ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಬ್ಲ್ಯುಡಿ ಕಾರ್ಯದರ್ಶಿ ಕಚೇರಿ ಜಪ್ತಿ ಯತ್ನ

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ವಿಕಾಸಸೌಧದಲ್ಲಿರುವ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕಚೇರಿಯ ಜಪ್ತಿಗೆ ಮುಂದಾದ ಪ್ರಕರಣ ಶನಿವಾರ ನಡೆಯಿತು.

ಗುತ್ತಿಗೆದಾರ ಬಿ.ಬಾಬುರಾವ್ ಅವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಣ ಪಾವತಿಸದ ಕಾರಣ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ 3,73,486 ರೂಪಾಯಿಗಳನ್ನು ಶೇ 6ರ ಬಡ್ಡಿ ಸಹಿತ ಪಾವತಿಸುವಂತೆ ಆದೇಶಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಪ್ರಾಧಿಕಾರದವರು ಹೈಕೋರ್ಟ್ ಮೊರೆ ಹೋದರು. ಆದರೆ ಹೈಕೋರ್ಟ್ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿತು.

ಇಷ್ಟಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಣ ಪಾವತಿಸದ ಕಾರಣ ಮತ್ತೆ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯ ನೋಟಿಸ್ ನೀಡಿದರೂ ಹಣ ಪಾವತಿಸದ ಕಾರಣ ಜಪ್ತಿಗೆ ಆದೇಶಿಸಿತ್ತು. ಬಡ್ಡಿ ಮೊತ್ತವೂ ಸೇರಿದಂತೆ ಒಟ್ಟು 8,80,663 ರೂಪಾಯಿ ಪಾವತಿಸುವಂತೆ ನಗರದ ಸಿವಿಲ್ ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಚೇರಿ ಜಪ್ತಿಗೆ ಪ್ರಯತ್ನ ನಡೆಯಿತು. ಆದರೆ ಇಲಾಖೆಯ ಉಪ ಕಾರ್ಯದರ್ಶಿ ಕೆ.ಬಿ.ಕುಲಕರ್ಣಿ ಅವರು ಒಂದು ವಾರದಲ್ಲಿ ಹಣ ಪಾವತಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜಪ್ತಿ ಯತ್ನವನ್ನು ಕೈಬಿಡಲಾಯಿತು.

ಭರತ್ ಕನ್‌ಸ್ಟ್ರಕ್ಷನ್ ಕಂಪೆನಿ 1985ರಲ್ಲಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ- 48ರ ವಿಸ್ತರಣೆ ಕಾರ್ಯವನ್ನು ಪೂರ್ಣಗೊಳಿಸಿತ್ತು. ಆದರೆ ಇದುವರೆಗೆ ಬಾಕಿ ಹಣ ಪಾವತಿಸಿಲ್ಲ ಎಂದು ಬಾಬುರಾವ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT