ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪುಸ್ತಕಕ್ಕೆ ಇಂಟರ್‌ನೆಟ್ ಪ್ರತಿಸ್ಪರ್ಧಿಯಲ್ಲ'

Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಧಾರವಾಡ: ಇಂಟರ್‌ನೆಟ್‌ನಲ್ಲಿ ಕನ್ನಡದ ಕೆಲಸಕ್ಕೆ ಸಾಂಸ್ಥಿಕ ಬೆಂಬಲ ಇಲ್ಲ, ಆದರೆ ಕೆಲವರು ವೈಯಕ್ತಿಕ ಆಸಕ್ತಿಯಿಂದ ಕನ್ನಡದ ಕೆಲಸ ಮಾಡುತ್ತಿದ್ದಾರೆ... ಇಂಟರ್‌ನೆಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬರಹಗಳು ಬರುತ್ತಿವೆ, ಆದರೂ ಅದರಿಂದಾಗಿ  ಪುಸ್ತಕಗಳು ಅಳಿಯುತ್ತವೆ ಎಂಬ ಭಾವನೆ ಬೇಡ. ಇಂಟರ್‌ನೆಟ್ ಎಂಬುದು ಪುಸ್ತಕಕ್ಕೆ ಪ್ರತಿಸ್ಪರ್ಧಿ ಅಲ್ಲ... ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಕನ್ನಡಕ್ಕಾಗಿ ಮಾಡಿರುವ ಕೆಲಸ ಬಹಳ ಕಡಿಮೆ, ಕನ್ನಡಿಗರ ಅಭಿಮಾನ ಶೂನ್ಯತೆ ಬಗ್ಗೆ ತೀವ್ರ ಬೇಸರ ಇದೆ...

ದಟ್ಸ್‌ಕನ್ನಡ ಡಾಟ್‌ಕಾಂನ ಮುಖ್ಯಸ್ಥ ಎಸ್.ಕೆ. ಶಾಮಸುಂದರ್, ಸಾಹಿತಿಗಳಾದ ವಸುಧೇಂದ್ರ ಮತ್ತು ವಿವೇಕ ಶಾನಭಾಗ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ `ಅಂತರ್ಜಾಲದಲ್ಲಿ ಕನ್ನಡ' ಗೋಷ್ಠಿಯಲ್ಲಿ ಕೇಳಿಬಂದ ಮಾತುಗಳು ಇವು. `ಧಾರವಾಡ ಸಾಹಿತ್ಯ ಸಂಭ್ರಮ' ಕಾರ್ಯಕ್ರಮದ ಎರಡನೆಯ ದಿನವಾದ ಶನಿವಾರ ಈ ಗೋಷ್ಠಿ ಆಯೋಜಿಸಲಾಗಿತ್ತು. ಇಂಟರ್‌ನೆಟ್‌ನಲ್ಲಿ ಕನ್ನಡ ಕುರಿತು ಇದುವರೆಗೆ ಆಗಿರುವ ಮತ್ತು ಇನ್ನು ಆಗಬೇಕಿರುವ ಕಾರ್ಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತಮ್ಮ ವಿಚಾರ ಹಂಚಿಕೊಂಡರು. ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.

`1999ರ ನಂತರ ಇಂಟರ್‌ನೆಟ್‌ನಲ್ಲಿ ಕನ್ನಡದ ಬಳಕೆ ಆರಂಭವಾಯಿತು. ಆದರೆ ಇವತ್ತಿಗೂ ಕನ್ನಡಕ್ಕೆ ಇರುವ ಮಾರುಕಟ್ಟೆ ಅವಕಾಶಗಳು ಅತ್ಯಂತ ಕಡಿಮೆ. ಯೂನಿಕೋಡ್ ಶಿಷ್ಟತೆಯ ಯುಗದಲ್ಲಿ ನಾವಿದ್ದೇವೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಶಿಷ್ಟತೆಯನ್ನಾಗಿ ಯೂನಿಕೋಡ್ ಜಾರಿಗೆ ತರಲು ಸರ್ಕಾರ ಇನ್ನಷ್ಟು ಯೋಜನೆ ರೂಪಿಸಬೇಕು' ಎಂದು ಅಭಿಪ್ರಾಯಪಟ್ಟರು.

`ಇಂಟರ್‌ನೆಟ್ ಮಾಧ್ಯಮವನ್ನು ಪುಸ್ತಕ ಮಾಧ್ಯಮಕ್ಕೆ ಪ್ರತಿಸ್ಪರ್ಧಿಯನ್ನಾಗಿ ನೋಡುವುದು ಸರಿಯಲ್ಲ. `ಇ-ತಂತ್ರಜ್ಞಾನ' ಇರುವುದು ನಮ್ಮ ಒಳಿತಿಗಾಗಿ. ಆರೇಳು ವರ್ಷಗಳ ಈಚೆಗೆ ಕನ್ನಡದಲ್ಲಿ ಅಂದಾಜು 10 ಸಾವಿರ ಬ್ಲಾಗ್‌ಗಳು ಆರಂಭವಾಗಿವೆ. ಅಂದರೆ, ಅಷ್ಟು ದೊಡ್ಡ ಸಂಖ್ಯೆಯ ಜನ ಕನ್ನಡದಲ್ಲಿ ಬರೆಯುತ್ತಿದ್ದಾರೆ. ನವಮಾಧ್ಯಮ ಫೇಸ್‌ಬುಕ್‌ನಲ್ಲೂ ಕನ್ನಡ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ಇಷ್ಟೇ ಸಾಲದು' ಎಂದು ವಸುಧೇಂದ್ರ ಹೇಳಿದರು.

`ಬೇರೆ ಬೇರೆ ಶಿಷ್ಟತೆಯಲ್ಲಿ ಇರುವ ಕನ್ನಡದ ಅಕ್ಷರಗಳನ್ನು ಯೂನಿಕೋಡ್ ಶಿಷ್ಟತೆಗೆ ಬದಲಾಯಿಸುವ ಪರಿವರ್ತಕಗಳು ಬೇಕು. ಬರಹ ರೂಪದಲ್ಲಿ ಇರುವ ಮಾಹಿತಿಯನ್ನು ಧ್ವನಿ ರೂಪಕ್ಕೆ ಬದಲಾಯಿಸುವ ಹಾಗೂ ಧ್ವನಿ ರೂಪದಲ್ಲಿರುವುದನ್ನು ಅಕ್ಷರ ರೂಪಕ್ಕೆ ಮಾರ್ಪಾಡು ಮಾಡುವ ಪರಿವರ್ತಕ ತಂತ್ರಾಂಶಗಳೂ ನಮಗೆ ತುರ್ತಾಗಿ ಬೇಕು. ಈ ತಂತ್ರಾಂಶಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸದಿದ್ದರೆ ಕನ್ನಡಿಗರು ಹಿಂದುಳಿಯಬೇಕಾಗುತ್ತದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ಹೀಬ್ರೂ ಭಾಷೆಯನ್ನು ಒಳಗೊಂಡಿಲ್ಲ ಎಂಬ ಕಾರಣಕ್ಕೆ ಮೈಕ್ರೊಸಾಫ್ಟ್ ಕಂಪೆನಿಯ `ವಿಂಡೋಸ್' ತಂತ್ರಾಂಶವನ್ನು ಇಸ್ರೇಲಿನ ಜನತೆ ತಿರಸ್ಕರಿಸಿದರು. ಅವರ ಜನಸಂಖ್ಯೆ ಅಂದಾಜು ಒಂದು ಕೋಟಿ ಮಾತ್ರ. ಆದರೆ ಆರು ಕೋಟಿ ಜನರಿರುವ ಕನ್ನಡ ನಾಡು ಇಂಥದೊಂದು ಕೆಲಸಕ್ಕೆ ಮುಂದಾಗುತ್ತಿಲ್ಲ. ಕನ್ನಡದ ಮಾರುಕಟ್ಟೆಗೆ ಅನುಗುಣವಾಗಿ ತಂತ್ರಾಂಶ ರೂಪಿಸಬೇಕಾದ ಒತ್ತಡವನ್ನು ಕನ್ನಡಿಗರು ಕಂಪೆನಿಗಳ ಮೇಲೆ ಹೇರುವುದಿಲ್ಲ ಎಂದು ವಿವೇಕ ಶಾನಭಾಗ ವಿಶ್ಲೇಷಿಸಿದರು.

`ಇಂಟರ್‌ನೆಟ್‌ನಲ್ಲಿ ಬರುತ್ತಿರುವ ಬರಹಗಳ ಗುಣಮಟ್ಟದ ಮೇಲೆ ನಿಗಾ ಇಡಲಾಗದು. ಬಲಪಂಥೀಯ ಗುಂಪು ಸೇರಿದಂತೆ ಕೆಲವು ಗುಂಪುಗಳು ಅಲ್ಲಿ ಕ್ರಿಯಾಶೀಲವಾಗಿವೆ. ಇದು ಸರಿ ಅಥವಾ ತಪ್ಪು ಎನ್ನಲಾಗದು. ಎಲ್ಲ ಭಾಷೆಗಳಲ್ಲೂ ಇದು ಕಂಡುಬರುತ್ತಿದೆ ಎಂದು ಅವರು ಹೇಳಿದರು.

ಕನ್ನಡದ ಬೌದ್ಧಿಕ ವಲಯ ತಂತ್ರಜ್ಞಾನದ ವಿಚಾರದಲ್ಲಿ ಸಂವೇದನಾಶೀಲವಾಗಿ ಇಲ್ಲ ಎಂದು ಗೋಷ್ಠಿಯ ನಿರ್ದೇಶಕರಾಗಿದ್ದ, `ಪ್ರಜಾವಾಣಿ'ಯ ಮುಖ್ಯ ಉಪ ಸಂಪಾದಕ ಎನ್.ಎ.ಎಂ. ಇಸ್ಮಾಯಿಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT