ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಚಗುಟ್ಟಿದ್ದ ಫ್ಲೆಚರ್

Last Updated 14 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಮೊದಲ ಎರಡು ಟೆಸ್ಟ್ ಪಂದ್ಯಗಳು ನಡೆದ ಅಂಗಳಗಳು ಸ್ವಿಂಗ್ ಹಾಗೂ ಸೀಮ್ ಬೌಲಿಂಗ್‌ಗೆ ನೆರವು ನೀಡಿದ್ದು ನಿಜ. ಮೂರನೇ  ಟೆಸ್ಟ್ ನಡೆಯುತ್ತಿರುವ ಪಿಚ್ ಕೂಡ ಅದೇ ರೀತಿಯದ್ದು. ನಾನು ಒಂದೇ ಗುಣದ ಮೂರು ಅಂಗಳ ನೋಡಿದ್ದು ಇದೇ ಮೊದಲು...!

-ಇಂಗ್ಲೆಂಡ್ ವಿರುದ್ಧ ಎಜ್‌ಬಾಸ್ಟನ್‌ನಲ್ಲಿ ನಡೆದ ಮೂರನೇ   ಟೆಸ್ಟ್‌ನ ಮೊದಲ ದಿನದಾಟದ ಬಳಿಕ ಭಾರತ ತಂಡದ ಕೋಚ್ ಡಂಕನ್ ಫ್ಲೆಚರ್ ಹೇಳಿದ್ದು ಹೀಗೆ. ಅವರ ಮಾತುಗಳಲ್ಲಿ ಹತಾಶೆ ಮತ್ತು ಅಸಹಾಯಕತೆ ಅಡಗಿತ್ತು ಎಂಬುದು ಸ್ಪಷ್ಟ. ಈ ಹಿಂದೆ ಇಂಗ್ಲೆಂಡ್‌ನ ಕೋಚ್ ಆಗಿದ್ದ ಫ್ಲೆಚರ್‌ಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಚೆನ್ನಾಗಿ ತಿಳಿದಿದೆ.

ಆದರೆ ಭಾರತ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಅದೇ ಫ್ಲೆಚರ್‌ಗೆ ಇಂಗ್ಲೆಂಡ್‌ನ ಪಿಚ್‌ಗಳು `ಭೂತ~ದ ಹಾಗೆ ಕಾಣತೊಡಗಿವೆ.

ಎಲ್ಲ ದೇಶದ ಕ್ರಿಕೆಟ್ ಸಂಸ್ಥೆಗಳೂ ತಮ್ಮ ತಂಡದ ಸಾಮರ್ಥ್ಯಕ್ಕೆ ಅನುಗುಣವಾಗಿ ಪಿಚ್ ಸಿದ್ಧಪಡಿಸುವುದು ವಾಡಿಕೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೂ (ಬಿಸಿಸಿಐ) ಇದರಿಂದ ಹೊರತಾಗಿಲ್ಲ. ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ವೆಸ್ಟ್‌ಇಂಡೀಸ್‌ನಂತಹ ತಂಡಗಳ ಶಕ್ತಿ ಅಡಗಿರುವುದು ವೇಗದ ಬೌಲಿಂಗ್‌ನಲ್ಲಿ. ಈ ಕಾರಣ ಅಲ್ಲಿ ವೇಗಿಗಳಿಗೆ ನೆರವು ನೀಡುವ ಪಿಚ್‌ಗಳು ಸಾಮಾನ್ಯ.

ವಿದೇಶಿ ತಂಡಗಳು ಆಗಮಿಸುವ ವೇಳೆ ಭಾರತದಲ್ಲಿ ಸ್ಪಿನ್ನರ್‌ಗಳಿಗೆ ನೆರವಾಗುವಂತಹ ಪಿಚ್‌ಗಳು ಸಿದ್ಧವಾಗಿರುತ್ತವೆ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ತಂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಸಂದರ್ಭದಲ್ಲೂ ಇಲ್ಲಿ ಪರದಾಟ ನಡೆಸಿತ್ತು.
ಸ್ಟುವರ್ಟ್ ಬ್ರಾಡ್, ಜೇಮ್ಸ ಆ್ಯಂಡರ್‌ಸನ್ ಮತ್ತು ಟಿಮ್ ಬ್ರೆಸ್ನನ್ ಅವರನ್ನೊಳಗೊಂಡ ಇಂಗ್ಲೆಂಡ್‌ನ ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ.

ಇವರಿಗೆ ಅನುಕೂಲಕರವಾಗುವಂತಹ ಪಿಚ್ ನಿರ್ಮಿಸಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮಹೇಂದ್ರ ಸಿಂಗ್ ದೋನಿ ಬಳಗದ ಆಗಮನಕ್ಕಾಗಿ ಕಾಯುತ್ತಿತ್ತು. ಭಾರತದ ಬ್ಯಾಟ್ಸ್‌ಮನ್‌ಗಳ ದೌರ್ಬಲ್ಯ ಏನೆಂಬುದು ಇಂಗ್ಲೆಂಡ್‌ಗೆ ಚೆನ್ನಾಗಿ ತಿಳಿದಿದೆ.

ಮೊದಲ ಎರಡು ಪಂದ್ಯಗಳು ನಡೆದ ಲಾರ್ಡ್ಸ್ ಮತ್ತು ಟ್ರೆಂಟ್‌ಬ್ರಿಜ್‌ನಲ್ಲಿ ಆತಿಥೇಯ ತಂಡದ ವೇಗಿಗಳು ತಮ್ಮ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಿದರು. ಎಜ್‌ಬಾಸ್ಟನ್‌ನಲ್ಲೂ ಅದು ಪುನರಾವರ್ತನೆಯಾಯಿತು.

ಕೊನೆಯ ಟೆಸ್ಟ್ ನಡೆಯುವ ಕೆನ್ನಿಂಗ್ಟನ್ ಓವಲ್‌ನಲ್ಲೂ ಇಂಗ್ಲೆಂಡ್ ವೇಗಿಗಳ ಆರ್ಭಟ ನಿರೀಕ್ಷಿಸಬಹುದು. ಆದರೆ ಭಾರತ ತಂಡ ಬ್ಯಾಟಿಂಗ್‌ನಲ್ಲಿ ವಿಫಲವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಫ್ಲೆಚರ್ ಸಿದ್ಧರಿಲ್ಲ. ಈ ಕಾರಣ ಅವರು ಪಿಚ್ ಮೇಲೆ `ಗೂಬೆ~ ಕೂರಿಸಿದ್ದಾರೆ.

ಭಾರತದ ಬ್ಯಾಟ್ಸ್‌ಮನ್‌ಗಳು ಸ್ವಿಂಗ್ ಆಗುವ ಚೆಂಡನ್ನು ಧೈರ್ಯದಿಂದ ಎದುರಿಸುವಲ್ಲಿಯೂ ವಿಫಲರಾಗಿದ್ದಾರೆ. `ಮೊದಲ ಮೂರು ಟೆಸ್ಟ್‌ಗೆ ಏಕಪ್ರಕಾರದ ಪಿಚ್ ಸಜ್ಜುಗೊಳಿಸಿದ್ದೇ ಹೀಗೆ ಆಗಲು ಕಾರಣ~ ಎನ್ನುವುದು ಫ್ಲೆಚರ್ ದೂರು.

ಇಂಗ್ಲೆಂಡ್‌ನ ಬೌಲರ್‌ಗಳು ಮಿಂಚುತ್ತಿದ್ದರೆ, ಭಾರತದ ಬೌಲರ್‌ಗಳಿಗೆ ಏನಾಗಿದೆ ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ. ಜಹೀರ್ ಖಾನ್ ಅನುಪಸ್ಥಿತಿಯಿಂದಾಗಿ ಭಾರತದ ಬೌಲಿಂಗ್ ವಿಭಾಗದ ಬೆನ್ನೆಲುಬು ಮುರಿದಿದೆ.  ಎದುರಾಳಿ ಬ್ಯಾಟ್ಸ್ ಮನ್‌ಗಳಲ್ಲಿ ನಡುಕ ಹುಟ್ಟಿಸುವ ರೀತಿಯಲ್ಲಿ ಚೆಂಡೆಸುವ ವೇಗಿಗಳು ತಂಡದಲ್ಲಿಲ್ಲ.

2007 ರಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಯಶಸ್ಸು ಸಾಧಿಸುವಲ್ಲಿ ಜಹೀರ್ ಪಾತ್ರ ಪ್ರಮುಖವಾಗಿತ್ತು. ಅವರ ಅನುಪಸ್ಥಿತಿಯಲ್ಲಿ ಇಶಾಂತ್ ಶರ್ಮ ಮತ್ತು ಪ್ರವೀಣ್ ಕುಮಾರ್ ಮೇಲೆ ಹೆಚ್ಚಿನ ಭಾರ ಬಿದ್ದಿದೆ. ವೆಸ್ಟ್ ಇಂಡೀಸ್ ಪ್ರವಾಸದ ಸಂದರ್ಭದಲ್ಲೂ ಇದೇ ಸಮಸ್ಯೆ ಎದುರಾಗಿತ್ತು. ಆದರೆ ವಿಂಡೀಸ್ ತಂಡ ಹಳೆಯ ಫಾರ್ಮ್ ನಲ್ಲಿಲ್ಲದ್ದರಿಂದ ಇವರಿಬ್ಬರು ಹೇಗೋ ಯಶಸ್ಸು ಸಾಧಿಸಿದ್ದರು.

ಇದೀಗ ಇಂಗ್ಲೆಂಡ್‌ನ ನೆಲದಲ್ಲಿ ಇವರಿಗೆ ನಿಜವಾದ ಅಗ್ನಿಪರೀಕ್ಷೆ ಎದು ರಾಗಿದೆ. ಅದನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಇಶಾಂತ್ ಮತ್ತು ಪ್ರವೀಣ್ ಕ್ರಮವಾಗಿ ಈಗಾಗಲೇ 130 ಹಾಗೂ 150 ಓವರ್‌ಗಳನ್ನು (ಎಜ್‌ಬಾಸ್ಟನ್   ಟೆಸ್ಟ್‌ನ ಎರಡನೇ ದಿನದಾಟದ ವೇಳೆಗೆ) ಎಸೆದಿದ್ದಾರೆ. ಆದರೆ ನಾಲ್ಕು ವರ್ಷಗಳ ಹಿಂದೆ ಜಹೀರ್ ಇಂಗ್ಲೆಂಡ್‌ನಲ್ಲಿ 136 ಓವರ್‌ಗಳನ್ನು ಮಾತ್ರ ಎಸೆದಿದ್ದರು. ಮಾತ್ರವಲ್ಲ 18 ವಿಕೆಟ್ ಪಡೆದಿದ್ದರು. 

ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡಾ ದುರ್ಬಲವಾಗಿರುವ ಕಾರಣ ಪ್ರಸಕ್ತ ಇಂಗ್ಲೆಂಡ್ ಪ್ರವಾಸ ಭಾರತ ತಂಡಕ್ಕೆ `ದುರಂತ~ವಾಗಿ ಪರಿಣಮಿಸಿದೆ. ಆದರೆ ಫ್ಲೆಚರ್ ಅದನ್ನು ಒಪ್ಪುತ್ತಿಲ್ಲ. 
            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT