ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸಾರ ಮಾಧ್ಯಮದ ವಿಸ್ತರಿತ ಸೇವೆಗೆ ನಿರ್ಧಾರ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಾರ ಮಾಧ್ಯಮಗಳ ಸೇವೆಯನ್ನು ವಿಸ್ತರಿಸುವ ಮೂಲಕ, ನಕ್ಸಲ್ ಪೀಡಿತ ಪ್ರದೇಶಗಳ ಜನರ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ವಿವಿಧ ಯೋಜನೆಗಳ ಮಾಹಿತಿ ಒದಗಿಸಲು ಕೇಂದ್ರ ನಿರ್ಧರಿಸಿದೆ. ಈ ಮೂಲಕ, ಬಂಡುಕೋರರ ಸರ್ಕಾರಿ ವಿರೋಧಿ ಚಟುವಟಿಕೆ ಹತ್ತಿಕ್ಕಲು ಸಿದ್ಧತೆ ನಡೆಸಿದೆ.

ಈ ಯೋಜನೆಯಡಿ, ಆಕಾಶವಾಣಿ ಮತ್ತು ದೂರದರ್ಶನದ ಮೂಲಕ ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಆದಿವಾಸಿಗಳಿಗಾಗಿ ರೂಪಿಸಿರುವ ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿ ನೀಡಲಾಗುವುದು. ಆದಿವಾಸಿಗಳ ಅಭಿರುಚಿಗೆ ತಕ್ಕಂತೆ ವಿಶೇಷ ಕಾರ್ಯಕ್ರಮಗಳನ್ನು ಅವರದ್ದೇ ಆಡುಭಾಷೆಯಲ್ಲಿ ತಯಾರಿಸಿ ರೇಡಿಯೊ ಮತ್ತು ಟಿ.ವಿ ಮೂಲಕ ಪ್ರಸಾರ ಮಾಡಲಾಗುವುದು ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ `ಪ್ರಜಾವಾಣಿ~ಗೆ ತಿಳಿಸಿದೆ.

ನಕ್ಸಲ್ ಸಮಸ್ಯೆಗೆ ಸಂಬಂಧಿಸಿದಂತೆ ಗೃಹ ಸಚಿವಾಲಯದ ಜತೆ ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಶೀಘ್ರದಲ್ಲೇ ಕಾರ್ಯಕ್ರಮದ ತಯಾರಿಗಾಗಿ ದೂರದರ್ಶನ ಮತ್ತು ಆಕಾಶವಾಣಿಗೆ ಸೂಚಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಆಕಾಶವಾಣಿ ಪ್ರಸ್ತುತ ತನ್ನ 231 ಬಾನುಲಿ ಕೇಂದ್ರಗಳ ಮೂಲಕ ಶೇ 99.14ರಷ್ಟು ಜನರನ್ನು ತಲುಪುತ್ತಿದ್ದು, ಶೇ 92ರಷ್ಟು ಜನರು ದೂರದರ್ಶನದ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಿಗೆ ಈ ಎರಡು ಪ್ರಸಾರ ಮಾಧ್ಯಮಗಳನ್ನು ವಿಸ್ತರಿಸುವುದರಿಂದ ಸರ್ಕಾರಿ ಕಾರ್ಯಕ್ರಮಗಳ ಅರಿವು ಆದಿವಾಸಿಗಳಿಗೆ ತಲುಪುವುದಲ್ಲದೆ ನಕ್ಸಲೀಯರ ಹಿಂಸಾಚಾರಗಳ ಬಗ್ಗೆಯೂ ಅರಿವು ಮೂಡಲಿದೆ ಎಂಬ ಭರವಸೆಯನ್ನು ಸರ್ಕಾರ ಹೊಂದಿದೆ.

`ನಕ್ಸಲರ ಚಟುವಟಿಕೆಗಳಿಂದಾಗಿ ಛತ್ತೀಸ್‌ಗಡ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಪ್ರಗತಿ ಹೇಗೆ ಕುಂಠಿತಗೊಂಡಿದೆ ಎಂಬ ಬಗ್ಗೆ  ಆದಿವಾಸಿಗಳಿಗೆ ಮಾಹಿತಿ ನೀಡಬೇಕಾದುದು ಅತ್ಯಗತ್ಯವಾಗಿದೆ. ಸರ್ಕಾರ ತನ್ನ ಯೋಜನೆಗಳ ಅಧಿಕೃತ ಮಾಹಿತಿ ನೀಡುವುದರಿಂದ ಅವರು ಅದರ ನಿಜವಾದ ಪ್ರಯೋಜನ ಪಡೆಯಬಹುದು~ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT