯ ಸಿನಿಮಾ ಚೆನ್ನಾಗಿ ಓಡುತ್ತಿದೆ. ಲಾಭವನ್ನು ಇನ್ನು ಲೆಕ್ಕ ಹಾಕಿಲ್ಲ. ಸಮಾಜಕ್ಕೆ ಒಳಿತಾಗುವ ವಿಚಾರಗಳನ್ನು ಇಟ್ಟುಕೊಂಡು ಮತ್ತಷ್ಟು ಸಿನಿಮಾ ಮಾಡಬೇಕು ಎನಿಸಿದೆ~ ಎನ್ನುತ್ತಾ ಮಾತು ಮುಗಿಸಿದರು.

ಚಿತ್ರಕ್ಕೆ ಸಂಭಾಷಣೆ ಬರೆದಿರುವ ತಬಲಾ ನಾಣಿ ಗಾದೆ ಮತ್ತು ಸುತ್ತಮುತ್ತ ಇರುವ ಕುಡುಕ ಜನರ ನಡವಳಿಕೆಗಳಿಂದ ಸ್ಫೂರ್ತಿ ಪಡೆದು ಮಾತುಗಳನ್ನು ಹೊಸೆದಿದ್ದಾಗಿ ಹೇಳಿದರು.

`ನಿರ್ದೇಶಕರು ಮತ್ತು ನಾನು ಹಗಲು ರಾತ್ರಿ ಕೆಲಸ ಮಾಡಿದ್ದೇವೆ. ನನ್ನ ಅಪ್ಪ ತುಂಬಾ ಕುಡಿಯುತ್ತಿದ್ದರು. ಸಂಭಾಷಣೆ ಬರೆಯುವಾಗ ಅವರೂ ಕೂಡ ಕೆಲವೊಮ್ಮೆ ನನ್ನ ಸ್ಮೃತಿಪಟಲದಲ್ಲಿ ಹಾದುಹೋದರು. ನಾನು ನಾಲ್ಕು ಸಾಲು ಬರೆದಿದ್ದರೆ ಅದಕ್ಕೆ ನಾಲ್ಕು ಸಾಲು ಸೇರಿಸಿಕೊಂಡು ಕಲಾವಿದರು ಹೇಳುತ್ತಿದ್ದರು. ಅದರಿಂದ ಯಶಸ್ಸಿನಲ್ಲಿ ಎಲ್ಲರ ಪಾಲಿದೆ~ ಎಂದು ಹೇಳಿ ಕೈಮುಗಿದರು ನಾಣಿ.

ತಮಗಾಗಿ ನಿರ್ದೇಶಕರು ಸೃಷ್ಟಿಸಿದ ಪಾತ್ರವನ್ನು ಪ್ರೀತಿಯಿಂದ ನಿರ್ವಹಿಸಿರುವುದಾಗಿ ಚುಟುಕಾಗಿ ಹೇಳಿದರು ನಟ ನಾಗರಾಜ ಕೋಟೆ.

ನಟ ಮಿತ್ರ, ಕುಡಿದು ಸಂದೇಶ ಸಾರುವ ತಮ್ಮ ಪಾತ್ರಕ್ಕೆ ತಮ್ಮ ತಂದೆಯೇ ಸ್ಫೂರ್ತಿ ಎಂದು ನಗೆ ಉಕ್ಕಿಸಿ ಮುದಗೊಂಡರು.

ಕೊನೆಯಲ್ಲಿ ಮಾತನಾಡಲು ನಿಂತ ನಿರ್ದೇಶಕ ಲಕ್ಕಿ ಶಂಕರ್ ಬಗ್ಗೆ ಸಾಧು ಮನದುಂಬಿ ಹೊಗಳಿದರು. ಚಿತ್ರದ ಯಶಸ್ಸಿನ ಶೇ 90ರಷ್ಟು ಪಾಲು ಶಂಕರ್ ಅವರದು ಎಂದರು. 

ಪ್ರಶಂಸೆಯ ಹೊಳೆಯಲ್ಲಿ ತೇಲುತ್ತಿದ್ದ ಶಂಕರ್, ಸಾಧು ಅವರಿಗೆ ವಂದಿಸಿ ಚಿತ್ರದ ಯಶಸ್ಸು ತಮ್ಮ ಮುಂದಿನ ಹೆಜ್ಜೆಗೆ ಉತ್ಸಾಹ ತಂದಿದೆ ಎನ್ನುತ್ತಾ ತಮ್ಮ ಪಾತ್ರಗಳಿಗೆ ಜೀವ ತುಂಬಿದ ಕಲಾವಿದರಿಗೆ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT