ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಮ್ಮಂಡ ಅಪ್ಪಯ್ಯನ ಓಟಕ್ಕೆ ಬೆಳ್ಳಿಹಬ್ಬ

Last Updated 4 ಸೆಪ್ಟೆಂಬರ್ 2011, 10:10 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಓಟಗಾರ ಅಪ್ಪಯ್ಯ ಎಂದೇ ಖ್ಯಾತರಾಗಿರುವ ಪೊನ್ನಂಪೇಟೆಯ ಪೆಮ್ಮಂಡ ಅಪ್ಪಯ್ಯ ಅವರ ಓಟಕ್ಕೆ ಈಗ ಬೆಳ್ಳಿಹಬ್ಬದ ಸಂಭ್ರಮ.

1986ರಲ್ಲಿ ಅವರು ಓಟಕ್ಕೆ ಚಾಲನೆ ನೀಡಿದರು. ಈಗ ಅವರಿಗೆ 69 ಹರೆಯ. ಅವರ ಓಟದ ಬೆಳ್ಳಿಹಬ್ಬವನ್ನು ಯಾರೂ ಆಚರಿಸುತ್ತಿಲ್ಲ. ಆದರೆ ಇದಾವುದರ ಅರಿವಿಲ್ಲದ ಅಪ್ಪಯ್ಯ ಮಾತ್ರ  ಈಗಲೂ ಓಡುತ್ತಲೇ ಇದ್ದಾರೆ.

ತಮ್ಮ 25 ವರ್ಷಗಳ ಸುದೀರ್ಘ ಓಟದಲ್ಲಿ ಅಪ್ಪಯ್ಯ ಗಳಿಸಿದ ಪ್ರಶಸ್ತಿ ಪದಕಗಳಿಗೆ ಲೆಕ್ಕವಿಲ್ಲ. 1986ರಲ್ಲಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಓಟ ಆರಂಭಿಸಿದ ಇವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಪಡೆದರು.

ಇದು ಇವರ ಮೊದಲ ಪ್ರಶಸ್ತಿ. ಬಳಿಕ 1990ರಲ್ಲಿ ಕೌಲಲಾಂಪುರದಲ್ಲಿ  ನಡೆದ ವೆಟರೆನ್ಸ್ ಅಥ್ಲೇಟಿಕ್ಸ್ 5ಸಾವಿರ ಮೀಟರ್ ಓಟದ ಸ್ಪರ್ಧೆ ಹಾಗೂ 1992ರಲ್ಲಿ ಸಿಂಗಾಪುರ ಮತ್ತು ಬ್ಯಾಂಕಾಕ್‌ನಲ್ಲಿ ನಡೆದ 10 ಸಾವಿರ ಮೀಟರ್ ಸ್ಪರ್ಧೆಯ ಏಷಿಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳಿಸಿದರು. ಅಂದು ಇವರು ಗಳಿಸಿದ ದಾಖಲೆ ಈಗಲೂ ದಾಖಲಾಗಿಯೇ ಉಳಿದಿದೆ.

ಅಪ್ಪಯ್ಯ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ 7 ಹಾಗೂ ರಾಷ್ಟ್ರೀಯ ಸ್ಪರ್ಧೆಯಲ್ಲಿ 18 ಚಿನ್ನದ ಪದಕ ದಂತೆ ಇದು ವರೆಗೆ ಒಟ್ಟು 25 ಚಿನ್ನಗಳಿಸಿದ್ದಾರೆ. ಇವುಗಳ ಜತೆಗೆ 13  ಬೆಳ್ಳಿ, 12 ಕಂಚಿನ ಪದಕ ಪಡೆದುಕೊಂಡಿದ್ದಾರೆ.

1962ರಲ್ಲಿ ಎಚ್.ಡಿ . ಕೋಟೆಯಲ್ಲಿ ಕೃಷಿ ಅಧಿಕಾರಿಯಾಗಿದ್ದ ಅಪ್ಪಯ್ಯ ಅಲ್ಲಿನ ನುಗು ಬೀರ‌್ವಾಳ್ ಜಲಾಶಯದಲ್ಲಿ ಮೊದಲು ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದರು. ಇದು ಇವರ ಮೊದಲ ಕ್ರೀಡಾ ಸ್ಪರ್ಧೆ. ನಂತರ ಓಟ ಹಾಗೂ ಕಾಲು ನಡಿಗೆ ಕಡೆಗೆ ಗಮನ ಹರಿಸಿ ನಿರಂತರ ಅಭ್ಯಾಸದಲ್ಲಿ ತೊಡಗಿದರು.

ಇದರ ಫಲವಾಗಿ ಅಪ್ಪಯ್ಯ ಇದುವರೆಗೆ ಸುಮಾರು 150ಕ್ಕೂ ಹೆಚ್ಚಿನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಅವರ ಬಳಿ ಇರುವ ಪ್ರಶಸ್ತಿ, ಪ್ರಮಾಣ ಪತ್ರಗಳನ್ನು ಲೆಕ್ಕಹಾಕವುದಕ್ಕೆ ಒಂದು ದಿನವಾದರೂ ಬೇಕು.

ಹರಕೆಯಂತೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವ ಸಾಧಿಸಿದ್ದರಿಂದ ಅಪ್ಪಯ್ಯ ವಿರಾಜಪೇಟೆ ಬಳಿಯ ಬೇತ್ರಿಯಿಂದ ಪೊನ್ನಂಪೇಟೆ ವರೆಗೆ ಸುಮಾರು 34 ಕಿ.ಮೀ. ದೂರ ಓಡಿ ಹರಕೆ ತೀರಿಸಿ ಜಿಲ್ಲೆಯ ಜನರ ಗಮನ ಸೆಳೆದರು.

ಅಪ್ಪಯ್ಯ ಮೂಲತಃ ವಿರಾಜಪೇಟೆ ತಾಲ್ಲೂಕಿನ ಕೋಟೂರಿನವರು. ಬಡತನದ ಕುಟುಂಬದಲ್ಲಿ ಹುಟ್ಟಿದ ಇವರು, ಚಿಕ್ಕ ವಯಸ್ಸಿ ನಲ್ಲೇ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡರು. ಬಳಿಕ ಅಜ್ಜ- ಅಜ್ಜಿಯ ಆಶ್ರದಲ್ಲಿ ಬೆಳೆದು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣವನ್ನು ಕೋಟೂರು ಮತ್ತು ಬೆಕ್ಕೆಸೊಡ್ಲೂರಿನಲ್ಲಿ ಮುಗಿಸಿದರು.

ಪದವಿ ಶಿಕ್ಷಣವನ್ನು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪಡೆ ದರು. 2 ವರ್ಷಗಳ ಕಾಲ ಕೃಷಿ ವಿಜ್ಞಾನದಲ್ಲಿ ತರಬೇತಿ ಪಡೆದು ಕೃಷಿ ಇಲಾಖೆಯಲ್ಲಿ ನೌಕರಿಗೆ ಸೇರಿ ದರು. ಉದ್ಯೋಗದ ನಡುವೆ ತಮ ಗಿದ್ದ ಆಸಕ್ತಿಯಿಂದ  ಮೈಸೂರು ವಿವಿಯಿಂದ ಎಂ.ಪಿಎಡ್ ಪದವಿ ಗಳಿಸಿದರು.

ಸಹಾಯಕ ಕೃಷಿ ಅಧಿಕಾರಿ ಯಾಗಿ ರಾಜ್ಯದ ವಿವಿಧ ಭಾಗ ಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅಪ್ಪಯ್ಯ ತಮ್ಮ ಕೆಲಸದ ನಡುವೆಯೂ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರಕ್ಕೆ ಹೆಸರು ತಂದಿದ್ದಾರೆ. ಈ ಕಾರಣಕ್ಕೆ ಇವರಿಗೆ ಜ್ಲ್ಲಿಲೆಯ ವಿವಿಧ ಸಂಘ- ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಆದರೆ ರಾಜ್ಯಮಟ್ಟದ ಯಾವುದೇ ಪ್ರಶಸ್ತಿಗಳು ಇವರಿಗೆ ಸಂದಿಲ್ಲದಿರುವುದು  ಅವರಿಗೆ ಬೇಸರವಿದೆ.

`ಪ್ರಶಸ್ತಿ ಬರಲಿ, ಬರದಿರಲಿ. ನಾನು ಮಾತ್ರ ಜೀವ ಇರುವವರೆಗೂ ಓಡುತ್ತಲೇ ಇರುತ್ತೇನೆ~ ಎಂಬುದು ಅವರ ನುಡಿ.

ಅಪ್ಪಯ್ಯ ಇದೀಗ ನಿವೃತ್ತ ಜೀವನವನ್ನು ಪೊನ್ನಂಪೇಟೆಯಲ್ಲಿ ಕಳೆಯುತ್ತಿದ್ದಾರೆ. ಪತ್ನಿ ಮಾಯಮ್ಮ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಉತ್ತಮ ಸೇವೆಸಲ್ಲಿಸಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿ ದ್ದಾರೆ. ಇಬ್ಬರು ಪುತ್ರಿಯರನ್ನು ಹೊಂದಿದ್ದು, ಹಿರಿಯ ಮಗಳು ಎಂ.ಕಾಂ. ಪದವೀಧರೆಯಾಗಿದ್ದರೆ, ಕಿರಿಯ ಮಗಳು ದಂತವೈದ್ಯೆಯಾಗಿ ದುಬೈನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅಪ್ಪಯ್ಯ ಅವರಿಗೆ ನಡೆಯುವುದೇ ಮರೆತು ಹೋಗಿದೆ. ಹಾಲು, ಪೇಪರ್ ತರಲು ಮನೆಯಿಂದ ಹೊರಡುವಾಗಲು ಅಪ್ಪಯ್ಯ ಓಡುತ್ತಲೇ ಹೋಗುತ್ತಾರೆ. ಆದ್ದರಿಂದಲೇ ಇವರಿಗೆ ಓಟಗಾರ ಅಪ್ಪಯ್ಯ ಎಂಬ  ಹೆಸರು ಜನಜನಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT