ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಅಡಿಪಾಯ

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಯಾಕೋ ಗೊತ್ತಿಲ್ಲ, ಅವನನ್ನು ನೋಡಿದ ತಕ್ಷಣ ಅವಳಿಗೆ ಪ್ರೀತಿಸಬೇಕೆನಿಸಿತ್ತು. ಅವನೂ ಅವಳನ್ನು ಕೆಲ ದಿನಗಳಿಂದ ಪ್ರೀತಿಸತೊಡಗಿದ್ದ. ಅವಳೇ ಮುಂದಾಗಿ ಪ್ರೀತಿ ವ್ಯಕ್ತಪಡಿಸಿದಾಗ ಆತ ಕೂಡಲೇ ಒಪ್ಪಿಕೊಂಡ.

ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರ­ಲಾರದಷ್ಟು ಹಚ್ಚಿಕೊಂಡರು. ಇಬ್ಬ­ರದೂ ಒಂದೇ ಜಾತಿ, ಇಬ್ಬರೂ ಒಂದೇ ಆಫೀಸಿನಲ್ಲಿ ಒಳ್ಳೆ ಉದ್ಯೋಗ­ದಲ್ಲಿದ್ದುದರಿಂದ ಅವರ ಪ್ರೀತಿಗೆ ಮನೆ­ಯಲ್ಲೂ ವಿರೋಧ ವ್ಯಕ್ತವಾಗಲಿಲ್ಲ. ಎರಡೂ ಮನೆಯವರು ಸಹಮತ­ದಿಂದಲೇ ಅವರ ಮದುವೆಯನ್ನು ಮಾಡಿ ಮುಗಿಸಿದರು.

ಚಂದನವನದಂತೆ ಅವರ ಸಂಸಾರ ಚೆನ್ನಾಗಿಯೇ ಸಾಗಿತ್ತು. ಒಂದು ದಿನ ಯಾರೋ ಮಾತಾಡುತ್ತಾ, ಪ್ರೀತಿ ಗಾಢವಾಗಬೇಕಾದರೆ ದಾಂಪತ್ಯದಲ್ಲಿ ಸತಿ– -ಪತಿ ಇಬ್ಬರ ಇಷ್ಟಾನಿಷ್ಟಗಳೂ ಒಂದಾಗಬೇಕು ಎಂದ ಸಾಲು ಅವಳ ತಲೆಯಲ್ಲುಳಿಯಿತು. ಆಗಿನಿಂದ ಅವಳ ಮನಸ್ಸನ್ನು ಈ ಮಾತೇ ಗುಂಗೀ ಹುಳ­ದಂತೆ ಕೊರೆಯತೊಡಗಿತ್ತು.  ನಾನು ನನ್ನ ಗಂಡ ಪ್ರೀತಿಸಿ  ಮದುವೆಯಾಗಿ­ದ್ದೇವೆ. ಇಬ್ಬರೂ ಪರಸ್ಪರರ ಸುಖ ದುಃಖಗಳಲ್ಲಿ ಸಮಾನವಾಗಿ ಭಾಗಿ­ಯಾಗಿದ್ದೇವೆ. ಆದರೆ ನಮ್ಮಿಬ್ಬರ ಇಷ್ಟಾನಿಷ್ಟಗಳು ಒಂದೇ ತೆರನಾಗಿ­ವೆಯೇ ಎಂಬ ಪ್ರಶ್ನೆ ಅವಳನ್ನು ಯೋಚನೆಯಲ್ಲಿ ತೊಡಗಿಸಿತು.

ಒಂದು ದಿನ ಸೀದಾ ಗಂಡನ ಬಳಿ ಹೋದವಳೇ ‘ರೀ ನಿಮ್ಮ ಇಷ್ಟಾನಿಷ್ಟ­ಗಳನ್ನ ಬರೆದು ಕೊಡಿ. ನಮ್ಮಿಬ್ಬರ ಇಷ್ಟಗಳು ಒಂದೇ ತೆರನಾಗಿದ್ದರೆ ನಾವು ಯಾವತ್ತೂ ಸಂತೋಷವಾಗಿ ಇರಬ­ಹುದಂತೆ. ನಮ್ಮ ಸಂಸಾರ ಯಾವ ವಿಘ್ನಗಳೂ ಇಲ್ಲದೆ ನೂರ್ಕಾಲ ಬಾಳಬೇಕು’ ಎಂದಳು. ಅವಳ ಮಾತಿಗೆ ಮರುಮಾತನಾಡದೆ ಗಂಡ ಹ್ಞೂಂ  ಎಂದು ತಲೆಯಾಡಿಸಿದ.

ರಾತ್ರಿಯೆಲ್ಲ ನಿದ್ದೆಗೆಟ್ಟು ತನ್ನ ಪಟ್ಟಿಯನ್ನು ಸಿದ್ಧ ಮಾಡಿದ ಅವಳು ಮರುದಿನ ಮುಂಜಾನೆಯೇ ಗಂಡನಿಗೆ ‘ರೀ ಬನ್ನಿ, ಜೊತೆಗೆ ನಿಮ್ಮ ಪಟ್ಟಿಯನ್ನೂ ತನ್ನಿ’ ಎಂದು ಕೂಗಿದಳು. ಆತ ಬಂದವನೇ ಅವಳ ಕೈಗೆ ಮಡಚಿದ ಹಾಳೆಯೊಂದನ್ನಿತ್ತು ಸುಮ್ಮನೇ ನಿಂತ. ಅವಳು ಮತ್ತೆ ‘ರೀ ಈಗ ನಿಮ್ಮ ಹಾಗೂ ನನ್ನ ಇಷ್ಟಗಳನ್ನ ಸೇರಿಸಿ ತಾಳೆ ಮಾಡಿ ನೋಡ್ತೀನಿ’ ಎಂದಾಗಲೂ ಅವನು ಏನೊಂದೂ ಮಾತನಾಡದೆ ನಕ್ಕು ಅವಳ ಪಕ್ಕ ಬಂದು ಕುಳಿತ.

‘ಮೊದಲು ನೀವು ನಿಮ್ಮ ಇಷ್ಟಗಳನ್ನ ಹೇಳ್ತಿರೋ ಅಥವಾ ನಾನು ಹೇಳಲೋ?’ ಎಂದು ಅವಳಂದಾಗ, ಆತ ‘ನೀನೇ ಮೊದಲು ನಿನ್ನ ಪಟ್ಟಿಯನ್ನು ಓದು’ ಎಂದ. ಅವಳು ತನ್ನ ಕೈಯಲ್ಲಿದ್ದ ಹಾಳೆಯನ್ನು ಬಿಡಿಸಿ ಅತ್ಯುತ್ಸಾಹದಿಂದ ಓದತೊಡಗಿದಳು. ಅವಳ ಉದ್ದನೆಯ  ಪಟ್ಟಿಯನ್ನು ಕೇಳಿಸಿಕೊಂಡ ಗಂಡ ‘ಅಬ್ಬಾ! ಇಷ್ಟುದ್ದದ ಇಷ್ಟಗಳ ಪಟ್ಟಿಯನ್ನು ಈಡೇರಿಸುವುದಾದರೂ ಹೇಗೆ’ ಎಂದು ಯೋಚಿಸತೊಡಗಿದ.

ಅವಳು ಓದಿ ಮುಗಿಸಿ ಪತಿಯ ಕಡೆ ತಿರುಗಿದಾಗ ಅವನ ಮುಖದಲ್ಲಿ ಮುಗು­ಳ್ನಗೆ ಮೂಡಿತ್ತು. ಯಾಕೆ ಎಂದು ಅವಳು ಪ್ರಶ್ನಿಸಿದಳು. ಆತನ ಪಟ್ಟಿಯನ್ನು ತಾನೇ ಬಿಡಿಸಿ ನೋಡಿ­ದಳು. ಅದರಲ್ಲಿ ಏನೂ ಬರೆಯದೆ ಹಾಳೆ ಖಾಲಿಯಾಗಿತ್ತು. ಅವಳು ಗಂಡನತ್ತ ಪ್ರಶ್ನಾರ್ಥಕವಾಗಿ ನೋಡಿದಳು.

ಆಗ ಆತ ‘ಹೀಗೆ ನಿನಗೆ ಇಷ್ಟವಾದದ್ದನ್ನ ನೀನು ಬರೆಯೋದು, ನನಗಿಷ್ಟವಾದದ್ದನ್ನು ನಾನು ಬರೆಯೋ­ದರಿಂದ ನಮ್ಮ ದಾಂಪತ್ಯ ಗಟ್ಟಿಯಾ­ಗುತ್ತೆ ಅನ್ನುವುದರಲ್ಲಿ ನನಗೆ ನಂಬಿ-­ಕೆಯಿಲ್ಲ. ನಿನಗೆ ಇಷ್ಟವಾದದ್ದೆಲ್ಲವನ್ನೂ ನಾನೂ ಇಷ್ಟಪಡುತ್ತೇನೆ. ನನಗೆ ಇಷ್ಟವಾದದ್ದೆಲ್ಲವನ್ನೂ ನೀನು ಒಪ್ಪಿಕೋ. ಆಗಲೇ ನಮ್ಮ ದಾಂಪತ್ಯ­ಕ್ಕೊಂದು ಅರ್ಥ ಬರುವುದು. ನನಗೆ ನೀನು, ನಿನಗೆ ನಾನು ಅರ್ಥವಾದ­ರೇನೇ ಸಂಸಾರದ ಬಂಡಿಗೆ ಇಬ್ಬರೂ ಚಕ್ರಗಳಾಗೋಕೆ ಸಾಧ್ಯ. ಅದು ಬಿಟ್ಟು ಹೀಗೆ ಇಷ್ಟವಿದ್ದ­ದ್ದನ್ನ ಪಟ್ಟಿ ಮಾಡಿ, ಇಷ್ಟವಿಲ್ಲದ್ದನ್ನು ಬಿಟ್ಟುಬಿಡುವುದರಲ್ಲಿ ಯಾವುದೇ ಅರ್ಥ ಇಲ್ಲ ಅಂತ ಅನ್ನಿಸ್ತು. ಅದಕ್ಕೆ ನಿನಗೆ ಹೀಗೆ ಖಾಲಿ ಹಾಳೆ ಕೊಟ್ಟೆ. ಅಷ್ಟಕ್ಕೂ ನಿನ್ನ ಬೇಕು ಬೇಡಗಳಿಗೆ ವಿರುದ್ಧವಾಗಿ ನಡೆಯಲು ನನಗಿಷ್ಟವಿಲ್ಲ’ ಎಂದ.

ಅವಳು ಏನೊಂದೂ ಮಾತನಾಡದೆ ತದೇಕಚಿತ್ತದಿಂದ ಅವನನ್ನೇ ದಿಟ್ಟಿಸಿದಳು. ಮರುಕ್ಷಣದಲ್ಲೇ ತಾ ಬರೆದ ಹಾಳೆಯನ್ನು  ಹರಿದು ಹಾಕಿ, ಪಶ್ಚಾತ್ತಾಪದಿಂದ ಸೋತವಳಂತೆ ಅವನ  ಹೆಗಲ ಮೇಲೆ ತಲೆಯಿಟ್ಟಳು. ಆತ ಮುಗುಳ್ನಗುತ್ತಾ ಅವಳ ತಲೆ ನೇವರಿಸಿ ಸಮಾಧಾನಿಸತೊಡಗಿದ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT