ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಾಂತ್, ಕ್ರೊಟಿಯೊಕ್‌ಗೆ ಆಘಾತ

ಬೆಳಗಾವಿ ಓಪನ್ ಪುರುಷರ ಐಟಿಎಫ್ ಟೂರ್ನಿ ಆರಂಭ
Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಳಗಾವಿ: ವೈಲ್ಡ್ ಕಾರ್ಡ್ ಸ್ಪರ್ಧಿ ಲಕ್ಷಿತ್ ಸೂದ್ ವಿರುದ್ಧ ಪ್ರಯಾಸದ ಗೆಲುವು ಪಡೆದ ಏಳನೇ ಶ್ರೇಯಾಂಕದ ಅಶ್ವಿನ್ ವಿಜಯರಾಘವನ್ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಟೆನಿಸ್ ಅಂಕಣದಲ್ಲಿ ಸೋಮವಾರ ಆರಂಭವಾದ ಬೆಳಗಾವಿ ಓಪನ್ ಪುರುಷರ ಐಟಿಎಫ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಮುನ್ನಡೆದರು.

ಸುಮಾರು 3 ತಾಸು 26 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಅಶ್ವಿನ್ 6-7(6), 6-1, 7-5ರಿಂದ ಪಂದ್ಯ ಗೆದ್ದರು. ಎರಡು ಸೆಟ್‌ಗಳ ಸಮಬಲದ ಹೋರಾಟದ ತರುವಾಯ ಮೂರನೇ ಸೆಟ್‌ನಲ್ಲಿ 1-4ರಿಂದ ಹಿನ್ನಡೆ ಅನುಭವಿಸಿದ್ದ ಅವರು ಚೇತರಿಕೆಯ ಆಟ ಪ್ರದರ್ಶಿಸಿ 4-4ರಲ್ಲಿ ಸ್ಕೋರ್ ಸಮನಾಗಿಸಿಕೊಂಡರು.

ಮುಂದಿನ ಸೆಟ್‌ನಲ್ಲೇ ಸೂದ್ 5-4ರಿಂದ ಮುನ್ನಡೆ ಸಾಧಿಸಿದರಾದರೂ ಅಶ್ವಿನ್ ಮತ್ತೆ ಮುಂದಿನ ಮೂರು ಗೇಮ್‌ಗಳಲ್ಲಿ ಪ್ರಾಬಲ್ಯ ಮೆರೆಯುವ ಮೂಲಕ ಗೆಲುವಿನೊಂದಿಗೆ ನಿಟ್ಟುಸಿರು ಬಿಟ್ಟರು. ಜರ್ಮನಿಯ ಟಾರ್ಸ್ಟನ್ ವಿಟೊಸ್ಕಾ 6-3, 7-6 (3)ರಲ್ಲಿ ನಾಲ್ಕನೇ ಶ್ರೇಯಾಂಕದ ವಿಜಯ್‌ಸುಂದರ್ ಪ್ರಶಾಂತ್‌ಗೆ ಆಘಾತ ನೀಡಿದರು.

ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಲುಕಾ ಮಾರ್ಗರೋಲಿ 6-2, 6-1ರಿಂದ ವಿನೋದ್ ಗೌಡ ವಿರುದ್ಧ; ನೆದರ್‌ಲ್ಯಾಂಡ್‌ನ ಕೊಲಿನ್ ವ್ಯಾನ್‌ಬೀಮ್ 6-2, 6-3ರಿಂದ 5ನೇ ಶ್ರೇಯಾಂಕದ ಸೆರ್ಗೈ ಕ್ರೊಟಿಯೊಕ್ ವಿರುದ್ಧ; ಆರನೇ ಶ್ರೇಯಾಂಕದ ಅಮೆರಿಕಾ ಆಟಗಾರ ಮೈಕಲ್ ಶಬಾಜ್ 6-1, 6-1ರಿಂದ ವಿಲಿಯಂ ಕೆಂಡಾಲ್ ಎದುರು; ಪೋರ್ಚುಗಲ್‌ನ ಆ್ಯಂಡ್ರೆ ಗ್ಯಾಸ್ಪರ್ 6-1, 6-1ರಿಂದ ರಜತ್ ಮಹೇಶ್ವರಿ ವಿರುದ್ಧ ಗೆಲುವು ಪಡೆದರು.

ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಶ್ರೀರಾಮ್ ಬಾಲಾಜಿ-ಪಿ.ಸಿ. ವಿಘ್ನೇಶ್ ಜೋಡಿ 2-6, 7-5 (10-3) ಅಂತರದಿಂದ ಮೋಹಿತ್ ಮಯೂರ್ ಮತ್ತು ರಾಮ್‌ಕುಮಾರ್ ಅವರನ್ನು ಮಣಿಸಿದರು.

ನಾಲ್ಕನೇ ಶ್ರೇಯಾಂಕಿತ ಥಿಯೊಡೊರಸ್ ಏಂಜಲಿನೋಸ್- ಸನಮ್ ಸಿಂಗ್ ಜೋಡಿ 3-1ರಿಂದ ಸೌರಭ್ ಪಟೇಲ್ (ಗಾಯಾಳು) ಎದುರು; ಕುನಾಲ್ ಆನಂದ್-ರೋನಾಕ್ ಮಂಜುಳಾ ಜೋಡಿ 6-2, 6-0ರಿಂದ ಚಿನ್ಮಯ್ ಪ್ರಧಾನ್, ನಿಶಿತ್ ವಾಲಿಕ್ ವಿರುದ್ಧ; ರೂಪೇಶ್ ರಾಯ್-ವಿವೇಕ್ ಶೋಕಿನ್ ಜೋಡಿ 6-4, 6-3ರಿಂದ ಅಜಯ್ ಸೆಲ್ವರಾಜ್ ಮತ್ತು ಅಶ್ವಿನ್ ವಿಜಯರಾಘವನ್ ಅವರನ್ನು ಮಣಿಸಿದರು.

ಜತಿನ್ ದಹಿಯಾ-ಶಬಾಜ್ ಖಾನ್ 6-4, 2-6 (10-8)ರಿಂದ ನೆದರ್‌ಲ್ಯಾಂಡ್‌ನ ಜೊರಿಯನ್ ಬರ್ನಾಡ್ ಹಾಗೂ ಕೊಲಿನ್ ವ್ಯಾನ್‌ಬೀಮ್ ವಿರುದ್ಧ; ಸೆರ್ಗೈ ಕ್ರೊಟಿಯೊಕ್-ಲುಕಾ ಮಾರ್ಗರೋಲಿ 6-4, 6-2ರಿಂದ ಈ.ನೀರಜ್ ಹಾಗೂ ಫರೀಜ್ ಮಹಮ್ಮದ್ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT