ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಶೆಡ್‌ನಲ್ಲಿ ಬೊಮ್ಮಾಯಿ ಪ್ರತಿಮೆ

ಪ್ರತಿಷ್ಠಾಪನೆಗೆ ಕೂಡಿ ಬಾರದ ಮುಹೂರ್ತ
Last Updated 18 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಿದ್ದಿ ತೀಡಿದ ತಲೆಗೂದಲು, ಮುಖದಲ್ಲಿ ಕನ್ನಡಕ, ಕೈಯಲ್ಲಿ ಕಾನೂನು ಪುಸ್ತಕ, ಸೂಟುಧಾರಿ, ವಕೀಲ ವೃತ್ತಿಯ ಲುಕ್, ಹಾವಭಾವದಲ್ಲಿ ಅಪ್ಪಟ ರಾಜಕಾರಣಿಯ ಝಲಕ್!
ಇದು ಮಾಜಿ ಮುಖ್ಯಮಂತ್ರಿ, ದಿವಂಗತ ಸೋಮಪ್ಪ ರಾಯಪ್ಪ ಬೊಮ್ಮಾಯಿ ಅವರ ಪ್ರತಿರೂಪ.

ಹಳೆ ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ವಾಹನ ನಿಲ್ಲಿಸುವ ಶೆಡ್‌ನಲ್ಲಿ ಆರು ತಿಂಗಳಿನಿಂದ ಯಾರೂ ಗುರುತು ಹಿಡಿಯಲು ಸಾಧ್ಯವಾಗದಂತೆ ಮುಖಕ್ಕೆ ಗೋಣಿ ಚೀಲ ಸುತ್ತಿದ ಸ್ಥಿತಿಯಲ್ಲಿ ಈ ಪ್ರತಿಮೆಯನ್ನು ಇರಿಸಲಾಗಿದೆ!

ನಾಲ್ಕು ದಶಕಗಳ ಕಾಲ ರಾಜ್ಯ -ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಸ್.ಆರ್. ಬೊಮ್ಮಾಯಿ, 1988ರ ಆಗಸ್ಟ್ 13ರಿಂದ 1989 ಏಪ್ರಿಲ್ 21ರವರೆಗೆ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಅವರ ನಿಧನದ ನಂತರವೂ ಅವರನ್ನು ನಿತ್ಯ ಸ್ಮರಣೀಯವಾಗಿಸಬೇಕೆಂಬ ಉದ್ದೇಶದಿಂದ ನಗರದಲ್ಲಿ ಪ್ರತಿಷ್ಠಾಪಿಸಲು ಈ ಕಂಚಿನ ಪ್ರತಿಮೆಯನ್ನು ಸಿದ್ಧಪಡಿಸಲಾಗಿತ್ತು.

ಪಾಲಿಕೆಯು ಐದು ವರ್ಷದ ಹಿಂದೆಯೇ ಬೊಮ್ಮಾಯಿ ಅವರ ಪ್ರತಿಮೆಯನ್ನು ನಗರದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಿ, 2009 ಜನವರಿ 23ರಂದು ಮುಂಬೈಯ ಶಿರ್ಗೋನರ್ಕರ್ ಆರ್ಟ್ ಸ್ಟುಡಿಯೊ ಮಾಲೀಕ ಓಂಪ್ರಕಾಶ್ ಆರ್. ಶಿರ್ಗೋನರ್ಕರ್ ಅವರಿಗೆ ರೂ 9.67 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಕೊಡಲು ಗುತ್ತಿಗೆ ನೀಡಿತ್ತು. 12 ಅಡಿ ಎತ್ತರದ ಸುಂದರ ಪ್ರತಿಮೆಯನ್ನು ಕಳೆದ ಆಗಸ್ಟ್ 8ರಂದು ಮುಂಬೈಯಿಂದ ನಗರಕ್ಕೆ ತರಲಾಗಿದೆ. ಆದರೆ ಪ್ರತಿಷ್ಠಾಪನೆಗೆ ಮಾತ್ರ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.

ರಾಧಾಬಾಯಿ ಸಫಾರೆ ಮೇಯರ್ ಆಗಿದ್ದಾಗ `ಎಸ್.ಆರ್.ಬೊಮ್ಮಾಯಿ ಪ್ರತಿಮೆ ನಿರ್ಮಾಣ ಸಮಿತಿ' ರಚಿಸಲಾಗಿತ್ತು. ಈ ಸಮಿತಿಯಲ್ಲಿದ್ದವರೇ ಮೇಯರ್-ಉಪ ಮೇಯರ್ ಆದರೂ ಪ್ರತಿಮೆ ಪ್ರತಿಷ್ಠಾಪನೆಗೆ ಮಾತ್ರ ಯಾರೂ ಮುತುವರ್ಜಿ ತೋರಿಲ್ಲ. `ಕೋರ್ಟ್ ಸಮೀಪದ ಶಿರಡಿ ಮಂದಿರದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಆದರೆ ಅಲ್ಲಿರುವ ಕಟ್ಟಡ ತೆರವಾಗದ ಕಾರಣ ಪ್ರತಿಷ್ಠಾಪನೆ ವಿಳಂಬವಾಗಿದೆ' ಎನ್ನುತ್ತಾರೆ ಪ್ರತಿಮೆ ಸಮಿತಿ ಅಧ್ಯಕ್ಷೆಯಾಗಿದ್ದ ಲಕ್ಷ್ಮಿ ಉಪ್ಪಾರ.

ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂತರು, ಶರಣರು, ಜನನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಮತ್ತು ಗಣ್ಯ ವ್ಯಕ್ತಿಗಳ ಪ್ರತಿಮೆ ಪ್ರತಿಷ್ಠಾಪನೆಯನ್ನು ನಿರ್ಬಂಧಿಸಿ ರಾಜ್ಯ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ಸುತ್ತೋಲೆ ಹೊರಡಿಸಿದೆ. ಈಗಾಗಲೇ ಸ್ಥಾಪಿಸಲಾಗಿರುವ ಪ್ರತಿಮೆಗಳನ್ನು ಸಮರ್ಪಕವಾಗಿ ನಿರ್ವಹಿಸದ  ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಪ್ರತಿಮೆ ಪ್ರತಿಷ್ಠಾಪನೆಯೂ ನೆನೆಗುದಿಗೆ ಬೀಳುವ ಸಾಧ್ಯತೆಯಿದೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಚಿಸದ ಪಾಲಿಕೆ ಅಧಿಕಾರಿಗಳು.

`ಎಸ್.ಆರ್‌ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಬಿಜೆಪಿ ಸರ್ಕಾರದಲ್ಲಿ ನಾಲ್ಕೂಮುಕ್ಕಾಲು ವರ್ಷ ಸಚಿವರಾಗಿದ್ದರೂ ಪ್ರತಿಮೆಗೆ ಮೋಕ್ಷ ಸಿಕ್ಕಿಲ್ಲದಿರುವುದು' ವಿಪರ್ಯಾಸ ಎನ್ನುತ್ತಾರೆ ಈ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT