ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷೋತ್ತಮನ ಪರಕಾಯ ಪ್ರವೇಶ

Last Updated 13 ಫೆಬ್ರುವರಿ 2011, 6:25 IST
ಅಕ್ಷರ ಗಾತ್ರ

ಬಳ್ಳಾರಿ:  ಕಂದಗಲ್ ಹನುಮಂತರಾಯರು ರಚಿಸಿದ ‘ರಕ್ತರಾತ್ರಿ’ ನಾಟಕ ಎಂದರೆ ಈಗಲೂ ರಂಗಾಸಕ್ತರು ರಾತ್ರಿಯಿಡೀ ಕುಳಿತು ಆಸಕ್ತಿಯಿಂದ  ನೋಡುವಂಥದ್ದು.

ಉತ್ತರ ಕರ್ನಾಟಕದಾದ್ಯಂತ ಮನೆಮಾತಾಗಿರುವ ಈ ನಾಟಕದಲ್ಲಿ ಪಾತ್ರ ಮಾಡಬೇಕೆಂಬುದು ಬಹುತೇಕ ಕಲಾವಿದರ ಕನಸೂ ಆಗಿರುವುದು ರಕ್ತರಾತ್ರಿಯ ವೈಶಿಷ್ಟ್ಯ.

ಪ್ರತಿ ಪಾತ್ರವೂ ಒಂದು ಕಥೆ ಹೇಳುತ್ತ, ಪ್ರೇಕ್ಷಕರಿಗೆ ಮಾದರಿಯಾಗುತ್ತ ಹೋಗುವುದೇ ಈ ನಾಟಕದ ಯಶಸ್ಸಿನ ಹಿನ್ನೆಲೆ. 50 ವರ್ಷಗಳ ಹಿಂದೆ, ಮಹಾಭಾರತದ ಪ್ರಸಂಗಗಳನ್ನು ಆಧರಿಸಿ ರಚಿಸಿದ ಈ ನಾಟಕ, ಪ್ರಸ್ತುತದ, ಹೊಸ ಕಾಲಘಟ್ಟಕ್ಕೂ ಸೂಕ್ತವಾಗಿ ಹೊಂದಿ ಕೊಳ್ಳುತ್ತ, ರಾಜಕೀಯ, ಸಾಮಾಜಿಕ ಬೆಳವಣಿಗೆಯನ್ನು ಆಗಲೇ ಬಿಂಬಿಸಿರುವುದೇ ನಾಟಕಕಾರ ಕಂದಗಲ್ ಹನುಮಂತರಾಯರ ಹೆಗ್ಗಳಿಕೆ.

ಬಳ್ಳಾರಿ ತಾಲ್ಲೂಕಿನ ಹಂದ್ಯಾಳ್ ಗ್ರಾಮದ ನಟ ಜಿ.ಎಚ್. ಪುರುಷೋತ್ತಮ ಇದೇ ರಕ್ತರಾತ್ರಿ ನಾಟಕದಿಂದ ಬೆಳಕಿಗೆ ಬಂದವರು. ಕೌರವರ ಪರವಾಗಿರುವಂತೆ ನಟಿಸಿ, ಅವರ ನಾಶಕ್ಕೆ ಷಡ್ಯಂತ್ರ ರೂಪಿಸುವ ಶಕುನಿಮಾಮನ ಕುತಂತ್ರಿಯ ಪಾತ್ರದ ಮೂಲಕ ಗಮನ ಸೆಳೆದ ಇವರು, ಹತ್ತಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡವರು.

ವೃತ್ತಿಯಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿರುವ ಪುರುಷೋತ್ತಮ, ಪಾತ್ರಗಳ ಪರಕಾಯ ಪ್ರವೇಶ ಮಾಡಿದಂತೆ, ಆ ಪಾತ್ರದಲ್ಲಿ ತಾನೇತಾನಾಗಿ, ತಲ್ಲೆನನಾಗಿ ನಟಿಸುವ ಮೂಲಕ ಪ್ರೇಕ್ಷಕರ ಮನಸಲ್ಲಿ ಮನೆ ಮಾಡಿದ್ದಾರೆ.

ತಂದೆ ಹಂದ್ಯಾಳ್ ಹನುಮಂತಪ್ಪ ಅವರೂ ಹವ್ಯಾಸಿ ಕಲಾವಿದರಾಗಿ, ಜಾತ್ರೆ, ಹಬ್ಬ- ಹರಿದಿನಗಳು, ಉತ್ಸವದ ಸಂದರ್ಭ ಸ್ನೇಹಿತರನ್ನು ಒಂದುಗೂಡಿಸಿ ಗ್ರಾಮದಲ್ಲಿ ಆಡುತ್ತಿದ್ದ ನಾಟಕಗಳನ್ನು ನೋಡುತ್ತ ಬೆಳೆದ ಪುರುಷೋತ್ತಮ ಶಾಲಾ ಹಂತದಲ್ಲೇ ಕಲೆಯತ್ತ ಆಕರ್ಷಿತರಾದವರು.

1985ರಲ್ಲಿ ಛಾಯಾಗ್ರಾಹಕ ವೃತ್ತಿಯನ್ನು ಆರಂಭಿಸಿದ ಪುರುಷೋತ್ತಮ 1991ರಲ್ಲಿ ಬಿ.ವಿ. ಈಶ ಅವರ ‘ಆಶಾಲತಾ’ ನಾಟಕದಲ್ಲಿ ಛಾಯಾಗ್ರಾಹಕನ ಹಾಸ್ಯ ಪಾತ್ರ ಮಾಡುವ ಮೂಲಕ ಮುಖಕ್ಕೆ ಬಣ್ಣ ಹಚ್ಚಿದವರು. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ದೊಟ್ಟಾಟ, ಬಯಲಾಟ, ನಾಟಕಗಳ ಛಾಯಾಚಿತ್ರ ತೆಗೆಯಲು ಹೋಗಿ, ಸ್ಫೂರ್ತಿ ಪಡೆಯುವ ಮೂಲಕ, ‘ನಾನೂ ಒಂದು ಕೈ ನೋಡಿದರಾಯಿತು’ ಎಂದೇ ರಂಗಭೂಮಿಯ ಕದ ತಟ್ಟಿ ಸೈ ಎನ್ನಿಸಿಕೊಂಡವರು.

ಗ್ರಾಮದ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ‘ಕರ್ತವ್ಯದ ಕಾಣಿಕೆ’ ನಾಟಕದಲ್ಲಿ ನಿರ್ದೇಶಕ ಹೊಸಪೇಟೆ ರಂಗಪ್ಪ ಅವರ ಸಲಹೆಯ ಮೇರೆಗೆ ಖಳನಾಯಕನ ಪಾತ್ರ ಮಾಡಿ ಗಮನ ಸೆಳೆದ ಪುರುಷೋತ್ತಮ, ಕುಯುಕ್ತಿಯೇ ಪ್ರಧಾನವಾದ ಅನೇಕ ಪಾತ್ರಗಳನ್ನು ಮಾಡಿದವರು.

ಪೌರಾಣಿಕ ಕಥೆಯ ‘ಸತ್ಯಹರಿಶ್ಚಂದ್ರ’ ನಾಟಕದ ಮಹರ್ಷಿ ವಿಶ್ವಾಮಿತ್ರನ ಪಾತ್ರ ಮಾಡಿ, ಪ್ರೇಕ್ಷಕರಿಂದ ‘ಹಿಡಿಶಾಪ’ ಹಾಕಿಸಿಕೊಂಡದ್ದಲ್ಲದೆ, ನಂತರ ದೊರೆತ ರಕ್ತರಾತ್ರಿಯ ಶಕುನಿ ಪಾತ್ರಕ್ಕೂ ನ್ಯಾಯ ಒದಗಿಸಿದವರು.

ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರಕಿಸುವ ಸದುದ್ದೇಶದೊಂದಿಗೆ ಗ್ರಾಮದ ಯುವಕರೊಂದಿಗೆ ಸೇರಿ ಮಹದೇವ ತಾತ ಕಲಾ ಸಂಘ ಸ್ಥಾಪಿಸಿರುವ ಇವರು, ಪ್ರತಿ ವರ್ಷ ನಡೆಯುವ ವಾರ್ಷಿಕೋತ್ಸವದಲ್ಲಿ ಉತ್ತಮ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿದ್ದಾರೆ.

ಹಂಪಿ ಉತ್ಸವ, ಮೈಸೂರು ದಸರಾ, ಕಾರವಾರ ಉತ್ಸವ, ಸಹ್ಯಾದ್ರಿ ಉತ್ಸವ, ಹೂವಿನ ಹಡಗಲಿಯಲ್ಲಿ ನಡೆಯುವ ‘ರಂಗ ಮಲ್ಲಿಗೆ’ ನಾಟಕೋತ್ಸವ ಸೇರಿದಂತೆ ನಾಡಿನಾದ್ಯಂತ ಅನೇಕ ಕಡೆ ಪ್ರದರ್ಶನಗೊಂಡ ನಾಟಕಗಳಲ್ಲಿ ನಟಿಸಿ, ರಂಗ ಕಲೆಗೆ ಸೇವೆ ಸಲ್ಲಿಸುತ್ತಿರುವ ಇವರು, ಪ್ರಸನ್ನ ಅವರ ಮಹಿಮಾಪುರ ನಾಟಕದಲ್ಲೂ ನಟಿಸಿದ ಅನುಭವ ಹೊಂದಿದ್ದಾರೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಗಾನಗಂಧರ್ವ ಕಲಾ ಟ್ರಸ್ಟ್ ಕೊಡಮಾಡಿರುವ ‘ಅಭಿನಯ ಸಿರಿ’ ಪ್ರಶಸ್ತಿಗೆ, ಅನೇಕ ಸಂಘ-ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗಿದ್ದಾರೆ. ‘ಶಂಕರ ನಾಯ್ಡು’ ರಚಿಸಿರುವ ‘ದನ ಕಾಯುವವರ ದೊಡ್ಡಾಟ’ ನಾಟಕದ ‘ಸಾರಥಿ’ಯ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಲ್ಲದೆ, ಅನೇಕ ಯುವಕರಿಗೆ ತರಬೇತಿಯನ್ನೂ ನೀಡುತ್ತಿರುವ ಇವರು, ರಂಗಕಲೆಗೆ ಸೂಕ್ತ ಪ್ರೋತ್ಸಾಹ ನೀಡುತ್ತಲೇ ಬಂದಿರುವ ಬಳ್ಳಾರಿ ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರರಾಗಿರುವುದು ವಿಶೇಷ.

ಹೆಸರಾಂತ ರಂಗ ಕಲಾವಿದರಾದ ಸುಭದ್ರಮ್ಮ ಮನ್ಸೂರ್, ಶಂಕರನಾಯ್ಡು, ಬೆಳಗಲ್ ವೀರಣ್ಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೋರನೂರು ಕೊಟ್ರಪ್ಪ ಅವರ ಸಹಕಾರ, ಸಲಹೆ ಹಾಗೂ ಪ್ರೋತ್ಸಾಹಗಳೇ ನಾಟಕಗಳಲ್ಲಿ ಅಭಿನಯಿಸಲು ಪ್ರೇರಣೆ ನೀಡಿವೆ ಎಂಬುದನ್ನು ಇವರು ವಿನಯದಿಂದ ಒತ್ತಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT