ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರ ನೆರವಿಗೆ ಮಾರ್ಗಮಿತ್ರ

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಾರ್ಗವನ್ನು ಸರಿಯಾಗಿ ತಿಳಿಯದ ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುವಾಗ ಪ್ರತಿ ಕ್ಷಣ ಆತಂಕದಿಂದ ಕೂರಬೇಕಿಲ್ಲ. ಸಹ ಪ್ರಯಾಣಿಕರನ್ನು ಪದೇ ಪದೇ ವಿಚಾರಿಸಬೇಕಿಲ್ಲ. ಬಸ್ ಪ್ರಯಾಣಿಕರ ನೆರವಿಗೆ ಇದೀಗ ಬಂದಿದೆ `ಮಾರ್ಗಮಿತ್ರ~.

ನಗರದ ವಾಹನ ಪ್ರಯಾಣಿಕರಿಗೆ ನೆರವಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ಬಹು-ಮಾದರಿಯ ಸಾರ್ವಜನಿಕ ಸಾರಿಗೆಯ ಪ್ರಯಾಣದ ಮಾರ್ಗದರ್ಶಕವೇ ಈ ಮಾರ್ಗಮಿತ್ರ. ಸೋಮವಾರದಿಂದ ಈ ವೆಬ್‌ಸೈಟ್  ಸಾರ್ವಜನಿಕರಿಗೆ ಲಭ್ಯವಾಗಲಿದೆ.

 ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಅಶೀಶ್ ವರ್ಮ ಈ ವೆಬ್‌ಸೈಟ್ ಅಭಿವೃದ್ಧಿಪಡಿಸಿದವರು. ನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುವವರಿಗೆ ಈ ವೆಬ್‌ಸೈ(http://planyourtrip.civic.iisc.ernet.in)  ಮಾರ್ಗದರ್ಶಕ ಆಗಲಿದೆ.

ಬಸ್ ಹಾಗೂ ಮೆಟ್ರೊ ರೈಲಿನ ಪ್ರಯಾಣಿಕರು ಈ ವೆಬ್‌ಸೈಟ್‌ನಲ್ಲಿ ಪ್ರಯಾಣದ ಸ್ಥಳ ಹಾಗೂ ತಲುಪಬೇಕಾದ ಸ್ಥಳದ ಹೆಸರನ್ನು ನಮೂದಿಸಿ ಈ ಮಾಹಿತಿ ಪಡೆಯಬಹುದು. ಮಾರ್ಗದ ಮಾಹಿತಿಯೊಂದಿಗೆ ಪ್ರಯಾಣ ದರದ ಮಾಹಿತಿಯೂ ಇರಲಿದೆ. ಈ ಯೋಜನೆಗೆ `ಟ್ರಾನ್‌ಸ್ಕಾಟ್~ ಎಂಬ ವಿಶೇಷ ಸಾಫ್ಟ್‌ವೇರ್ ಅನ್ನು ಬಳಸಲಾಗಿದೆ. ಕೆಲವು ತಿಂಗಳ ಹಿಂದೆ ಬಿಎಂಟಿಸಿ ಹಾಗೂ ರಾಜ್ಯ ಸರ್ಕಾರದ ನಗರ ಭೂ ಸಾರಿಗೆ ನಿರ್ದೇಶನಾಲಯದ (ಡಲ್ಟ್) ಅಧಿಕಾರಿಗಳಿಗೆ ಈ ವೆಬ್‌ಸೈಟ್ ಅನ್ನು ಪ್ರದರ್ಶಿಸಿ ಈ ಯೋಜನೆ ಕಾರ್ಯನಿರ್ವಹಣೆ ಕುರಿತು ಸಮಗ್ರ ಮಾಹಿತಿ ಒದಗಿಸಲಾಗಿದೆ.

`ಭವಿಷ್ಯದಲ್ಲಿ ಈ ಯೋಜನೆಗೆ ಇನ್ನಷ್ಟು ಅಂಶಗಳನ್ನು ಸೇರಿಸಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ ಬಿಗ್-10, ವೋಲ್ವೊ, `ಮೆಟ್ರೊ ರೀಚ್-1~ ಸೇವೆಗಳ ಕುರಿತು ದತ್ತಾಂಶಗಳನ್ನು ಅಳವಡಿಸಲಾಗಿದೆ. ನಿಗದಿತ ಸ್ಥಳಕ್ಕೆ ಯಾವ ರೀತಿಯಾಗಿ ತಲುಪಬೇಕು ಎಂಬ ಕುರಿತಾಗಿ ಮ್ಯಾಪ್ ಸಹಿತ ಮಾಹಿತಿ ಒದಗಿಸಲಾಗುತ್ತಿದೆ~ ಎಂದು ಅಶೀಶ್ ವರ್ಮ `ಪ್ರಜಾವಾಣಿ~ ಗೆ ತಿಳಿಸಿದರು.

`ಈ ವ್ಯವಸ್ಥೆಯಲ್ಲಿ ಮ್ಯಾಪ್‌ನಲ್ಲಿ ಸುಲಭದ ಮಾರ್ಗದ (ನಡಿಗೆ ಅವಧಿ, ಪ್ರಯಾಣದ ಅವಧಿ, ಬಸ್ ನಿಲ್ದಾಣದಲ್ಲಿ ಕಾಯುವಿಕೆಯ ಅವಧಿ) ಮಾಹಿತಿ ಅಲ್ಲದೆ ಪ್ರಯಾಣದ ಅವಧಿ, ಪ್ರಯಾಣ ದರದ ಕುರಿತು ಮಾಹಿತಿ ನೀಡಲಾಗುತ್ತದೆ~ ಎಂದು ಅವರು ಹೇಳಿದರು.

ಉದಾಹರಣೆಗೆ ಶಿವಾಜಿನಗರದಿಂದ ಕೋರಮಂಗಲದ ನಾಲ್ಕನೇ ಬ್ಲಾಕ್‌ಗೆ ಹೋಗಬೇಕಾದರೆ ಪ್ರಯಾಣಿಕ ವೆಬ್‌ಸೈಟ್‌ನಲ್ಲಿ ಆರಂಭಿಕ ಸ್ಥಳ ಹಾಗೂ ತಲುಪಬೇಕಾದ ಸ್ಥಳದ ಬಗ್ಗೆ ಹೆಸರನ್ನು ಉಲ್ಲೇಖಿಸಬೇಕು. ಆಗ ಮ್ಯಾಪ್ ಸಹಿತ ಪ್ರಯಾಣದ ಹಾದಿಯ ಸಮಗ್ರ ವಿವರ ಲಭ್ಯವಾಗಲಿದೆ. ಇಲ್ಲಿನ ಪ್ರಯಾಣ ದರ 21 ರೂಪಾಯಿ.
ಎರಡು ಬಸ್‌ಗಳ ನೆರವು ಪಡೆಯಬೇಕು. ಪ್ರಯಾಣದ ಅವಧಿ 28 ನಿಮಿಷ. ಪ್ರಯಾಣಿಕ ಶಿವಾಜಿನಗರ ಬಸ್ ನಿಲ್ದಾಣದಿಂದ 0.6 ಕಿ.ಮೀ. ಪಾದಚಾರಿ ಮಾರ್ಗದಲ್ಲಿ ಸಾಗಿ ಎಂ.ಜಿ.ರಸ್ತೆಯ ಮೊದಲ ಇಳಿದಾಣದಲ್ಲಿ 362 `ಇ~ ಸಂಖ್ಯೆಯ ವೋಲ್ವೊ ಬಸ್ ಹಿಡಿದು 10 ರೂಪಾಯಿ ಪಾವತಿಸಿ ಮೆಯೋ ಹಾಲ್ ನಿಲ್ದಾಣಕ್ಕೆ ತಲುಪಬೇಕು. ಅಲ್ಲಿ `ಜಿ-3~ ಸಂಖ್ಯೆಯ ಬಸ್‌ನಲ್ಲಿ ರೂ11 ಪಾವತಿಸಿ ಕೋರಮಂಗಲ 4ನೇ ಬ್ಲಾಕ್‌ಗೆ ತಲುಪಬಹುದಾಗಿದೆ.
 

   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT