ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪೆಂಟಾವಲೆಂಟ್' ಲಸಿಕೆ ಇನ್ನು ಉಚಿತ

Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಐದು ವರ್ಷದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಾರಕ ಕಾಯಿಲೆಗಳಾದ ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು, ಯಕೃತ್ತಿನ ಉರಿ ಮತ್ತು ಊತ (ಹೆಪಟೈಟಿಸ್ ಬಿ), ನ್ಯುಮೋನಿಯಾ, ಮೆದುಳು ರೋಗದಂತಹ (ಮೆನಂಜೈಟಿಸ್) ಕಾಯಿಲೆಗಳನ್ನು ತಡೆಗಟ್ಟಲು ಹಾಗೂ ಈ ರೋಗಗಳು ಬಾರದಂತೆ ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು `ಪೆಂಟಾವಲೆಂಟ್' ಲಸಿಕೆ  ಹಾಕಿಸಲಾಗುತ್ತದೆ.

ಇಲ್ಲಿಯವರೆಗೆ ಮಗು ಜನಿಸಿದ ಆರು, ಹತ್ತು ಹಾಗೂ ಹದಿನಾಲ್ಕು ವಾರಗಳಲ್ಲಿ ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯುಗೆ ಡಿಪಿಟಿ ಲಸಿಕೆ ಹಾಗೂ ಯಕೃತ್ತಿನ ಉರಿ ಮತ್ತು ಊತಕ್ಕೆ ಹೆಪಟೈಟಿಸ್ ಬಿ ಲಸಿಕೆ ನೀಡಲಾಗುತ್ತಿತ್ತು. ಆದರೆ ನ್ಯುಮೋನಿಯಾಗೆ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿವರೆಗೂ ಹಣ ಕೊಟ್ಟು ಲಸಿಕೆ ಹಾಕಿಸಬೇಕಿತ್ತು. ಆದರೆ ಇನ್ನು ಮುಂದೆ ಈ ನಾಲ್ಕು ಕಾಯಿಲೆ ಸೇರಿದಂತೆ `ಹಿಬ್' ಬ್ಯಾಕ್ಟೀರಿಯಾದಿಂದ ಬರುವ ನ್ಯುಮೋನಿಯಾ, ಮೆದುಳಿನ ರೋಗಗಳಿಗೂ ಸೇರಿ `ಪೆಂಟಾವಲೆಂಟ್' ಎಂಬ ಒಂದೇ ಲಸಿಕೆಯನ್ನು ನೀಡಲಾಗುತ್ತದೆ.

ಮೊದಲು ಈ ಲಸಿಕೆ ವಿದೇಶಗಳಲ್ಲಿ ಮಾತ್ರ ತಯಾರಾಗುತ್ತಿದ್ದು, ಕೇವಲ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿತ್ತು. ಈ ಬಗ್ಗೆ ಚಿಂತನೆ ನಡೆಸಿದ ಕೇಂದ್ರ ಸರ್ಕಾರ, ಯೂನಿಸೆಫ್‌ನ ಸಹಯೋಗದಲ್ಲಿ `ಪೆಂಟಾವಲೆಂಟ್' ಲಸಿಕೆಯನ್ನು ಸ್ಥಳೀಯವಾಗಿ ತಯಾರಿಸಲು ಮುಂದಾಯಿತು. ಇದರಿಂದ ಈಗ ಸಾಮಾನ್ಯರಿಗೂ ಉಚಿತವಾಗಿ ಈ ಲಸಿಕೆ ಲಭ್ಯವಾಗುವಂತೆ ಆಗಿದೆ.

ದೇಶದಲ್ಲಿ ಸ್ಥಳೀಯವಾಗಿ ಲಸಿಕೆಯ ಉತ್ಪಾದನೆ ಪ್ರಾರಂಭವಾಗುವ ಮುನ್ನ ಕೇರಳ ಹಾಗೂ ತಮಿಳುನಾಡಿನಲ್ಲಿ ಮಕ್ಕಳ ಜನನ ಹಾಗೂ ನ್ಯುಮೋನಿಯಾದಿಂದ ಸಂಭವಿಸುವ ಸಾವಿನ ಬಗ್ಗೆ ಅಂಕಿಅಂಶಗಳನ್ನು ಸಂಗ್ರಹಿಸಲಾಯಿತು. ಇದರ ಆಧಾರದ ಮೇಲೆ ಲಸಿಕೆಯನ್ನು ತಯಾರಿಸಿ, 2011ರಲ್ಲಿ ಮೊದಲ ಬಾರಿಗೆ ಕೇರಳ ಹಾಗೂ ತಮಿಳುನಾಡಿನಲ್ಲಿ ಬಿಡುಗಡೆ ಮಾಡಲಾಯಿತು.

ಎರಡನೇ ಹಂತವಾಗಿ 2012-13ರಲ್ಲಿ ದೆಹಲಿ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಗುಜರಾತ್, ಗೋವಾ, ಪುದುಚೇರಿ ಹಾಗೂ ಕರ್ನಾಟಕದಲ್ಲಿ ಲಸಿಕೆಯನ್ನು ಪರಿಚಯಿಸಲಾಯಿತು.

ಇದೇ ಮಾರ್ಚ್ 17ರಂದು ಈ ಲಸಿಕೆಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ, ನಗರ ಹಾಗೂ ಉಪ ಆರೋಗ್ಯ ಕೇಂದ್ರಗಳಲ್ಲೂ ಉಚಿತವಾಗಿ ನೀಡಲಾಗುತ್ತಿದೆ.

`ರಾಜ್ಯದಲ್ಲಿ ವರ್ಷಕ್ಕೆ 12 ಲಕ್ಷ ಮಕ್ಕಳು ಜನಿಸುತ್ತಿದ್ದು, ಅವರೆಲ್ಲರಿಗೂ ಉಚಿತವಾಗಿ ಲಸಿಕೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ರಾಜ್ಯದಲ್ಲಿರುವ 3 ಸಾವಿರ ವೈದ್ಯಾಧಿಕಾರಿಗಳು ಹಾಗೂ 18 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆ ಬಗ್ಗೆ ತರಬೇತಿ ನೀಡಲಾಗಿದೆ. ಲಸಿಕೆ ನೀಡಿದ ನಂತರ ಅರ್ಧ ಗಂಟೆ ಮಕ್ಕಳನ್ನು ಆಸ್ಪತ್ರೆಯಲ್ಲೇ ಇಟ್ಟುಕೊಂಡು ನಿಗಾ ವಹಿಸುವಂತೆ ಸೂಚನೆ ಸಹ ನೀಡಲಾಗಿದೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯ ರಾಜ್ಯ ವೈದ್ಯಾಧಿಕಾರಿ ಬಿ.ಪಿ.ಸುಬ್ರಮಣ್ಯ ತಿಳಿಸಿದ್ದಾರೆ.

ಸೂಚನೆ:  ಈಗಾಗಲೇ ಹಳೆ ಪದ್ಧತಿಯಂತೆ ಲಸಿಕೆ ಕೊಡಿಸಿರುವ ಮಕ್ಕಳಿಗೆ `ಪೆಂಟಾವಲೆಂಟ್' ಅಗತ್ಯವಿಲ್ಲ. ಒಂದು ವೇಳೆ ಪೋಷಕರು ಹಾಗೇನಾದರೂ ವೈದ್ಯರ ಮಾತನ್ನು ನಿರ್ಲಕ್ಷಿಸಿ ಅಥವಾ ಸುಳ್ಳು ಹೇಳಿ ಮತ್ತೆ ಮಕ್ಕಳಿಗೆ `ಪೆಂಟಾವಲೆಂಟ್' ಲಸಿಕೆ ಕೊಡಿಸಿದರೆ ಅದು ಮಕ್ಕಳ ಮೇಲೆ ಅಡ್ಡ ಪರಿಣಾಮ ಬೀರಬಹುದು. ಹೀಗಾಗಿ ಯಾವ ಮಗುವಿಗೆ ಮೊದಲ ಬಾರಿಗೆ ಲಸಿಕೆ ನೀಡಲಾಗುತ್ತದೋ ಆ ಮಕ್ಕಳಿಗೆ ಮಾತ್ರ `ಪೆಂಟಾವಲೆಂಟ್' ಲಸಿಕೆ ನೀಡಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಅಂದರೆ ಫೆಬ್ರುವರಿ ಹಾಗೂ ನಂತರ ಜನಿಸಿದ ಮಕ್ಕಳಿಗೆ ಮಾತ್ರ ಈ ಲಸಿಕೆಯನ್ನು ನೀಡಬಹುದು ಎಂದು ಅವರು ವಿವರಿಸಿದರು.

`ಹಿಬ್'ನಿಂದ ಮಕ್ಕಳ ಸಾವು
ಇತ್ತೀಚೆಗೆ  ಹಿಮೋಫೀಲಸ್ ಇನ್‌ಫ್ಲೂಯೆಂಜಾ (ಹಿಬ್) ಬ್ಯಾಕ್ಟೀರಿಯಾದಿಂದ ಬರುವ ನ್ಯುಮೋನಿಯಾದಿಂದ 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ 24 ರಿಂದ 30 ಲಕ್ಷ ಮಕ್ಕಳು `ಹಿಬ್'ನಿಂದಾಗಿ ಗಂಭೀರವಾಗಿ ರೋಗಗ್ರಸ್ಥರಾಗುತ್ತಿದ್ದು, 72 ಸಾವಿರ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. 

`ಹಿಬ್'ನಿಂದ ಬರುವ ನ್ಯುಮೋನಿಯಾದಿಂದ ಶ್ವಾಸಕೋಶದಲ್ಲಿ ಸೋಂಕಾಗುತ್ತದೆ. ರೋಗ ನಿರೋಧಕ ಶಕ್ತಿ ಇಲ್ಲದ ಮಕ್ಕಳಲ್ಲಿ ಈ ಸೋಂಕು ಹೆಚ್ಚಾಗಿ, ಉಸಿರಾಟದ ತೊಂದರೆಯಿಂದ ಸಾವನ್ನಪ್ಪುತ್ತಾರೆ. ಇನ್ನು ಕೆಲವು ಮಕ್ಕಳಲ್ಲಿ ಈ `ಹಿಬ್' ಬ್ಯಾಕ್ಟೀರಿಯಾ ಮೆದುಳಿನ ಹೊರ ರಕ್ಷಣಾ ಪದರಗಳಲ್ಲಿ ಸೇರಿ ಸೋಂಕು ಉಂಟುಮಾಡುತ್ತದೆ. ಇದರಿಂದ ಮಗುವಿಗೆ ಜ್ವರ ಬರುತ್ತದೆ.

ಕೇವಲ 15 ರಿಂದ 20 ದಿನಗಳವರೆಗೆ ಇರುವ ಈ ಸೋಂಕು ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತದೆ. ಹೀಗೆ ಸೋಂಕು ಬಂದು ಪ್ರಾಣ ಉಳಿದ ಮಕ್ಕಳ ಮೆದುಳಿನ ಮೇಲೆ ಶಾಶ್ವತವಾದ ಹಾನಿ ಮಾಡುತ್ತದೆ. ಈ ಹಾನಿಯಿಂದ ಮಕ್ಕಳು ಶಾಶ್ವತವಾಗಿ ದೃಷ್ಟಿಯನ್ನು ಕಳೆದುಕೊಳ್ಳಬಹುದು. ಇಲ್ಲವಾದರೆ ಕೇಳುವ ಶಕ್ತಿಯನ್ನೇ ಕಳೆದುಕೊಳ್ಳಬಹುದು ಅಥವಾ ಇಡೀ ದೇಹದ ಚಲನೆಯನ್ನೇ ಕಳೆದುಕೊಂಡು ಶಾಶ್ವತವಾದ ಅಂಗವೈಕಲ್ಯದಿಂದ ಬಳಲುವಂತೆ ಆಗಬಹುದು. ಹೀಗಾಗಿ ಇದನ್ನು ತಡೆಯುವಲ್ಲಿ `ಪೆಂಟಾವಲೆಂಟ್' ಲಸಿಕೆ ಪ್ರಮುಖ ಪಾತ್ರ ವಹಿಸುತ್ತದೆ.
-ಬಿ.ಪಿ.ಸುಬ್ರಮಣ್ಯ, ವಿಶ್ವ ಆರೋಗ್ಯ ಸಂಸ್ಥೆಯ ರಾಜ್ಯ ವೈದ್ಯಾಧಿಕಾರಿ

ಅಡ್ಡ ಪರಿಣಾಮಗಳಿಲ್ಲ...

ಈ ಮೊದಲು ಯಾವುದೇ ಲಸಿಕೆ ಕೊಟ್ಟರೂ ಮಕ್ಕಳಿಗೆ ಜ್ವರ ಹಾಗೂ ಕೆಲವೊಮ್ಮೆ ಮೈ ಚರ್ಮ ಕೆಂಪಗಾಗುವ ಸಾಧ್ಯತೆ ಇರುತ್ತಿತ್ತು. ಆದರೆ `ಪೆಂಟಾವಲೆಂಟ್' ಲಸಿಕೆ ನೀಡಿದಾಗ ಇಂತಹ ಅಡ್ಡ ಪರಿಣಾಮಗಳು ಆಗುವುದಿಲ್ಲ. ಒಂದು ವೇಳೆ ತೀರಾ ಸಣ್ಣ ಪುಟ್ಟ ತೊಂದರೆಗಳಾದರೆ, ಅದಕ್ಕೆ ಭಯಪಡುವ ಅವಶ್ಯಕತೆ ಇಲ್ಲ. ಈ ಲಸಿಕೆಯನ್ನು ಈಗಾಗಲೇ 20 ವರ್ಷಗಳಿಂದ 180 ದೇಶಗಳಲ್ಲಿ ಬಳಸಲಾಗುತ್ತಿದೆ. 10 ವರ್ಷಗಳಿಂದ ಭಾರತದಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಯಾವುದೇ ತೊಂದರೆಗಳು ವರದಿಯಾಗಿಲ್ಲ. ಇದು ಹೆಚ್ಚು ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ.
-ಡಾ. ಗೀತಾ ನ್ಯಾಮಗೌಡರ್,
ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಇಲಾಖೆಯ ಯೋಜನಾ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT