ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರೈಕೆಯಾಗದ ಪಠ್ಯಪುಸ್ತಕ: ಪರದಾಟ

ಪ್ರಥಮ ಪಿಯುಸಿ ಕಲಾ, ವಾಣಿಜ್ಯ ವಿಭಾಗ
Last Updated 7 ಜುಲೈ 2013, 11:26 IST
ಅಕ್ಷರ ಗಾತ್ರ

ಮಡಿಕೇರಿ: ಪಿಯುಸಿ ಪ್ರಥಮ ವರ್ಷದ ಕಲಾ, ವಾಣಿಜ್ಯ ವಿಭಾಗದ ಹಲವು ವಿಷಯಗಳ ಪಠ್ಯಪುಸ್ತಕಗಳು ಇದುವರೆಗೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಕೇಂದ್ರೀಯ ಪಠ್ಯಕ್ರಮವನ್ನು ಅನುಸರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಸಕ್ತ ವರ್ಷದಿಂದ ಪಿ.ಯು.ಸಿ ಪ್ರಥಮ ವರ್ಷದ ಕಲಾ ಹಾಗೂ ವಾಣಿಜ್ಯ ವಿಭಾಗದ ವಿಷಯಗಳ ಪಠ್ಯಕ್ರಮವನ್ನು ಬದಲಾಯಿಸಿದೆ. ಆದರೆ, ಕಾಲೇಜುಗಳು ಆರಂಭವಾಗಿ ಎರಡು ತಿಂಗಳಾಗುತ್ತಾ ಬಂದರೂ ಇದುವರೆಗೆ ಹಲವು ವಿಷಯಗಳ ಪಠ್ಯಪುಸ್ತಕಗಳು ಪೂರೈಕೆಯಾಗಿಲ್ಲ.

ಪಠ್ಯಪುಸ್ತಕಗಳು ಲಭ್ಯವಾಗದಿರುವ ಕುರಿತು ಹಲವು ಉಪನ್ಯಾಸಕರು, ಪೋಷಕರು `ಪ್ರಜಾವಾಣಿ' ಕಚೇರಿಗೆ ಮಾಹಿತಿ ನೀಡಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸ್ವಾಮಿ ಅವರನ್ನು ಸಂಪರ್ಕಿಸಿದಾಗ, ಪಠ್ಯಪುಸ್ತಕಗಳು ಪೂರೈಕೆಯಾಗಿಲ್ಲ ಎನ್ನುವುದನ್ನು ಅವರು ಖಚಿತಪಡಿಸಿದರು.

ಪ್ರಸ್ತುತ ಕಲಾ ವಿಭಾಗದ ರಾಜ್ಯಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ ಪಠ್ಯಪುಸ್ತಕಗಳು ಬಂದಿಲ್ಲ. ಅದರಂತೆ ವಾಣಿಜ್ಯ ವಿಭಾಗದ ಎಕನಾಮಿಕ್ಸ್, ಅಕೌಂಟೆನ್ಸಿ, ಬಿಸಿನೆಸ್ ಸ್ಟಡೀಸ್ ವಿಷಯಗಳ ಪಠ್ಯಪುಸ್ತಕಗಳು ಬಂದಿಲ್ಲ. ಇನ್ನುಳಿದಂತೆ ಕನ್ನಡ, ಇಂಗ್ಲಿಷ್, ಕಂಪ್ಯೂಟರ್ ಸೈನ್ಸ್ ಪುಸ್ತಕಗಳು ಬಂದಿವೆ ಎನ್ನಲಾಗುತ್ತಿದೆ.

ಪಠ್ಯಪುಸ್ತಕಗಳನ್ನು ಸಿದ್ಧ ಮಾಡಿಕೊಳ್ಳದೇ ಹೊಸ ಪಠ್ಯಕ್ರಮವನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿರುವುದೇ ಈ ರಾದ್ಧಾಂತಕ್ಕೆ ಕಾರಣವೆಂದು ಉಪನ್ಯಾಸಕರೊಬ್ಬರು ಅಭಿಪ್ರಾಯಪಟ್ಟರು.

ಟೆಂಡರ್ ವಿಳಂಬ: ಪಠ್ಯಪುಸ್ತಕ ಮುದ್ರಿಸಲು ಹೈದರಾಬಾದ್ ಮೂಲದ ಕಂಪೆನಿಯೊಂದಕ್ಕೆ ಟೆಂಡರ್ ಅನ್ನು ತುಂಬಾ ವಿಳಂಬವಾಗಿ ಏಪ್ರಿಲ್ ಕೊನೆಯ ವಾರದಲ್ಲಿ ನೀಡಲಾಗಿದೆ. ಸಾಮಾನ್ಯವಾಗಿ ಮಾರ್ಚ್ ಮೊದಲ ವಾರದಲ್ಲಿ ಟೆಂಡರ್ ನೀಡಿದ್ದರೆ, ಇಷ್ಟೊತ್ತಿಗಾಗಲೇ ಪಠ್ಯಪುಸ್ತಕಗಳ ಪೂರೈಕೆಯಾಗಿರುತ್ತಿತ್ತು. ಆದರೆ, ವಿಳಂಬವಾದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸ್ವಾಮಿ ತಿಳಿಸಿದರು.

`ಇತ್ತೀಚೆಗೆ ಬೆಂಗಳೂರಿನಲ್ಲಿ ಇಲಾಖಾ ಮುಖ್ಯಸ್ಥರು ನಮ್ಮನ್ನೆಲ್ಲ ಸಭೆ ಕರೆದು, ಈ ಸಮಸ್ಯೆ ಬಗ್ಗೆ ಚರ್ಚಿಸಿದ್ದರು. ಈ ತಿಂಗಳ ಅಂತ್ಯದೊಳಗೆ ಎಲ್ಲ ಪುಸ್ತಕಗಳನ್ನು ಪೂರೈಸಿಕೊಡುವುದಾಗಿ ಅವರು ಭರವಸೆ ನೀಡಿದ್ದಾರೆ' ಎಂದು ಅವರು ಪ್ರತಿಕ್ರಿಯಿಸಿದರು.

ಪರೀಕ್ಷೆ ಮೇಲೂ ಪರಿಣಾಮ:
ತರಗತಿಗಳು ಆರಂಭವಾಗಿ ಮೂರು ತಿಂಗಳ ನಂತರ ಆಗಸ್ಟ್‌ನಲ್ಲಿ ಕಿರು ಪರೀಕ್ಷೆ ನಡೆಸುವುದು ವಾಡಿಕೆ. ಆದರೆ, ಈ ಬಾರಿ ಇದುವರೆಗೆ ಪಠ್ಯಪುಸ್ತಕಗಳ ಪೂರೈಕೆಯಾಗದ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ನಡೆಯಬೇಕಾಗಿದ್ದ ಕಿರುಪರೀಕ್ಷೆ ಮೇಲೂ ಪರಿಣಾಮ ಉಂಟಾಗಲಿದೆ.

ತರಬೇತಿ ಮುಂದೂಡಿಕೆ:  ಹೊಸ ಪಠ್ಯಕ್ರಮವನ್ನು ಪರಿಚಯಿಸಿದಾಗ ಉಪಗ್ರಹ ಮೂಲಕ ರಾಜ್ಯದಾದ್ಯಂತ ಉಪನ್ಯಾಸಕರಿಗೆ ತರಬೇತಿ ನೀಡುವುದು ಸಾಮಾನ್ಯ. ಆದರೆ, ಈ ಬಾರಿ ಪಠ್ಯಪುಸ್ತಕ ಪೂರೈಕೆಯಾಗದ ಹಿನ್ನೆಲೆಯಲ್ಲಿ ಜೂನ್ 24ರಿಂದ ಜುಲೈ 17ರವರೆಗೆ ನಿಗದಿಯಾಗಿದ್ದ ತರಬೇತಿಯನ್ನು ಮುಂದೂಡಲಾಗಿದೆ.

ಉಪನ್ಯಾಸಕರಿಗೆ ಸಮರ್ಪಕವಾಗಿ ತರಬೇತಿ ದೊರೆಯದಿದ್ದರೆ, ಅವರ ಬೋಧನಾ ಕೌಶಲ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಪಾಯವಿದೆ.

ಹೊಸ ಪಠ್ಯಪುಸ್ತಕಗಳು ಕೈಸೇರಿದ ಬಳಿಕ, ಮೊದಲು ಉಪನ್ಯಾಸಕರು ಅದನ್ನು ಅರಿತು ವಿದ್ಯಾರ್ಥಿಗಳಿಗೆ ಪಾಠ ಆರಂಭಿಸಲು ಇನ್ನೂ ಸಾಕಷ್ಟು ಸಮಯ ಹಿಡಿಯುವ ಸಂಭವ ಇದೆ. ಅಲ್ಲಿಯವರೆಗೆ ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಅಮೂಲ್ಯ ಸಮಯ ವ್ಯರ್ಥವಾಗುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT