ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಸಿಬ್ಬಂದಿಗೆ ಪೌರ ಸನ್ಮಾನ

Last Updated 15 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಎಸ್.ಪಿ.ಮಹಾಂತೇಶ್ ಕೊಲೆ ಪ್ರಕರಣ, ಚಿಕ್ಕಬಾಣಾವರದ ಕಾರ್ಪೊರೇಷನ್ ಬ್ಯಾಂಕ್ ದರೋಡೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ 21 ಮಂದಿ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ರೌಂಡ್ ಟೇಬಲ್ ಸಂಸ್ಥೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇನ್‌ಸ್ಪೆಕ್ಟರ್, ಎಎಸ್‌ಐ, ಎಸ್‌ಐ, ಹೆಡ್ ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್‌ಗಳನ್ನು ಗೌರವಿಸಲಾಯಿತು.

ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಜಂಟಿ ಪೊಲೀಸ್ ಕಮಿಷನರ್ ಬಿ.ಎನ್.ಎಸ್.ರೆಡ್ಡಿ ಮಾತನಾಡಿ,`ಯಾವುದೇ ಪ್ರಕರಣಗಳನ್ನು ಭೇದಿಸುವಲ್ಲಿ ಕೆಳ ಹಂತದ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ, ಅದರ ಶ್ರೇಯ ಮಾತ್ರ ಹಿರಿಯ ಅಧಿಕಾರಿಗಳಿಗೆ ಸಲ್ಲುತ್ತದೆ. ಸಾಧನೆ ವಿಷಯದಲ್ಲಿ ಹುದ್ದೆಗಳನ್ನು ಪರಿಗಣಿಸದೆ ಸಿಬ್ಬಂದಿಯ ಶ್ರಮವನ್ನು ಗುರುತಿಸಿ ಗೌರವಿಸುವುದು ಮುಖ್ಯ. ಮಹತ್ವದ ಪ್ರಕರಣಗಳನ್ನು ಭೇದಿಸುವಲ್ಲಿ ಕೆಳ ಹಂತದ ಸಿಬ್ಬಂದಿ ತೋರಿದ ಶ್ರಮ, ಇಲಾಖೆಯ ವಿಶ್ವಾಸವನ್ನು ಹೆಚ್ಚಿಸಿದೆ' ಎಂದರು.

ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಮಾತನಾಡಿ, `ನಮ್ಮ ಸಿಬ್ಬಂದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ವಿರಳ. ಕಾರಣ ಅವರು ಸಭಾಂಗಣದ ಆಚೆ ನಿಂತು ಬಂದೋಬಸ್ತ್, ಸಂಚಾರ ನಿರ್ವಹಣೆಯಂತಹ ಕರ್ತವ್ಯದಲ್ಲಿ ತೊಡಗಿರುತ್ತಾರೆ.

ಆದರೆ, ಈ ಕಾರ್ಯಕ್ರಮದ ಮೂಲಕ ರೌಂಡ್ ಟೇಬಲ್ ಸಂಸ್ಥೆ ಪೊಲೀಸರನ್ನು ವೇದಿಕೆಯ ಮೇಲೆ ತಂದಿರುವುದು ಪ್ರಶಂಸಾರ್ಹ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿ ಕೆಲವೊಮ್ಮೆ ಸಾರ್ವಜನಿಕರನ್ನು ನಿಂದಿಸಿರಬಹುದು. ಆದರೆ, ನಾಗರಿಕರ ರಕ್ಷಣೆಯೇ ಅವರ ಮೂಲ ಉದ್ದೇಶವಾಗಿರುತ್ತದೆ' ಎಂದು ಹೇಳಿದರು.

ನಂತರ ಮಾತನಾಡಿದ ನಟಿ ಪ್ರಿಯಾಂಕ ಉಪೇಂದ್ರ, `ಪೊಲೀಸರು ತಮ್ಮ ಕುಟುಂಬ ಸದಸ್ಯರನ್ನು ಮರೆತು ಸಮಾಜದ ರಕ್ಷಣೆಗೆ ನಿಂತಿರುತ್ತಾರೆ. ಅವರೇ ದೇಶದ ನಿಜವಾದ ಹೀರೊಗಳು' ಎಂದರು.

`ಸಂಚಾರ ನಿರ್ವಹಣೆ ಮಾಡುವ ವೇಳೆ ಆಟೊ ಚಾಲಕರು ಹಾಗೂ ಬೈಕ್ ಸವಾರರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಅವರ ಮೂಲಕ ಸುಮಾರು 2400 ಜನ ರಕ್ತದಾನ ಮಾಡಲು ಪ್ರೇರಣೆ ನೀಡಿದ್ದೇನೆ. ಈ ಕೆಲಸವನ್ನು ಮೆಚ್ಚಿ ನನ್ನನ್ನು ಅಭಿನಂದಿಸಿರುವುದು ಸಂತಸ ತಂದಿದೆ' ಎಂದು ಸಿಟಿ ಮಾರುಕಟ್ಟೆ ಸಂಚಾರ ಠಾಣೆಯ ಎಎಸ್‌ಐ ಕೃಷ್ಣಸಿಂಗ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT