ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಘಟ್ಟಗಳಲ್ಲಿ ವಿದ್ಯುತ್ ಯೋಜನೆ ಇಲ್ಲ

Last Updated 5 ಜನವರಿ 2011, 10:15 IST
ಅಕ್ಷರ ಗಾತ್ರ

ಬೆಂಗಳೂರು:  ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಯಾವುದೇ ರೀತಿಯ ವಿದ್ಯುತ್ ಯೋಜನೆಯನ್ನು ಕೈಗೊಳ್ಳುವುದಿಲ್ಲ ಎಂದು ಮುರ್ಡೇಶ್ವರ ವಿದ್ಯುತ್ ನಿಗಮ ಹೈಕೋರ್ಟ್‌ಗೆ ಸೋಮವಾರ ಪ್ರಮಾಣ ಪತ್ರ ಸಲ್ಲಿಸಿದೆ. ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿನ ವಿವಿಧ ಭಾಗಗಳಲ್ಲಿ 137 ಕಿರು ಜಲ ವಿದ್ಯುತ್ ಯೋಜನೆ ಸ್ಥಾಪಿಸಲು ಉದ್ದೇಶಿಸಿರುವ ಕ್ರಮವನ್ನು ಪ್ರಶ್ನಿಸಿ ‘ಪಶ್ಚಿಮ ಘಟ್ಟಗಳ ಪರಿಸರ ವೇದಿಕೆ’ ಹಾಗೂ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಈ ಪ್ರಮಾಣ ಪತ್ರ ಸಲ್ಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಅರ್ಜಿಯಲ್ಲಿ ಪ್ರತಿವಾದಿಯಾಗಿದ್ದ ನಿಗಮದ ಹೆಸರನ್ನು ಕೈಬಿಡಲು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅನುಮತಿ ನೀಡಿತು. ಅರ್ಜಿಯಲ್ಲಿ ಏನಿದೆ? ಅರಣ್ಯದಿಂದ ಸಂಪದ್ಭರಿತವಾಗಿರುವ ಈ ಭಾಗವು ಈಗಾಗಲೇ ಹಲವು ಬೃಹತ್ ಯೋಜನೆಗಳಿಗೆ ಬಲಿಯಾಗಿದ್ದು, ಇನ್ನು ಮುಂದೆ ಈ ರೀತಿ ಆಗದಂತೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಈ ಯೋಜನೆಗಳನ್ನು ಪ್ರಾರಂಭ ಮಾಡಿದರೆ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಈಗಾಗಲೇ ಕೆಲವು ಮರಗಳು ಧರೆಗೆ ಉರುಳಿವೆ. ಅಷ್ಟೇ ಅಲ್ಲದೇ ಈ ಭಾಗದಲ್ಲಿನ ಅಪರೂಪದ ಪಕ್ಷಿ ಹಾಗೂ ಪ್ರಾಣಿ ಸಂಕುಲ ನಾಶವಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಯೋಜನೆಗಾಗಿ ಅರಣ್ಯ ಪ್ರದೇಶಗಳನ್ನು ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆಗೆ ನೀಡಲಾಗುತ್ತಿದೆ. ಇದರಿಂದ ಔಷಧೀಯ ಸಸ್ಯಗಳಿಗೆ ಹೆಸರಾಗಿರುವ ಈ ಭಾಗದಲ್ಲಿನ ಸಸ್ಯಗಳು ಸಂಪೂರ್ಣ ನಾಶ ಹೊಂದಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ದೂರಿದ್ದಾರೆ. ಯೋಜನೆಯ ಮುಂದಿನ ಪ್ರಕ್ರಿಯೆಗೆ ತಡೆ ನೀಡುವಂತೆ ಹಾಗೂ ಈ ಯೋಜನೆಗಾಗಿ ಸುಮಾರು 10 ಆಣೆಕಟ್ಟು ಕಟ್ಟುವುದಕ್ಕೆ ಅನುಮತಿ ನೀಡದಂತೆಯೂ ಆದೇಶಿಸಲು ಕೋರಲಾಗಿದೆ.

ಇದೇ ಸಂದರ್ಭದಲ್ಲಿ, ಪರಿಸರ ಸ್ನೇಹಿ ಯೋಜನೆ ಯಾವ ರೀತಿ ಮಾಡಬಹುದು,    ವಿದ್ಯುತ್ ಉಳಿತಾಯ   ಹೇಗೆ ಸಾಧ್ಯ ಎಂಬಿತ್ಯಾದಿ ಬಗ್ಗೆ ತಜ್ಞರು ನೀಡಿರುವ ವರದಿಯನ್ನು ಅರ್ಜಿದಾರರ ಪರ ವಕೀಲ ಶಂಕರ ಭಟ್ ಅವರು, ಕೋರ್ಟ್‌ಗೆ ನೀಡಿದರು.  ಈ ಬಗ್ಗೆ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಲಿಲ್ಲ ಎಂದು ಅವರು ತಿಳಿಸಿದರು.ವಿಚಾರಣೆಯನ್ನು ಪೀಠ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT