ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರ್ಮ್‌ಹೌಸ್‌ಗೆ ತರುವ ಮೊದಲೇ ಸಾವು

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಕಿರುತೆರೆ ನಟಿ ಹೇಮಶ್ರೀಯನ್ನು ಪತಿ ಸುರೇಂದ್ರಬಾಬು ನನ್ನ ಫಾರ್ಮ್‌ಹೌಸ್‌ಗೆ ತರುವಾಗಲೇ ಜೀವ ಹೋಗಿತ್ತು~ ಎಂದು ಫಾರ್ಮ್‌ಹೌಸ್ ಮಾಲೀಕ ಮುರಳಿ ಪೊಲೀಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಇದರಿಂದ ಪ್ರಕರಣಕ್ಕೆ ಹೊಸ ತಿರುವು ಬಂದಿದೆ.

ಬೆಂಗಳೂರು ಪೊಲೀಸರು ಮುರಳಿಯನ್ನು ಅನಂತಪುರದ ರೆಡ್ಡಿಪಾಳ್ಯದಿಂದ ಶನಿವಾರ ನಗರಕ್ಕೆ ಕರೆತಂದು ವಿಚಾರಣೆ ನಡೆಸಿದರು. `ಸುರೇಂದ್ರಬಾಬು ನನಗೆ ಅಷ್ಟೇನೂ ಆಪ್ತನಲ್ಲ. ಆಂಧ್ರದಲ್ಲಿ ನಡೆದ ಬಲಿಜ ಸಮುದಾಯದ ಸಭೆಯಲ್ಲಿ ಅವರ ಪರಿಚಯವಾಗಿತ್ತು. ಎಲ್ಲಾ ಸಭೆಗಳಿಗೂ ಬರುತ್ತಿದ್ದ ಕಾರಣ ಪರಸ್ಪರರಲ್ಲಿ ಸ್ನೇಹ ಬೆಳೆದಿತ್ತು.

ಮಂಗಳವಾರ (ಅ.9) ನಸುಕಿನ ವೇಳೆ ಅವರು ನನಗೆ ಕರೆ ಮಾಡಿ, ಫಾರ್ಮ್‌ಹೌಸ್‌ಗೆ ಬರುತ್ತಿದ್ದೇನೆ. ಮೂರು ಗಂಟೆ ವಿಶ್ರಾಂತಿ ಪಡೆಯಬೇಕು. ಒಂದು ಕೊಠಡಿ ವ್ಯವಸ್ಥೆ ಮಾಡಿಕೊಡು ಎಂದರು. ನಾನು ಅಲ್ಲಿನ ನೌಕರ ಕೃಷ್ಣಪ್ಪನಿಗೆ ಕೊಠಡಿ ವ್ಯವಸ್ಥೆ ಮಾಡಲು ಹೇಳಿದೆ~ ಎಂದು ಮುರಳಿ ಹೇಳಿದ್ದಾಗಿ ಪೊಲಿಸ್ ಮೂಲಗಳು ತಿಳಿಸಿವೆ.

`ಸುರೇಂದ್ರಬಾಬು ಫಾರ್ಮ್‌ಹೌಸ್‌ಗೆ ಬೆಳಿಗ್ಗೆ ಐದು ಗಂಟೆಗೆ ಬಂದರು. ಕಾರಿನ ಹಿಂದಿನ ಸೀಟಿನಲ್ಲಿ ಅವರ ಪತ್ನಿ ಮಲಗಿದ ಸ್ಥಿತಿಯಲ್ಲಿದ್ದರು. ಮೂರ್ನಾಲ್ಕು ನೌಕರರು ಅವರ ದೇಹವನ್ನು ಕೊಠಡಿಗೆ ಕೊಂಡೊಯ್ದು ನನಗೆ ಕರೆ ಮಾಡಿ ವಿಷಯ ತಿಳಿಸಿದರು. ವೈದ್ಯರನ್ನು ಕರೆಸಿ ತಪಾಸಣೆ ಮಾಡಿಸಿದಾಗ ಹೇಮಶ್ರೀ ಸಾವನ್ನಪ್ಪಿ 3-4 ತಾಸು ಆಗಿರಬಹುದು ಎಂದರು. ಹೀಗಾಗಿ ಫಾರ್ಮ್‌ಹೌಸ್‌ನಿಂದ ಶವ ತೆಗೆದುಕೊಂಡು ಹೋಗುವಂತೆ ಹೇಳಿದೆ. ಅವರ ಸಾವಿನಲ್ಲಿ ನನ್ನ ಪಾತ್ರವಿಲ್ಲ~ ಎಂದು ಹೇಳಿದರೆನ್ನಲಾಗಿದೆ.

ಯಾರನ್ನೂ ಬಂಧಿಸಿಲ್ಲ- ಮಿರ್ಜಿ: `ಹೇಮಶ್ರೀ ಸಾವಿನ ಪ್ರಕರಣ ಸಂಬಂಧ ಎಲ್ಲಾ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಮಾಹಿತಿ ಬಹಿರಂಗಪಡಿಸುವುದು ಸೂಕ್ತವಲ್ಲ. ಸುರೇಂದ್ರಬಾಬು ಹೊರತುಪಡಿಸಿ ಇದುವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ತಿಳಿಸಿದರು.

`ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರೇ ನಡೆಸಲಿದ್ದಾರೆ. ಯಾವುದೇ ಕಾರಣಕ್ಕೂ ಆಂಧ್ರಪ್ರದೇಶ ಪೊಲೀಸರಿಗೆ ವರ್ಗಾಯಿಸುವುದಿಲ್ಲ. ಆರೋಪಿಯ ವಿಚಾರಣೆಯಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಹೇಮಶ್ರೀ ಕುಟುಂಬದ ಸದಸ್ಯರ, ಸ್ನೇಹಿತರ ವಿಚಾರಣೆ ನಡೆಸಲಾಗುತ್ತಿದೆ.
 
ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳನ್ನು ಸಹ ಗಮನಿಸುತ್ತಿದ್ದೇವೆ. ಬನಶಂಕರಿಯಲ್ಲಿರುವ ಹೇಮಶ್ರೀ ಮನೆಯಲ್ಲಿ ಕ್ಲೋರೊಫಾರ್ಮ್ ಸಿಕ್ಕಿದೆ ಎಂದು ಸುದ್ದಿ ವಾಹಿನಿಯಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಲಾಗಿದೆ. ಅಂತಹ ಯಾವುದೇ ಸುಳಿವು ಸಿಕ್ಕಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT