ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷ ಪ್ರಾಧಾನ್ಯದ ವಿರುದ್ಧ ಶರ್ಮಿಳಾ ದನಿ

ಪಂಚರಂಗಿ
Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಚಿತ್ರರಂಗದ ಹೆಮ್ಮೆಯ ನಟಿ ಎನಿಸಿಕೊಂಡಿದ್ದ ಶರ್ಮಿಳಾ ಟ್ಯಾಗೋರ್‌ ‘ವಯಸ್ಸಾದ ಮಹಿಳೆಯರ ಬದುಕನ್ನು ಚಿತ್ರಿಸುವ ಸ್ಕ್ರಿಪ್ಟ್‌ಗಳೇ ಇತ್ತೀಚೆಗೆ  ರಚನೆಯಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸಿನಿಮಾಗಳಲ್ಲಿ ಇಂದಿಗೂ ಪುರುಷ ಪ್ರಾಧಾನ್ಯವಿದೆ. ಅವರಿಗಾಗಿಯೇ ಸ್ಕ್ರಿಪ್ಟ್‌ಗಳು ತಯಾರಾಗುತ್ತಿವೆ. ಆದರೆ ವಯಸ್ಸಾಗುತ್ತಿದ್ದಂತೆ ಸಿನಿಮಾ ಕ್ಷೇತ್ರವೂ ಮಹಿಳೆಯರನ್ನು ದೂರ ಇಡುತ್ತಿದೆ ಎಂದು ಅವರು ದೂರಿದ್ದಾರೆ.

ಅರವತ್ತೆಂಟು ವರ್ಷದವರಾದ ಶರ್ಮಿಳಾ, ‘ಅಮಿತಾಭ್‌ ಬಚ್ಚನ್‌, ಅನುಪಮ್‌ ಖೇರ್‌ ಹಾಗೂ ನಾಸಿರುದ್ದೀನ್‌ ಷಾ ತರಹದವರು ಇನ್ನೂ ಬಾಲಿವುಡ್‌ ಆಳುತ್ತಿದ್ದಾರೆ. ಆದರೆ ಅವರದ್ದೇ ವಯಸ್ಸಿನ ನಟೀಮಣಿಯರು ಎಲ್ಲಿಯೋ ಕಳೆದುಹೋಗಿದ್ದಾರೆ. ಅವರಿಗಾಗಿ ಸಿನಿಮಾಗಳು ಬರುತ್ತಲೇ ಇಲ್ಲ’ ಎಂದು ಹೇಳಿದ್ದಾರೆ.

‘ನಲವತ್ತು ವರ್ಷವಾದರೂ ಗಂಡಸರು ತಮಗಿಂತ ತೀರಾ ಚಿಕ್ಕವರೊಂದಿಗೆ ರೋಮ್ಯಾನ್ಸ್‌ ಮಾಡುವುದು ಸಾಮಾನ್ಯವಾಗಿದೆ. ಆದರೆ ಮಹಿಳೆಯರ ವಿಷಯಕ್ಕೆ ಬಂದರೆ ತೀರಾ ತದ್ವಿರುದ್ಧ. ವಯಸ್ಸಾದರೂ ಅಮಿತಾಭ್‌ಗಾಗಿ, ಅನುಪಮ್‌ ಖೇರ್‌ಗಾಗಿ, ನಾಸಿರುದ್ದೀನ್‌ ಷಾಗಾಗಿಯೇ ಸ್ಕ್ರಿಪ್ಟ್‌ಗಳು ಹುಟ್ಟಿಕೊಳ್ಳುತ್ತಿವೆ’ ಎಂದಿದ್ದಾರೆ ಅವರು.

ಇತ್ತೀಚೆಗೆ ನಡೆದ ‘ಭಾರತೀಯ ಸಿನಿಮಾ ಹಾಗೂ ಅದರಾಚೆಗಿನ ಮಹಿಳಾ ಪ್ರಾತಿನಿಧ್ಯ’ ಕುರಿತಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಶರ್ಮಿಳಾ ತಮ್ಮ ಮನದ ಮಾತನ್ನು ಹೊರಹಾಕಿದ್ದಾರೆ. ‘ಶರ್ಮಿಳಾ ಪ್ರಕಾರ ಇತ್ತೀಚಿನ ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳು ಕೇವಲ ಅಲಂಕಾರಿಕವಷ್ಟೇ. ತೀರಾ ವೈಭವೀಕರಿಸಿದ ಪಾತ್ರಗಳು ಅವಾಗಿದ್ದು, ಆದ್ಯತೆ ಮಾತ್ರ ಕಡಿಮೆ ಆಗಿದೆ. ಆದರೆ ಕೆಲವು ಪ್ಯಾರಲಲ್‌ ಸಿನಿಮಾಗಳು ಹಾಗೂ ಪ್ರಾದೇಶಿಕ ಚಿತ್ರಗಳಲ್ಲಿ ಮಹಿಳೆಯರನ್ನೂ ವಿಭಿನ್ನವಾಗಿ ಚಿತ್ರಿಸುತ್ತಾರೆ ಎಂಬುದು ನಿರೀಕ್ಷೆಯನ್ನು ಹೆಚ್ಚಿಸಿದೆ. ಆದರೆ ಹಿಂದಿ ರಂಗಭೂಮಿ ಮಾತ್ರ ಪುರುಷ ಪ್ರಧಾನ ಸಿನಿಮಾಗಳನ್ನೇ ನೀಡುತ್ತಿವೆ’ ಎಂದಿದ್ದಾರೆ.

1959ರ ವೇಳೆಗೇ ಬಾಲನಟಿಯಾಗಿ ಬಂಗಾಲಿ ಸಿನಿಮಾವೊಂದರಲ್ಲಿ ಅಭಿನಯಿಸಿದ್ದ ಶರ್ಮಿಳಾ ಅವರಿಗೆ ಶಾಲೆ ಬಿಟ್ಟು ತೆರಳುವಂತೆ ಮುಖ್ಯೋಪಾಧ್ಯಾಯರು ಆ ಸಂದರ್ಭದಲ್ಲಿ ಹೇಳಿದ್ದರಂತೆ. ಇಲ್ಲವಾದಲ್ಲಿ ಉಳಿದ ಹೆಣ್ಣುಮಕ್ಕಳೂ ಕೆಟ್ಟದಾರಿ ಹಿಡಿಯುತ್ತಾರೆ ಎಂಬ ಆತಂಕ ಅವರಿಗಿತ್ತಂತೆ. ಆ ಕಾಲದಲ್ಲಿ ಸಿನಿಮಾರಂಗ ಕೆಳವರ್ಗದ ವೃತ್ತಿ ಎಂಬ ನಂಬಿಕೆ ಮಹಿಳೆಯರಿಗೂ ಇತ್ತು. ಆದರೆ ಕ್ರಿಕೆಟಿಗ ಮನ್ಸೂರ್‌ ಅಲಿ ಖಾನ್‌ ಅವರನ್ನು ಮದುವೆ ಆದಾಗಿನಿಂದ ತಮ್ಮ ಬದುಕೇ ಬದಲಾಯಿತು ಎಂದು ಅವರು ಇದೇ ಸಂದರ್ಭದಲ್ಲಿ ನೆನೆಸಿಕೊಂಡಿದ್ದಾರೆ.

ಇತ್ತೀಚೆಗೆ ಎಲ್ಲಾ ರಾಜಕೀಯ ಪಕ್ಷಗಳು ‘ಮಹಿಳಾ ಸಬಲೀಕರಣ’ಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ ಎಂಬುದು ಶರ್ಮಿಳಾ ಅವರಿಗೆ ಖುಷಿ ನೀಡಿದೆಯಂತೆ. ಹೀಗಾಗಿ 21ನೇ ಶತಮಾನದ ದ್ವಿತೀಯಾರ್ಧದಲ್ಲಿ ಭಾರತೀಯ ಮಹಿಳೆಯರಿಗೆ ಕಾನೂನಿನಿಂದಲೇ ರಕ್ಷಣೆ ಸಿಗುವ ಭರವಸೆ ಇದೆ ಎಂದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT