ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಉರುಸ್‌ಗೆ ಯತ್ನ; ಶಾಖಾದ್ರಿ ಪೊಲೀಸ್ ವಶ

Last Updated 26 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು:  ಬಾಬಾಬುಡನ್‌ಗಿರಿಯಲ್ಲಿ ಉರುಸ್‌ಗೆ ಯತ್ನಿಸಿದ ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ‘ಸಜ್ಜಾದ ನಶೀನ್’ ಸೈಯದ್ ಗೌಸ್ ಮೊಹಿದ್ದೀನ್ ಶಾಖಾದ್ರಿ ಅವರನ್ನು ಪೊಲೀಸರು ಶನಿವಾರ ಮುಂಜಾನೆ ವಶಕ್ಕೆ ತೆಗೆದುಕೊಂಡು ಪ್ರತ್ಯೇಕ ಉರುಸ್ ಯತ್ನವನ್ನು ವಿಫಲಗೊಳಿಸಿದರು.

ಶುಕ್ರವಾರ ಸಂಜೆಯೇ ನಗರ ಮತ್ತು ಬಾಬಾಬುಡನ್‌ಗಿರಿಗೆ ಆಗಮಿಸಿದ್ದ ನೂರಾರು ಫಕೀರರು ಶನಿವಾರ ಮುಂಜಾನೆ ನಗರದ ಬಡಾಮಕಾನ್ ದರ್ಗಾದಲ್ಲಿ ಸಭೆ ಸೇರಿ ಉರುಸ್‌ನ ಪೂರ್ವಭಾವಿ ಧಾರ್ಮಿಕ ವಿಧಿವಿಧಾನ ಆರಂಭಿಸಿದ್ದರು. ಗಿರಿಗೆ ತೆರಳಲು ಬೆಳಿಗ್ಗೆ 11.30ಕ್ಕೆ ಬಡಾ ಮಕಾನ್‌ನಿಂದ ಹೊರಬಂದ ಶಾಖಾದ್ರಿ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಪೊಲೀಸ್ ಇನ್‌ಸ್ಪೆಕ್ಟರ್ ವಿಜಯ್ ಪ್ರಸಾದ್, ‘ಉರುಸ್‌ಗೆ ಅನುಮತಿ ಇಲ್ಲ. ನಿಮ್ಮನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಯವಿಟ್ಟು ಸಹಕರಿಸಿ’ ಎಂದು ವಿನಂತಿಸಿದರು. ಇದರಿಂದ ಭಾವೋದ್ವೇಗಕ್ಕೆ ಒಳಗಾದ ಕೆಲವು ಫಕೀರರು ಜೀಪ್ ಎದುರು ಧರಣಿ ನಡೆಸಲೆತ್ನಿಸಿದರು. ಬಾಬಾಬುಡನ್‌ಗಿರಿಯಲ್ಲಿ ನಿಷೇಧಾಜ್ಞೆ ಹೇರಿ, ಭಕ್ತರ ಪ್ರವೇಶ ನಿರ್ಬಂಧಿಸಿದ ಜಿಲ್ಲಾಡಳಿತದ ಕ್ರಮಕ್ಕೆ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಉರುಸ್ ಮಾಡದಿದ್ದರೆ ಬೇಡ, ದರ್ಶನಕ್ಕಾದರೂ ಅವಕಾಶ ಕೊಡಬೇಕಾಗಿತ್ತು’ ಎಂದು ಸೊಲ್ಲಾಪುರದಿಂದ ಪಾದುಕೆ ದರ್ಶನಕ್ಕಾಗಿ ಬಂದಿದ್ದ ಅಜೀಜ್ ಹೇಳಿದರು.

ಸುಪ್ರೀಂ ಕೋರ್ಟ್‌ಗೆ: ಉರುಸ್ ಆಚರಣೆಗೆ ಅವಕಾಶ ನೀಡದೆ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿ ಸಿದ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಗೌಸ್ ಮೊಹಿದ್ದೀನ್ ಶಾಖಾದ್ರಿ ಹೇಳಿದರು.

ಪೊಲೀಸರು ಬಿಡುಗಡೆಗೊಳಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೀಠದ ಆಡಳಿತ ಮಂಡಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ಇನ್ನೊಂದು ತಿಂಗಳಲ್ಲಿ ಹೊರಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT