ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವರ್ಗ-1ಕ್ಕೆ ಕುಂಚಿಟಿಗ ಜಾತಿ

Last Updated 27 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನನ್ವಯ ತುಳಿತಕ್ಕೊಳಗಾದ ಕುಂಚಿಟಿಗ ಜಾತಿಯನ್ನು ಹಿಂದುಳಿದ ವರ್ಗಗಳ `ಪ್ರವರ್ಗ-3ಎ~ ನಿಂದ ಪ್ರವರ್ಗ-1ಕ್ಕೆ ಸೇರಿಸಲು ಪರಿಶೀಲನೆ ನಡೆಸಲಾಗುವುದು.

ಕುಂಚಿಟಿಗರನ್ನು ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು  ಮುಖ್ಯಮಂತ್ರಿಡಿ.ವಿ. ಸದಾನಂದಗೌಡ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ವಿಶ್ವ ಕುಂಚಿಟಿಗರ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಅವರು,  `ದೇಶದಲ್ಲಿ ತುಳಿತಕ್ಕೊಳಗಾದ ಪ್ರತಿಯೊಂದು ಸಮುದಾಯಗಳು ಕೂಡ ಹಕ್ಕೊತ್ತಾಯಗಳಿಗಾಗಿ ಶಕ್ತಿ ಪ್ರದರ್ಶನ ಮಾಡುವುದು ಅಗತ್ಯ. ಆದರೆ, ಅಂತಹ ಶಕ್ತಿ ಪ್ರದರ್ಶನಗಳು ಇನ್ನೊಂದು ಸಮಾಜದ ಜತೆ ಸಂಘರ್ಷ ಸಾರುವಂತಾಗಬಾರದು~ ಎಂದು ಮನವಿ ಮಾಡಿದರು.

`ಪ್ರತಿಯೊಂದು ಸಣ್ಣಪುಟ್ಟ ಸಮಾಜಗಳು ಕೂಡ ಒಗ್ಗಟ್ಟಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು. ಆದರೆ, ಸಂಘಟನೆ ಹೆಸರಿನಲ್ಲಿ ಯಾವುದೇ ಸಂಘಟನೆಗಳು ಸಮಾಜದಲ್ಲಿ ಅಸಮಾನತೆ ತರುವ ಪ್ರಯತ್ನ ಮಾಡಬಾರದು. ಇತರೆ ಸಮುದಾಯಗಳ ಒಳಿತನ್ನು ಸ್ವೀಕರಿಸುವ ಮೂಲಕ ಎಲ್ಲರಲ್ಲೂ ಸಾಮರಸ್ಯ ಮೂಡಿಸುವ ಪ್ರಯತ್ನ ಮಾಡಿದಾಗ ಸಮಾಜದ ಉದ್ಧಾರ ಸಾಧ್ಯ~ ಎಂದು ಸಲಹೆ ಮಾಡಿದರು.

ರಾಜಕೀಯ ಬೆರೆಸಬೇಡಿ: `ಇಂತಹ ಸಮ್ಮೇಳನಗಳಲ್ಲಿ ರಾಜಕೀಯ  ಹೊರಗಿಡಬೇಕು. ಸಾಮಾನ್ಯವಾಗಿ ಒಂದು ಹಂತದವರೆಗೆ ಬೆಳೆಯುವ ಸಂಘಟನೆಗಳು ನಂತರ ಕೆಲವು ವ್ಯಕ್ತಿಗಳ ಕಪಿಮುಷ್ಟಿಗೆ ಸಿಲುಕಿಅಧಃಪತನಗೊಳ್ಳುತ್ತಿವೆ. ಒಳ್ಳೆ ಕೆಲಸ ಮಾಡುವಂತಹ ಜನಪ್ರತಿನಿಧಿಗಳಿಗೆ ಸಮಾಜದಿಂದ ಸಹಜವಾಗಿ ಪ್ರಾತಿನಿಧ್ಯ ಸಿಗಲಿದೆ. ಹೀಗಾಗಿ, ರಾಜಕೀಯ ವ್ಯವಹಾರ ಸಂಘಟನೆಯೊಳಗೆ ನುಸುಳಬಾರದು~ ಎಂದು ಕಿವಿಮಾತು ಹೇಳಿದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, `ರಾಜಕೀಯ ಪ್ರಾತಿನಿಧ್ಯದಿಂದ ಮಾತ್ರ ಯಾವುದೇ ಸಮಾಜದ ಏಳಿಗೆ ಸಾಧ್ಯ. ಜನಸಂಖ್ಯೆ ಆಧಾರದಲ್ಲಿ ಕುಂಚಿಟಿಗ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರಕಿಸಿಕೊಡಲು ಹಾಗೂ ಕುಂಚಿಟಿಗ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಒತ್ತಡ ಹೇರುವ ಸಂಬಂಧ ಕೇಂದ್ರದ ಬಳಿ ಸಮಾಜದ ನಿಯೋಗ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ~ ಎಂದು ಭರವಸೆ ನೀಡಿದರು.

ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಟಿ.ಬಿ. ಜಯಚಂದ್ರ, `ರಾಜಕೀಯ ಪ್ರಾತಿನಿಧ್ಯ, ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕೆಂಬ ಒತ್ತಾಯ ಮುಂದಿಟ್ಟುಕೊಂಡು ಈ ಸಮ್ಮೇಳನ ನಡೆಸಲಾಗುತ್ತಿದೆಯೇ ಹೊರತು ಬೇರೆ ಯಾವುದೇ ದುರುದ್ದೇಶ ಇಲ್ಲ~ ಎಂದು ಸ್ಪಷ್ಟಪಡಿಸಿದರು.

ಕುಂಚಿಟಿಗಿರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಲ್ಯಾಣ ಕಾರ್ಯಕ್ರಮಗಳಿಗಾಗಿ ನಗರ ಜಿಲ್ಲಾ ವ್ಯಾಪ್ತಿಯಲ್ಲಿ 15ರಿಂದ 20 ಎಕರೆ ಜಾಗ ಮಂಜೂರು ಮಾಡುವಂತೆಯೂ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಸಮ್ಮೇಳನದಲ್ಲಿ ಸಚಿವ ಎಂ.ಪಿ. ರೇಣುಕಾಚಾರ್ಯ, ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರಸ್ವಾಮೀಜಿ, ಕೊರಟಗೆರೆಯ ಕುಂಚಿಟಿಗರ ಮಹಾಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ, ಶಾಸಕರಾದ ಡಿ.ಕೆ.ಶಿವಕುಮಾರ್, ಎಸ್. ಆರ್. ಶ್ರೀನಿವಾಸ್ ಮಾತನಾಡಿದರು.

ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಶಾಸಕರಾದ ಎಸ್.ಆರ್. ವಿಶ್ವನಾಥ್, ಪ್ರಸನ್ನಕುಮಾರ್, ದೊಡ್ಡರಂಗೇಗೌಡ, ಜೆ. ನರಸಿಂಹಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.ವಿಶ್ವ ಕುಂಚಿಟಿಗರ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಹಾಲಪ್ಪ ಸ್ವಾಗತಿಸಿದರು. ಅಧ್ಯಕ್ಷ ಎನ್. ದೇವರಾಜಯ್ಯ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಮರ್ಪಿಸಿದರು. ರಾಜ್ಯ ಹಾಗೂ ನೆರೆ ರಾಜ್ಯದ ಅಪಾರ ಸಂಖ್ಯೆಯ ಕುಂಚಿಟಿಗ ಬಾಂಧವರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT