ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣವ್ ಕೋರಿಕೆ ತಿರಸ್ಕರಿಸಿದ ಬಿಜೆಪಿ

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಉದ್ದೇಶಿತ ಲೋಕಪಾಲ ಮಸೂದೆಗೆ ರಾಜಕೀಯ ಪಕ್ಷಗಳು ಅಭಿಪ್ರಾಯ ಸಲ್ಲಿಸುವಂತೆ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಮಾಡಿರುವ ಕೋರಿಕೆಯನ್ನು ಬಿಜೆಪಿ ತಿರಸ್ಕರಿಸಿದೆ.

ನಾಗರಿಕ ಸಮಾಜದ ಪ್ರತಿನಿಧಿಗಳ ಕರಡು ರಚನಾ ಸಮಿತಿಯಲ್ಲಿ ರಾಜಕೀಯ ಪಕ್ಷವೊಂದು ತನ್ನ ಅಭಿಪ್ರಾಯಗಳನ್ನು ಸಲ್ಲಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿರುವ ಬಿಜೆಪಿ, ಇದು ಸಂವಿಧಾನಾತ್ಮಕ ನಡವಳಿಕೆಯನ್ನು ಅಸ್ತವ್ಯಸ್ತಗೊಳಿಸುವ ಸಾಧ್ಯತೆಗಳಿರುತ್ತದೆ ಎಂದು ಹೇಳಿದೆ.

`ಲೋಕಪಾಲ ಮಸೂದೆ ಕುರಿತಂತೆ ಅಂತಿಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ರಾಜಕೀಯ ಪಕ್ಷಗಳು, ಸಂಸದರು ಮತ್ತು ಸಂಸತ್ತಿಗೆ ಅವಕಾಶವಿರುವಾಗ, ಅದು ಇನ್ನೂ ಪ್ರಗತಿ ಹಂತದಲ್ಲಿ ಇರುವಾಗಲೇ ರಾಜಕೀಯ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ಕರಡು ರಚನಾ ಸಮಿತಿಗೆ ನೀಡಬೇಕು ಎನ್ನುವುದು ಸಮಂಜಸವಲ್ಲ.
 
ಇದನ್ನು ನಾಗರಿಕ ಸಮಾಜದ ಪ್ರತಿನಿಧಿಗಳು ಒಪ್ಪಿಕೊಳ್ಳಬೇಕು ಇಲ್ಲವೇ ಸಾಂವಿಧಾನಿಕ ಬಿಕ್ಕಟ್ಟು ತಲೆದೋರುತ್ತದೆ ಎಂಬ ಒತ್ತಡ ಹೇರುವ ಪ್ರಯತ್ನ ತರವಲ್ಲ~ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.

ಉದ್ದೇಶಿತ ಮಸೂದೆ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ಪ್ರಣವ್ ಮುಖರ್ಜಿ ಮೇ 31 ರಂದು ಬಿಜೆಪಿ ಮತ್ತು ಇತರ ಪಕ್ಷಗಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಗಡ್ಕರಿ ಈ ಪ್ರತಿಕ್ರಿಯೆ ನೀಡಿದ್ದಾರೆ.

`ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗುವ ಮೊದಲು ಅಭಿಪ್ರಾಯ ಪಡೆಯಲು ಬಿಜೆಪಿಯನ್ನು ಸಂಪರ್ಕಿಸಬಹುದು~ ಎಂದು ಗಡ್ಕರಿ ಹೇಳಿದ್ದಾರೆ.

`ಕರಡು ಸಮಿತಿಯ ಸದಸ್ಯರ ನಡುವೆ ಅಭಿಪ್ರಾಯಭೇದವಿದ್ದರೆ, ಎರಡೂ ದೃಷ್ಟಿಕೋನಗಳ ಅಂಶಗಳನ್ನೊಳಗೊಂಡ ಅಂತಿಮ ವರದಿಯನ್ನು ಸಿದ್ಧಪಡಿಸಿದ ಬಳಿಕ ಅಭಿಪ್ರಾಯ ತಿಳಿಸುವಂತೆ ಕೋರಬಹುದು. ಆದರೆ ಮಸೂದೆ ಸಿದ್ಧಗೊಳ್ಳುವ ಮೊದಲೇ ರಾಜಕೀಯ ಪಕ್ಷಗಳು ಮತ್ತು ಸಂಸದರು ಅದನ್ನು ಒಪ್ಪುವ ಅಥವಾ ತಿರಸ್ಕರಿಸುವ ಕುರಿತಂತೆ ಅಭಿಪ್ರಾಯಗಳನ್ನು ಬೇರೆಯವರಿಗೆ ಸಲ್ಲಿಸುವುದು ಸರಿಯಲ್ಲ~ ಎಂದರು.

`ಲೋಕಪಾಲ ಮಸೂದೆ ಕುರಿತಂತೆ ಸರ್ಕಾರ ಇದೀಗ ವಿರೋಧಪಕ್ಷಗಳನ್ನು ಸಂಪರ್ಕಿಸುತ್ತಿದೆ. ಅಲ್ಲದೆ ತಮ್ಮ ಸಲಹೆಗಳನ್ನು ಸಲ್ಲಿಸಲು ಒಂದು ವಾರಕ್ಕೂ ಕಡಿಮೆ ಕಾಲಾವಕಾಶ ನೀಡಿದೆ. ತನ್ನ ವಿರೋಧವಿದ್ದರೂ ಅದನ್ನು ಕಡೆಗಣಿಸಿ ಮಸೂದೆಯ ಕರಡು ರಚನೆ ಪ್ರಕ್ರಿಯೆ ಪ್ರಾರಂಭಿಸಿದ್ದಕ್ಕೆ ತನ್ನ ಅಸಮಾಧಾನ ಹೊರಹಾಕಿದೆ~ ಎಂದು ಗಡ್ಕರಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT