ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಬಲಿ ತಡೆಗಟ್ಟುತ್ತಿರೋ; ನಾವೇ ಇಳಿಯಬೇಕೋ?

Last Updated 22 ಫೆಬ್ರುವರಿ 2012, 4:30 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ನಡೆಯುವ ದುರ್ಗಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ನಡೆಸಲಾಗುತ್ತಿರುವ ಪ್ರಾಣಿಬಲಿಯನ್ನು ನೀವು ತಡೆಗಟ್ಟುತ್ತಿರೋ ಇಲ್ಲ ನಾವೇ (ಮಠಾಧೀಶರು) ಈ ಕಾರ್ಯಕ್ಕೆ ಇಳಿಯಬೇಕೋ ಹೇಳಿ... ಮನಪರಿವರ್ತನೆಗಿಂತ ಕಾನೂನು ಅಡಿ ಈ ಕಾರ್ಯ ನಡೆಯಬೇಕಿದೆ. ಇದಕ್ಕೆ ಪೊಲೀಸ್ ಮತ್ತು ಜಿಲ್ಲಾಡಳಿತದ ಪರಸ್ಪರ ಸಹಕಾರ ಮತ್ತು ಮನೋಇಚ್ಛೆ ಇಲ್ಲಿ ಬಹಳ ಮುಖ್ಯ... ಜಿಲ್ಲಾಧಿಕಾರಿಯವರೇ ಇದಕ್ಕೆ ನೀವೇ ಉತ್ತರಿಸಬೇಕು...

ತ್ರಿಶೂಲ್ ಕಲಾಭವನದಲ್ಲಿ ಮಂಗಳವಾರ ವಿಚಾರಶೀಲ ಮಾನವೀಯ ಸಮುದಾಯ ಮತ್ತು ಕರುಣಾಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಜನಜಾಗೃತಿ ಸಭೆಯಲ್ಲಿ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಗುಡುಗಿದ್ದು ಹೀಗೆ.

ಮಾಂಸಾಹಾರ ಸೇವನೆ ಬಗ್ಗೆ ನನ್ನ ತಕರಾರು ಇಲ್ಲ. ಆದರೆ, ಪವಿತ್ರ ಸ್ಥಳದಲ್ಲಿ ಬಹಿರಂಗವಾಗಿ ಪಾಣಿಬಲಿ ನೀಡುವುದರ ಬಗ್ಗೆ ನನ್ನ ಆಕ್ಷೇಪವಿದೆ. ಇಂತಹ ಅನಿಷ್ಟ ಪದ್ಧತಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಪ್ರಾಣಿಬಲಿ ನಿಷೇಧದ ಬಗ್ಗೆ ಕೇವಲ ಸಭೆಗಳನ್ನು ನಡೆಸುತ್ತಾ ಬರುತ್ತಿದೆ. ಆದರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಏಕೆ ನಿರ್ಲಕ್ಷ್ಯ ತಾಳುತ್ತ್ದ್ದಿದಾರೋ ತಿಳಿಯುತ್ತಿಲ್ಲ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಜನರ ಮೌಢ್ಯಕ್ಕೆ, ಸಮಾಜದಲ್ಲಿ ನಡೆಯುತ್ತಿರುವ ಕಂದಾಚಾರಗಳಿಗೆ ಪ್ರೋತ್ಸಾಹಿಸುತ್ತಿರುವ ಮತ್ತು ಜನರು ಅಜ್ಞಾನದ ಅಂಧಕಾರದಲ್ಲೇ ಉಳಿಯುವಂತಾಗಿದೆ. ದುರ್ಗಮದಮ ಜಾತ್ರೆಯಲ್ಲಿ ಈಗಲೂ ಕೋಣನ ಬಲಿ ನೀಡಲು ಅನೇಕ ಪಟ್ಟಭದ್ರ ಹಿತಾಸಕ್ತಿ, ರಾಜಕೀಯ ಬೆಂಬಲ ಕಾರಣವಾಗುತ್ತಿದೆ. ಜಿಲ್ಲಾಧಿಕಾರಿ ಅವರು ಯಾವ ರಾಜಕೀಯ ಒತ್ತಡಗಳಿಗೆ ಮಣಿಯದೇ ಪ್ರಾಣಿವಧೆ ನಿಷೇಧಕ್ಕೆ ಮುಂದಾಗಬೇಕಿದೆ ಎಂದರು.

ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ದುರ್ಗಮ್ಮನ ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಅಧಿಕಾರಿಗಳು ಪ್ರಾಣಿಬಲಿ ನಿಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದರು.

ಡಿವೈಎಸ್ಪಿ ಚಂದ್ರಪ್ಪ ಮಾತನಾಡಿ, ಕಳೆದ ಆರು ವರ್ಷಗಳಿಂದ ದುರ್ಗಮ್ಮನ ದೇಗುಲದ ಮುಂದೆ ಕೋಣಬಲಿ ನೀಡುವುದನ್ನು ತಡೆಗಟ್ಟಲಾಗಿದೆ. ಕೆಲವರು ಮತ್ತೆಲ್ಲೋ ಬಲಿ ನೀಡಿದ ಕೋಣನ ರುಂಡವನ್ನು ತಂದು ದೇಗುಲದಲ್ಲಿ ಇಡುತ್ತಾ ಬಂದಿದ್ದಾರೆ. ಈ ಬಾರಿ ಅಂತಹವರ ಮೇಲೆ ಹದ್ದಿನ ಕಣ್ಣಿಡಲಾಗುವುದು. ಅಂತಹವರಿಗೆ ಸಹಕರಿಸುವವರ ವಿರುದ್ಧ ಕೂಡ ಕಠಿಣ ಕ್ರಮ ಜರುಗಿಸಲಾಗುವುದು.
 
ಆದರೆ, ಬೇವಿನ ಉಡುಗೆ ತೊಡುವ ಮಹಿಳೆ ಮತ್ತು ಹೆಣ್ಣು ಮಕ್ಕಳನ್ನು ಕಟ್ಟುನಿಟ್ಟಾಗಿ ಪೊಲೀಸರು ತನಿಖೆ ನಡೆಸಲಾಗುವುದಿಲ್ಲ. ಆ ಸಂದರ್ಭದಲ್ಲಿ ಪೊಲೀಸರು ಧರ್ಮ ಸಂಕಟ ಅನುಭವಿಸುವಂತಾಗುತ್ತದೆ. ಈ ಸಂದರ್ಭದಲ್ಲಿ ಪೊಲೀಸರಿಗೆ ಬೆಂಬಲ ನೀಡುವವರು ಇರುವುದಿಲ್ಲ. ಶ್ರೀಗಳು ಆ ಒಂದು ರಾತ್ರಿ ದೇಗುದಲ್ಲಿ ಕೀರ್ತನೆ, ಪ್ರವಚನ ಹಮ್ಮಿಕೊಂಡರೆ ಇಂತಹ ಆಚರಣೆಗಳಿಗೆ ಕಡಿವಾಣ ಹಾಕಬಹುದು ಎಂದರು.

ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ ಮಾತನಾಡಿ, ದುರ್ಗಮ್ಮ ದೇವಿ ಜಾತ್ರೆಯಲ್ಲಿ ಪ್ರಾಣಿವಧೆಯನ್ನು ಸಂಪೂರ್ಣ ತಡೆಗಟ್ಟುವಲ್ಲಿ ಜಿಲ್ಲಾಡಳಿತ ಸಕಲ ಸಜ್ಜುಗೊಂಡಿದೆ. ಈ ಸಂಬಂಧ ಶೀಘ್ರದಲ್ಲಿ ದೇಗುಲ ಕಮಿಟಿ ಪದಾಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿ ಸಾರ್ವಜನಿಕ ಸಭೆ ನಡೆಸಲಾಗುವುದು ಎಂದು ಶ್ರೀಗಳಿಗೆ ಭರವಸೆ ನೀಡಿದರು.

ಬಸವ ಮಾದಾರ ಚನ್ನಯ್ಯ ಸ್ವಾಮೀಜಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಚೌವಾಣ್, ತಹಶೀಲ್ದಾರ್ ಡಾ.ಬಿ.ಆರ್. ಹರೀಶ್, ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ಪಶುಸಂಗೋಪನ ಇಲಾಖೆ ಉಪ ನಿರ್ದೇಶಕ ಡಾ.ಮಹೇಶ್ವರಪ್ಪ ಗೌಡ, ಶಿವನಕೆರೆ ಬಸವಲಿಂಗಪ್ಪ, ಪ್ರೊ.ಬಿ.ವಿ. ವೀರಭದ್ರಪ್ಪ, ಎಲ್.ಎಚ್. ಅರುಣ್‌ಕುಮಾರ್, ಟಿ. ದಾಸಕರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT