ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮನಮೋಹನ್ ಸಿಂಗ್‌ಗೆ ಅಡ್ವಾಣಿ ಸಲಹೆ;ಸಿಇಸಿ ನೇಮಕಕ್ಕೆ ಸಮಿತಿ ವ್ಯವಸ್ಥೆ

Last Updated 3 ಜೂನ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಮಹಾ ಲೇಖಪಾಲರ (ಸಿಎಜಿ) ನೇಮಕ ಪ್ರಕ್ರಿಯೆಗೆ ನೂತನ ವಿಸ್ತೃತವಾದ ಸಮಿತಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ  ಅವರು ಪ್ರಧಾನಿ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.

ಪ್ರಸ್ತುತ ಜಾರಿಯಲ್ಲಿರುವ ನೇಮಕ ಪ್ರಕ್ರಿಯೆ `ದುರುಪಯೋಗ ಮತ್ತು ಪಕ್ಷಪಾತ~ಕ್ಕೆ ಎಡೆ ಮಾಡಿಕೊಡುವಂತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.  ಈ ಸಂಬಂಧ ಪ್ರಧಾನಿ ಅವರಿಗೆ ಪತ್ರ ಬರೆದಿರುವ ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷರೂ ಆಗಿರುವ ಅಡ್ವಾಣಿ, ಈಗ ಜಾರಿಯಲ್ಲಿರುವ ವ್ಯವಸ್ಥೆಯಲ್ಲಿ ಪ್ರಧಾನಿ ಅವರ ಸಲಹೆ ಮೇರೆಗೆ ರಾಷ್ಟ್ರಪತಿ ಅವರು ಚುನಾವಣಾ ಆಯೋಗದ ಸದಸ್ಯರನ್ನು ನೇಮಕ ಮಾಡುತ್ತಾರೆ. ಈ ಪ್ರಕ್ರಿಯೆಯ ಬಗ್ಗೆ ಜನರಲ್ಲಿ ವಿಶ್ವಾಸವಿಲ್ಲ ಎಂದು ಅವರು ಹೇಳಿದ್ದಾರೆ.

ಈ ಪ್ರಮುಖ ನಿರ್ಧಾರಗಳು ಆಡಳಿತಾರೂಢ  ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ನಡೆಯುವುದರಿಂದ ಆಗಿನ ನೇಮಕ ಪ್ರಕ್ರಿಯೆಯು ದುರುಪಯೋಗಕ್ಕೆ ಒಳಗಾಗುವ ಮತ್ತು ಪಕ್ಷಪಾತಕ್ಕೆ ಎಡೆಮಾಡುವ ಸಾಧ್ಯತೆ ಇದೆ ಎಂದು ಅಡ್ವಾಣಿ ಪತ್ರದಲ್ಲಿ ಬರೆದಿದ್ದಾರೆ.

`ಕೆಲವು ವರ್ಷಗಳ ಹಿಂದೆ ಚುನಾವಣಾ ಆಯೋಗಕ್ಕೆ ಆಯುಕ್ತರನ್ನು ನೇಮಕ ಮಾಡಿದ್ದಾಗ ಈಗಿನ ನೇಮಕ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆ ಬಂದಿತ್ತು. ಚುನಾವಣಾ ಆಯೋಗ ಮತ್ತು ಇತರ ಸಂವಿಧಾನಿಕ ಸಂಸ್ಥೆಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಸಮಯ ಈಗ ಬಂದಿದೆ. ಸಿವಿಸಿ ಮತ್ತು ಸಿಐಸಿಗೆ ನೇಮಕ ಮಾಡುವ ವ್ಯವಸ್ಥೆಯನ್ನೇ ಅನುಸರಿಸುವುದು ಉತ್ತಮ~ ಎಂದು ಅಡ್ವಾಣಿ ಪತ್ರದಲ್ಲಿ ಹೇಳಿದ್ದಾರೆ.

ಸಮಿತಿಯ ನೇತೃತ್ವದ ಹೊಣೆ ಪ್ರಧಾನಿಯವರದ್ದಾಗಿದ್ದು, ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ, ಕಾನೂನು ಸಚಿವರು ಮತ್ತು ಲೋಕಸಭೆ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರನ್ನು ಸಮಿತಿಯ ಸದಸ್ಯರಾಗಿರಬೇಕು ಎಂದು ಅಡ್ವಾಣಿ ಸಲಹೆ ನೀಡಿದ್ದಾರೆ. ಭಾರತೀಯ ಚುನಾವಣಾ ಆಯೋಗದ ಕುರಿತಾಗಿರುವ ಸಂವಿಧಾನದ ಪರಿಚ್ಛೇದ 324ಕ್ಕೆ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಅವರೂ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT