ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕೋತ್ಸವ: ವಿವಾದದ ಎಡ,ಬಲ

ಹತ್ತು ದಿನಗಳ ಬದಲಿಗೆ ಮೂರು ದಿನಕ್ಕೆ ಸರ್ಕಾರ ಸಮ್ಮತಿ
Last Updated 3 ಡಿಸೆಂಬರ್ 2013, 19:31 IST
ಅಕ್ಷರ ಗಾತ್ರ

ಬೆಂಗಳೂರು: ವಾಣಿಜ್ಯ ಉದ್ದೇಶದ್ದು ಎನ್ನುವ ಕಾರಣಕ್ಕೆ ‘ಬೆಂಗಳೂರು ಪುಸ್ತಕೋತ್ಸವ’ ಕಾರ್ಯಕ್ರಮಕ್ಕೆ ಅರಮನೆ ಮೈದಾನ ನೀಡಲು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸಂಘಟಕರ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ, ಹತ್ತು ದಿನಗಳ ಬದಲಿಗೆ ಮೂರು ದಿನ ಮಾತ್ರ ಪುಸ್ತಕೋತ್ಸವ ಆಯೋಜಿಸಲು ಅನುಮತಿ ಕೊಡಿಸಿದ್ದಾರೆ. ಆದರೆ, ಮೂರು ದಿನಗಳ ಸಲುವಾಗಿ ಈ ಬೃಹತ್‌ ಕಾರ್ಯಕ್ರಮ ಆಯೋಜಿಸುವುದು ಕಷ್ಟ   ಎಂದು ಸಂಘಟಕರು ಉತ್ಸವ ಆಯೋಜಿಸದಿರಲು ತೀರ್ಮಾನಿಸಿದ್ದಾರೆ.

ಈ ಗೊಂದಲ– ಗೋಜಲು ಯಾವ ಕಾರಣಕ್ಕೆ ಆಯಿತು. ನಿಜಕ್ಕೂ ಸುಪ್ರೀಂಕೋರ್ಟ್‌ ತೀರ್ಪಿನ ಅನುಸಾರ ಸರ್ಕಾರ ರಚಿಸಿರುವ ಮಾರ್ಗಸೂಚಿ ಏನು? ಇತ್ಯಾದಿ ಅಂಶಗಳ ಬಗ್ಗೆ ‘ಪ್ರಜಾವಾಣಿ’ ಇಲ್ಲಿ ಬೆಳಕು ಚೆಲ್ಲಿದೆ. 

ಹಿನ್ನೆಲೆ: ಬೆಂಗಳೂರು ಅರಮನೆ ಮತ್ತು ಅದರ ಸುತ್ತ ಇರುವ ಖಾಲಿ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲು ರಾಜ್ಯ ಸರ್ಕಾರ 1996ರಲ್ಲಿ ಕಾಯ್ದೆ ರೂಪಿಸಿತ್ತು.  ಇದಕ್ಕೆ ರಾಷ್ಟ್ರಪತಿಗಳ ಅಂಕಿತ (1996ರ ನ.15) ಕೂಡ ಬಿದ್ದಿದೆ. ಇದನ್ನು ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮತ್ತು ಅವರ ಐದು ಮಂದಿ ಸಹೋದರಿಯರು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು.

ಅವರ ಅರ್ಜಿಯನ್ನು 1997ರಲ್ಲಿ ಹೈಕೋರ್ಟ್‌ ವಜಾ ಮಾಡಿ, ಸರ್ಕಾರದ ತೀರ್ಮಾನವನ್ನು ಎತ್ತಿಹಿಡಿದಿತ್ತು. ಬಳಿಕ ರಾಜವಂಶಸ್ಥರು  ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ 1997ರ ಏ.30ರಂದು ಅರಮನೆ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿತ್ತು.

1998 ಮತ್ತು 2001ರಲ್ಲಿ ಮಧ್ಯಂತರ ಆದೇಶ ನೀಡಿದ ಸುಪ್ರೀಂ ಕೋರ್ಟ್‌, ಸರ್ಕಾರದ ಪೂರ್ವಾನುಮತಿ ಯೊಂದಿಗೆ, 1996ರ ಕಾಯ್ದೆಗೆ ಧಕ್ಕೆಯಾಗದಂತೆ ಅರಮನೆ ಮೈದಾನದಲ್ಲಿ ಕಾರ್ಯಕ್ರಮಗಳನ್ನು  ಆಯೋಜಿಸುವುದಕ್ಕೆ ರಾಜವಂಶಸ್ಥರಿಗೆ ಅನುಮತಿಯನ್ನು ನೀಡಿತು.
ಈ ಆದೇಶದ ಪ್ರಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 2007ರಲ್ಲಿ ಅರಮನೆ ಮೈದಾನ ಬಳಸುವುದಕ್ಕೆ ಮಾರ್ಗಸೂಚಿಯನ್ನು ರೂಪಿಸಿತು.

ಆ ಬಗ್ಗೆ ದೂರುಗಳು ಬಂದ ಕಾರಣ 2008ರಲ್ಲಿ ಅದನ್ನು ಬದಲಿಸಲಾಯಿತು. ಕೆಲವರು ಅದನ್ನೂ ಪ್ರಶ್ನೆ ಮಾಡಿ ಹೈಕೋರ್ಟ್‌ಗೆ ಹೋದರು. ನಂತರ ವಿವಾದಕ್ಕೆ ಆಸ್ಪದ ಇಲ್ಲದ ರೀತಿಯಲ್ಲಿ ಮಾರ್ಗಸೂಚಿ ರೂಪಿಸಲು ಹೈಕೋರ್ಟ್‌ 2012ರಲ್ಲಿ ಮೌಖಿಕ ಆದೇಶ ನೀಡಿತು. ಮಾರ್ಗಸೂಚಿಯು ಸುಪ್ರೀಂಕೋರ್ಟ್ ಆದೇಶಕ್ಕೆ ಅನುಗುಣವಾಗಿರಬೇಕು ಎಂದೂ ಕಟ್ಟಾಜ್ಞೆ ಮಾಡಿತು.

ಇದನ್ನೇ ಆಧಾರವಾಗಿ ಇಟ್ಟುಕೊಂಡು ರಾಜ್ಯ ಸರ್ಕಾರ 2012ರ ಡಿ.21ರಂದು ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿತು. ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಅದನ್ನು ರಚಿಸಿತು. ಇದಕ್ಕೆ ಆಗಿನ ಮುಖ್ಯಮಂತ್ರಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನುತ್ತವೆ ಸರ್ಕಾರದ ಮೂಲಗಳು.

ಮಾರ್ಗಸೂಚಿಯಲ್ಲಿ ಏನಿದೆ?
* ಮೂರು ದಿನ ಮೀರದ ಕಾರ್ಯಕ್ರಮಗಳಿಗೆ ಆದ್ಯತೆಯ ಅನುಸಾರ ಜಾಗ ನೀಡುವುದು
* ಮೈದಾನದಲ್ಲಿ ಯಾವುದೇ ಮರ ಕಡಿಯುವಂತಿಲ್ಲ
* ಕಾರ್ಯಕ್ರಮ ಮುಗಿದ ತಕ್ಷಣ ಅಲ್ಲಿನ ತಾತ್ಕಾಲಿಕ ನಿರ್ಮಾಣಗಳನ್ನು ಒಡೆದು ಹಾಕಬೇಕು
* ಒಂದು ತಿಂಗಳ ಮೊದಲೇ ಕಾರ್ಯಕ್ರಮಕ್ಕೆ ಜಾಗ ಕೇಳುವ ಅರ್ಜಿ ಸಲ್ಲಿಸಬೇಕು

ಯಾವುದಕ್ಕೆ ಅವಕಾಶ
* ಮದುವೆ, ಹುಟ್ಟುಹಬ್ಬದ ಕಾರ್ಯಕ್ರಮಗಳು
* ರಾಜಕೀಯ ಪಕ್ಷಗಳ ಸಮಾವೇಶ
* ಅರಣ್ಯ, ತೋಟಗಾರಿಕೆ ಮತ್ತು ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು
* ಪುಷ್ಪ ಪ್ರದರ್ಶನ, ಸಸಿ ನೆಡುವ ವಿಚಾರಕ್ಕೆ ಸಂಬಂಧಿಸಿದ ಕಾರ್ಯಕ್ರಮ
* ಧಾರ್ಮಿಕ ಕಾರ್ಯಕ್ರಮ
* ರಾಜ್ಯ ಮತ್ತು ಕೇಂದ್ರ ಸರ್ಕಾರದ  ಕಾರ್ಯಕ್ರಮಗಳಿಗೆ ಅನುಮತಿ ನೀಡಬಹುದು

ಯಾವುದಕ್ಕೆ ಅವಕಾಶ ಇಲ್ಲ
* ವ್ಯಾಪಾರ ಮೇಳ, ಗೃಹೋಪಯೋಗಿ ವಸ್ತುಪ್ರದರ್ಶನ ಇತ್ಯಾದಿ ವಾಣಿಜ್ಯ  ಉದ್ದೇಶದ ಚಟುವಟಿಕೆಗಳು
* ಮದ್ಯ ಅಥವಾ ನಿಷೇಧಿತ ವಸ್ತುಗಳ ಮಾರಾಟ ಮತ್ತು ಸರಬರಾಜು
* ಜನರ ಜೀವಕ್ಕೆ ಅಪಾಯ ಆಗುವಂತಹ ಕಾರ್ಯಕ್ರಮಗಳು
* ಶಬ್ದ ಮಾಲಿನ್ಯ (ನಿಯಂತ್ರಣ) ಅಧಿನಿಯಮ ಉಲ್ಲಂಘಿಸುವ   ಕಾರ್ಯಕ್ರಮ

ಫನ್‌ವರ್ಲ್ಡ್‌, ಸ್ನೋ ಸಿಟಿ ಏಕೆ ಅಲ್ಲಿವೆ?
ಬೆಂಗಳೂರು: ಪುಸ್ತಕೋತ್ಸವಕ್ಕೆ ಅವಕಾಶ ಇಲ್ಲದಿದ್ದು, ಫನ್‌ ವರ್ಲ್ಡ್ ಮತ್ತು ಸ್ನೋ ಸಿಟಿಗೆ ಹೇಗೆ ಅನುಮತಿ ಕೊಟ್ಟಿದ್ದು?
ಇದು ಪುಸ್ತಕೋತ್ಸವದ ಸಂಘಟಕರು ಸೇರಿದಂತೆ ಹಲವು ಪುಸ್ತಕ ಪ್ರಿಯರು ಕೇಳುವ ಪ್ರಶ್ನೆ. ಆದರೆ, ಇದಕ್ಕೆ ಸರ್ಕಾರ ಬೇರೆಯದೇ ಸಮಜಾಯಿಷಿ ನೀಡುತ್ತದೆ.

ಈ ಎರಡೂ ಸಂಸ್ಥೆಗಳು ಈ ಪ್ರಕರಣ ಕೋರ್ಟ್‌ ಮೆಟ್ಟಿಲು ಏರುವುದಕ್ಕಿಂತ ಮೊದಲಿನಿಂದಲೂ ಆ ಜಾಗದಲ್ಲಿ ಇವೆ. ರಾಜ್ಯ ಸರ್ಕಾರ 1996ರಲ್ಲಿ ಅರಮನೆ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲು  ಕಾನೂನು ರೂಪಿಸಿದಾಗ ಅದನ್ನು ಪ್ರಶ್ನೆ ಮಾಡಿದ್ದ ಸಂಸ್ಥೆಗಳಲ್ಲಿ ಇವೆರಡೂ ಸೇರಿವೆ.

1997ರಲ್ಲಿ ಸುಪ್ರೀಂಕೋರ್ಟ್‌ ತನ್ನ ಮಧ್ಯಂತರ ಆದೇಶ ನೀಡಿದ್ದು ಆ ಸಂದರ್ಭದಲ್ಲಿ ಅರಮನೆ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎನ್ನುವ ಸೂಚನೆ ನೀಡಿತ್ತು. ಸುಪ್ರೀಂಕೋರ್ಟ್‌ನ ‘ಯಥಾಸ್ಥಿತಿ’ ಎನ್ನುವ ಪದ ಈ ಎರಡೂ ಸಂಸ್ಥೆಗಳನ್ನು ಅಲ್ಲಿಂದ ಎತ್ತಂಗಡಿ ಮಾಡಲು ಅಡ್ಡಿಯಾಗಿದೆ.

ಇದರ ನಡುವೆಯೂ ಈ ಎರಡೂ ಸಂಸ್ಥೆಗಳಿಗೆ ಪ್ರತಿ ವರ್ಷ ಸರ್ಕಾರ ಷರತ್ತಿನ ಅನುಮತಿ ನೀಡುತ್ತಿದೆ. ‘ಒಂದು ವರ್ಷ ಅಥವಾ ಕೋರ್ಟ್‌ ಆದೇಶ ಬರುವವರೆಗೆ ಮಾತ್ರ ಅನುಮತಿ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎನ್ನುತ್ತವೆ ಮೂಲಗಳು. ಈ ವಿಷಯವನ್ನು ಬೆಂಗಳೂರು ಪುಸ್ತಕೋತ್ಸವ ಸಂಘಟಕರಿಗೆ ಮನವರಿಕೆ ಮಾಡಿಕೊಟ್ಟರೂ ಅವರು ಕೇಳುವ ಸ್ಥಿತಿಯಲ್ಲಿ ಇಲ್ಲ ಎನ್ನುತ್ತವೆ ಸರ್ಕಾರದ ಮೂಲಗಳು.

ಅನುಮತಿ ಕೊಡುವುದು ಹೇಗೆ? ಯಾರು?
ಬೆಂಗಳೂರು:
ಕಾರ್ಯಕ್ರಮ ಸಂಘಟಕರು, ಅರಮನೆ ಮೈದಾನಕ್ಕಾಗಿ ಮೊದಲು ರಾಜವಂಶ ಸ್ಥರಿಗೆ ಕೋರಿಕೆ ಸಲ್ಲಿಸಬೇಕು. ಬಳಿಕ ಅವರು ಅನುಮತಿ ನೀಡಬಹುದು ಎಂದು ಸರ್ಕಾರಕ್ಕೆ ಪತ್ರ ಬರೆಯುತ್ತಾರೆ.

ಈ ಪತ್ರವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯ ದರ್ಶಿ ಅಧ್ಯಕ್ಷತೆಯ ಸಮಿತಿ ಪರಿಶೀಲಿಸಿ, ಮಾರ್ಗ ಸೂಚಿಗೆ ಅನುಗುಣವಾಗಿದ್ದರೆ ಅನುಮತಿ ನೀಡುತ್ತದೆ. ಇಲ್ಲದಿದ್ದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಯಾವ ಅರ್ಜಿಯೂ ಅನುಮತಿ ಕೋರಿ ನೇರವಾಗಿ ಸರ್ಕಾರಕ್ಕೆ ಬರುವುದಿಲ್ಲ ಎನ್ನಲಾಗಿದೆ. ಈ ಸಮಿತಿ ಪ್ರತಿ 15 ದಿನಕ್ಕೊಮ್ಮೆ ಸಭೆ ಸೇರುತ್ತದೆ. ಬಿಬಿಎಂಪಿ ಆಯುಕ್ತರು, ಪೊಲೀಸ್‌ ಕಮೀಷನರ್‌, ಅಗ್ನಿಶಾಮಕ ದಳದ ಮುಖ್ಯಸ್ಥರು ಸೇರಿದಂತೆ ಇತರರು ಸಮಿತಿಯ ಸದಸ್ಯರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT