ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಲಿ ಗೊಬ್ಬುದ ಪಿಲಿ ರಾಜೆರ್!

Last Updated 22 ಅಕ್ಟೋಬರ್ 2012, 7:20 IST
ಅಕ್ಷರ ಗಾತ್ರ

ಮಂಗಳೂರಿನ ದಸರಾ ಸಂಭ್ರಮಕ್ಕೂ ಹುಲಿಗಳ ಘರ್ಜನೆಗೂ ಅವಿನಾಭಾವ ಸಂಬಂಧ. ಅಲ್ಲವೆ ಮತ್ತೆ? ತಾಸೆಯವರ ಕಿವಿಗಡಚಿಕ್ಕುವ ಆರ್ಭಟದ ನಾದಕ್ಕೆ ಸರಿಯಾಗಿ ಹುಲಿಗಳು ಹೆಜ್ಜೆ ಇಟ್ಟರೆ ಹದಿಹರೆಯದವರಿಂದ ಹಿಡಿದು ಮುದಿಹರೆಯದವರಿಗೂ ರೋಮಾಂಚನ, ಖುಷಿ.

ನವರಾತ್ರಿಯ ಹೊತ್ತಿನಲ್ಲಿ ಹುಲಿ ವೇಷ ಹಾಕಿ ರಸ್ತೆಗಿಳಿಯುವುದೆಂದರೆ `ಕುಡ್ಲ~ದ ಹೈಕಳಿಗೆ, ಚಿಗುರು ಮೀಸೆಯ ಜವ್ವನರಿಗೆ ಅದೇನೊ ಹುರುಪು, ಅದೇನೊ ಕೆಚ್ಚು. ಹಾಗಾಗಿಯೇ ನವರಾತ್ರಿಯ ಹೊತ್ತಿನಲ್ಲಿ ಹಲವು ಹುಲಿಗಳ ತಂಡ `ಕುಡ್ಲ~ದ ರಸ್ತೆಗಿಳಿಯುತ್ತವೆ. ಮೆರವಣಿಗೆಗೆ ರಂಗು ಮೂಡಿಸುತ್ತವೆ. ಮಂಗಳೂರಿನಲ್ಲಿ ವರ್ಷ ವರ್ಷವೂ ಹುಲಿ ವೇಷ ಹಾಕುವವರ ಸಂಖ್ಯೆ ಏರುತ್ತಿದೆ. ಹುಲಿ ತಂಡಗಳ ಸಂಖ್ಯೆಯೂ ಹೆಚ್ಚುತ್ತಿದೆ. ಗೋರಕ್ಷ ದಂಡು, ಎಂಜಿಟಿ, ರಾಜಲಕ್ಷ್ಮಿ, ಎಂಎಫ್‌ಸಿ, ಜೈನ್ ಫ್ರೆಂಡ್ಸ್, ಬರ್ಕೆ ಫ್ರೆಂಡ್ಸ್, ಗೆಳೆಯರ ಬಳಗ ಹೀಗೆ ಆಯಾಯ ಪ್ರದೇಶದ ಹುಲಿ ವೇಷದ ತಂಡಗಳು ಮಂಗಳೂರಿನಲ್ಲಿ ಸಾಕಷ್ಟು ಇವೆ. ಒಂದು ಅಂದಾಜಿನ ಪ್ರಕಾರ ಕರಾವಳಿಯಲ್ಲಿ 50ಕ್ಕೂ ಮಿಕ್ಕಿ ಹುಲಿ ವೇಷದ ತಂಡಗಳಿವೆಯಂತೆ!

ಅಂಥ ಹುಲಿಗಳ ತಂಡಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದು ಜಪ್ಪು ಮಹಾಕಾಳಿಪಡ್ಪು ಇಲ್ಲಿನ `ಶ್ರೀ ಆದಿ ಮಹೇಶ್ವರಿ ಹುಲಿ ತಂಡ~. ಈ ತಂಡದಲ್ಲೊಂದು ಹೆಬ್ಬುಲಿ~ ಇದೆ! ಅದರ ಹಸರೇ `ಪಿಲಿರಾಜೆ~! ಹುಲಿ ವೇಷಕ್ಕೆ ಹೆಸರಾದ ತಂಡದ ದೇವರಾಜ್ `ಪಿಲಿ ರಾಜೆರ್~ ಎಂದೇ ಹೆಸರಾಗಿದ್ದಾರೆ. ಜಪ್ಪು ಮಹಾಕಾಳಿಪಡ್ಪುವಿನ ಶ್ರೀ ಆದಿ ಮಹೇಶ್ವರಿ ಫ್ರೆಂಡ್ಸ್ ಬಳಗದ ಗೆಳೆಯರು `ಟೈಗರ್ ಕ್ಯಾಂಪ್~ ಎಂಬ ತಂಡ ಹುಟ್ಟು ಹಾಕಿದ್ದಾರೆ. ಈ ಕ್ಯಾಂಪ್‌ನ ಗುರ‌್ಕಾರನೇ ಈ ಪಿಲಿರಾಜ!

ವೃತ್ತಿಯಲ್ಲಿ ಚಾಲಕರಾಗಿರುವ 44ರ ಹರೆಯದ ಯುವರಾಜ್ ಸತತ 35 ವರ್ಷಗಳಿಂದ ದಸರಾ ಸಂದರ್ಭದಲ್ಲಿ ಹುಲಿ ವೇಷ ಹಾಕಿದ್ದಾರೆ. ಹಲವು ಮರಿ ಹುಲಿಗಳನ್ನು ಹುಟ್ಟು ಹಾಕಿ ಹುಲಿ ವೇಷದ ಪಟ್ಟುಗಳನ್ನು ಕಲಿಸಿದ್ದಾರೆ. ಈ `ಹುಲಿರಾಜ~ರನ್ನು ಕಂಡರೆ ಮರಿ ಹುಲಿಗಳಿಗೆ ಸಹಜವಾಗಿಯೇ ಗೌರವ ಭಾವ.

40 ವರ್ಷಗಳ ಹಿಂದೆ ಏನೂ ಅಲ್ಲದ ದೇವರಾಜ `ಪಿಲಿರಾಜ~ ಆದದ್ದು ಹೇಗೆ? ಬಹುಶಃ ಇದರ ಹಿಂದೆ ದೇವಿಯ ಪ್ರೇರಣೆ ಇದೆ ಎಂಬುದು ಅವರ ನಂಬಿಕೆ. ದೇವರಾಜರು ಒಂದನೇ ತರಗತಿಯಲ್ಲಿದ್ದಾಗ ವಿಪರೀತ ಜ್ವರ ಬಂದಿತ್ತು.

ಏನೇ ಮಾಡಿದರೂ ಜ್ವರ ಕಡಿಮೆಯಾಗಲಿಲ್ಲ. ಖರ್ಚಿಗೆ ಕಾಸೂ ಇರಲಿಲ್ಲ. ಆಗ ರಾಜರ ತಾಯಿ ಮೊರೆ ಹೋದದ್ದು ಮಂಗಳಾದೇವಿಗೆ. `ಮಗನ ಜ್ವರ ಕಡಿಮೆಯಾದರೆ ಅಮ್ಮಾ.. ನಿನ್ನ ಎದುರಲ್ಲಿ ದೇವರಾಜನಿಗೆ ಹುಲಿ ವೇಷ ಹಾಕಿಸಿ ಕುಣಿಸುತ್ತೇನೆ~ ಎಂದು ಹರಕೆ ಹೊತ್ತರು. ದೇವಿಯ ಮಹಿಮೆಯಿಂದ ಜ್ವರ ಕಡಿಮೆಯಾಯಿತು. ಆ ವರ್ಷದಿಂದ ದಸರಾಕ್ಕೆ ಹುಲಿ ವೇಷ ಹಾಕಲು ಶುರು ಮಾಡಿದ ದೇವರಾಜ್ ಒಂದು ವರ್ಷವೂ ತಪ್ಪಲಿಲ್ಲ. ಅವರ ಹುಲಿ ವೇಷದ ಸೇವೆ ಇಂದಿಗೂ ಮುಂದುವರಿದಿದೆ. `ಯಾವಾಗದಿಂದ ಹುಲಿ ವೇಷ ಹಾಕಿದೆನೊ ಅಲ್ಲಿಂದ ಇಲ್ಲಿಯವರೆಗೆ ಆರೋಗ್ಯ ಕೆಟ್ಟಿಲ್ಲ. ಇದು ದೇವಿಯ ಕೃಪೆ. ದೇಹ ಗಟ್ಟಿಮುಟ್ಟಾಗಿರುವವರೆಗೆ ದೇವಿಗೆ ಈ ಸೇವೆ ನಿಲ್ಲದು~ ಎನ್ನುತ್ತಾರೆ ದೇವರಾಜ್.

`ಹುಲಿ ಎಂದರೆ ದೇವಿಯ ಸೇವಕ. ಹುಲಿ ಎಂದರೆ ದೇವಿಯ ವಾಹನ. ಹುಲಿ ವೇಷ ಹಾಕುವುದರ ಹಿಂದೆ ಈ ದೈವಿಕ ಭಾವನೆ ಇದೆ. ಹಿಂದೆ ಹುಲಿ ವೇಷ ಹಾಕುವವರು ವ್ರತದಲ್ಲಿ ಇರಬೇಕು. ಮಾಂಸಾಹಾರವಾಗಲಿ, ಮದ್ಯ ಸೇವನೆಯಾಗಲಿ ನಿಷಿದ್ಧವಾಗಿತ್ತು. ಅಷ್ಟೇ ಅಲ್ಲ, ಮನೆಗೂ ಹೋಗುವಂತಿರಲಿಲ್ಲ. ಚಾಪೆಯಲ್ಲಿ ಮಲಗಿದರೆ ಮೈಗೆ ಬಳಿದ ಪೇಂಟ್ ಹದಗೆಡುತ್ತದೆ ಎಂದು ಕೆಸು (ಮೂಂಡಿ) ಎಲೆಯಲ್ಲಿ ಮಲಗುತ್ತಿದ್ದೆವು~ ಎಂದು ಅಂದಿನ ವೇಷಧಾರಿಗಳ ಭಕ್ತಿ ಹಾಗೂ ಬದ್ಧತೆಯನ್ನು ನೆನಪಿಸಿಕೊಳ್ಳುತ್ತಾರೆ ದೇವರಾಜ್.

ಹುಲಿ ವೇಷ ಧರಿಸುವುದೆಂದರೆ ಅಷ್ಟು ಸುಲಭವಲ್ಲ. ಗಂಟೆಗಟ್ಟಲೆ ನಿಂತು ಬರೀ ಮೈಗೆ ಗಾಢ ಪೇಂಟ್ ಮೆತ್ತಿಕೊಳ್ಳಬೇಕು. ಸುಡುವ ಬಿಸಿಲು, ದಹಿಸುವ ಸೆಕೆಯನ್ನು ಸಹಿಸಿಕೊಳ್ಳಬೇಕು. ತಾಸೆಯವರ ನಾದಕ್ಕೆ ಹೆಜ್ಜೆ (ಪೌಲೊ) ಹಾಕಿ ರಂಜಿಸಬೇಕು. ಇಷ್ಟೇ ಅಲ್ಲ ರಂಜನೆಯ ಜತೆಗೆ `ತಾಕತ್ತಿ~ನ ಪ್ರದರ್ಶನವೂ ಆಗಬೇಕು. ಅಂದರೆ ಹುಲಿ ವೇಷಧಾರಿಯ ಶಕ್ತಿ, ಯುಕ್ತಿ ದರ್ಶನ!

ಹುಲಿ ವೇಷಧಾರಿ ಹಿಮ್ಮುಖವಾಗಿ ಬಾಗಿ ಬಾಯಿಯಿಂದ ನೋಟು ಎತ್ತುವುದು, 40ಕ್ಕೂ ಹೆಚ್ಚು ತೂಕದ ಅಕ್ಕಿ ಮುಡಿಯನ್ನು ಹಲ್ಲಿನಲ್ಲಿ ಕಚ್ಚಿ  ಹಿಡಿದು ತಲೆ ಮೇಲೆ ಎತ್ತಿ ಹಿಮ್ಮುಖವಾಗಿ ಎಸೆಯುವುದು ಇತ್ಯಾದಿ.
ದೇವರಾಜ್ ಇಂಥ ಶಕ್ತಿ, ಯುಕ್ತಿಯ ಪ್ರದರ್ಶನದಲ್ಲಿ ಹೆಸರು ಮಾಡಿದವರು. ತಂಡದಲ್ಲಿ `ಅಪ್ಪೆ ಪಿಲಿ~ (ತಾಯಿ ಹುಲಿ) ಹೆಬ್ಬುಲಿಯ ವೇಷ ತೊಡುವ ದೇವರಾಜ್ ಹತ್ತು ವರ್ಷಗಳ ಹಿಂದೆ ಸುಮಾರು ಕೊಬ್ಬಿದ ಕುರಿಯನ್ನು ಆಡಿಸಿ ಹಲ್ಲಿನಲ್ಲಿ ಕಚ್ಚಿ ಹಿಮ್ಮುಖವಾಗಿ ಎಸೆಯುತ್ತಿದ್ದರು. ಆದರೆ ಈಗ ಇಂಥ ಕುರಿ ಪ್ರದರ್ಶನಕ್ಕೆ ನಿಷೇಧ ಇದೆ. ಈಗ ಕುರಿ ಬದಲು ಸುಮಾರು 40 ಕೆ.ಜಿ.ತೂಕದ ಅಕ್ಕಿ ಮುಡಿಯನ್ನು ದೇವರಾಜರೇ ಹಲ್ಲಿನಲ್ಲಿ ಕಚ್ಚಿ ಎತ್ತಿ ಹಿಮ್ಮುಖ ಎಸೆಯುತ್ತಾರೆ.

`ಇಂಥ ಶಕ್ತಿ ಪ್ರದರ್ಶನದ ಆಟಕ್ಕೆ ಶಕ್ತಿಯೊಂದಿದ್ದರೆ ಸಾಲದು ಜತೆಗೆ ಯುಕ್ತಿಯೂ ಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಸಾಹಸ ಪ್ರದರ್ಶನದಲ್ಲಿ ಹಲ್ಲು ಕಿತ್ತು ಬರುವುದು ಸಾಮಾನ್ಯ. ಹಲ್ಲಿನಲ್ಲಿ ಭಾರ ಎತ್ತುವಾಗ ಕತ್ತು ಹಾಗೂ ನರಗಳಿಗೆ ಏಟಾಗದಂತೆ ಎಚ್ಚರವಹಿಸಬೇಕು~ ಎನ್ನುತ್ತಾರೆ ದೇವರಾಜ್.

ದೇವರಾಜರ `ಶ್ರೀ ಆದಿಮಹೇಶ್ವರಿ ಹುಲಿ~ ತಂಡ ಫ್ರಾನ್ಸ್, ಜರ್ಮನಿಯಲ್ಲಿ ನಡೆದ ಕಲಾ ಮೇಳಗಳಲ್ಲಿ ಭಾಗವಹಿಸಿದೆ. ದುಬೈ, ಕತಾರ್, ಮುಂಬೈನಲ್ಲೂ ಪ್ರದರ್ಶನ ನೀಡಿದೆ. ಸೆಂಚುರಿ ವೈಲ್ಡ್‌ಲೈಫ್ ಪ್ರಶಸ್ತಿ, ಎಬಿಎನ್ ಆಮ್ರ ಬ್ಯಾಂಕ್ ಮುಂಬೈ ಹಾಗೂ ಈ ಡಿಸ್ಕವರಿ ವಾಹಿನಿಯ ಪ್ರಶಸ್ತಿಗಳು ಸೇರಿದಂತೆ ಹಲವು ಪುರಸ್ಕಾರಗಳು ದೇವರಾಜರ ತಂಡಕ್ಕೆ ಸಂದಿವೆ.

`ಈಗ ಹುಲಿ ವೇಷದ ತಂಡ ಕಟ್ಟಿ ಆಟಕ್ಕಿಳಿಸುವುದು ಈಗ ಅಷ್ಟು ಸುಲಭವಲ್ಲ. ಏಕೆಂದರೆ ಈಗ ಹುಲಿ ವೇಷವೆಂದರೆ ದೈವಿಕ ಭಾವನೆಗಿಂತ ಹೆಚ್ಚಾಗಿ ಅದೊಂದು ಫ್ಯಾಷನ್ ಆಗಿ ಬಿಟ್ಟಿದೆ. ಹುಲಿ ವೇಷಗಾರರಲ್ಲಿ ಹಿಂದಿನ ಬದ್ಧತೆ ಇಲ್ಲ. ಹಿಂದೆ ಹುಲಿ ವೇಷದ ತಂಡವೊಂದರಲ್ಲಿ ಏಳೆಂಟು ಕಲಾವಿದರು ಇರುತ್ತಿದ್ದರು. ಆದರೆ ಈಗ ಕೆಲವು ತಂಡಗಳಲ್ಲಿ 50ಕ್ಕೂ ಮಿಕ್ಕಿ ಹುಲಿ ವೇಷಗಳಿರುತ್ತವೆ. ದೈವಿಕ ಭಕ್ತಿಯ ಬದಲು ಮೋಜು ಹಾಗೂ ಕಮರ್ಷಿಯಲ್ ಭಾವನೆ ಹೆಚ್ಚಾಗುತ್ತಿದೆ~ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರಾಜರು.

ಅಂದ ಹಾಗೆ `ಪಿಲಿರಾಜ~ರ ಶ್ರೀ ಆದಿಮಹೇಶ್ವರಿ ಹುಲಿ ಬಳಗವನ್ನು ಇದೇ 24ರಂದು ಮತ್ತೆ ಕಾಣಬಹುದು. ಅಂದು ನಡೆಯಲಿರುವ ಶ್ರೀ ಮಹತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನದ ರಥೋತ್ಸವದ ಸಲುವಾಗಿ ಹುಲಿಗಳು ಹೆಜ್ಜೆ ಹಾಕಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT