ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರದರ್ಶಕ ಚುನಾವಣೆಗೆ ಯತ್ನ

Last Updated 10 ಏಪ್ರಿಲ್ 2013, 4:58 IST
ಅಕ್ಷರ ಗಾತ್ರ

ಹರಿಹರ: ಅಧಿಕಾರಿಗಳಿಗೆ ಪಾರದರ್ಶಕ ಹಾಗೂ ನ್ಯಾಯಯುತವಾಗಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಚುನಾವಣೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಕ್ಷೇತ್ರಕ್ಕೆ ಹೊಸದಾಗಿ ನಿಯುಕ್ತಿಗೊಂಡಿರುವ ಚುನಾವಣಾ ಅಧಿಕಾರಿ ವಿ. ನಾಗರಾಜ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಸಹಯೋಗದೊಂದಿಗೆ ಕ್ಷೇತ್ರದಲ್ಲಿ ನೀತಿಸಂಹಿತೆಗೆ ಧಕ್ಕೆ ಬರದಂತೆ ಸುವ್ಯವಸ್ಥಿತವಾಗಿ ಚುನಾವಣೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ರಾಜಕೀಯ ಮುಖಂಡರು ಶಾಂತಿಯುತ ಚುನಾವಣೆಗೆ ಸಹಕರಿಸಬೇಕು ಎಂದು ಕೋರಿದರು.

ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ನಮೂನೆ -26ರಲ್ಲಿ ಪ್ರಮಾಣಪತ್ರದಲ್ಲಿ ಸಲ್ಲಿಸಬೇಕು ಮತ್ತು ಚುನಾವಣೆಗೆ ಸಂಬಂಧಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಚುನಾವಣೆಯ ಖರ್ಚು-ವೆಚ್ಚಗಳ ವಿವರಗಳನ್ನು ಸೂಕ್ತ ಸಮಯದಲ್ಲಿ ನಿಗದಿತ ಅಧಿಕಾರಿಗಳಿಗೆ ನೀಡಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪ ತಹಶೀಲ್ದಾರ್ ಗಾಯತ್ರಿದೇವಿ, ಸಿಪಿಐ ಯು.ಎಚ್. ಸಾತೇನಹಳ್ಳಿ, ಲೆಕ್ಕಾಧಿಕಾರಿ ಎನ್.ಎಂ. ನಾಡಿಗೇರ್, ಶಿರಸ್ತೇದಾರ್ ರವಿ ಬದ್ರಿನಾಥ್ ಉಪಸ್ಥಿತರಿದ್ದರು.

106 ಅತಿ ಸೂಕ್ಷ್ಮ ಮತಗಟ್ಟೆ
ಹೊನ್ನಾಳಿ
: ಕ್ಷೇತ್ರದಲ್ಲಿ 106 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ ಎಂದು ಚುನಾವಣಾಧಿಕಾರಿ ಬಿ. ಆನಂದ್ ಹೇಳಿದರು.

ಕ್ಷೇತ್ರದಲ್ಲಿ 227 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 66 ಸೂಕ್ಷ್ಮ ಹಾಗೂ 55 ಸಾಮಾನ್ಯ ಮತಗಟ್ಟೆಗಳಾಗಿವೆ ಎಂದು ತಿಳಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 1,68,993 ಮತದಾರರು ಇದ್ದಾರೆ. ಈ ಪೈಕಿ ಪುರುಷರು 86,926 ಮತ್ತು ಮಹಿಳೆಯರು 82,067 ಮಂದಿ ಇದ್ದಾರೆ.

ಕ್ಷೇತ್ರದಲ್ಲಿ ಇಬ್ಬರು ನೀತಿಸಂಹಿತೆ ಅನುಷ್ಠಾನ ಅಧಿಕಾರಿಗಳು, ಇಬ್ಬರು ಪಿಎಸ್‌ಐಗಳನ್ನು ನೇಮಿಸಲಾಗಿದೆ. ಸಂಚಾರಿ ಜಾಗೃತ ದಳ, ವಿಡಿಯೋ ವೀವಿಂಗ್, 18 ಮಂದಿ ಸೆಕ್ಟರ್ ಅಧಿಕಾರಿಗಳು ಸೇರಿದಂತೆ ಸಾಕಷ್ಟು ಸಂಖ್ಯೆಯ ಅಧಿಕಾರಿಗಳು  ಎಲ್ಲೆಡೆ ಹದ್ದಿನ ಕಣ್ಣಿಟ್ಟಿರುತ್ತಾರೆ ಎಂದು ವಿವರಿಸಿದರು.

ಚುನಾವಣಾ ಕರಪತ್ರ ಮುದ್ರಿಸುವ ಮೊದಲು ಚುನಾವಣಾ ಕಚೇರಿಯಲ್ಲಿ ಅನುಮತಿ ಪಡೆದುಕೊಳ್ಳಬೇಕು. ಚುನಾವಣಾ ಕಚೇರಿ ಅನುಮತಿ ಇಲ್ಲದೇ ಕರಪತ್ರ ಮುದ್ರಿಸಿದರೆ, ಮುದ್ರಣಾಲಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಾಗುವುದು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಮನೆಯಲ್ಲಿರುವ ಸಹೋದರರು, ತಂದೆ-ತಾಯಿ, ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿರುವ ಆಸ್ತಿ ಘೋಷಣೆ ಮಾಡಬೇಕು.

ನಮೂನೆ 2ಬಿಯಲ್ಲಿ ನಾಮಪತ್ರ ಸಲ್ಲಿಸಬೇಕು. ನಮೂನೆ 26ರಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿ 4 ನಾಮಪತ್ರ ಸಲ್ಲಿಸಬಹುದು. ಚುನಾವಣಾ ವೆಚ್ಚದ ಮಿತಿ ರೂ. 16ಲಕ್ಷ. ನಾಮಪತ್ರ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿ ರೂ. 10ಸಾವಿರ ಮತ್ತು ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿ ರೂ. 5ಸಾವಿರ ಠೇವಣಿ ಇಡಬೇಕು. ಮೇ 5ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನದ ಸಮಯ ನಿಗದಿಗೊಳಿಸಲಾಗಿದೆ ಎಂದು ವಿವರಿಸಿದರು. 

ವಿಧಾನಸಭಾ ಚುನಾವಣಾ ಪ್ರಕ್ರಿಯೆ ಏ. 10ರಿಂದ ಪ್ರಾರಂಭಗೊಳ್ಳಲಿದ್ದು, 17ರವರೆಗೆ ನಾಮಪತ್ರ ಸ್ವೀಕರಿಸಲಾಗುವುದು. 18ರಂದು ನಾಮಪತ್ರಗಳ ಪರಿಶೀಲನೆ. ನಾಮಪತ್ರ ವಾಪಸ್ ಪಡೆಯಲು 27 ಕಡೆಯ ದಿನವಾಗಿದೆ ಎಂದು ಹೇಳಿದರು.
ಸಹಾಯಕ ಚುನಾವಣಾಧಿಕಾರಿ ಟಿ.ವಿ. ಪ್ರಕಾಶ್, ರಾಜು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT