ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪ್ರಾಚೀನ ಭಾಷೆಗಳ ಪೈಕಿ ಕನ್ನಡಕ್ಕೆ ಎರಡನೇ ಸ್ಥಾನ'

Last Updated 22 ಜುಲೈ 2013, 8:41 IST
ಅಕ್ಷರ ಗಾತ್ರ

ಯಾದಗಿರಿ: ಎಲ್ಲ ಭಾಷೆಗಳಿಗೆ ತೀವ್ರ ಸಮಸ್ಯೆ ಎದುರಾಗಿರುವ ಹಿನ್ನೆಲೆ ಕನ್ನಡಿಗರು ಈಗಿನಿಂದಲೇ ಎಚ್ಚೆತ್ತುಕೊಳ್ಳುವುದು ಅತ್ಯವಶ್ಯಕ. ಭಾಷೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಬರುವ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾರಡ್ಡಿ ಎಚ್ಚರಿಕೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಆಶ್ರಯದಲ್ಲಿ ಭಾನುವಾರ ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ಏರ್ಪಡಿಸಿದ್ದ ಶಾಮಕುಮಾರ ದಾಸನ್ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಮಕ್ಕಳು ಆಂಗ್ಲ ಭಾಷೆಯಲ್ಲಿ ಅಭ್ಯಾಸ ಮಾಡಿದರೆ ಅನುಕೂಲ ಆಗಲಿದೆ ಎಂದು ಬಹುತೇಕ ಜನರು ತಿಳಿದುಕೊಂಡಿದ್ದಾರೆ. ಕನ್ನಡ ಭಾಷೆಯಲ್ಲೂ ಅಧ್ಯಯನ ಮಾಡಿ ಉನ್ನತ ಸ್ಥಾನ ಪಡೆಯಬಹುದು ಎಂಬುದನ್ನು ಅರಿತುಕೊಳ್ಳುವುದು ಅವಶ್ಯಕ. ಕನ್ನಡ ಭಾಷೆಗೆ ಕುತ್ತು ಬರುತ್ತಿದೆ ಎಂದು ಆತಂಕ ವ್ಯಕ್ತವಾಗುತ್ತಿದೆ. ಆದರೆ ಆಳವಾಗಿ ಯೋಚಿಸಿದರೆ, ಬಹುತೇಕ ರಾಜ್ಯಗಳಲ್ಲಿ ಆಯಾ ಭಾಷೆಗಳಿಗೆ ತೀವ್ರ ಹೊಡೆತ ಬೀಳುತ್ತಿದೆ ಎಂದು ತಿಳಿಸಿದರು.

ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆಗೆ ಎರಡನೇ ಸ್ಥಾನವಿದೆ. ಕನ್ನಡ ಸಾಹಿತ್ಯ ತನ್ನದೇ ಆದ ವಿಭಿನ್ನತೆಯಿಂದಾಗಿ ವಿಶೇಷ ಛಾಪು ಮೂಡಿಸಿದೆ. ಕನ್ನಡ ಮಹಾನ್ ಕವಿಗಳು ಹಲವಾರು ಪುಸ್ತಕಗಳನ್ನು ರಚನೆ ಮಾಡುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ಎಂದು ಹೇಳಿದರು.

ಕನ್ನಡ ನೆಲ ಜಲದ ಅಭಿಯಾನ ಕುರಿತು ಉಪನ್ಯಾಸ ನೀಡಿದ ಇತಿಹಾಸ ಅನುಸಂಧಾನ ಪರಿಷತ್ ಉಪನಿರ್ದೇಶಕ ಎಸ್.ಕೆ. ಅರುಣಿ, ರಾಜ್ಯದ ಇತಿಹಾಸ ಬರೆಯುವಾಗ ಹೈದರಾಬಾದ್ ಕರ್ನಾಟಕ ಬಗ್ಗೆಯೂ ಬರೆಯಬೇಕಾಗುತ್ತದೆ. ಈ ಭಾಗವು ಅಷ್ಟೊಂದು ಪ್ರಮಾಣದಲ್ಲಿ ಇತಿಹಾಸಕ್ಕೆ ಕೊಡುಗೆ ನೀಡಿದೆ ಎಂದು ತಿಳಿಸಿದರು.

ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಸೂಫಿ ಸಾಹಿತ್ಯ ಪ್ರಕಾರಗಳಿಗೂ ಹೈದರಾಬಾದ್ ಕರ್ನಾಟಕದ ಕೊಡೆಗೆ ಮಹತ್ತರವಾದುದು. ಹೀಗಾಗಿ ಈ ಭಾಗವನ್ನು ಕಲ್ಯಾಣ ನಾಡು, ಸೂಫಿ ಸಂತರ ಬೀಡು, ಧಾರ್ಮಿಕ ನೆಲೆವೀಡು ಎಂದು ಕರೆಯಲಾಗುತ್ತಿದೆ ಎಂದ ಅವರು, ಅತ್ಯಂತ ಹಳೆಯ ಮಾನವರು ಈ ಭಾಗದ ಹುಣಸಗಿ ಮತ್ತು ಇಸ್ಲಾಂಪುರದಲ್ಲಿ ನೆಲೆಸಿದ್ದರು ಎಂಬುದು ಇತಿಹಾಸದಿಂದ ತಿಳಿಯುತ್ತದೆ. ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಕಾಪಾಡಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಡಿಪಿಐ ರಾಮಾಂಜನೇಯ, ಆಧುನಿಕ ಯುಗದಲ್ಲಿ ಮಾನವೀಯತೆ ಮರೆಯಾಗುತ್ತಿದೆ. ಬದುಕಿನ ಒತ್ತಡದಿಂದಾಗಿ ಮನುಷ್ಯರು ಮನುಷ್ಯತ್ವ ಮರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನ ನೀಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ವಲಯವಾರು ಆಯೋಜಿಸಲಾಗುತ್ತಿದೆ. ಜಿಲ್ಲಾ ಸಮ್ಮೇಳನ ಸೇರಿದಂತೆ ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.

ದತ್ತಿ ದಾನಿ ಖಂಡಪ್ಪ ದಾಸನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಸುಭಾಷಚಂದ್ರ ಕೌಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ, ಬಸವರಾಜ ಮೋಟ್ನಳ್ಳಿ, ಪ್ರಕಾಶ ಅಂಗಡಿ, ಶ್ರೀನಿವಾಸ ಕರ್ಲಿ ಮತ್ತಿತರರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT