ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಯಲ್ಲಿ ಕಾಲುವೆ ವಿಸ್ತರಣೆ ಕಾಮಗಾರಿ

Last Updated 7 ಜುಲೈ 2013, 10:50 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ  ತಾಲ್ಲೂಕಿನ ಅಡವಿಆನಂದದೇವನಹಳ್ಳಿ ಗ್ರಾಮದ ಏತ ನೀರಾವರಿ ಯೋಜನೆಯ ಇನ್‌ಟೇಕ್ ಕಾಲುವೆ  ವಿಸ್ತರಣೆ ಮಾಡುವಂತೆ ಕಳೆದ 13 ವರ್ಷದಿಂದ ಒತ್ತಾಯಿಸುತ್ತಿದ್ದ ಅಚ್ಚುಕಟ್ಟು ಪ್ರದೇಶದ ರೈತರ ಬೇಡಿಕೆ ಕೊನೆಗೂ ಈಡೇರಿದೆ.

ಕ್ಷೇತ್ರದ ಶಾಸಕ ಎಲ್.ಬಿ.ಪಿ.ಭೀಮಾನಾಯ್ಕ ತಮ್ಮ ಅನುದಾನದಲ್ಲಿ ಇನ್‌ಟೇಕ್ ಕಾಲುವೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿದ್ದು, ಭರದಿಂದ ನಡೆದಿರುವ ಇನ್‌ಟೇಕ್ ಕಾಲುವೆ ವಿಸ್ತರಣೆ ಕಾರ್ಯ  ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಪ್ರತಿ ವರ್ಷ ತುಂಗಭದ್ರ ಹಿನ್ನೀರು ಗ್ರಾಮವನ್ನು ಸುತ್ತುವರಿಯುತ್ತಿದ್ದಂತೆ ಜಾಗೃತಗೊಳ್ಳುತ್ತಿದ್ದ ಏತ ನೀರಾವರಿ ಯೋಜನೆಯ ರೈತರು ಮತ್ತು ಗ್ರಾಮಸ್ಥರು ಇನ್‌ಟೇಕ್ ಕಾಲುವೆ ವಿಸ್ತರಣೆ ಕಾಮಗಾರಿಗೆ ಆಗ್ರಹಿಸುತ್ತಿದ್ದಲೇ ಇದ್ದರು. ಆದರೆ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಪೂರಕ ಅನುದಾನದ ಕೊರತೆಯ ನೆಪವೊಡ್ಡಿ  ವಿಸ್ತರಣೆ  ಕಾಮಗಾರಿ ಕೈಗೆತ್ತಿಕೊಳ್ಳದೆ ರೈತರನ್ನು ಅತಂತ್ರಗೊಳಿಸುತ್ತಿದ್ದರು.

ತುಂಗಭದ್ರಾ ಹಿನ್ನೀರನ್ನು ಬಳಸಿಕೊಂಡು ನೀರುಣಿಸುವ ಮೂಲಕ ಗ್ರಾಮದ ನಾಲ್ಕು ನೂರು ಎಕರೆಗೂ ಹೆಚ್ಚು ಖುಷ್ಕಿ ಜಮೀನನ್ನು ನೀರಾವರಿಗೊಳಪಡಿಸುವ ಮಹತ್ತರ ಉದ್ದೇಶದಿಂದ ರೂಪಿತವಾದ 1980ರಲ್ಲಿ ಆಗಿನ ನೀರಾವರಿ ಸಚಿವರಾದ ಡಿ.ಬಿ.ಚಂದ್ರೇಗೌಡರಿಂದ ಉದ್ಘಾಟನೆಯಾದ ಈ ಯೋಜನೆ ಮಾಜಿ ಶಾಸಕರಾದ ಕೆ.ಚನ್ನಬಸವನಗೌಡರ ರಾಜಕೀಯ ಇಚ್ಛಾಶಕ್ತಿಯ ಪ್ರತೀಕ.

ಆದರೆ, ದಿನದ 24ಗಂಟೆ ವಿದ್ಯುತ್ ಪೂರೈಸುವ ಎಕ್ಸ್‌ಪ್ರೆಸ್ ಫೀಡರ್ ಲೈನ್, ಪೂರಕ ಅಶ್ವಶಕ್ತಿಯ ಪಂಪ್‌ಸೆಟ್ ಹೊಂದಿರದ ಪಂಪ್‌ಹೌಸ್ ಜೊತೆಗೆ 400 ಎಕರೆ ಜಮೀನುಗಳಿಗೆ ನೀರು ಪೂರೈಸಲು ಅಗತ್ಯವಾಗಿರುವ 20 ಅಡಿ ಅಗಲದ ಬದಲಾಗಿ ಕಿರಿದಾದ ಇನ್‌ಟೇಕ್ ಕಾಲುವೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಶಾಪವಾಗಿ ಪರಿಣಮಿಸಿತ್ತು.

ಈ  ಕುರಿತು ಎರಡು ಬಾರಿ ಪ್ರಜಾವಾಣಿ ವರದಿ ಪ್ರಕಟಿಸಿತ್ತು. ಈ ಹಿಂದಿನ ಶಾಸಕ ನೇಮಿರಾಜ್‌ನಾಯ್ಕ ಇದೇ ಯೋಜನೆಯ ರೈಸಿಂಗ್ ಮೇನ್ ಬದಲಾವಣೆ ಕಾಮಗಾರಿಯನ್ನು ರೂ. 60ಲಕ್ಷ ಅನುದಾನದಲ್ಲಿ ಪೂರೈಸಿ ಇನ್‌ಟೇಕ್ ಕಾಲುವೆ ವಿಸ್ತರಣೆ  ಬಗ್ಗೆ ಮಾತ್ರ ಜಾಣ ಮರೆವು ಪ್ರದರ್ಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇತ್ತೀಚೆಗೆ ಯೋಜನೆಯ ಪ್ರದೇಶಕ್ಕೆ ಭೇಟಿ ನೀಡಿದ ಭೀಮಾನಾಯ್ಕ ಕಿರಿದಾದ ಇನ್‌ಟೇಕ್ ಕಾಲುವೆ, ಹೂಳು ತುಂಬಿರುವ ಬಾವಿ ಮತ್ತು ಕಡಿಮೆ ಎತ್ತರದ ನೀರಿನ ಸಂಗ್ರಹದ ತೊಟ್ಟಿ ಮತ್ತು ಕಾಲುವೆಗಳ ಸ್ಥಿತಿಗಳನ್ನು ಪರಿಶೀಲಿಸಿ ಯೋಜನೆಯ ಸಮರ್ಪಕ ಅನುಷ್ಠಾನದ ಹಿನ್ನೆಲೆಯಲ್ಲಿ ಪೂರಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸಣ್ಣ ನೀರಾವರಿ ಇಲಾಖೆಯ ಎಇಇ ಶಿವಕುಮಾರ್‌ಗೆ ಸ್ಪಷ್ಟ ಆದೇಶ ನೀಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT