ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವರ್ ಪ್ಲೇ ನಿಯಮದ ಶಕ್ತಿ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನಾಲ್ಕು ದಶಕಗಳ ಹಿಂದೆ ನಿಗದಿತ ಓವರುಗಳ ಕ್ರಿಕೆಟ್ ಆರಂಭವಾದಾಗ ಅದರ ಇಂದಿನ ವಿಶ್ವರೂಪವನ್ನು ಯಾರೂ ಊಹಿಸಿರಲಿಕ್ಕಿಲ್ಲ ಅಲ್ಲವೇ?

ಇವತ್ತು ಕ್ರಿಕೆಟ್ ಕೇವಲ ಆಟವಾಗಿ ಉಳಿಯದೇ ವಾಣಿಜ್ಯ ಚಟುವಟಿಕೆಯಾಗಿ ಹಣದ ಹೊಳೆಯನ್ನೇ ಹರಿಸುವ ಮಾಧ್ಯಮವಾಗಲು ಕಾರಣವಾಗಿದ್ದೇ ಈ ಏಕದಿನ ಕ್ರಿಕೆಟ್.

ಇದರಿಂದಾಗಿಯೇ ಸ್ಪರ್ಧೆಯೂ ಬೆಳೆಯತೊಡಗಿತು. ಇದರಿಂದಾಗಿ ಈ ಮಾದರಿಯ ಕ್ರಿಕೆಟ್ ನಿಯಮಗಳಲ್ಲಿ ಹಲವು ಪ್ರಯೋಗಗಳು ನಿರಂತರವಾಗಿ ನಡೆಯುತ್ತಿವೆ. ಈಗ `ಪವರ್ ಪ್ಲೇ~ ನಿಯಮದ ಪ್ರಯೋಗವೂ ನಿರಂತರ ಬದಲಾವಣೆಗಳಿಗೆ ಒಳಗಾಗುತ್ತಿದೆ.

ಏಕದಿನ ಕ್ರಿಕೆಟ್‌ನ ಆರಂಭದಲ್ಲಿ ಮೂವತ್ತು   ಯಾರ್ಡ್ ವೃತ್ತದ ಕಲ್ಪನೆಯೇ ಇರಲಿಲ್ಲ. ಫೀಲ್ಡಿಂಗ್ ನಿಯೋಜನೆಗೂ ನಿಬಂಧನೆಗಳು ಇರಲಿಲ್ಲ. ಫೀಲ್ಡಿಂಗ್ ಮಾಡುವ ತಂಡದ ನಾಯಕನಿಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿತ್ತು.

ಆದರೆ 1996ರಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳು ಜಂಟಿಯಾಗಿ ಆಯೋಜಿಸಿದ್ದ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪ್ರತಿ ಇನಿಂಗ್ಸ್‌ನ ಮೊದಲ 15 ಓವರುಗಳಲ್ಲಿ ಫೀಲ್ಡಿಂಗ್ ನಿಬಂಧನೆಯನ್ನು ಜಾರಿಗೆ ತರಲಾಯಿತು. ಮೂವತ್ತು ಯಾರ್ಡ್ ವೃತ್ತದ ಹೊರಗೆ ಕೇವಲ ಇಬ್ಬರು ಫೀಲ್ಡರ್‌ಗಳು ಮಾತ್ರ ಇರುವುದು ಕಡ್ಡಾಯವಾಯಿತು. ಉಳಿದ ಫೀಲ್ಡರುಗಳು ವೃತ್ತದೊಳಗೆ ಇರಬೇಕಾಗಿತ್ತು.

ಈ ನಿಯಮದ ಸಂಪೂರ್ಣ ಲಾಭ ಪಡೆದ ಶ್ರೀಲಂಕಾದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸನತ್ ಜಯಸೂರ್ಯ ಮತ್ತು ಕಲುವಿತರಣ ಬೌಲರ್‌ಗಳ ನೀರಿಳಿಸಿಬಿಟ್ಟರು. ಉಳಿದ ತಂಡಗಳ ಆರಂಭಿಕ     ಬ್ಯಾಟ್ಸ್‌ಮನ್‌ಗಳು ಅದೇ ಹಾದಿ ಹಿಡಿದರು.

ಮೊದಲ 15 ಓವರುಗಳಲ್ಲಿ 90-100 ರನ್ನುಗಳು ಬರತೊಡಗಿದವು. ಇದರಿಂದ ಮೊದಲು ಬ್ಯಾಟಿಂಗ್ ಮಾಡುವ ತಂಡ ಮೂನ್ನೂರು ರನ್ನುಗಳಿಗಿಂತ ಹೆಚ್ಚಿನ ಸ್ಕೋರು ಗಳಿಸಲು ಸಾಧ್ಯವಾಯಿತು. ರನ್ನುಗಳ ಹೊಳೆ ಹರಿದಷ್ಟೂ ಕ್ರಿಕೆಟ್‌ನ ರೋಚಕತೆ ಹೆಚ್ಚುತ್ತದೆ. ರೋಚಕತೆ ಹೆಚ್ಚಿದಷ್ಟೂ ಪ್ರೇಕ್ಷಕರ ಸಂಖ್ಯೆ ಇಮ್ಮಡಿಸುತ್ತದೆ. ಇದರಿಂದ ಸಂಘಟಕರಿಗೆ ಹಣದ ಹೊಳೆಯೇ ಹರಿದು ಬರುತ್ತದೆ.

ಈ ಹೊಸ ನಿಯಮಕ್ಕೆ ಹೊಂದಿಕೊಳ್ಳಲು ವಿಶ್ವದ ಎಲ್ಲ ಬೌಲರ್‌ಗಳಿಗೂ ಹೆಣಗಾಡಬೇಕಾಯಿತು. 2005ರಲ್ಲಿ ಈ ನಿಯಮಕ್ಕೆ ಮತ್ತೆ ಮಾರ್ಪಾಡು ತರುವ ನಿಟ್ಟಿನಲ್ಲಿ ಪವರ್ ಪ್ಲೇ ನಿಯಮವನ್ನು ಆರಂಭಿಸಲಾಯಿತು.

20 ಓವರುಗಳಲ್ಲಿ ಮೂರು ವಿಭಾಗಗಳಲ್ಲಿ ಪವರ್‌ಪ್ಲೇ ರೂಪಿಸಲಾಯಿತು. ಪ್ರತಿ ಇನಿಂಗ್ಸ್‌ನ ಮೊದಲ ಹತ್ತು ಓವರುಗಳಲ್ಲಿ ಪವರ್‌ಪ್ಲೇ ಕಡ್ಡಾಯ. ಇಬ್ಬರು ಫೀಲ್ಡರ್‌ಗಳು ಮಾತ್ರ 30 ಯಾರ್ಡ್ ವೃತ್ತದ ಹೊರಗೆ ಇರಬೇಕು. ಉಳಿದವರನ್ನು ವೃತ್ತದ ಒಳಗೆ ನಿಯೋಜನೆ ಮಾಡಬೇಕು ಎಂಬ ನಿಯಮ ಜಾರಿಗೆ ಬಂತು.

ಫೀಲ್ಡಿಂಗ್ ಮಾಡುವ ತಂಡಕ್ಕೆ ಐದು ಮತ್ತು ಬ್ಯಾಟಿಂಗ್ ತಂಡಕ್ಕೆ ಐದು ಓವರ್‌ಗಳ ಪವರ್‌ಪ್ಲೇ ಆಯ್ಕೆಯನ್ನು ನೀಡಲಾಯಿತು. ಆದರೆ ಇವುಗಳನ್ನು ಯಾವಾಗ ತೆಗೆದುಕೊಳ್ಳಬೇಕು ಎಂದು ಸೂಚಿಸಲಿಲ್ಲ.

ಆದ್ದರಿಂದ ಬಹುತೇಕ ಫೀಲ್ಡಿಂಗ್ ತಂಡಗಳು ಮೊದಲ ಹತ್ತು ಓವರುಗಳು ಮುಗಿದ ಕೂಡಲೇ ತಮ್ಮ ಪವರ್ ಪ್ಲೇ ತೆಗೆದುಕೊಂಡು ಬಿಡುತ್ತಿದ್ದವು. ಆದರೆ ಬ್ಯಾಟಿಂಗ್ ಮಾಡುವ ಬಹುತೇಕ ತಂಡಗಳು 45ನೇ ಓವರಿನವರೆಗೂ ಪವರ್‌ಪ್ಲೇ ಪ್ರಯೋಗವನ್ನು ಆಯ್ಕೆ ಮಾಡಿಕೊಂಡಿದ್ದು ಕಡಿಮೆ. ಕೊನೆಯ ಓವರುಗಳಲ್ಲಿ ರನ್‌ರೇಟ್ ಹೆಚ್ಚಿಸಿಕೊಳ್ಳಲೆಂದೇ ಬಳಸಿಕೊಂಡಿದ್ದು ಹೆಚ್ಚು.

ಒಂದು ಇನಿಂಗ್ಸ್; ಎರಡು ಚೆಂಡು:
ಆದರೆ ಆರು ವರ್ಷಗಳ ನಂತರ ತಿದ್ದುಪಡಿ ಮಾಡಲಾಗಿರುವ ಪವರ್ ಪ್ಲೇನಲ್ಲಿ ಒಂದಷ್ಟು ಪ್ರಮುಖ ಬದಲಾವಣೆಗಳು ಇವೆ. ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವ ಹೊಸ ನಿಯಮದ ಪ್ರಕಾರ ಪ್ರತಿಯೊಂದು ಇನಿಂಗ್ಸ್‌ನಲ್ಲಿಯೂ ಎರಡು ಹೊಸ ಚೆಂಡುಗಳ ಬಳಕೆ ಕಡ್ಡಾಯ. 25 ಓವರುಗಳು ಮುಗಿದ ಕೂಡಲೇ ಹೊಸ ಚೆಂಡು ತೆಗೆದುಕೊಳ್ಳಲೇಬೇಕು. ಹೊಸ ನಿಯಮದ ಪ್ರಕಾರ 11 ರಿಂದ 15 ಮತ್ತು 40 ರಿಂದ 50 ಓವರ್‌ಗಳ ಅವಧಿಯಲ್ಲಿ ಇನ್ನು ಮುಂದೆ ಪವರ್‌ಪ್ಲೇಗೆ ಅವಕಾಶವೇ ಇಲ್ಲ.

ಇನಿಂಗ್ಸ್‌ನ ಮೊದಲ ಹತ್ತು ಓವರುಗಳಲ್ಲಿ ಪವರ್‌ಪ್ಲೇ ಕಡ್ಡಾಯ. ಈ ಅವಧಿಯಲ್ಲಿ 30 ಯಾರ್ಡ್ ವೃತ್ತದ ಹೊರಗೆ ಇಬ್ಬರು ಫೀಲ್ಡರ್‌ಗಳು ಇರಲು ಮಾತ್ರ ಅವಕಾಶ. ಬ್ಯಾಟಿಂಗ್ ಕ್ರಿಸ್‌ನಿಂದ 15  ಯಾರ್ಡ್‌ನೊಳಗೇ ಕ್ಯಾಚಿಂಗ್ ಪೊಸಿಷನ್‌ನಲ್ಲಿ ಇಬ್ಬರು ಫೀಲ್ಡರ್‌ಗಳು ಇರಲೇಬೇಕು.

ಬ್ಯಾಟಿಂಗ್ ಪವರ್‌ಪ್ಲೇ ಐದು ಓವರುಗಳು ಮತ್ತು ಬೌಲಿಂಗ್ ಪವರಪ್ಲೇಗೆ ಐದು ಓವರುಗಳು ಇರುತ್ತವೆ. ಈ ಸಂದರ್ಭದಲ್ಲಿ ಮೂವರು ಫೀಲ್ಡರುಗಳು 30 ಯಾರ್ಡ್ ವೃತ್ತದ ಹೊರಗೆ ಇರಬೇಕು. ಕ್ಯಾಚಿಂಗ್ ಪೊಸಿಷನ್ ಫೀಲ್ಡರ್ ಕಡ್ಡಾಯವಿಲ್ಲ. ಉಭಯ ತಂಡಗಳೂ 16ರಿಂದ 40 ಓವರ್‌ಗಳ ಒಳಗೆ ತಮ್ಮತಮ್ಮ ಪವರ್‌ಪ್ಲೇ ತೆಗೆದುಕೊಳ್ಳಬೇಕು. ಮೊದಲ ಹತ್ತು ಓವರ್‌ಗಳ ಕಡ್ಡಾಯದ ಪವರ್‌ಪ್ಲೇ ಬೆನ್ನಹಿಂದೆಯೇ ಫೀಲ್ಡಿಂಗ್ ಅಥವಾ ಬ್ಯಾಟಿಂಗ್ ಪವರ್‌ಪ್ಲೇ ತೆಗೆದುಕೊಳ್ಳುವಂತಿಲ್ಲ. 

16ರಿಂದ40 ಓವರ್‌ಗಳ ಒಳಗೆ ತಮ್ಮತಮ್ಮ ಪವರ್‌ಪ್ಲೇ ತೆಗೆದುಕೊಳ್ಳಬೇಕು. ಮೊದಲ ಹತ್ತು ಓವರ್‌ಗಳ ಕಡ್ಡಾಯದ ಪವರ್‌ಪ್ಲೇ ಬೆನ್ನಹಿಂದೆಯೇ ಈ ಅವಕಾಶವನ್ನು ತೆಗೆದುಕೊಳ್ಳುವಂತಿಲ್ಲ. ಬ್ಯಾಟಿಂಗ್ ಮಾಡುವ ತಂಡವು 15ರಿಂದ 36ನೇ ಓವರ್ ಒಳಗೆ ಪವರ್‌ಪ್ಲೇ ತೆಗೆದುಕೊಳ್ಳಬೇಕು.

ಹೊಸ ನಿಯಮದಿಂದ ಆಟದ ಕಾರ್ಯತಂತ್ರಗಳಲ್ಲಿಯೂ ಹಲವು ಬದಲಾವಣೆಗಳು, ಪ್ರಯೋಗಗಳು ಬರುತ್ತವೆ. ಈ ಮೊದಲು ಮೊದಲ 15 ಮತ್ತು ನಲ್ವತ್ತು ಓವರ್‌ಗಳ ನಂತರದ ಓವರುಗಳಲ್ಲಿ ಅಬ್ಬರದ ಬ್ಯಾಟಿಂಗ್ ನೋಡುವ ಅವಕಾಶ ಸಿಗುತ್ತಿತ್ತು. ಇಲ್ಲವೇ ಬೌಲರ್‌ಗಳ ಮೇಲುಗೈನ ರೋಚಕತೆ ಇರುತ್ತಿತ್ತು. ಇದರಿಂದ ಮಧ್ಯದ ಓವರ್‌ಗಳಲ್ಲಿ ರಕ್ಷಣಾತ್ಮಕ ಆಟದಿಂದ ವಿಕೆಟ್ ಉಳಿಸಿಕೊಂಡು ರನ್ ಕಲೆ ಹಾಕುವ ತಂತ್ರ ಅನುಸರಿಸಲಾಗುತ್ತಿತ್ತು.

ಟ್ವೆಂಟಿ-20 ಕ್ರಿಕೆಟ್‌ನ ರೋಚಕತೆಯೊಂದಿಗೆ ಪೈಪೋಟಿ ನಡೆಸಲು, ಏಕದಿನ ಪಂದ್ಯದ ಇನಿಂಗ್ಸ್ ಪೂರ್ತಿ ಬ್ಯಾಟಿಂಗ್‌ನ ಭರಾಟೆ ಇರಲಿ ಎನ್ನುವ ಉದ್ದೇಶ ಈ ನಿಯಮದಲ್ಲಿ ಇರುವುದು ಮೇಲ್ನೊಟಕ್ಕೆ ಕಂಡುಬರುತ್ತದೆ.

25 ಓವರುಗಳ ನಂತರ ಪಿಚ್ ಕೂಡ ಸ್ವಲ್ಪಮಟ್ಟಿಗೆ ತನ್ನ ಸ್ವರೂಪ ಬದಲಿಸಿ ಕೊಳ್ಳುವುದರಿಂದ ಹೊಸ ಚೆಂಡಿನ ಪ್ರಯೋಗದ ಸವಾಲನ್ನು ಎದುರಿಸಲು ತಂಡಗಳ ನಾಯಕರು ಯೋಜನೆ ರೂಪಿಸಬೇಕು. ಇದರಿಂದಾಗಿ ಇನಿಂಗ್ಸ್‌ನ ಆರಂಭದ ಓವರುಗಳಲ್ಲಿಯೇ ಸ್ಪಿನ್ನರ್‌ಗಳ ದಾಳಿ ಶುರುವಾಗಬಹುದು. ಒಟ್ಟಿನಲ್ಲಿ ಹೊಸ ಪವರ್‌ಪ್ಲೇ ನಿಯಮವು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ತನ್ನ `ಶಕ್ತಿ~ ಪ್ರದರ್ಶನ ಮಾಡುತ್ತದೆ  ಎಂದು ಕಾದು ನೋಡಬೇಕು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT