ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರೈಕೆಯಾಗದ ವೀಳ್ಯದೆಲೆ: ದರ ಗಗನಕ್ಕೆ

Last Updated 23 ಫೆಬ್ರುವರಿ 2011, 9:35 IST
ಅಕ್ಷರ ಗಾತ್ರ

ಮುಂಡರಗಿ: ಕಳೆದ ಒಂದು ತಿಂಗಳ ಹಿಂದೆ ಒಂದು ಚೆಟ್ಟಿ (ನೂರು) ಎಲೆಗಳಿಗೆ 20-25 ರೂಪಾಯಿ ಇದ್ದ ವೀಳ್ಯದೆಲೆಯ ದರ ಈಗ 55-60 ರೂಪಾಯಿಗೆ ಏರಿದ್ದು ತಾಂಬೂಲ ಪ್ರಿಯರು ಹಾಗೂ ವ್ಯಾಪಾರಸ್ಥರು ಪರದಾಡುವಂತಾಗಿದೆ.ಪಟ್ಟಣದ ಸಣ್ಣಪುಟ್ಟ ಪಾನ್‌ಶಾಪ್ ಹಾಗೂ ಅಂಗಡಿಗಳಲ್ಲಿ ರೂಪಾಯಿಗೆ ಒಂದರಂತೆ ಎಲೆಗಳು ಮಾರಾಟ ಆಗುತ್ತಿದ್ದು ತಾಂಬೂಲ ಪ್ರಿಯರು  ತಾಂಬೂಲ ಮೆಲ್ಲುವ ಹವ್ಯಾಸಕ್ಕೆ ತಾತ್ಕಾಲಿಕವಾಗಿ ಕಡಿವಾಣ ಹಾಕ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕರಿ ಹಾಗೂ ಅಂಬಾಡಿ ವೀಳ್ಯದೆಲೆಯ ಬೆಲೆ ಗಗನಕ್ಕೆ ಏರಿರುವುದರಿಂದ ಪಾನ್‌ಶಾಪ್ ಹಾಗೂ ಸಣ್ಣಪುಟ್ಟ ಅಂಗಡಿಗಳ ಮಾಲೀಕರು ವೀಳ್ಯದೆಲೆಗಳ ಮಾರಾಟ ವನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಿದ್ದು ತಾಂಬೂಲ ಪ್ರಿಯರು ಅಂಗಡಿಯಿಂದ ಅಂಗಡಿಗೆ ಅಲೆಯುವಂತಾಗಿದೆ. ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ದಿನಕ್ಕೆ ಕನಿಷ್ಠ 10-15 ಬಾರಿ ಎಲೆ ಅಡಿಕೆ ಮೆಲ್ಲುವ ತಾಂಬೂಲ ಪ್ರಿಯರಿದ್ದಾರೆ. ವೀಳ್ಯ ದೆಲೆಯ ಬೆಲೆ ಗಗನಕ್ಕೆ ಏರಿದ್ದರಿಂದ ಈಗ ಅವರೆಲ್ಲ ಪರದಾಡಬೇಕಾಗಿದೆ.

ಕಾಯಂ ಗಿರಾಕಿಗಳಿಗೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಕೆಲವು ವ್ಯಾಪಾರಸ್ಥರು ಅನ್ಯ ದಾರಿ ಕಾಣದೆ ರೂಪಾಯಿಗೆ ಒಂದರಂತೆ ಮೂರು ಬೆರಳಿನಗಲದ ಸಣ್ಣ ಎಲೆಯನ್ನು ಮಾರಾಟ ಮಾಡುತ್ತಿದ್ದಾರೆ. ಒಂದು ಪಾನ್ ಕಟ್ಟಲು ಎರಡು-ಮೂರು ಎಲೆಗಳು ಬೇಕಾಗಿರುವುದರಿಂದ ಪಾನ್ ಶಾಪ್‌ಗಳಲ್ಲಿ ವಿವಿಧ ಬಗೆಯ ಪಾನ್‌ಕಟ್ಟಲು ಪಾನ್‌ಶಾಪ್ ಮಾಲೀಕರು ಹಿಂದೆ ಮುಂದೆ ನೋಡುವಂತಾಗಿದೆ. 

 ಕಳೆದ ವರ್ಷ ತಾಲ್ಲೂಕಿನ ಹಮ್ಮಿಗಿ, ಬಿದರಳ್ಳಿ ಮೊದಲಾದ ಕೆಲವು ಭಾಗಗಳಲ್ಲಿ ರೈತರು ಅಲ್ಪಸ್ವಲ್ಪ ವೀಳ್ಯದೆಲೆ ಬೆಳೆಯುತ್ತಿದ್ದರು. ಬೆಲೆ ಪಾತಾಳಕ್ಕೆ ಇಳಿದದ್ದರಿಂದ ಮತ್ತು ಬೆಳೆ ನಿರ್ವಹಣೆ ಅಸಾಧ್ಯವಾದ್ದರಿಂದ ಅವರೆಲ್ಲ ವಿಳ್ಯೆದೆಲೆ ಬೆಳೆಯುವುದನ್ನು ಸ್ಥಗಿತಗೊಳಿಸಿದರು. ಪ್ರಸ್ತುತ ಹರಿಹರ, ರಾಣೆಬೆನ್ನೂರು, ಡಾವಣಗೇರಿ, ಸವಣೂರು, ಹೊಸಪೇಟೆ ಮೊದಲಾದ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಅಲ್ಪಸ್ವಲ್ಪ ವಿಳ್ಯದೆಲೆ ಪೂರೈಕೆಯಾಗುತ್ತದೆ.

‘ಹಿಂದ್ಕ ಐದ ಪೈಸಾ ಕೊಟ್ರ ಇಡೀ ದಿವಸ ಹಾಕ್ಕೊಳೊವಷ್ಟ ಅಡಿಕಿ, ಎಲಿ, ತಂಬಾಕ, ಕಡ್ಡಿಪುಡಿ ಬರತಿತ್ರಿ, ಈಗ ಒಂದ ರೂಪಾಯಿಕ್ಕ ಬರಿ ಎಲಿ ಬರದಿಲ್ರಿ. ಏನ್ ಕಾಲ ಬಂತ್ರಿ, ಏನ್ ಮಾಡೂದು ಕಾಲ ಬಂದಾಂಗ ಹೋಗಬೇಕಲ್ಲರ್ರಿ’ ಎನ್ನುತ್ತಾಳೆ ದಿನಕ್ಕೆ 10-15ಬಾರಿ ತಾಂಬೂಲ ಮೆಲ್ಲುವ ಹಮ್ಮಿಗಿ ಗ್ರಾಮದ ಶಾವಂತ್ರಮ್ಮ ಸೀರಿ.
ಕಾಶೀನಾಥ ಬಿಳಿಮಗ್ಗದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT