ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪಾಠ ಕಲಿಯುವ ಅಗತ್ಯವಿಲ್ಲ'

Last Updated 17 ಏಪ್ರಿಲ್ 2013, 8:51 IST
ಅಕ್ಷರ ಗಾತ್ರ

ದೇವದುರ್ಗ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಮತ್ತು ಐದು ವರ್ಷದ ಅಧಿಕಾರದಲ್ಲಿ ಅಭಿವೃದ್ಧಿಗೆ ಬಂದಿದ್ದ ಕೋಟಿಗಟ್ಟಲೆ ಹಣವನ್ನು ಹಾಡುಹಗಲೇ ಲೂಟಿ ಮಾಡಿ ದೇವದುರ್ಗದಲ್ಲಿ ಗೂಂಡಾ ಸಂಸ್ಕ್ಕೃತಿಯನ್ನು ಬಿತ್ತಿದ ಶಿವನಗೌಡ ನಾಯಕ ಅವರಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ, ಧೈರ್ಯ ಇದ್ದರೆ ರಾಯಚೂರಿಗೆ ಬಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸಿ ತೋರಿಸಲಿ ಎಂದು ಮಾಜಿ ಶಾಸಕ ಎ. ಪಾಪಾರೆಡ್ಡಿ ಅವರು ಸವಾಲು ಹಾಕಿದರು.

ಮಂಗಳವಾರ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೋಮವಾರ ನಡೆದ ಬಿಜೆಪಿ ಪಕ್ಷದ ಬಹಿರಂಗ ಚುನಾವಣಾ ಸಭೆಯಲ್ಲಿ ಶಾಸಕ ಕೆ. ಶಿವನಗೌಡ ನಾಯಕ ಅವರು ಪಾಪಾರೆಡ್ಡಿ ಅವರನ್ನು ಗೂಂಡಾ ಎಂದು ಕರೆದಿರುವುದಕ್ಕೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಶಿವನಗೌಡ ನಾಯಕನಿಗೆ ಸೋಲಿನ ಮನವರಿಕೆಯಾಗಿರುವುದರಿಂದ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡು ಮಾತನಾಡುತ್ತಿದ್ದು, ಗೂಂಡಾ ಸಂಸ್ಕೃತಿ ಇರುವವರು ಮಾತ್ರ ಕ್ಷುಲ್ಲಕ ಮಾತನಾಡುತ್ತಾರೆ ಎಂದು ದೂರಿದ ಅವರು, ಶಿವನಗೌಡ ಮಾಡಿದ ಭಾರಿ ಭ್ರಷ್ಟಾಚಾರವೇ ಅತನು ಜೈಲಿಗೆ ಹೋಗಲು ಸಾಕ್ಷಿಯಾಗುತ್ತವೆ ಎಂದು ಆಪಾದಿಸಿದರು.

ಶಿವನಗೌಡನ ಸರ್ವಾಧಿಕಾರದ ಆಳ್ವಿಕೆಯ ಅಂತ್ಯವನ್ನು ತಾಲ್ಲೂಕಿನ ಮತದಾರರು ತುದಿಗಾಲಿನ ಮೇಲೆ ನಿಂತು ಕಾಯುತ್ತಿದ್ದಾರೆ. ಈಗ ಕಾಲ ಬಂದಿದೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದರು.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಕೇವಲ ಲಕ್ಷಗಳಲ್ಲಿ ಇದ್ದ ಶಿವನಗೌಡನ ಆದಾಯ ಕೇವಲ ನಾಲ್ಕುವರೆ ವರ್ಷದಲ್ಲಿ ಕೋಟಿಗಟ್ಟಲೆ ಆದಾಯ ಬಂದಿರುವುದನ್ನು ಗಮನಿಸಿದರೆ ತಾಲ್ಲೂಕಿನ ಅಭಿವೃದ್ಧಿಗೆ ಬಂದಿದ್ದ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ.ವೆಂಕಟೇಶ ನಾಯಕ, ಮಾಜಿ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಿಗಿ, ಬುಡ್ಡನಗೌಡ ಪಾಟೀಲ, ನಾಗನಗೌಡ ಹರವಿ, ಎಸ್.ಭೀಮರೆಡ್ಡಿ ಸರ್ಜಾಪೂರ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT