ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಸ್ನಾನಕ್ಕೆ ಶೌಚದ ಮಲಿನ ನೀರು

ಮೂತ್ರ ವಿಸರ್ಜನೆಗೆ 5, ಮಲವಿಸರ್ಜನೆಗೆ 10, ಸ್ನಾನಕ್ಕೆ ರೂ 20
Last Updated 12 ಡಿಸೆಂಬರ್ 2012, 9:23 IST
ಅಕ್ಷರ ಗಾತ್ರ

ಕೂಡಲಸಂಗಮ: ಮಲವಿಸರ್ಜನೆಗೆ, ಸ್ನಾನ ಮಾಡಲು ಹಣ ಪಡೆಯುವುದು ಸಾಮಾನ್ಯ. ಆದರೆ ಮೂತ್ರ ವಿಸರ್ಜನೆಗೆ ಒಬ್ಬರಿಗೆ ರೂ 5 ಪಡೆಯುತ್ತಿರುವುದು ಕೇಳಿದರೆ ಆಶ್ಚರ್ಯ ಆಗಬಹುದು. ಆದರೆ ಅದು ಅಂತರರಾಷ್ಟ್ರೀಯ ಪ್ರವಾಸಿತಾಣವಾಗಿ ಗುರುತಿಸಿಕೊಂಡಿರುವ ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದ ಸಂಗಮೇಶ್ವರ ದೇವಾಲಯದ ಆವರಣದಲ್ಲಿ ಸಾಧ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರು ಸ್ನಾನ ಶೌಚಕ್ಕೆ ಹೋದರೆ ಕನಿಷ್ಠ ರೂ 30 ತೆರಬೇಕು. ಮೂತ್ರ ವಿಸರ್ಜನೆಗೆ ರೂ 5, ಮಲವಿಸರ್ಜನೆಗೆ ರೂ 10 ಮತ್ತು ಸ್ನಾನಕ್ಕೆ ರೂ 20 ಕೊಡಬೇಕು. ಭಕ್ತರಿಂದ ಶ್ರೀಕ್ಷೇತ್ರದಲ್ಲಿ ನಿತ್ಯ ಶೋಷಣೆ ನಡೆಯುತ್ತಿದೆ. ಇದನ್ನು ನಿಯಂತ್ರಿಸುವ ಹೊಣೆ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ್ದು. ಆದರೆ ಪ್ರಾಧಿಕಾರದ ಅಧಿಕಾರಿಗಳು ಇದನ್ನು ಗಮನಿಸಿದರೂ ಗೊತ್ತಿಲ್ಲದಂತೆ ಇದ್ದಾರೆ ಎನ್ನುವುದು ಸ್ಥಳೀಯರ ಆರೋಪ.

ಕೂಡಲಸಂಗಮದ ಸಂಗಮೇಶ್ವರ ದೇವಾಲಯದ ಆವರಣ ಸ್ವಚ್ಚವಾಗಿಡಬೇಕು ಎಂಬ ಉದ್ದೇಶದಿಂದ ಪ್ರಾಧಿಕಾರವು ದೇವಾಲಯದ ಹೊರ ಆವರಣದಲ್ಲಿ ಶೌಚಗೃಹವನ್ನು ನಿರ್ಮಿಸಿ ಖಾಸಗಿಯವರಿಗೆ ಗುತ್ತಿಗೆ ನೀಡಿದೆ. ಮೂತ್ರ ವಿಸರ್ಜನೆ ಉಚಿತ, ಮಲವಿಸರ್ಜಣೆಗೆ ರೂ 2, ಸ್ನಾನಕ್ಕೆ ಒಂದು ಬಕೆಟ್ ಬಿಸಿ ನೀರು ಒಳಗೊಂಡಂತೆ ರೂ 4 ಪಡೆಯಬೇಕು ಎನ್ನುವುದು ಗುತ್ತಿಗೆ ಸಂದರ್ಭದಲ್ಲಿಯೇ ಮಾಡಿಕೊಂಡಿರುವ ಒಪ್ಪಂದ. ಆದರೆ ಗುತ್ತಿಗೆದಾರರು ಪ್ರವಾಸಿಗರಿಂದ ದುಬಾರಿ ದರದಲ್ಲಿ ವಸೂಲಿ ಮಾಡುತ್ತಿದ್ದಾರೆ. ಇದನ್ನು ಪ್ರವಾಸಿಗರು ಪ್ರಶ್ನಿಸಿದರೆ `ಯಾರಿಗೆ ಬೇಕಾದರೂ ಹೇಳಿ. ಕಡಿಮೆ ಹಣ ಪಡೆಯುವಲ್ಲಿಗೆ ಹೋಗಿ. ಇಲ್ಲಿಗೆ ಬರಬೇಡಿ' ಎಂದು ಉತ್ತರಿಸುವರು. ಪರ್ಯಾಯ ವ್ಯವಸ್ಥೆ ಇಲ್ಲದೆ ಪ್ರವಾಸಿಗರು ಅನಿವಾರ್ಯವಾಗಿ ಹಣ ತೆತ್ತು ಸ್ನಾನ, ಶೌಚ ಪೂರೈಸುವರು.

ಪ್ರಾಧಿಕಾರವು ಶೌಚಗೃಹದ ಮುಂದೆ ದರಗಳ ನಾಮಫಲಕ ಹಾಕಿದೆ. ಒಂದು ನಾಮಫಲಕದ ಮೇಲೆ ಗುತ್ತಿಗೆದಾರ ಬಟ್ಟೆ ಹಾಕಿರುವನು. ಇನ್ನೊಂದು ನಾಮಫಲಕದ ಮೇಲಿನ ದರಪಟ್ಟಿಯನ್ನು ಅಳಿಸಿ ಹಾಕಿದ್ದಾರೆ.  ಹಣ ಕೊಡಲು ಹಿಂದೇಟು ಹಾಕುವವರು ರಸ್ತೆ ಇಕ್ಕೆಲಕ್ಕೆ ಮೂತ್ರವಿಸರ್ಜನೆಗೆ ಮಾಡುವರು. ಇದರಿಂದ ಕೆಟ್ಟವಾಸನೆ ಮೂಗಿಗೆ ರಾಚುತ್ತದೆ. ಈ ಬಗ್ಗೆ ಸ್ಥಳೀಯರು, ಪ್ರವಾಸಿಗರು ಪ್ರಾಧಿಕಾರದ ಅಧಿಕಾರಿಗಳಿಗೆ ದೂರು ನೀಡಿದರೆ ನಿರಾಸಕ್ತಿ ತೋರಿದ್ದಾರೆ.

ಮಲಿನ ನೀರು:
ಶೌಚಗೃಹಕ್ಕೆ ನೀರು ಸರಬರಾಜಿನಲ್ಲಿ ತೊಂದರೆ ಆಗಿದ್ದರಿಂದ ಗುತ್ತಿಗೆದಾರರು ಕಳೆದ ಎರಡು ತಿಂಗಳಿಂದ ಕೃಷ್ಣಾ ಹಾಗೂ ಮಲಪ್ರಭಾ ನದಿಯಲ್ಲಿ ಅಧಿಕ ಪ್ರಮಾಣದ ನೀರು ಬಂದಾಗ ಆ ನೀರು ಶೌಚಗೃಹದ ಕೆಳ ಭಾಗದಲ್ಲಿ ಸಂಗ್ರಹಗೊಂಡಿದೆ. ನದಿ ಇಳಿಮುಖವಾದ ನಂತರ ನೀರು ಅಲ್ಲಿಯೇ ಉಳಿದಿದೆ. ಅದೇ ಮಲಿನ ನೀರನ್ನು ಈಗ ಶೌಚ, ಸ್ನಾನಕ್ಕೆ ಯಂತ್ರದ ಮೂಲಕ ಮೇಲೆತ್ತಿ ಪೂರೈಸಲಾಗುತ್ತಿದೆ. ಶೌಚದ ನೀರಿನಲ್ಲಿಯೇ ಭಕ್ತರು ಸ್ನಾನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಪ್ರಶ್ನಿಸಿದರೆ, `ಇಲ್ಲಿ ಸಿಗುವುದು ಇದೇ ನೀರು. ಬೇಕಾದರೆ ಸ್ನಾನ ಮಾಡಿ ಇಲ್ಲವಾದರೆ ಬಿಟ್ಟು ಹೋಗಿ ಎಂಬ ಬೇಜವಾಬ್ದಾರಿ ಉತ್ತರ ನೀಡುವರು.
ಶೌಚಗೃಹದ ಸಮಸ್ಯೆ ಪರಿಶೀಲಿಸಿ ಪ್ರವಾಸಿಗರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರದ ಪ್ರಭಾರಿ ಆಯುಕ್ತ ಬಿ.ಎಸ್. ಗೋಟೂರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT