ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಕಿಂಗ್‌ಗೆ ಹೈಟೆಕ್ ಪರಿಹಾರ

Last Updated 22 ಜೂನ್ 2011, 19:30 IST
ಅಕ್ಷರ ಗಾತ್ರ

ನಗರದ ಬಹಳಷ್ಟು ಶಾಪಿಂಗ್ ಮಾಲ್‌ಗಳಲ್ಲಿ ಗ್ರಾಹಕರ ಬೇಡಿಕೆ ಈಡೇರಿಸುವಷ್ಟು ಪಾರ್ಕಿಂಗ್ ಸೌಲಭ್ಯವಿಲ್ಲ. ಅದಕ್ಕೆ ಬೇಕಾಗುವಷ್ಟು ಸ್ಥಳಾವಕಾಶ ಕಲ್ಪಿಸುವುದು ಸಹ ಕಷ್ಟ. ಹೆಚ್ಚು ಎತ್ತರವಿಲ್ಲದ ಒಳಛಾವಣಿಗಳು, ಅಸಮರ್ಪಕ ವಿದ್ಯುತ್ ವ್ಯವಸ್ಥೆ, ಅನೇಕ ಮಾಲ್‌ಗಳಲ್ಲಿ ವಾಹನಗಳ ಪ್ರವೇಶ ಹಾಗೂ ಹೊರಹೋಗಲು ಏಕ ದ್ವಾರ ಇವೆಲ್ಲವೂ ಕಸಿವಿಸಿ ಉಂಟು ಮಾಡುತ್ತವೆ.

ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿನ ವೇಗಕ್ಕೆ ಅನುಗುಣವಾಗಿ ರಸ್ತೆ ವಿಸ್ತಾರಗೊಂಡಿಲ್ಲ. ಸೂಕ್ತ ಪಾರ್ಕಿಂಗ್ ಸೌಲಭ್ಯವಿಲ್ಲ. ಸಂಚಾರ ನಿಯಂತ್ರಣ ವೈಫಲ್ಯಕ್ಕೆ ಟ್ರಾಫಿಕ್ ಜಾಮ್ ಒಂದೇ ಕಾರಣವಲ್ಲ. ಬದಲಿಗೆ ನಗರದಾದ್ಯಂತ ಅವ್ಯವಸ್ಥಿತ ಸ್ಥಿತಿಯಲ್ಲಿರುವ ಪಾರ್ಕಿಂಗ್ ಸಮಸ್ಯೆ ಕೂಡ ಒಂದು.

ಇದಕ್ಕೆಲ್ಲ ಒಂದು ಪರಿಹಾರ ಹುಡುಕಿದೆ `ಸೆಂಟ್ರಲ್ ಪಾರ್ಕಿಂಗ್ ಸಿಸ್ಟಮ್~ (ಸಿಪಿಎಸ್) ಎಂಬ ಬೆಂಗಳೂರು ಮೂಲದ ಸಂಸ್ಥೆ. ಪಾರ್ಕಿಂಗ್ ನಿರ್ವಹಣೆಗೆ ವ್ಯವಸ್ಥಿತ ಸ್ವರೂಪ, ಹೈಟೆಕ್ ಸ್ಪರ್ಶ ನೀಡಿದೆ. ಪಾರ್ಕಿಂಗ್ ಮಾಡುವ ವೇಳೆ ಜನರು ಎದುರಿಸುತ್ತಿದ್ದ ಬಹುತೇಕ ಸಮಸ್ಯೆಗಳಿಗೂ ಕೊನೆ ಹಾಡಿದೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಯುಬಿ ಸಿಟಿ, ರಾಯಲ್ ಮೀನಾಕ್ಷಿ, ಸಿಗ್ಮಾ ಮಾಲ್, ಗರುಡಾ ಮಾಲ್ ಹೀಗೆ ನಗರದ 15 ಸ್ಥಳದಲ್ಲಿನ ಹೈಟೆಕ್ ಪಾರ್ಕಿಂಗ್ ವ್ಯವಸ್ಥೆ ಸಿಪಿಎಸ್‌ನ ಶ್ರಮದ ಫಲ. ಈಗಾಗಲೇ ದೆಹಲಿ, ಮುಂಬೈ, ಕೋಲ್ಕತ್ತ ಸೇರಿದಂತೆ ದೇಶದ 25 ಪ್ರಮುಖ ನಗರಗಳಲ್ಲಿ ಸೇವೆಯ ಹಸ್ತ ಚಾಚಿದೆ.

`ವಿಶ್ವ ಮಟ್ಟದಲ್ಲಿ ವಾಹನ ನಿಲುಗಡೆ ನಿರ್ವಹಣಾ ವ್ಯವಸ್ಥೆ ಹಲವು ಸಾವಿರ ಕೋಟಿ ಡಾಲರ್ ವಹಿವಾಟು ಹೊಂದಿದೆ. ನಮ್ಮ ದೇಶದಲ್ಲಿಯೇ ಪಾರ್ಕಿಂಗ್ ನಿರ್ವಹಣೆಯ ವಾರ್ಷಿಕ  ವಹಿವಾಟು ಮೊತ್ತ 500 ಕೋಟಿ ರೂಪಾಯಿಗೂ ಅಧಿಕ ಎಂದರೆ ಅಚ್ಚರಿ ಎನಿಸಬಹುದು~ ಎನ್ನುತ್ತಾರೆ ಸಿಪಿಎಸ್‌ನ ವ್ಯವಸ್ಥಾಪಕ ನಿರ್ದೇಶಕ ಎನ್.ಸತ್ಯನಾರಾಯಣ.

ಕಸ್ಟಮರ್ ಕೇರ್ ಅಸೋಸಿಯೇಟ್ (ಸಿಸಿಎ): ಸಿಪಿಎಸ್ ಪಾರ್ಕಿಂಗ್ ಲಾಟ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸಿಸಿಎ ಎಂದು ಕರೆಯಲಾಗುತ್ತದೆ. ಪಾರ್ಕಿಂಗ್ ಮಾಡಲು ಬರುವ ಗ್ರಾಹಕರನ್ನು ಅತಿಥಿಯಂತೆ ಕಾಣಬೇಕು ಎಂಬುದು ಅದರ ಧ್ಯೇಯ. ಪಾರ್ಕಿಂಗ್ ಲಾಟ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಪಿಎಸ್‌ನ ಎಲ್ಲ ಸಿಬ್ಬಂದಿಗಳು ತರಬೇತಿ ಪಡೆದವರಾಗಿರುತ್ತಾರೆ.

ಗ್ರಾಹಕರೊಂದಿಗೆ ಸಂವಹನ, ಪಾರ್ಕ್ ಮಾಡಿದ ವಾಹನವನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದರ ಬಗೆ, ಅವಘಡ ಸಂಭವಿಸಿದಾಗ ಪ್ರಥಮ ಚಿಕಿತ್ಸೆ ನೀಡುವುದು ಈ ಎಲ್ಲದರ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿರುತ್ತದೆ. ಪಾರ್ಕಿಂಗ್ ಸ್ಥಳದಲ್ಲಿ ಇಷ್ಟು ಸೇವೆ ಒದಗಿಸಿದರೆ ಗ್ರಾಹಕರು ಸಂತೃಪ್ತಿಗೊಳ್ಳುತ್ತಾರೆ. ಮತ್ತೆ  ತಿರುಗಿ ಬರುತ್ತಾರೆ ಎನ್ನುತ್ತಾರೆ ಸತ್ಯನಾರಾಯಣ.

ಪಾರ್ಕಿಂಗ್ ಮ್ಯಾನೇಜ್‌ಮೆಂಟ್ ಅಂದರೆ ಕೇವಲ ಇಕ್ಕಟ್ಟಿನ ಜಾಗದಲ್ಲಿ ವಾಹನಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿಲ್ಲಿಸುವುದಷ್ಟೇ ಅಲ್ಲ. ಬದಲಿಗೆ ವಾಹನ ಮಾಲೀಕರಿಗೆ ಅವರ ವಾಹನಗಳ ಬಗ್ಗೆ ಭದ್ರತೆ ಒದಗಿಸುವುದು ಸಹ ಮುಖ್ಯ. ಕೆಲವು ಪಾರ್ಕಿಂಗ್ ತಾಣಗಳಲ್ಲಿ ವಾಹನ ನಿಲುಗಡೆ ಮಾಡಿದರೆ ತಮ್ಮ ವಾಹನ ಸುರಕ್ಷತೆ ಬಗ್ಗೆ ನಂಬಿಕೆ ಇರುವುದಿಲ್ಲ. ಇದಕ್ಕೆ ಒತ್ತು ಕೊಟ್ಟಿದೆ ಸಿಪಿಎಸ್. ತಂತ್ರಜ್ಞರು, ಎಂಜಿನಿಯರ್‌ಗಳು ಸೇರಿದಂತೆ ಇಲ್ಲಿ ಸುಮಾರು 2500 ಮಂದಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.

`ಸೂಕ್ತ ಪಾರ್ಕಿಂಗ್ ಸೌಲಭ್ಯವಿದ್ದರೆ ಸಂಚಾರ ದಟ್ಟಣೆಯನ್ನು ಸ್ವಲ್ಪ ಮಟ್ಟಿಗಾದರೂ ನಿಯಂತ್ರಣಕ್ಕೆ ತರಬಹುದು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ನಗರದಲ್ಲಿರುವ ಅವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆಯನ್ನು ರದ್ದುಪಡಿಸಲು ನಿರ್ಧರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ  ಸ್ಟೇಟ್ ಆಫ್ ಆರ್ಟ್ ಪರಿಕಲ್ಪನೆಯನ್ನು ಇರಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಸಿಪಿಎಸ್.

ಹೇಗೆ ಭಿನ್ನ...
ಇಂಟರ್‌ನೆಟ್ ಪ್ರೋಟೊಕಾಲ್: ಎಲ್ಲ ಪಾರ್ಕಿಂಗ್ ತಾಣಗಳಿಗಿಂತ ಸಿಪಿಎಸ್ ಭಿನ್ನ ಎನಿಸುವುದು ತನ್ನ ಇಂಟರ್‌ನೆಟ್ ಪ್ರೋಟೊಕಾಲ್ ವ್ಯವಸ್ಥೆಯಿಂದ. ಇದನ್ನು ಸಿಪಿಎಸ್‌ನ ತಂತ್ರಜ್ಞರ ತಂಡ ಅಭಿವೃದ್ಧಿಪಡಿಸಿದೆ. ಜಪಾನ್ ಮತ್ತು ಜರ್ಮನಿ ಪಾರ್ಕಿಂಗ್ ತಂತ್ರಜ್ಞಾನ ಇದಕ್ಕೆ ಸ್ಫೂರ್ತಿ. ಈ ವ್ಯವಸ್ಥೆಯಲ್ಲಿ ಒಂದು ವಾಹನ ಪಾರ್ಕಿಂಗ್ ಲಾಟ್ ಪ್ರವೇಶಿಸಿದ ಕ್ಷಣದಿಂದ ಹಿಡಿದು ಅದು ಹೊರ ಬೀಳುವವರೆಗಿನ ಮಾಹಿತಿ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ.

ಪಾರ್ಕಿಂಗ್ ಟಿಕೆಟ್ ಪಡೆದು ವಾಹನ ಪಾರ್ಕಿಂಗ್ ಲಾಟ್ ಪ್ರವೇಶಿಸಿದಾಗ ವಾಹನ ನಿಲುಗಡೆಗೆ ಯಾವ ಸ್ಥಳ ಖಾಲಿ ಇದೆ ಎಂಬುದನ್ನು ಎಲೆಕ್ಟ್ರಾನಿಕ್ ಡಿಸ್‌ಪ್ಲೇ ಬೋರ್ಡ್ ಸೂಚಿಸುತ್ತದೆ. ಆ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಿ ತಮ್ಮ ಕಾರ್ಯಕ್ಕೆ ತೆರಳಬಹುದು. ಕೆಲಸ ಮುಗಿದ ಬಳಿಕ ತಮ್ಮ ವಾಹನವನ್ನು ಪಾರ್ಕಿಂಗ್ ಲಾಟ್‌ನಿಂದ ಹೊರತೆಗೆಯುವಾಗ ಎಕ್ಸಿಟ್ ಪೇಮೆಂಟ್ (ಶುಲ್ಕ) ಮಾಡಬೇಕು. ಆಗ ಮಾತ್ರ ಎಲೆಕ್ಟ್ರಾನಿಕ್ ಗೇಟ್ ತೆರೆದುಕೊಳ್ಳುತ್ತದೆ.

ಈ ಎಲ್ಲ ಪ್ರಕ್ರಿಯೆಗಳು ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ.  ಸಿಪಿಎಸ್ ಈ ವ್ಯವಸ್ಥೆಯನ್ನು ತನ್ನ ಎಲ್ಲ ಪಾರ್ಕಿಂಗ್ ಲಾಟ್‌ಗಳಲ್ಲಿ ರೂಪಿಸಿದೆ.

ವಿಶಾಲವಾದ ಒಳಚಾವಣಿ, ಝಗಮಗಿಸುವ ವಿದ್ಯುತ್ ಸಂಪರ್ಕ, ಸ್ಥಳದ ಸದ್ಭಳಕೆ, ಗ್ರಾಹಕ ಸ್ನೇಹಿ ಸಿಬ್ಬಂದಿ, ಇಂಟರ್‌ನೆಟ್ ಪ್ರೋಟೊಕಾಲ್ ವ್ಯವಸ್ಥೆ ಸಿಪಿಎಸ್‌ನ ವಿಶಿಷ್ಟತೆಗಳು. ಪಾರ್ಕಿಂಗ್ ಲಾಟ್‌ಗಳಲ್ಲಿ ಕಟಿಂಗ್ ಎಡ್ಜ್ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆಚ್ಚು ವಾಹನಗಳನ್ನು ನಿಲ್ಲಿಸುವ ಸ್ಥಳಾವಕಾಶ ಕಲ್ಪಿಸಲಾಗಿದೆ.
 
ಜೊತೆಗೆ ಆನ್‌ಲೈನ್ ಮೂಲಕ ಗ್ರಾಹಕರು ತಮ್ಮ ಪಾರ್ಕಿಂಗ್ ಸ್ಥಳ ಕಾಯ್ದಿರಿಸುವ ಆನ್‌ಲೈನ್ ಬುಕಿಂಗ್ ಯೋಜನೆಯನ್ನು ಸಿಪಿಎಸ್ ಹೊಂದಿದೆ. ಇದು ದೇಶದಲ್ಲೇ ಪ್ರಥಮ ಎನ್ನುತ್ತಾರೆ ಎನ್.ಸತ್ಯನಾರಾಯಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT