ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳುಬಿದ್ದ ಬಿಣಗಾ ಗ್ರಾ.ಪಂ. ಕಟ್ಟಡ

Last Updated 16 ಸೆಪ್ಟೆಂಬರ್ 2013, 8:55 IST
ಅಕ್ಷರ ಗಾತ್ರ

ಕಾರವಾರ: ಬಿಣಗಾ ಗ್ರಾಮ ಪಂಚಾಯ್ತಿ ಕಚೇರಿ ಕಟ್ಟಡ ಹಾಗೂ ಸಭಾಭವನ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೇ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. 1999ರಲ್ಲಿ ಬಿಣಗಾ ಗ್ರಾಮವು ನಗರಸಭೆ ವ್ಯಾಪ್ತಿಗೆ ಸೇರಿದೆ. 1981ರಲ್ಲಿ ನಿರ್ಮಾಣಗೊಂಡಿರುವ ಈ ಗ್ರಾಮ ಪಂಚಾಯ್ತಿ ಕಟ್ಟಡ ನಗರಸಭೆಗೆ ಸೇರಿದ ನಂತರ ನಿರುಪಯೋಗಿಯಾಗಿದ್ದು, ಅಭಿವೃದ್ಧಿಯ ಸ್ಪರ್ಶವಿಲ್ಲದೇ ಮೂಲೆಗುಂಪಾಗಿದೆ. ಇದರ ಹಿಂಭಾಗದಲ್ಲೇ ಸಭಾಭವನವಿದ್ದು, ಅದು ಕೂಡ ಶಿಥಿಲಗೊಂಡು ಹಾವು, ಚೇಳುಗಳ ವಾಸಸ್ಥಾನವಾಗಿದೆ.

ಕಟ್ಟಡದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಕೊಠಡಿ, ಕಾರ್ಯದರ್ಶಿ ಕೊಠಡಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿಡುವ ಕೊಠಡಿಗಳಿದ್ದು ಎಲ್ಲವೂ ಹಾಳಾಗಿವೆ. ಈ ಕೊಠಡಿಗಳಿಗೆ ಅಳವಡಿಸಲಾಗಿದ್ದ ರೋಲಿಂಗ್‌ ಶೆಟರ್‌ ಕೂಡ ತುಕ್ಕು ಹಿಡಿದಿವೆ. ಕಟ್ಟಡದ ಗೋಡೆಗಳು ಪಕ್ಕದಲ್ಲಿರುವ ಆಲದ ಮರದ ಕೊಂಬೆಗಳಿಂದ ಹಾನಿಯಾಗಿದೆ. ಕೊಂಬೆಗಳು ಗೋಡೆಯನ್ನು ಸೀಳಿಕೊಂಡು ಕಟ್ಟಡದೊಳಗೂ ಹಬ್ಬಿದೆ.

ಮೇಲ್ಛಾವಣಿ ಕುಸಿಯುವ ಹಂತದಲ್ಲಿದೆ. ಕಟ್ಟಡಕ್ಕೆ ಹೊಂದಿಕೊಂಡಂತಿರುವ ಶೌಚಾಲಯ ಕೂಡ ಹಾಳಾಗಿದೆ. ಸಭಾಭವನದ ಒಳಗಡೆ ಪ್ರವೇಶಿಸಿದರೆ ಅಶ್ಲೀಲ ಬರಹಗಳು, ಬೀಡಿ, ಸಿಗರೇಟಿನ ಕಮಟು ವಾಸನೆ  ಉಸಿರುಗಟ್ಟಿಸುತ್ತವೆ. ಮದ್ಯದ ಬಾಟಲಿಗಳು ಕಾಣ ಸಿಗುತ್ತವೆ. ‘ನಗರಸಭೆ ವತಿಯಿಂದ 2–3 ವರ್ಷಗಳ ಹಿಂದೆ ಸಭಾಭವನದ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ.

ಆದರೆ, ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಕಾಣುತ್ತಿಲ್ಲ. ಸಭಾಭವನ ಕೂಡ ಯಾವುದೇ ಉಪಯೋಗಕ್ಕೆ ಬಾರದಾಗಿ ಪಾಳು ಬಿದ್ದಿದೆ. ಕೂಡಲೇ ಇದನ್ನು ದುರಸ್ತಿ ಪಡಿಸಬೇಕು’ ಎಂದು ಸ್ಥಳೀಯ ನಿವಾಸಿ ಸತೀಶ ಒತ್ತಾಯಿಸಿದರು. ‘ಆ.15, ಜನವರಿ 26ರಂದು ಮಾತ್ರ ಈ ಗ್ರಾಮ ಪಂಚಾಯ್ತಿ ಕಚೇರಿ ಬೀಗ ತೆರೆಯಲಾಗುತ್ತದೆ.

ಉಳಿದಂತೆ ಯಾವಾಗಲೂ ಕಟ್ಟಡದ ಬಾಗಿಲು ಬಂದ್ ಆಗಿರುತ್ತದೆ. ಸಭಾಭವನಕ್ಕೆ ಯಾವುದೇ ಬೀಗದ ವ್ಯವಸ್ಥೆ ಕೂಡ ಇಲ್ಲ. ಗ್ರಾಮದ ಅಭಿವೃದ್ಧಿಯ ಮೂಲಸ್ಥಾನವಾಗಿದ್ದ ಗ್ರಾ.ಪಂ. ಕಟ್ಟಡವೇ ಅಭಿವೃದ್ಧಿಗೆ ಕಾದಿದೆ’ ಎಂದು ನಗರಸಭೆ ಸದಸ್ಯ ರಮೇಶ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT