ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿದಾರರ ಭವನ

Last Updated 18 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು ನಿವೃತ್ತರ ಸ್ವರ್ಗ. ಇಂಥ ಮಹಾನಗರದಲ್ಲಿ ಸುಮಾರು 16 ವರ್ಷಗಳ ಹಿಂದೆ ಅಂಚೆ ಮತ್ತು ತಂತಿ ಇಲಾಖೆಯ ನಿವೃತ್ತರ ಸಂಘವೊಂದು ಅಸ್ತಿತ್ವಕ್ಕೆ ಬಂತು. ಆರಂಭದಲ್ಲಿ ಕೇವಲ 30 ಸದಸ್ಯರಿದ್ದ ಈ ಸಂಘದ ಈಗಿನ ಸಂಖ್ಯಾಬಲ 2000 ದ ಗಡಿಯನ್ನು ತಲುಪಿದೆ.
 
ಹೆಸರು `ಅಂಚೆ ಮತ್ತು ತಂತಿ ಇಲಾಖೆಯ ನಿವೃತ್ತರ ಸಂಘ~ ಎಂದಿದ್ದರೂ ಕೇಂದ್ರ ಸರ್ಕಾರದ ಯಾವುದೇ ನಿವೃತ್ತ ಉದ್ಯೋಗಿ ಇದರ ಸದಸ್ಯರಾಗಲು ಅರ್ಹರಾಗಿರುತ್ತಾರೆ. ಐಎಎಸ್, ಐಪಿಎಸ್, ಐಎಫ್‌ಎಸ್, ರೈಲ್ವೆ, ವರಮಾನ ತೆರಿಗೆ, ಸೆಂಟ್ರಲ್ ಎಕ್ಸೈಸ್, ನ್ಯಾಯಾಂಗದ ನಿವೃತ್ತ ಅಧಿಕಾರಿಗಳೂ ಇದರಲ್ಲಿದ್ದಾರೆ.

80 ವರ್ಷ ದಾಟಿದ್ದರೂ ಇನ್ನೂ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿರುವ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಬಿ. ಸದಾಶಿವರಾವ್ ಮತ್ತು ಎನ್. ಭಾಸ್ಕರನ್ ಅವರು ಕ್ರಮವಾಗಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ.

ಈ ಸಂಘದ ವತಿಯಿಂದ ಬೆಂಗಳೂರಿನ ಹೊರವಲಯದ ಜಕ್ಕೂರು ಶ್ರೀರಾಂಪುರದ ಎರಡನೇ ಹಂತದ ಟೆಲಿಕಾಂ ಲೇಔಟ್‌ನಲ್ಲಿ ನಿರ್ಮಾಣವಾಗಿದೆ `ಪಿಂಚಣಿದಾರರ ಭವನ~. ಹಾಲಿ ನೌಕರರ ಭವನಗಳು ಎಲ್ಲೆಡೆ ಇವೆ. ಆದರೆ ನಿವೃತ್ತ ನೌಕರರ ಭವನ ಅಪರೂಪ ಎಂದೇ ಹೇಳಬಹುದು.

ಈ ಕಟ್ಟಡಕ್ಕೆ 2010 ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎಸ್.ವೆಂಕಟಾಚಲಯ್ಯ ಅಡಿಗ್ಲ್ಲಲು ಹಾಕಿದ್ದರು. ಈಗ ಇದು ಪೂರ್ಣಗೊಂಡಿದ್ದು ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಉದ್ಘಾಟಿಸಲಿದ್ದಾರೆ.

ಮಹಡಿ ಮತ್ತು ನೆಲ ಮಹಡಿಯನ್ನು ಒಳಗೊಂಡ ಈ ಕಟ್ಟಡದ ನಿರ್ಮಾಣ ವೆಚ್ಚ ಸುಮಾರು 40 ಲಕ್ಷ ರೂಪಾಯಿಗಳು. ಟೆಲಿಕಾಂ ಗೃಹ ನಿರ್ಮಾಣ ಸಂಘದವರು ಇದಕ್ಕೆ ಮೂಲಬೆಲೆಯಲ್ಲಿ ನಿವೇಶನ ಕೊಟ್ಟಿದ್ದಾರೆ. ಸದಸ್ಯರು, ಕೆಲವು ಸಂಘ ಸಂಸ್ಥೆಗಳು, ಸದಸ್ಯರ ಮಕ್ಕಳು, ಮೊಮ್ಮಕ್ಕಳು ಸಹ ದೇಣಿಗೆ  ನೀಡಿದ್ದಾರೆ.

ಆರನೆಯ ವೇತನ ಆಯೋಗದಿಂದ ಬಂದ ಬಾಕಿ ಹಣದಲ್ಲಿ ಶೇ 3ನ್ನು ಸದಸ್ಯರು ಕಟ್ಟಡ ನಿಧಿಗೆ ಕೊಟ್ಟಿದ್ದಾರೆ. ಕೆಲವರಂತೂ ತಮಗೆ ಬಂದ ಎಲ್ಲಾ ಬಾಕಿ ಮೊತ್ತವನ್ನು ಕಟ್ಟಡ ನಿರ್ಮಾಣಕ್ಕೆ ಕೊಟ್ಟು ಮಾದರಿಯಾಗಿದ್ದಾರೆ.

ಈ ಕಟ್ಟಡದಲ್ಲಿ ಒಂದು ಮಿನಿ ಹಾಲ್ ಹಾಗೂ ಮೂರು ಅತಿಥಿ ಗೃಹಗಳಿವೆ. ಬೆಂಗಳೂರಿಗೆ ದೇಶದ ಯಾವುದೇ ಮೂಲೆಯಿಂದ ಬರುವ ಕೇಂದ್ರ ಸರ್ಕಾರದ ಮಾಜಿ ನೌಕರರಿಗೆ ಇಲ್ಲಿ ತಂಗಲು ಅವಕಾಶವಿದೆ. ಸಂಘಟನೆಯಲ್ಲಿ ಬಲವಿದೆ ಎಂಬುದಕ್ಕೆ ಪಿಂಚಣಿದಾರರ ಭವನ ಉದಾಹರಣೆಯಾಗಿ ನಿಲ್ಲಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT