ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಡರರ್, ಮರ‌್ರೆ ಗೆಲುವಿನ ಓಟ

Last Updated 19 ಜನವರಿ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ/ಐಎಎನ್‌ಎಸ್): ಅಗ್ರಶ್ರೇಯಾಂಕದ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಹಾಗೂ ಮೂರನೇ ಶ್ರೇಯಾಂಕ ಹೊಂದಿರುವ ಸೆರೆನಾ ವಿಲಿಯಮ್ಸ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ರಾಡ್ ಲಾವೆರ್ ಅರೆನಾ ಕೋರ್ಟ್‌ನಲ್ಲಿ ಶನಿವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅಜರೆಂಕಾ 6-4, 4-6, 6-2ರಲ್ಲಿ ಅಮೆರಿಕದ ಜಾಮಿಯಾ ಹೆಪ್ಟಾನ್ ಅವರನ್ನು ಸೋಲಿಸಿದರು.ಎರಡು ಗಂಟೆ ಐದು ನಿಮಿಷ ನಡೆದ ಈ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ ಎರಡನೇ ಸೆಟ್‌ನಲ್ಲಿ ಅಜರೆಂಕಾಗೆ ಸೋಲುಣಿಸಿದರು. ಆದರೆ, ಗಾಯದ ನೋವಿನಲ್ಲಿಯೂ ಅಜರೆಂಕಾ ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಸುಲಭ ಜಯ ಪಡೆದರು. ಮುಂದಿನ ಸುತ್ತಿನಲ್ಲಿ ರಷ್ಯಾದ ಎಲೆನಾ ವೆಸ್ನಿನಾ ಎದುರು ಅಜರೆಂಕಾ ಪೈಪೋಟಿ ನಡೆಸಲಿದ್ದಾರೆ.

ನಾಲ್ಕನೇ ಸುತ್ತಿನ ಇನ್ನೊಂದು  ಪಂದ್ಯದಲ್ಲಿ ಸೆರೆನಾ 6-1, 6-3ರಲ್ಲಿ ಜಪಾನ್‌ನ ಆಯುಮಿ ವೆರಿಟಾ ಎದುರು ಜಯ ಪಡೆದರು. ಬಲಗಾಲಿನ ಪಾದದ ನೋವಿನಿಂದ ಬಳಲಿದರೂ ಅಮೆರಿಕದ ಸೆರೆನಾ ತಮ್ಮ ಎಂದಿನ ದಿಟ್ಟ ಆಟ ತೋರುವಲ್ಲಿ ಹಿಂದೆ ಬೀಳಲಿಲ್ಲ. 31 ವರ್ಷದ ಸೆರೆನಾ ಮೊದಲ ಸೆಟ್‌ನಲ್ಲಿ 0-3ರಲ್ಲಿ ಹಿನ್ನಡೆಯಲ್ಲಿದ್ದರು. ನಂತರ ಚುರುಕಾದ ಆಟವಾಡಿ ಆರು ಪಾಯಿಂಟ್ ಕಲೆ ಹಾಕಿದರು.ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ವೆಸ್ನಿನಾ 4-6, 7-6, 6-4ರಲ್ಲಿ ಇಟಲಿಯ ರಾಬೆರ್ಟ್ ವಿಂಚಿ ಎದುರು ಜಯ ಪಡೆದು ಹದಿನಾರರ ಘಟ್ಟ ತಲುಪಿದರು.

ಮರ‌್ರೆ ಗೆಲುವಿನ ಓಟ: ಗೆಲುವಿನ ಓಟ ಮುಂದುವರಿಸಿರುವ ಆ್ಯಂಡಿ ಮರ‌್ರೆ ಹಾಗೂ ರೋಜರ್ ಫೆಡರರ್ ಸಿಂಗಲ್ಸ್‌ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ಇಂಗ್ಲೆಂಡ್‌ನ ಈ ಆಟಗಾರ 6-3, 6-4, 7-5ರಲ್ಲಿ ಲುಥುವೇನಿಯಾದ ರಿಚರ್ಡ್ಸ್ ಬೆರಾಂಕಿಸ್ ಅವರನ್ನು ಸೋಲಿಸಿದರೆ, ಎರಡನೇ ಶ್ರೇಯಾಂಕದ ಫೆಡರರ್ 6-4, 7-6, 6-1ರಲ್ಲಿ ಸ್ಥಳೀಯ ಸ್ಪರ್ಧಿ ಬೆರ್ನಾರ್ಡ್ ಟಾಮಿಕ್ ಎದುರು ಜಯ ಸಾಧಿಸಿದರು. 17 ಸಲ ಗ್ರ್ಯಾನ್ ಸ್ಲಾಮ್ ಟ್ರೋಫಿ ಎತ್ತಿ ಹಿಡಿದಿರುವ ಸ್ವಿಟ್ಜರ್‌ಲೆಂಡ್‌ನ ಫೆಡರರ್ 118 ನಿಮಿಷ ಹೋರಾಟ ನಡೆಸಿ ಈ ಗೆಲುವು ಪಡೆದುಕೊಂಡರು.

ಪುರುಷರ ವಿಭಾಗದ ಇತರ ಪ್ರಮುಖ ಪಂದ್ಯಗಳಲ್ಲಿ ಫ್ರಾನ್ಸ್‌ನ ಜೊ ವಿಲ್‌ಫ್ರೆಡ್ ಸೊಂಗಾ 6-2, 6-1, 6-4ರಲ್ಲಿ ಸ್ಲೋವೆನಿಯಾದ ಬ್ಲಜ್ ಕವೆಸಿಕ್ ಮೇಲೂ, ಇಟಲಿಯ ಆ್ಯಂಡ್ರಿಯಾಸ್ ಸಿಪ್ಪೆ 6-7, 6-3, 2-6, 6-4, 6-2ರಲ್ಲಿ ಕ್ರೋವೇಷಿಯಾದ ಮರಿನ್ ಸಿಲಿಕ್ ವಿರುದ್ಧವೂ, ಒಂಬತ್ತನೇ ಶ್ರೇಯಾಂಕದ ಫ್ರಾನ್ಸ್‌ನ ರಿಚರ್ಡ್ ಗಾಸ್ಕೈಟ್ 4-6, 6-3, 7-6, 6-0ರಲ್ಲಿ ಕ್ರೊವೇಷಿಯಾದ ಇವಾನ್ ದೊಡಿಗ್ ಮೇಲೂ ಗೆದ್ದು ಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT