ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಕ್ಷಣದ ಸ್ಮಾರ್ಟ್ ಬದಲಾವಣೆ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೈಯಲ್ಲಿ ಸ್ಮಾರ್ಟ್‌ಫೋನ್ ಇದ್ದರೆ ಕೆಲಸ ಸಲೀಸು. ಅಂದುಕೊಂಡದ್ದನ್ನು ತಕ್ಷಣವೇ ಮಾಡಬಹುದಾದ, ಬೆರಳ ತುದಿಯಲ್ಲೇ ಇಡೀ ಜಗತ್ತಿನ ಆಗು ಹೋಗುಗಳನ್ನು ತಿಳಿಸಬಲ್ಲ ಸಂಗಾತಿ ಈ ಸ್ಮಾರ್ಟ್‌ಫೋನ್. ಕೇವಲ ಒಂದು ಸ್ಪರ್ಶದಲ್ಲಿ ಏನೆಲ್ಲಾ ಪಡೆಯಬಹುದಾದ ವಿಸ್ಮಯ ಲೋಕವಿದು.

ಸ್ಮಾರ್ಟ್‌ಫೋನ್ ಸ್ವರೂಪವೇ ಅಚ್ಚರಿ ಮೂಡಿಸುವಂತಹದ್ದು. ಅದರ ತಂತ್ರಜ್ಞಾನವೂ ಅಂಥದ್ದೆ. ಇಂದು ನೂತನ ತಂತ್ರಜ್ಞಾನದೊಂದಿಗೆ ಪರಿಚಿತವಾಗುವ  ಸ್ಮಾರ್ಟ್‌ಫೋನ್ ಕೆಲವೇ ತಿಂಗಳುಗಳಲ್ಲಿ ಪರಿಷ್ಕರಣೆಗೊಂಡು ಮತ್ತೊಂದು ಹೆಸರಿನಲ್ಲಿ ಅನಾವರಣಗೊಳ್ಳುತ್ತದೆ. ಇಂತಹ ಸಣ್ಣ ಆವಿಷ್ಕಾರಗಳೇ ಮುಂದೆ ಸ್ಮಾರ್ಟ್‌ಫೋನ್ ಲೋಕಕ್ಕೆ ಹೊಸ ನೋಟವನ್ನು ನೀಡಲಿವೆ ಎನ್ನುತ್ತಾರೆ ಮಾರುಕಟ್ಟೆ ತಜ್ಞ ನಿಕ್ ವಿಂಗ್ ಫೀಲ್ಡ್.

ಸ್ಮಾರ್ಟ್‌ಫೋನ್ ಎಂಬ ಕಲ್ಪನೆಗೆ ರೆಕ್ಕೆ ಮೂಡಿದ್ದು ಆ್ಯಪಲ್‌ನ ಐಫೋನ್‌ನಿಂದ. 2007ರಲ್ಲಿ ಕಾಣಿಸಿಕೊಂಡ ಐಫೋನ್ ಭಾರಿ ಪ್ರಮಾಣದಲ್ಲಿ ಬಿಕರಿಗೊಂಡಿತ್ತು. ಇತ್ತೀಚೆಗೆ ಆ್ಯಪಲ್ ಪರಿಚಯಿಸಿದ ಐಫೋನ್-5ನಲ್ಲಿಯೂ ಹೆಚ್ಚಿನದನ್ನೇ ಗ್ರಾಹಕರು ನಿರೀಕ್ಷಿಸಿದ್ದಾರೆ.

ಹಿಂದಿನ ಐಫೋನ್‌ಗಳಿಗಿಂತ ತಾಂತ್ರಿಕವಾಗಿ ಪರಿಷ್ಕರಣೆಗೊಂಡ ಈ ಐಫೋನ್-5 ಆ್ಯಪಲ್ ಇನ್ನಷ್ಟು ಎತ್ತರಕ್ಕೆ ಏರಲಿರುವ ವಿಶ್ವಾಸ ಹೊಂದಿದೆ.

ಅತ್ಯಂತ ವೇಗದ ಚಿಪ್, ಕಣ್ಣಿಗೆ ಹಿತವೆನಿಸುವ ವಿಶಾಲ ಪರದೆ, ಅತಿ ವೇಗದ ವೈರ್‌ಲೆಸ್ ಅಂತರಜಾಲ ಸಂಪರ್ಕ ಈ ಎಲ್ಲಾ ಅಂಶಗಳೂ ಪರಿಷ್ಕರಣೆಗೊಂಡು ಹೊಸ ಸ್ಮಾರ್ಟ್‌ಫೋನ್ ರೂಪದಲ್ಲಿ ಗ್ರಾಹಕರ ಕೈ ತಲುಪುತ್ತಿರುತ್ತವೆ.

ಆದರೂ ಮೊಟ್ಟ ಮೊದಲ ಬಾರಿ ಟಚ್ ಸ್ಕ್ರೀನ್, ವಿನೂತನ ಸಾಫ್ಟ್‌ವೇರ್ ಮುಂದಿಟ್ಟು ಗ್ರಾಹಕರಿಗೆ ಅಚ್ಚರಿ ಮೂಡಿಸಿದ ಐಫೋನ್‌ಗೆ ಬಂದ ಪ್ರತಿಕ್ರಿಯೆ ವಿಭಿನ್ನವಾಗಿತ್ತು~ ಎನ್ನುತ್ತಾರೆ ಮೊಬೈಲ್ ವಿಮರ್ಶಕ ಚೇತನ್ ಶರ್ಮಾ.

ಈವರೆಗೆ ಬಿಡುಗಡೆಗೊಂಡಿರುವ ಸ್ಮಾರ್ಟ್‌ಫೋನ್‌ಗಳಲ್ಲಿನ ತಾಂತ್ರಿಕ ಪರಿಷ್ಕರಣೆಯನ್ನು ಗಮನಿಸಿದರೆ ದೊಡ್ಡ ಪ್ರಮಾಣದಲ್ಲಿನ ಬದಲಾವಣೆಯನ್ನು ಕಾಣಬಹುದು. ಇನ್ನೂ ಕೆಲವು ವರ್ಷಗಳ ಅಂತರದಲ್ಲಿ ಸ್ಮಾರ್ಟ್‌ಫೋನ್‌ನ ಭಾಗಗಳು, ತಂತ್ರಾಂಶ, ಬ್ಯಾಟರಿಯಂತಹ ಅಂಶಗಳಲ್ಲಿ ಇನ್ನೂ ಅತ್ಯಂತ ಪರಿಣಾಮಕಾರಿ ಭಿನ್ನತೆಯನ್ನು ಕಾಣಬಹುದು ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ.

ಆ್ಯಪಲ್ ಸದಾ ಗ್ರಾಹಕರಿಗೆ ಹೊಸತು ನೀಡುವ ಪ್ರಯತ್ನದಲ್ಲಿರುತ್ತದೆ ಎಂಬುದಕ್ಕೆ ಅದರ `ಸಿರಿ~ ಅಪ್ಲಿಕೇಶನ್ ಕೂಡ ಉದಾಹರಣೆಯಾಗಬಲ್ಲದು. `ವಾಯ್ಸ ಆಕ್ಟಿವೇಟೆಡ್ ವರ್ಚ್ಯುವಲ್ ಅಸಿಸ್ಟೆಂಟ್~ ಎಂಬ ತಂತ್ರಜ್ಞಾನವನ್ನು ಐಫೋನ್ 4ಎಸ್ ನೊಂದಿಗೆ ಪರಿಚಯಿಸಿತ್ತು.

ಗ್ರಾಹಕರಿಗೆ ಇದು ವಿಭಿನ್ನ ಅನುಭವಕ್ಕೆ ತೆರೆದುಕೊಳ್ಳುವಂತೆ ಮಾಡಿದರೂ ನಿಖರತೆಯ ದೃಷ್ಟಿಯಿಂದ ಹಿಂದುಳಿಯಿತು. ನಂತರ ಆ್ಯಪಲ್ `ಸಿರಿ~ ಪರಿಷ್ಕರಣೆಯತ್ತ ಚಿಂತಿಸುತ್ತಿದ್ದರೆ  ಆಂಡ್ರಾಯ್ಡ ಫೋನ್‌ನ ಆಪರೇಟಿಂಗ್ ಸಿಸ್ಟಮ್ ತಯಾರಕ ಗೂಗಲ್ `ವಾಯ್ಸ ಸರ್ಚ್~ ತಂತ್ರಜ್ಞಾನದ ಹುಡುಕಾಟದಲ್ಲಿತ್ತು.

ಆನಂತರದ ಬೆಳವಣಿಗೆಯಲ್ಲಿ ಗೂಗಲ್ ಮತ್ತು ಅದರ ಮೊಬೈಲ್ ಫೋನ್ ಪಾಲುದಾರರು ಕೂಡಿ ಸ್ಮಾರ್ಟ್‌ಫೋನ್‌ಗಳಲ್ಲಿ ನಿಯರ್  ಫೀಲ್ಡ್ ಕಮ್ಯುನಿಕೇಶನ್ (ಎನ್‌ಎಫ್‌ಸಿ) ತಂತ್ರಜ್ಞಾನ ಪರಿಚಯಿಸಿದವು. ಆದರೆ, ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವುದರಲ್ಲಿ ಹಿಂದುಳಿಯಿತು.

ಆ್ಯಪಲ್ ಈ ವಿಷಯದಲ್ಲಿ ಅತಿ ಹೆಚ್ಚು ಕಾಳಜಿ ವಹಿಸಿ ತನ್ನ ನೂತನ ಐಫೋನ್‌ಲ್ಲಿ `ಪಾಸ್‌ಬುಕ್~ ಎಂಬ ಮೊಬೈಲ್ ಪೇಮೆಂಟ್ ಸ್ಟೋರ್ ಅನ್ನು ಎಲೆಕ್ಟ್ರಾನಿಕ್ ಆಯಾಮದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿತು.

2007ರಲ್ಲಿನ ಆ್ಯಪಲ್ ಐಫೋನ್‌ಗೂ ಪ್ರಸ್ತುತ ತಂತ್ರಜ್ಞಾನ ಕ್ಷೇತ್ರಕ್ಕೂ ಹೋಲಿಸಿದರೆ, `ವೇರೆಬಲ್ ಕಂಪ್ಯೂಟರ್~ನ ಆವಿಷ್ಕಾರ ನೂತನವೆನಿಸುತ್ತದೆ. ಗೂಗಲ್, ಸ್ಮಾರ್ಟ್‌ಫೋನ್‌ಗೆ ಹೊಂದಿಕೊಳ್ಳುವಂತಹ `ಪ್ರೊಜೆಕ್ಟ್ ಗ್ಲಾಸ್~ (ಫ್ರೇಮ್‌ನಂತಿರುವ ಈ ಐ ಗ್ಲಾಸ್ ಮೂಲಕ ಕಣ್ಣ ಮುಂದೆಯೇ ಅಕ್ಷರ, ಇ ಮೇಲ್ ಮತ್ತು ಇನ್ನಿತರ ಮಾಹಿತಿಯನ್ನು ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಪಡೆದುಕೊಳ್ಳಬಹುದು. ನಂತರ ಇನ್ನೂ ಹೊಸದೆಂಬಂತೆ `ಅಗ್ಮೆಂಟೆಡ್ ರಿಯಾಲಿಟಿ~ ಎಂಬ ಅಪ್ಲಿಕೇಶನ್ ಕೂಡ ಪರಿಚಿತಗೊಂಡಿತು.
 
ಪ್ರಾಚೀನ ಕಾಲದ ಅಳಿವಿನ ಅಂಚಿನಲ್ಲಿರುವ ಸ್ಥಳ ಹಿಂದೆ ಹೇಗಿತ್ತು ಎಂಬುದರ ಕುರಿತು ಚಿತ್ರಣವನ್ನು ಪಡೆಯಬಹುದಾದ ಈ ಅಪ್ಲಿಕೇಶನ್ ಹೊಸತೆನಿಸಿತ್ತು, ಇದು ಮೊಬೈಲ್ ಕಂಪ್ಯೂಟಿಂಗ್‌ನಲ್ಲಿ ಹೊಸ ಆವಿಷ್ಕಾರವಾಗಿ ಹೊರಹೊಮ್ಮುತ್ತದೆ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಪ್ರೊ. ಟೋಬಿಯಾಸ್ ಹಾಲೆರರ್ ಅಭಿಪ್ರಾಯಪಡುತ್ತಾರೆ. 

ಇನ್ನು ಫೋನಿನ ಕೆಲವು ಭಾಗಗಳನ್ನು ಅಭಿವೃದ್ಧಿಪಡಿಸಿದರೆ ಇಡೀ ಸ್ಮಾರ್ಟ್‌ಫೋನಿನ ವಿನ್ಯಾಸ ಬದಲಾಗುತ್ತದೆ ಎಂಬುದೂ ನಿರೂಪಿತಗೊಂಡಿದೆ. ಅದಕ್ಕೆ ಕಾರ್ನಿಂಗ್ ಎಂಬ ಕಂಪೆನಿ ಐಫೋನ್‌ನಲ್ಲಿ ಬಳಸಬಹುದಾದ ಸ್ಕ್ರೀನ್ ಗ್ಲಾಸ್ `ವಿಲ್ಲೋ ಗ್ಲಾಸ್~ ಎಂಬ ನೂತನ ಗ್ಲಾಸ್ ಹೊರತಂದಿರುವುದು ಉದಾಹರಣೆಯಾಗಿ ನಿಲ್ಲುತ್ತದೆ ಎನ್ನುತ್ತಾರೆ ಕಂಪೆನಿಯ ವಾಣಿಜ್ಯ ತಂತ್ರಜ್ಞಾನ ನಿರ್ದೇಶಕ ಪೌಲ್ ಟಾಮ್ಕಿನ್.

ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ನೂ  ಬದಲಾವಣೆಯಾಗಬೇಕೆನ್ನುವ ಅಂಶವೆಂದರೆ ಅದನ್ನು ಯಾವಾಗಲೂ ಚಾರ್ಜ್ ಮಾಡಬೇಕಾದ ಅನಿವಾರ್ಯತೆಯನ್ನು ತಡೆಯುವುದು. ಇದೇ ನಿಟ್ಟಿನಲ್ಲಿ 2010ರಲ್ಲಿ ಆ್ಯಪಲ್, ಐಫೋನ್ ಮತ್ತು ಐಪ್ಯಾಡ್‌ಗಳಿಗೆ ವಾರಾನುಗಟ್ಟಲೆ ಚಾರ್ಜ್ ಮಾಡದೇ ಬ್ಯಾಟರಿ ಉಳಿಯಬಲ್ಲ ಸಾಮರ್ಥ್ಯವನ್ನು ನೀಡಿತ್ತು.
 
ಜಪಾನಿನಲ್ಲಿ ಕೆಲವು ಸೆಲ್ ಫೋನ್ ಕಂಪೆನಿಗಳು ಇದೇ ರೀತಿಯ ಫ್ಯುಯೆಲ್ ಸೆಲ್ ತಂತ್ರಜ್ಞಾನದ ಕುರಿತು  ಚಿಂತನೆ ನಡೆಸುತ್ತಿದ್ದು, ಅದು ಹೊರಬಂದರೆ ದೊಡ್ಡ ಬದಲಾವಣೆ ಕಾಣಿಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಮೊಬೈಲ್ ವಿಮರ್ಶಕ ಶರ್ಮಾ.

ಗ್ರಾಹಕರು ಯಾವಾಗಲೂ ಬದಲಾವಣೆಗೆ ಕಾಯುತ್ತಿರುವುದಿಲ್ಲ. ಹೊಸ ಸ್ಮಾರ್ಟ್‌ಫೋನ್‌ಗಳಲ್ಲೂ ಪುನರಾವರ್ತನೆಗೊಂಡ ತಂತ್ರಜ್ಞಾನವನ್ನು ಮೆಚ್ಚುವುದಿಲ್ಲ. ಇಂತಹ ವಿಚಾರದಲ್ಲಿ ಆ್ಯಪಲ್ ತದ್ವಿರುದ್ಧ. ಈಗ ಬಿಡುಗಡೆಗೊಂಡ ಆ್ಯಪಲ್ ಐಫೋನ್-5 ಕೂಡ ತನ್ನ ಹಳೆಯದ್ದೇ ಫೋನ್‌ಗಳ ತಂತ್ರಜ್ಞಾನಕ್ಕಿಂತ ಹೊಸ ಹೊಸ ಆಯ್ಕೆಗಳನ್ನು ಹೊಂದಿದ್ದು ಯಶಸ್ಸಿನ ಹಾದಿಯಲ್ಲಿದೆ.

`ಇತ್ತೀಚೆಗಷ್ಟೆ ಬಿಡುಗಡೆಗೊಂಡ ಐಫೋನ್-5 ದೊಡ್ಡ ತಂತ್ರಜ್ಞಾನ ಕ್ರಾಂತಿಗೆ ನಾಂದಿ~ ಎಂದಿದ್ದಾರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿಮೋತಿ ಡಿ. ಕೂಕ್. `ತಂತ್ರಜ್ಞಾನವನ್ನು ಆ್ಯಪಲ್ ಅಳವಡಿಸಿಕೊಂಡಿರುವ ಪರಿಗೆ ಎಲ್ಲರೂ ನಿಬ್ಬೆರಗಾಗಿದ್ದಾರೆ.

ಆಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಬಹು ಸ್ಪರ್ಶ ಪರದೆ ಮತ್ತು ಅಕ್ಸೆಲೆರೋಮೀಟರ್‌ಗಳಂತಹ ಸೆನ್ಸರ್, ಇನ್ನೂ ಅತಿ ವೇಗದ ತಂತ್ರಾಂಶಗಳನ್ನು ಆ್ಯಪಲ್ ಕಂಡುಕೊಂಡಿದೆ. ಆ್ಯಪಲ್ ಹೊರತಂದ ಈ ತಂತ್ರಜ್ಞಾನಗಳು ಮುಂಚಿತವಾಗಿಯೇ ಹಲವು ಕಂಪೆನಿಗಳೂ ಕಂಡುಕೊಂಡಿದ್ದವು, ಆದರೆ ಆ್ಯಪಲ್ ತನ್ನದೇ ವಿಭಿನ್ನ ಶೈಲಿಯಲ್ಲಿ ಗ್ರಾಹಕರಿಗೆ ಪ್ಯಾಕೇಜ್‌ನಂತೆ ನೀಡಿದ್ದೇ ಯಶಸ್ಸಿಗೆ ಕಾರಣ. ಇಡೀ ಪ್ರಪಂಚವನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ಇಂತಹ ಸಾಧನವೇ ರೋಮಾಂಚನಕಾರಿ~ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಆ್ಯಪಲ್ ಕಂಪೆನಿಗೆ ಮಾರ್ಕೆಟಿಂಗ್‌ನಲ್ಲಿ ಸಹಕರಿಸಿದ ರೆಗಿಸ್ .

ವರ್ಷಗಳು ಉರುಳಿದಂತೆ ಸ್ಮಾರ್ಟ್‌ಫೋನ್‌ಗಳಲ್ಲಿನ ಬದಲಾವಣೆಗಳು ಅದ್ಭುತ ಎಂದು ಹೇಳಲಾಗದಿದ್ದರೂ, ಆ್ಯಪಲ್, ಗೂಗಲ್, ಸ್ಯಾಮ್ಸಂಗ್ ಮತ್ತು ನೋಕಿಯಾ ಸೇರಿದಂತೆ ಹಲವು ಕಂಪೆನಿಗಳು ಈ ತಮ್ಮ ತಮ್ಮ ಸಾಧನಗಳನ್ನು ಪರಿಷ್ಕರಣೆಗೊಳಿಸುತ್ತಲೇ ಮುನ್ನಡೆಸುತ್ತಿರುತ್ತಾರೆ. ಪ್ರತಿ ನಿಮಿಷದಲ್ಲೂ ಸಾಧನೆಗೆ ತುಡಿಯುವ ಮ್ಯಾರಥಾನ್‌ಗಳಂತೆ ಕಂಪೆನಿಗಳೂ ಸಹ ತಮ್ಮ ತಂತ್ರಜ್ಞಾನದಿಂದ ಮುನ್ನಡೆ ಸಾಧಿಸಲು ಯತ್ನಿಸುತ್ತಲೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT